ಭಾನುವಾರ, ಫೆಬ್ರವರಿ 23, 2020
19 °C

ರೇಪುಸ್ತಾನದಲ್ಲಿ...

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಈ ಸಲ ಸುಪ್ರಸಿದ್ಧರನ್ನೇ ಸಂದರ್ಶಿಸಬೇಕೆಂದು ಬೆಕ್ಕಣ್ಣ ಉನ್ನಾವ್‌ಗೆ ಹೆಲಿಕಾಪ್ಟರಿನಲ್ಲಿ ಹಾರಿತು. ಹೆಲಿಪ್ಯಾಡಿನಲ್ಲಿ ಇಳಿದದ್ದೇ ‘ರೇಪುಸ್ತಾನದ ರಾಜಧಾನಿ ಉನ್ನಾವ್‍ಗೆ ಸ್ವಾಗತ’ ಎಂಬ ಬೃಹತ್ ಕಮಾನು ನೋಡಿ ದಂಗಾಯಿತು! ಉನ್ನಾವ್ ಸಂಸದ ದಾಡಿ ಮಹಾರಾಜರ ಸಂದರ್ಶಿಸಲೆಂದು ಅತ್ತ ಹೊರಟಿತು. ಸಂಸದರು ಬೆಕ್ಕಣ್ಣನಂಥವರಿಗೆಲ್ಲ ಸಂದರ್ಶನ ಕೊಡುವುದುಂಟೇ... ಆದರೆ ಬೆಕ್ಕಣ್ಣ ಬಲು ಶಾಣೆ. ಚಂದದ ಹೆಣ್ಣಿನ ರೂಪ ಧರಿಸಿ ಹೋಯಿತು. ‘ಬೆಂಗಳೂರಿಂದ ಬಂದ ಬೆಕಿ’ ಎಂದು ಪರಿಚಯಿಸಿಕೊಂಡ ಹುಡುಗಿಯ ನೋಡಿ ಸುತ್ತಲಿದ್ದ ಚೇಲಾಗಳು ಬೆರಗಾಗಿ ಸರಸರನೆ ಸಂಸದರ ಬಳಿ ಕರೆದೊಯ್ದರು. ಸಂದರ್ಶನ ಶುರುವಾಯಿತು.

ಲೋಕಾಭಿರಾಮದಿಂದ ಶುರು ಮಾಡೋಣ ವೆಂದು, ಈರುಳ್ಳಿ ಬೆಲೆಯೇರಿಕೆಯಿಂದ ಬೆಂಗಳೂ ರಿನ ಹೋಟೆಲು ಮೆನುವಿನಲ್ಲಿ ಈರುಳ್ಳಿ ದೋಸೆ ಹೆಸರೇ ಮಾಯವಾಗಿದ್ದನ್ನು ಹೇಳಿತು. ‘ನಾನು ಜೀವಮಾನದಲ್ಲೇ ಈರುಳ್ಳಿ ತಿಂದಿಲ್ಲ. ಅದು ತಾಮಸ ಆಹಾರ ಪದಾರ್ಥ. ಜನ ಈರುಳ್ಳಿ ತಿನ್ನೋದನ್ನು ಬಿಟ್ಟರೆ ಸಾತ್ವಿಕರಾಗಿ, ಅಪರಾಧ ಕಡಿಮೆಯಾಗುತ್ತೆ’ ಎಂದರು ಮಹಾರಾಜರು.

‘ಪಶುವೈದ್ಯೆ ಮೇಲಿನ ಅತ್ಯಾಚಾರದ ಆರೋಪಿಗಳ ಎನ್‍ಕೌಂಟರ್ ಬಗ್ಗೆ ನಿಮ್ಮ ಅಭಿಪ್ರಾಯ?’ ‘ಸರಿಯಾಗಿಯೇ ಮಾಡಿದ್ದಾರೆ. ಇದು ನಮೋಯುಗ... ಎನ್‍ಕೌಂಟರ್‌ಗೆ ಪೋಲೀಸರು ಹಿಂದೆಮುಂದೆ ನೋಡಲ್ಲ’.

‘ನಿಮ್ಮೂರಲ್ಲಿ ಮೊನ್ನೆ ಅತ್ಯಾಚಾರ ಸಂತ್ರಸ್ತೆಯನ್ನೇ ಬೆಂಕಿ ಹಚ್ಚಿ ಕೊಂದರಲ್ಲ ತ್ರಿ‘ವೇದಿ’ಗಳು, ಅವ್ರನ್ನೂ ಎನ್‍ಕೌಂಟರ್ ಮಾಡ ಬಹುದಿತ್ತು’ ಬೆಕಿ ವಾದಿಸಿದಳು. ‘ಸಿಲೆಕ್ಟಿವ್ ಎನ್‍ಕೌಂಟರ್ ಮಾಡ್ತೀವಿ. ಇವರು ವೇದಿಗಳು, ಸೆಂಗರ್‌ಗಳು. ಇವ್ರನ್ನು ಕಾನೂನು ಕೈಯೇ ಮುಟ್ಟಲ್ಲ’.

‘ಉನ್ನಾವ್‍ನಲ್ಲಿ ಹನ್ನೊಂದೇ ತಿಂಗಳಲ್ಲಿ 96 ಅತ್ಯಾಚಾರ ನಡೆದಿದೆಯಂತೆ. ಈ ಬಗ್ಗೆ ನಿಮ್ಮ ಮುಂದಿನ ಯೋಜನೆ?’

‘ಡಿಸೆಂಬರ್ ಒಳಗೆ ಅತ್ಯಾಚಾರ ಶತಕ ಬಾರಿಸೋದು’ ಎಂದರು ದಾಡಿ ಮಹಾರಾಜರು!

ಸುತ್ತಲಿದ್ದ ಚೇಲಾಗಳು ಮೈಮೇಲೆ ಎರಗುತ್ತಲೇ ಗಾಬರಿಯಾದ ‘ಬೆಕಿ’ ಮರುಕ್ಷಣವೇ ವೇಷ ಬದಲಿಸಿ ಬೆಕ್ಕಣ್ಣನಾಗಿ ಹೆಲಿಪ್ಯಾಡ್‍ನತ್ತ ದೌಡಾಯಿಸಿತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)