ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ‘ಈ ಸಲ ಕಪ್‌ ನಮ್ದೇ!’

Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

‘ಬಿಜೆಪಿ ಅನ್ನೂ ಪದದೊಳಗೆ ಜೆ ಅಕ್ಷರ ಎದಕ್ಕ ಐತಿ, ಅದರ ಮಹತ್ವ ಏನು ಅಂತ ಗೊತ್ತೈತೇನ್‌ ನಿನಗ’ ಬೆಕ್ಕಣ್ಣ ಮುಗುಮ್ಮಾಗಿ ಕೇಳಿತು.

ನಾನು ಪೆಂಗಳಂತೆ ತಲೆ ಅಲ್ಲಾಡಿಸಿದೆ.

‘ಬಿಜೆಪಿ ಪದದ ಮಧ್ಯದಲ್ಲಿ ಜೆ ಅಕ್ಷರ ಐತಿ, ಅಂದರೆ ಬಿಜೆಪಿ ಮತ್ತು ಜೆಡಿಎಸ್‌ ಅಗತ್ಯವಿದ್ದಾಗ ಪರಸ್ಪರರ ‘ಬಿ’ ಟೀಂ ಆಗಬೌದು ಅಂತ ಅರ್ಥ. ಯೆಡ್ಯೂರಜ್ಜಾರು, ಕುಮಾರಣ್ಣ ಸುತ್ತೀಬಳಸಿ ಅದನ್ನೇ ಹೇಳ್ಯಾರೆ, ಅಷ್ಟೂ ಗೊತ್ತಾಗಂಗಿಲ್ಲೇನ್’ ಎಂದು ನನ್ನ ತಲೆಗೆ ಮೊಟಕಿತು.

‘ಕೈಪಕ್ಷದೋರು ಇಡೀ ರಾಜ್ಯ ಲೂಟಿ ಹೊಡೆಯಾಕೆ ಹತ್ಯಾರ. ಅವರ ಲೂಟಿ ನಿಲ್ಲಿಸಿ, ರಾಜ್ಯ ರಕ್ಷಣೆ ಮಾಡೂ ಘನಂದಾರಿ ಉದ್ದೇಶಕ್ಕೆ ಒಗ್ಗಟ್ಟಾಗತೀವಿ ಅಂತ ಅಂದಾರೆ’.

‘ಅದೇ ಮತ್ತ… ಬರೇ ಕೈಪಕ್ಷದೋರು ಲೂಟಿ ಹೊಡೆದರೆ ಹೆಂಗ? ಲೂಟಿ ಹೊಡೆಯೂ ಹಕ್ಕು ತಮಗೂ ಐತಿ. ಒಬ್ಬೊಬ್ಬರೇ ಲೂಟಿ ಹೊಡಿಯೂಣು ಅಂದ್ರ ಬಹುಮತ ಬಂದಿಲ್ಲ, ಹಿಂಗಾಗಿ ಒಗ್ಗಟ್ಟಾಗಿ ಕುರ್ಚಿ ಏರಿ, ಲೂಟಿ ಹೊಡೆಯೂ ಪ್ಲಾನ್‌ ಮಾಡ್ಯಾರೆ’.

‘ಇಂಡಿಯಾ ಹೆಸರನ್ನ ಭಾರತ ಅಂತ ಬದಲಿ ಮಾಡ್ತಾರ ಅಂತ ಹೇಳ್ತಿದಾರಲ್ಲ, ಹಂಗೇ ಈ ಎರಡೂ ಪಕ್ಷ ಸೇರಿಸಿ, ಬಿಜೆಡಿಪಿ ಅಂದ್ರ ಭಾರತೀಯ ಜನತಾ ದಳ ಪಕ್ಷ ಅಂತ ಹೊಸ ಹೆಸರು ಇಟ್ಟರೆ ಮತದಾರರಿಗೂ ಗೊಂದಲ ಆಗಂಗಿಲ್ಲ, ತೆನೆಯಕ್ಕನೂ ಸೆಕ್ಯುಲರ್‌ ಪದದ ಹೊರೆಯನ್ನು ಅತ್ತಾಗೆ ಬಿಸಾಕಿ, ಬಿಡುಬೀಸಾಗಿ ಕಮಲಕ್ಕನ ಜೊತೆ ಸೇರಬೌದು, ಹೌದಿಲ್ಲೋ’ ಎಂದೆ.

‘ಅಪರೂಪಕ್ಕೊಮ್ಮೆ ಮಸ್ತ್‌ ಐಡಿಯಾ ಹೇಳೀ ನೋಡು. ತೆನೆಯಕ್ಕ ತೆಲಿಮ್ಯಾಗಿನ ರಾಗಿ ಹೊರೆ ಕೆಳಗಿಳಿಸಿ, ಕಮಲದ ಹೂ ಮುಡಕೊಂಡು ಎಷ್ಟು ಚಂದ ಕಾಣಬೌದು’.

‘ಅದೆಲ್ಲ ಇರಲಿ, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ್ನೇ ಆರಿಸಿಲ್ಲವಲ್ಲ’.

‘ವಿರೋಧ ಪಕ್ಷದ ನಾಯಕ ಎದಕ್ಕ ಬೇಕು? ಇನ್ನು ಸ್ವಲ್ಪೇ ತಿಂಗಳದಾಗೆ ಬಿಜೆಡಿಪಿ ಹೆಂಗಾನ ಮಾಡಿ ಅಧಿಕಾರಕ್ಕೆ ಬರತೈತಿ. ನಮ್ ಕುಮಾರಣ್ಣನೇ ಮುಖ್ಯಮಂತ್ರಿ!’ ಬೆಕ್ಕಣ್ಣ ಕನಸು ಕಾಣತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT