ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಫಲ

Last Updated 12 ಜನವರಿ 2021, 19:31 IST
ಅಕ್ಷರ ಗಾತ್ರ

ಈ ಬಾರಿ ಸಂಕ್ರಾಂತಿ ಪುರುಷನು ಮೊಂಡ ಎಂಬ ಹೆಸರು ಹೊಂದಿದ್ದು, ಮೈಗೆ ಕೇಸರ ಹಾಗೂ ಲಸಿಕೆಗಳನ್ನು ಧಾರಣ ಮಾಡಿರುತ್ತಾನೆ. ಸಿಂಹವು ವಾಹನವಾಗಿರುತ್ತದೆ. ಇದರಿಂದ ಕೇಸರಿ ಧ್ವಜಕ್ಕೆ ಬೆಲೆ ಏರಲಿದೆ. ಲಸಿಕಾ ಪ್ರಸಂಗಗಳು ಹೆಚ್ಚಲಿವೆ. ಬಕರರಾಶಿಯ ಜನಸಾಮಾನ್ಯರಿಗೆ ವಾಗ್ದಾನ ಫಲ. ಕಮಲೆಯು ಮತದಾರನ ಸಾತಿವ್ರತ್ಯ ಮಣಿಸಿದಲ್ಲಿ ಮಾತ್ರ ಬಾರಾಬಂಗಾಳಿಯ ಕೃಪೆ ಸಾಧ್ಯ. ಹಸ್ತ ಶುದ್ಧಿಯಿದ್ದಲ್ಲಿ ರಾಜಕೀಯ ಉದ್ಯಮಿಗಳಿಗೆ ಶ್ರೇಯಸ್ಸು. ರೈತರಿಗೆ ಎಂದಿನಂತೆ ಅತಂತ್ರ ಸ್ಥಿತಿ.

ಬೈಡನ್ ಬಣ್ಣದಕೋಲಿನ ಪ್ರಭಾವದಿಂದ ಭಾರತೀಯರಿಗೆ ವಿದೇಶವಾಸ ಸುಗಮ. ಟ್ರಂಪಿಗೆ ಅನರ್ಹತೆಯ ಭೀತಿ. ಚೀನಾ ಚೌರ್ಯವಿದ್ಯೆಯ ಚಾಲು ನಿರಾತಂಕ.

ರಾಜ್ಯದಲ್ಲಿ ವಿರೋಧ ಪಕ್ಷಗಳಿಗೆ ರಾಹು-ಕೇತು ಕಾಟದಿಂದ ನೆಮ್ಮದಿ ನಾಶ ಮತ್ತು ನಾಯಕರಿಗೆ ಎರಡು ವರ್ಷ ನಿರುದ್ಯೋಗದ ಆತಂಕ. ರಾಷ್ಟ್ರ ಪಕ್ಷದ ನಾಯಕರ ತೀರ್ಥಯಾತ್ರೆಯಿಂದ ನಾಯಕತ್ವ ವಾಲುಗೋಪುರವಾದೀತು. ರಾಜ್ಯದ ದೊರೆಗೆ ಹಿತಶತ್ರುಗಳ ಬಾಧೆ ಹಾಗೂ ವಚನದೋಷ. ಹಕ್ಕಿಜ್ವರದ ಭೀತಿಯಿಂದ ಶಿರೋವೇದನೆ. ಕಲಹ ಶಾಂತಿಗಾಗಿ ಅನುದಾನ ಭಾಗ್ಯ ಹೆಚ್ಚಲಿದೆ. ಪ್ರೇತಃಕಾಲದಲ್ಲಿ ತ್ರಿಮೂರ್ತಿಗಳ ಅಖಂಡ ಭಜನೆಯಿಂದ ಸಂತಸ. ಮೀಸಲಾತಿ ಪ್ರಾಪ್ತಿಗಾಗಿ ಗುರು ಸ್ವಕ್ಷೇತ್ರನಾಗಿದ್ದು ಸಂಯಮ ಹೊಂದುವುದು ಅವಶ್ಯಕ.

ಬಡಭರತನಿಗೆ ತೆರಿಗೆ ಬಾಧೆ, ಸರಕುಗಳು ತೇಜಿಯಾಗುವುದರಿಂದ ಧನ ವ್ಯಯ. ವೃಥಾ ಸಾಲಕ್ಷೇಪದಿಂದ ಕಡಪಾಯಿ ಸ್ಥಿತಿ ಬಾರದಂತೆ ಜಾಗ್ರತೆ ಇರಲಿ. ಚಿನ್ನ-ಬೆಳ್ಳಿ ಮಾತಿನಲ್ಲೇ ಇರುವುದು ಒಳಿತು. ಮಧ್ಯಮ ವರ್ಗ ಉತ್ತಮ ಫಲಗಳ ನಿರೀಕ್ಷೆ ಮಾಡಿದರೂ ಅವು ಗೋಚಾರಕ್ಕೆ ಬರಲಾರವು. ಪಾನಪೀಡಿತರಿಗೆ ತೆರಿಗೆ ಹೊರೆಯಿಂದ ಪಿತ್ತೋಷ್ಣ ಬಾಧೆ.

ನಾನಾ ಕ್ಷೇತ್ರಗಳಲ್ಲಿ ಅಪವಾದ ಭೀತಿಗಳು ಕಂಡುಬರಲಿವೆ. ಐಪಿಎಲ್ ಮತ್ತೆ ಶೂನ್ಯ ಸಂಪಾದನೆ ತರಲಿದೆ. ಲಸಿಕೆಗಾಗಿ ತಾರಾಬಲ ಮತ್ತು ತಿಥಿಗಳ ಸಂಯೋಜನೆ ಅಗತ್ಯ. ನಕಲಿ ಬಿಲ್ಲುಗಳಿಂದ ಕಾಮಗಾರಿಗಳಿಗೆ ಸುಖ-ಸೌಭಾಗ್ಯ (ಈ ಭವಿಷ್ಯವು ಪೂರ್ವಜನ್ಮದ ಕರ್ಮಗಳನ್ನು ಆಧರಿಸಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT