ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸೂಚ್ಯಂಕ ಸ್ವಾವಲಂಬನೆ..

ಚುರುಮುರಿ: ಸೂಚ್ಯಂಕ ಸ್ವಾವಲಂಬನೆ..
Published 1 ಸೆಪ್ಟೆಂಬರ್ 2024, 19:15 IST
Last Updated 1 ಸೆಪ್ಟೆಂಬರ್ 2024, 19:15 IST
ಅಕ್ಷರ ಗಾತ್ರ

‘ಜಾಗತಿಕ ಹಸಿವಿನ ಸೂಚ್ಯಂಕದಾಗೆ ಒಟ್ಟು 125 ದೇಶಗಳ ಪಟ್ಟಿಯಲ್ಲಿ ನಮ್ಮ ದೇಶ 111ನೇ ಸ್ಥಾನದಲ್ಲಿ ಅಂದ್ರೆ ಅಷ್ಟು ಕೆಳಗೈತಂತ ವರದಿ ಹೇಳಿತ್ತಲ್ಲ… ಎಲ್ಲಾ ಸುಳ್ಳೇ…’ ಬೆಕ್ಕಣ್ಣ ನನ್ನ ಮುಖಕ್ಕೆ ತಿವಿದು, ಸುದ್ದಿಯೊಂದನ್ನು ತೋರಿಸಿತು.

‘ನೋಡಿಲ್ಲಿ… ಹತ್ತು ವರ್ಸದಾಗೆ ಆರು ಪರ್ಸೆಂಟ್‌ನಿಂದ ನಲವತ್ತು ಪರ್ಸೆಂಟ್‌ಗೆ ಏರಿಕೆ ಆಗೈತಂದ್ರ ನಮ್ಮ ದೇಶ ಒಂದು ದಶಕದಾಗೆ ಎಷ್ಟ್‌ ಪ್ರಗತಿಯಾಗೈತಿ’ ಎಂದಿತು.

ಏನು ಏರಿಕೆ ಎಂದು ಕಕಮಕ ನೋಡಿದೆ.

‘2011-12ರಲ್ಲಿ ವಾಹನ ಹೊಂದಿದ್ದ ಅತಿಬಡವರ ಸಂಖ್ಯೆ ಆರು ಪರ್ಸೆಂಟ್‌ ಇದ್ದರೆ, 2022-23ರಲ್ಲಿ ವಾಹನ ಹೊಂದಿರೋ ಅತಿಬಡವರ ಸಂಖ್ಯೆ ನಲವತ್ತು ಪರ್ಸೆಂಟ್‌ ಆಗೈತಂತ. ಯಾರೋ ಕಾಂಜಿಪೀಂಜಿ ವ್ಯಕ್ತಿ ಹೇಳಿದ್ದಲ್ಲ ಇದು. ನಮ್‌ ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರೇ ಹೇಳ್ಯಾರೆ’ ಎಂದು ವಿವರಿಸಿತು.

‘ನೋಡಲೇ… ಪ್ರತಿವರ್ಷ ಸರಾಸರಿ ಒಂದೂವರೆ ಕೋಟಿ ಟೂವ್ಹೀಲರ್‌ಗಳು, 30-40 ಲಕ್ಷ ಹೊಸ ಕಾರುಗಳು ಮಾರಾಟ ಆಗತಾವೆ. ಹೊಸ ಹೊಸ ಗಾಡಿ ತಗಳೋ ಮಂದಿ ಹಳೆ ಗಾಡಿಗಳನ್ನು ಕಡಿಮೆ ಬೆಲೆಗೆ ಮಾರತಾರೆ. ಹಳೆ ಗಾಡಿಗಳು ಕಡಿಮೆ ಬೆಲೆಗೆ ಸಿಕ್ಕಾಗ ಬಡಮಂದಿ ಕೊಳ್ಳತಾರೆ’ ಎಂದು ನನ್ನ ವಾದ ಮುಂದಿಟ್ಟೆ.

‘ಹಳೇದೋ ಹೊಸದೋ, ಒಟ್‌ 40 ಪರ್ಸೆಂಟ್‌ ಬಡವರ ಹತ್ರ ಗಾಡಿ ಐತಿ ಅಂದ್ರೆ ಅವ್ರು ಪ್ರಗತಿಯಾದಂಗೆ ಆತಿಲ್ಲೋ’.

‘40 ಪರ್ಸೆಂಟ್‌ ಬಡವರ ಹತ್ರ ಗಾಡಿ ಐತಿ ಅಂದರೆ ಇನ್ನುಳಿದ 60 ಪರ್ಸೆಂಟ್‌ ಮಂದಿವಳಗ ಒಂದು ಹೊತ್ತಿನ ಊಟಕ್ಕೂ ತತ್ವಾರ ಆಗಿರೋರೂ ಇರತಾರಲ್ಲ?’

‘ಮಂದಿ ಹತ್ರ ಗಾಡಿ ಐತಿ ಅಂದ್ರ ಅವ್ರು ಅಷ್ಟ್‌ ದುಡಿಲಾಕೆ ಹತ್ಯಾರೆ, ಕೈಯಾಗೆ ಅಷ್ಟ್‌ ರೊಕ್ಕ ಓಡಾಡತೈತಿ ಅಂತನೇ ಅರ್ಥ. ಈ ವಿಶ್ವಬ್ಯಾಂಕು, ಬ್ಯಾರೆ ಮಂದಿ ಹೇಳೋ ಸೂಚ್ಯಂಕ ಎಲ್ಲಾನೂ ಸುಳ್ಳೆ. ನಮ್ಮದೇ ಅಳತೆಗೋಲು ಇಟ್ಟುಕೋಬೇಕು. ಸೂಚ್ಯಂಕ ಸ್ವಾವಲಂಬನೆ ಗಳಿಸಬೇಕು’ ಎಂದು ಭಾಷಣ ಕುಟ್ಟಿದ ಬೆಕ್ಕಣ್ಣ ವಿವಿಧ ಸೂಚ್ಯಂಕಗಳ ಮಾನದಂಡ ರೂಪಿಸತೊಡಗಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT