ಗುರುವಾರ , ಮೇ 13, 2021
39 °C

ಚುರುಮುರಿ: ಯುಗಾದಿ ಭವಿಷ್ಯ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಸಮಸ್ತ ಕರ್ನಾಟಕದ ಜನರಿಗಾಗಿ ಪ್ಲವನಾಮ ಸಂವತ್ಸರದ ಮುಕ್ತಿ-ಭುಕ್ತಿ ಗೋಚಾರ ಫಲ ಗಳನ್ನು ನೀಡಲಾಗಿದ್ದು, ಇದು ಕೊರೊನಾ ಮಾರಿ ಮತ್ತು ಲಸಿಕಾದೇವಿಯ ನಡುವಿನ ಯುದ್ಧದ ಪರಿಣಾಮಗಳ ಮೇಲೆ ನಿರ್ಧಾರವಾಗಲಿದೆ. ಕೊರೊನಾ ಕಾಟ ಪರಿಹಾರಕ್ಕಾಗಿ ‘ಓಂ ಮಾಸ್ಕಂ, ಓಂ ಅಂತರಂ, ಓಂ ಫಟ್ ಸ್ಯಾನಿಟೈಸಾಯ ನಮಃ’ ಎಂಬ ಕೊರೊನಾ ಕಷ್ಟೋತ್ತರ ಮಂತ್ರ ಜಪದಿಂದ ಸೌಖ್ಯವು. ಟಿ.ವಿಗಳ ಬ್ರೇಕಿಂಗ್ ನ್ಯೂಸ್ ಕಾಲಪುರುಷರಿಂದ ಮಾನಸಿಕ ಶಾಂತಿ ಹಾನಿ.

ಎಂದಿನಂತೆ ರೈತರಿಗೆ ಅಭಯಸಂಕಟ. ಈ ವರ್ಷ ಅನೇಕ ಖಾಸಗಿ ಬ್ಯಾಂಕುಗಳ ಅಕಾಲ ಮೃತ್ಯುವಾಗಲಿದ್ದು ಜನರಿಗೆ ತೊಂದರೆಯು. ಪಾಲಿಕೆಗಳಿಗೆ ಕಾಮಗಾರಿ ಬಿಲ್ಲುಗಳಿಂದ ಸಂತಸವು. ಎಸಿಬಿ ಬಾಧೆಯ ನಡುವೆಯೂ ಅಧಿಕಾರಿಗಳ ಪಚನಶೂರತೆ ಹೆಚ್ಚಳ.

ದೇಶದ ರಾಜಕೀಯದಲ್ಲಿ ಶಾ ವಶೀಕರಣ ಪ್ರಯೋಗದಿಂದ ಮೋದಿ ಮಹಾರಾಜರಿಗೆ ಪಕ್ಷಸೌಖ್ಯ. ಮುಖ್ಯಮಂತ್ರಿಗಳಿಗೆ ಸ್ವಜನ ವೈರ, ಪಟಿಂಗ ಮಂತ್ರಿಗಳಿಂದ ಮಾನಹಾನಿ, ಪಕ್ಷವಾತ. ಮೀಸಲಾತಿ, ಮುಷ್ಕರಗಳ ಕಾರಣವಾಗಿ ರಾಜರು ಕೋಪದಿಂದ ವರ್ತಿಸಬೇಕಾದೀತು.

ರಾಜಕಾರಣಿಗಳು ಜನರ ಕಿವಿಯ ಮೇಲೆ ಫ್ಲವರಿಟ್ಟು ನಾಮ ಹಾಕುವ ಡ್ರಾಮಾವತಾರ, ಡಂಗುಬೂದಿ ವಿತರಣೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂವತ್ಸರದಲ್ಲೂ ನಿರ್ವಿಘ್ನವಾಗಿ ನಡೆಯಲಿವೆ. ಕೇಂದ್ರ ತೆರಿಗೆ ಅನುದಾನಕ್ಕೆ ಮುಖ್ಯಮಂತ್ರಿಗಳಿಂದ ಶೋಕಸಂಗೀತ. ವಿರೋಧ ಪಕ್ಷಗಳಿಗೆ ಅಧಿಕಾರವಿಲ್ಲದೇ ನಾಯಿಕೆಮ್ಮಲು.

ರಾಹು-ಕೇತು, ಶನಿಗಳು ಒಟ್ಟಾಗಿ ಮತದಾರರ ಏಳನೇ ಮನೆ ಪ್ರವೇಶಿಸುವುದರಿಂದ ಕಾಯಿಲೆ, ಕಾಸಿಗೆ ತತ್ವಾರವು. ದಿವಸ ಧಾನ್ಯ, ತರಕಾರಿ, ಹಣ್ಣು ಬೆಲೆ ತೇಜಿಯಾಗಲಿದೆ. ಬ್ಯಾಂಕ್ ಬಡ್ಡಿ ದರ ಇಳಿಕೆಯಿಂದ ವಿತ್ತಭ್ರಮೆ. ಎಣ್ಣೆ ಬೆಲೆ ಹೆಚ್ಚಿ ಮದ್ಯಕ್ಷಾಮ. ಚಿನ್ನದ ಬೆಲೆ ಹೆಚ್ಚಳದಿಂದ ಚೋರಭಯ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಳಿತದಿಂದ ಜನ ಸುಸ್ತು. ಉಳ್ಳವರಿಗೆ ಲ್ಯಾಂಡು ರೋಗ ಹೆಚ್ಚಳ. ಏಕಾದಶ ಗ್ರಹಗಳು ಒಂದಾದಲ್ಲಿ ಆರ್‌ಸಿಬಿಗೆ ಐಪಿಎಲ್ ಕಪ್ಪು ಗ್ಯಾರಂಟಿ.

ಸಕುನ್ನಿ ಪರಿವಾರ ಶ್ರೇಯೋಭಿವೃದ್ಧಿರಸ್ತು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.