ಬುಧವಾರ, ಫೆಬ್ರವರಿ 26, 2020
19 °C

ಗಾಂಧೀಮುತ್ಯಾ ಸಂಚಾರ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಗಾಂಧೀಜಿಗೆ ಯಾರೋ ತಮ್ಮ ಮೇಲೆ ದಬದಬನೆ ತಣ್ಣೀರು ಸುರಿದಿದ್ದರಿಂದ ಸಟಕ್ಕನೆ ಎಚ್ಚರವಾಯಿತು. ಏಳು ದಶಕಗಳಿಂದ ಹೀಗೆ ವರ್ಷಕ್ಕೊಮ್ಮೆ ಎಬ್ಬಿಸಿಕೊಂಡು, ಗುಣಗಾನ ಮಾಡಿಸಿಕೊಂಡು, ಮತ್ತೆ ಮೂಲೆಗೆ ದಬ್ಬಿಸಿಕೊಳ್ಳುವುದು ರೂಢಿಯಾಗಿತ್ತು. ಆದರೂ ವರ್ಷದಿಂದ ವರ್ಷಕ್ಕೆ ಅವರನ್ನು ಇನ್ನಷ್ಟು ಪಾತಾಳಕ್ಕೆ ದಬ್ಬುತ್ತಿದ್ದರಿಂದ, ಹುಟ್ಟಿದ ಹಬ್ಬದಂದು ಹೀಗೆ ಎಬ್ಬಿಸಿಕೊಳ್ಳುವುದೇ ಪಾಪದ ಗಾಂಧೀಜಿಗೆ ದುಃಸ್ವಪ್ನವಾಗಿತ್ತು.

ಅ. 2ರ ಬೆಳಿಗ್ಗೆ ಬದಲಿಗೆ ಈಗಲೇ ಯಾಕೆ ಎಬ್ಬಿಸಿದರಪ್ಪ ಎಂದು ಅಚ್ಚರಿಗೊಳ್ಳುತ್ತ ಪ್ರತಿಮೆಯಿಂದ ಕೆಳಗಿಳಿದರು. ಬಡಕಲು ಮೈನ ಇಬ್ಬರು, ಸುತ್ತಲೂ ಬೆಳೆದಿದ್ದ ಕಸಕಡ್ಡಿ ಸ್ವಚ್ಛಪಡಿಸುತ್ತಿದ್ದರು. ಒಂದು ಸುತ್ತು ತಿರುಗಾಡಿ ಬರಲೆಂದು ಮೆಲ್ಲಗೆ ಕೋಲೂರಿಕೊಂಡು ಗಾಂಧೀಮುತ್ಯಾ ಹೊರಟರು.

ಎದುರಿಗೆ ಕಂಡ ಟಿ.ವಿ. ಚಾನೆಲ್‌ವೊಂದರ ಕಚೇರಿ ಹೊಕ್ಕರು. ನಾಲ್ಕಾರು ಜನರನ್ನು ಗುಡ್ಡೆ ಹಾಕಿ
ಕೊಂಡು ಒಬ್ಬಾತ ಏರುದನಿಯಲ್ಲಿ ಚರ್ಚೆಯೆಂಬ ಏಕಮುಖಿ ಕಿರುಚಾಟ ನಡೆಸಿದ್ದ. ಮಧ್ಯೆಮಧ್ಯೆ ಹೌಡಿ ಮತ್ತು ವಿಶ್ವಸಂಸ್ಥೆ ಭಾಷಣಗಳಲ್ಲಿ ನಮೋಗುರುಗಳು ಎಷ್ಟು ಸಲ ರಾಷ್ಟ್ರಭಕ್ತಿ, ಸಬ್ ಕಾ ವಿಕಾಸ, ಶಾಂತಿ ತುಂಬಿತುಳುಕುತಿಹ ಕಾಶ್ಮೀರ ಇತ್ಯಾದಿ ಪದಗಳನ್ನು ಉಚ್ಚರಿಸಿದ್ದಾರೆ, ಅದೇ ವೇಳೆ ಪಾಕ್ ಪ್ರಧಾನಿಗಳು ಹಿಂದೂ, ಆರ್‌ಎಸ್ಎಸ್, ಕಾಶ್ಮೀರದಲ್ಲಿ ಹಿಂಸೆ ಇತ್ಯಾದಿ ಪದಗುಚ್ಛಗಳನ್ನು ವದರಾಡಿದ್ದಾರೆ ಎಂದು ವರ್ಡ್‌ ಕ್ಲೌಡ್ ಲೆಕ್ಕ ತೋರಿಸುತ್ತಿದ್ದರು. ‘ಅರೆ, ಆಗಿನ ಕಾಲದ ನಮ್ಮ ಭಾಷಣದಲ್ಲಿದ್ದ ಗ್ರಾಮ ಸ್ವರಾಜ್ಯ, ಜೈಲ್ ಭರೋ ಇತ್ಯಾದಿ ಪದಗಳ ಲೆಕ್ಕಾಚಾರದ ಅಂದಾಜಾದರೂ ಈ ತಲೆಗಳಿಗಿವೆಯೇ’ ಎಂದು ಗಾಂಧೀಜಿ ಖಿನ್ನರಾಗಿ ಹೊರಬಂದರು.

ಖಾದಿ ಭಂಡಾರವೊಂದು ಕಂಡಿದ್ದೇ ಖುಷಿ ಯಿಂದ ಒಳಹೊಕ್ಕರು. ಗೋಡೆಯಲ್ಲಿ ದೊಡ್ಡದಾಗಿ ತೂಗುಹಾಕಿದ್ದ ಕ್ಯಾಲೆಂಡರ್ ಕಂಡಾಗ ಖುಷಿಯ ಬಲೂನು ಠುಸ್ಸೆಂದಿತು. ಫೋಟೊದಲ್ಲಿ ಚರಕದ ಮುಂದೆ ನೂಲುತ್ತ ಅರೆನಗ್ನರಾಗಿ ಕೂತ ಅವರನ್ನು ಕೆಳತಳ್ಳಿ, ಗರಿಗರಿ ಖಾದಿ ಜುಬ್ಬ, ಪೈಜಾಮ ತೊಟ್ಟು, ತಲೆಗೊಂದು ಬಣ್ಣದ ರುಮಾಲು ಸುತ್ತಿ, ನೂಲುವ ನಟನೆ ಮಾಡುತ್ತ ಕ್ಯಾಮೆರಾಗೆ ಪೋಸು ಕೊಟ್ಟ ನಾಯಕನಟನನ್ನು ನೋಡಿ ‘ಅರೆ ಇವನಾರವ’ ಎಂದು ಗಾಬರಿಯಾಗಿಬಿಟ್ಟರು. ಎಲ್ಲಾದರೂ ತಮ್ಮ ಕನ್ನಡಕ, ಕೋಲನ್ನೂ ಕಸಿದುಕೊಂಡರೆ, ಎಂದು ಇನ್ನಷ್ಟು ಗಾಬರಿ ಬಿದ್ದು ವಾಪಸು ಬಂದು, ತೊಳೆದಿಟ್ಟ ಪ್ರತಿಮೆಯನೇರಿ, ನೂರೈವತ್ತನೇ ಜಯಂತಿಯಂದು ಇನ್ನಷ್ಟು ಕಲ್ಲಾಗಿ ನಿಂತುಬಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)