ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪೆಟ್ರೋಲ್ ಸೇವೆ

Last Updated 30 ಜೂನ್ 2020, 19:30 IST
ಅಕ್ಷರ ಗಾತ್ರ

‘ಪೆಟ್ರೋಲ್ ರೇಟ್ ಇವತ್ತು ಎಷ್ಟು ಏರಿಕೆಯಾಗಿದೆಯೋ...’ ಎಂದಳು ಸುಮಿ.

‘ನಮ್ಮ ಬಿ.ಪಿ. ಏರುವಷ್ಟು ಆಗಿರುತ್ತದೆ...’ ಎಂದು ಬಂಕ್ ಬಳಿ ಬೈಕ್ ನಿಲ್ಲಿಸಿದ ಶಂಕ್ರಿ.

‘ಫುಲ್ ಟ್ಯಾಂಕ್ ಹಾಕಲಾ ಸಾರ್?’ ಅಂದ ಬಂಕಿನವ.

‘ಬೇಡಪ್ಪ, ಕೊರೊನಾ ಕಷ್ಟಕಾಲದಲ್ಲಿ ವ್ಯವಹಾರ ಇಲ್ಲದೆ ಆದಾಯ ಕಮ್ಮಿಯಾಗಿದೆ’ ಶಂಕ್ರಿ ಕೊಸರಾಡಿದ.

‘ಕೊರೊನಾ ಸೇವಿಂಗ್ಸ್ ಇದೆಯಲ್ಲ, ಪೆಟ್ರೋಲ್‍ಗೆ ಖರ್ಚು ಮಾಡಿ ಸಾರ್’.

‘ಕೊರೊನಾ ಸೇವಿಂಗ್ಸಾ?!’ ಸುಮಿಗೆ ಅರ್ಥ ಆಗಲಿಲ್ಲ.

‘ಹೌದು ಮೇಡಂ, ಕೊರೊನಾ ಬಂದಾಗಿನಿಂದ ಮದ್ವೆಗಿದ್ವೆಗೆ ಹೋಗುವ, ಮುಯ್ಯಿ ಕೊಡುವ ಹಣ ಉಳಿಸಿದ್ದೀರಿ. ಸಿನಿಮಾ, ಶಾಪಿಂಗ್ ಮರೆತಿದ್ದೀರಿ. ಹೋಟೆಲ್, ಚಾಟ್ಸ್ ಅಂತ ತಿನ್ನುವ ಬಾಯಿಗೆ ಬೀಗ ಹಾಕಿಕೊಂಡಿದ್ದೀರಿ. ಸಿಕ್ಕಿದ್ದನ್ನು ತಿನ್ನದೆ ಆರೋಗ್ಯ ಕಾಪಾಡಿಕೊಂಡು ಆಸ್ಪತ್ರೆ ಖರ್ಚು ಉಳಿಸಿದ್ದೀರಿ. ಪ್ರವಾಸ, ಪಿಕ್‍ನಿಕ್ ಹೋಗಿಲ್ಲ, ಬಟ್ಟೆ-ಬರೆ ಕೊಳ್ಳುತ್ತಿಲ್ಲ, ಚಿನ್ನದ ಬೆಲೆ ಜಾಸ್ತಿ ಅಂತ ಒಡವೆ ಖರೀದಿ ಕೈಬಿಟ್ಟಿದ್ದೀರಿ. ಎಲ್ಲಾ ಉಳಿಸಿ ಸರಳ ಜೀವನ ನಡೆಸುತ್ತಿದ್ದೀರಿ. ಇವೆಲ್ಲಾ ಕೊರೊನಾ ಸೇವಿಂಗ್ಸ್ ಅಲ್ವಾ ಸಾರ್?’

‘ಹಾಗಂತ, ಪೆಟ್ರೋಲ್ ಬೆಲೆ ಹೇರಿಕೆ ಸರಿಯಲ್ಲ’ ಅಂದ ಶಂಕ್ರಿ.‌

‘ಮದ್ಯದ ಬೆಲೆ ಜಾಸ್ತಿ ಮಾಡಿದಾಗ ಉಸಿರುಬಿಡೋಲ್ಲ, ಒಂದೆರಡು ರೂಪಾಯಿ ಪೆಟ್ರೋಲ್ ರೇಟ್ ಜಾಸ್ತಿಯಾದ್ರೆ ಹಾರಾಡ್ತೀರಲ್ಲ ಸಾರ್’.

‘ಮದ್ಯದ ಬೆಲೆ ವರ್ಷಕ್ಕೊಮ್ಮೆ ಏರುತ್ತದೆ, ಪೆಟ್ರೋಲ್ ಥರಾ ಡೈಲೀ ಏರಿಕೆ ಅಲ್ಲ’.

‘ಕೊರೊನಾ ಬಂದು ಆದಾಯವಿಲ್ಲದೆ ಸರ್ಕಾರಗಳು ಕಣ್ಣು–ಬಾಯಿ ಬಿಡುತ್ತಿವೆ... ಮದ್ಯದ ಹಣದಿಂದ ರಾಜ್ಯ ಸರ್ಕಾರ, ಪೆಟ್ರೋಲ್ ದುಡ್ಡಿನಿಂದ ಕೇಂದ್ರ ಸರ್ಕಾರ ನಡೆಯಬೇಕಲ್ವಾ ಸಾರ್? ಸರ್ಕಾರಗಳಿದ್ದರೆ ನಾವು, ನಾವಿದ್ದರೆ ದೇಶ, ಪೆಟ್ರೋಲ್ ಖರೀದಿ ದೇಶಸೇವೆ ಅಲ್ವಾ ಸಾರ್’ ಅಂದ.

ಸುಮಿಯ ದೇಶಾಭಿಮಾನ ಜಾಗೃತವಾಗಿ, ‘ಆಯ್ತಪ್ಪ, ಫುಲ್ ಟ್ಯಾಂಕ್ ಪೆಟ್ರೋಲ್ ಹಾಕು’ ಎಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT