ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮಾಸ್ಕ್‌ಧಾರಿ ಮಂಗಗಳು

Last Updated 17 ಆಗಸ್ಟ್ 2020, 21:35 IST
ಅಕ್ಷರ ಗಾತ್ರ

ಆಗಸ್ಟ್‌ ಹದಿನೈದರ ಬೆಳ್ಳಂಬೆಳಗು. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿದ್ದ ಗಾಂಧಿ ಪ್ರತಿಮೆಯ ಸುತ್ತಮುತ್ತ ಪೌರಕಾರ್ಮಿಕರೊಬ್ಬರು ಕಸ ಹೊಡೆಯುತ್ತಿದ್ದರು. ಏನೋ ಅಲುಗಿದಂತಾಯಿತು. ಗಾಂಧಿಮುತ್ಯಾ ಮೆಲ್ಲಗೆ ಪ್ರತಿಮೆಯಿಂದ ಕೆಳಗಿಳಿಯುತ್ತಿದ್ದರು.

‘ಎಲ್ಲಿಗೆ ಹೊಂಟೀರಿ ತಾತ... ಇನ್ನೊಂದ್ ಸ್ವಲ್ಪ ಹೊತ್ತಿಗೆ ಹಾರ ಹಾಕಕ್ಕೆ ಬರ್ತಾರೆ, ಸುಮ್ಮನೆ ನಿಂತ್ಕಳಿ’ ಎಂದರು. ‘ಕಾಲೆಲ್ಲ ಜೋಮು ಹಿಡಿದಾವು... ಜರಾ ಫ್ರೀಡಂಪಾರ್ಕಿನಾಗೆ ಅಡ್ಡಾಡಿ ಬರ್ತೀನಿ’ ಎನ್ನುತ್ತ ಗಾಂಧಿಮುತ್ಯಾ ಹೊಂಟರು.

ದಾರಿ ತಪ್ಪಿ ಇನ್ಯಾವುದೋ ರಸ್ತೆಯತ್ತ ಬಂದರು. ಎದುರಿಗೆ ಟಿ.ವಿ. ಸ್ಟುಡಿಯೊ ಕಂಡು, ನೋಡಾಮು ಎಂದು ಒಳಹೊಕ್ಕರು. ನಿರೂಪಕಿ ಸುದ್ದಿಯನ್ನು ವದರುತ್ತಿದ್ದಾಳೋ ಅಪ್ಪಣೆಯನ್ನು ದಯಪಾಲಿಸುತ್ತಿದ್ದಾಳೋ ತಿಳಿಯಲಿಲ್ಲ. ‘ದೇಶಕ್ಕೆ ಸ್ವಾತಂತ್ರ್ಯ ತಂದ...’ ಎಂದು ಕೆಳಗಡೆ ಸ್ಕ್ರಾಲ್ ಆಗುತ್ತಿದ್ದ ಹೆಸರು ಕಂಡು ಗಾಂಧಿ ಆಘಾತಗೊಂಡರು. ಕನ್ನಡಕ ಸರಿಪಡಿಸಿಕೊಂಡು ಮತ್ತೆ ನೋಡಿದರು. ‘ಈ ಹೆಸರಿನವರು ಹುಟ್ಟಿದ್ದೇ ಸ್ವಾತಂತ್ರ್ಯ ಬಂದು ಮೂರು ವರ್ಷವಾದಮೇಲೆ ಅಲ್ಲವೇ’ ಎಂದುಕೊಂಡರೂ ಗಾಂಧಿಮುತ್ಯಾಗೆ ಆಕೆಯ ವದರಾಟವನ್ನು ನಿಲ್ಲಿಸುವ ಧೈರ್ಯವಾಗದೇ ‘ಆತೇಳವ, ನೀ ಇಷ್ಟು ಕಿರುಚಿ ಹೇಳಾಕಹತ್ತಿದ್ದಿ ಅಂದರೆ, ನಿನಗೆ ಸ್ವಾತಂತ್ರ್ಯ ತಂದುಕೊಟ್ಟವರು ಇವರೇ ಇರಬೇಕು’ ಎಂದುಕೊಂಡು ಅಲ್ಲಿಂದ ಪೇರಿ ಕಿತ್ತರು. ಆ ಪೌರಕಾರ್ಮಿಕನ ಮಾತು ಕೇಳಿ, ಅಲ್ಲೇ ಉಳಿದಿದ್ದರೆ ಭೇಷಿತ್ತು ಎಂದುಕೊಳ್ಳುತ್ತ, ಅಡ್ಡಾಡುವ ಧೈರ್ಯವಾಗದೇ ವಾಪಸು ಬಂದರು.

ಪ್ರತಿಮೆಯ ಕಟ್ಟೆಯ ಮೇಲೆ ಮೂರು ಮಂಗಗಳು ಕೂತಿದ್ದವು. ಅಂದು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡಿದ್ದ ಮಂಗಗಳು ಈಗ ಕಿವಿ, ಕಣ್ಣನ್ನು ತೆರೆದು, ಬಾಯಿಯೊಂದಿಗೆ ಮೂಗೂ ಮುಚ್ಚುವಂತೆ ಬಟ್ಟೆ ಕಟ್ಟಿಕೊಂಡಿದ್ದವು.

ಗಾಂಧಿ ಮುತ್ಯಾಗೆ ಇದೇತಾನೆ ಸ್ಟುಡಿಯೊದಲ್ಲಿ ಕೇಳಿದ್ದು, ಕಂಡಿದ್ದು ನೆನಪಾಯಿತು. ‘ಕೆಟ್ಟದ್ದು ಕೇಳೋದು, ಕೆಟ್ಟದ್ದು ನೋಡೋದಕ್ಕಿಂತ ಕೆಟ್ಟದ್ದು ಮಾತಾಡೋದೆ ಹೆಚ್ಚು ಹಾನಿ ಮಾಡುತ್ತೆ ಅಂತ ಹಿಂಗೆ ಬಾಯಿ ಮುಚ್ಚಿಕೊಂಡಿರೇನು’ ಮುತ್ಯಾ ಮುಗ್ಧವಾಗಿ ಕೇಳಿದರು.

‘ತಾತ... ಇದು ಕೊರೊನಾ ಮಾಸ್ಕ್’ ಎಂದು ಮಂಗಗಳು ಹಲ್ಲು ಕಿಸಿದವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT