‘ರೀ, ಈ ಸಲ ನೀವು ಎಲೆಕ್ಷನ್‌ಗೆ ನಿಲ್ಲಬೇಡಿ. ನನಗೆ ಟಿಕೆಟ್ ಕೊಡೋಕೆ ನಿಮ್ ಪಾರ್ಟಿಯವರಿಗೆ ಹೇಳಿ’ ಹೊಸ ವರಸೆ ತೆಗೆದಳು ಹೆಂಡತಿ.
‘ನೀನಾ’ ವ್ಯಂಗ್ಯವಾಗಿ ನಗುತ್ತಾ ಕೇಳಿದೆ.
‘ಏನ್ರೀ, ಇಷ್ಟು ವ್ಯಂಗ್ಯವಾಗಿ ನಗ್ತಿದೀರಿ. ಕ್ರಿಕೆಟ್ ನೋಡಲಿಲ್ವ... ನಮ್ ಆರ್‌ಸಿಬಿ ಹುಡುಗೀರು ಕಪ್ ಗೆದ್ದಿದ್ದನ್ನು’.
‘ವಿಕೆಟ್ ತಗೊಂಡಷ್ಟು ಸುಲಭ ಅಲ್ಲಮ್ಮ ವೋಟ್ ತಗೊಳೋದು. ಅಲ್ಲದೆ, ನಮ್ ಪಾರ್ಟಿ
ಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್‌ಗೆ ವಿರೋಧ ಇದೆ’.
‘ನೀವು ತಪ್ಪು ತಿಳ್ಕೊಂಡಿದಿರಿ ರೀ... ಈಗಾಗಲೇ ಪಾಲಿಟಿಕ್ಸ್‌ನಲ್ಲಿರೋ ಫ್ಯಾಮಿಲಿಗಳನ್ನ ಬಿಟ್ಟು, ಬೇರೆ ಫ್ಯಾಮಿಲಿಯವರ ಪಾಲಿಟಿಕ್ಸ್‌ಗೆ ವಿರೋಧ ಇದೆ ಅಂತ ಅದರರ್ಥ. ಅಧಿಕಾರ ನಡೆಸಿದ ಅನುಭವ ಇರೋ ನಮ್ಮಂಥ ಕುಟುಂಬಗಳಿಗೆ ಇದು ಅನ್ವಯಿಸಲ್ಲ’ ಹೊಸ ವಾದ ಮುಂದಿಟ್ಟಳು ಪತ್ನಿ.
‘ಮೈತ್ರಿ ಬೇರೆ ಮಾಡ್ಕೊಂಡಿದೀವಿ ಕಣೆ. ಹೊಸ ಕ್ಷೇತ್ರವಾದರೆ ನಮ್ ಪಾರ್ಟಿ ಸಿಂಬಲ್ ಬದಲು ಅವರ ಪಾರ್ಟಿ ಸಿಂಬಲ್ ಮೇಲೆ ನಿಂತ್ಕೊಬೇಕು’.
‘ನಮ್ ಪಾರ್ಟಿ ಸಿಂಬಲ್ ಯಾವುದು ಅಂತ ನಮಗೇ ಮರೆತುಹೋಗ್ತಿದೆ. ಇನ್ನು,
ಕಾರ್ಯಕರ್ತರಿಗೆ ನೆನಪಿರುತ್ತಾ? ಅದಕ್ಕೆ, ಅವರ ಸಿಂಬಲ್‌ನಲ್ಲೇ ನಿಲ್ಲೋಣ ಬಿಡಿ’.
‘ಅವರಿಗೆ ನೇಷನ್ ಮುಖ್ಯ ಕಣಮ್ಮ’.
‘ಕೊಡೋಣ ಬಿಡಿ, ನಮ್ಮ ಹತ್ರ ಏನು ಕಡಿಮೆ ಇದೆಯಾ?’
‘ನೇಷನ್ ಕೊಡ್ತೀಯಾ!’ ಎಂದು ಕೇಳಿದೆ.
‘ಓಹ್, ನೀವು ನೇಷನ್ ಅಂದ್ರಾ? ನನಗೆ ಡೊನೇಷನ್ ಅಂತ ಕೇಳಿಸ್ತು. ಅವರೆಲ್ಲ, ನೇಷನ್ ಮುಖ್ಯ ಅಂದಾಗಲೆಲ್ಲ, ನನಗೆ ಡೊನೇಷನ್ ಮುಖ್ಯ ಅಂತಾನೆ ಕೇಳಿಸುತ್ತೆ ರೀ’ ನಕ್ಕಳು ಪತ್ನಿ.
‘ಈಗ ಯುವ ಸಮೂಹಕ್ಕೆ ಆದ್ಯತೆ ಕೊಡಬೇಕು ಅಂತ ಪಾರ್ಟಿಯಲ್ಲಿ ಚರ್ಚೆ ನಡೀತಿದೆ’.
‘ಹಾಗಾದರೆ, ನಮ್ಮ ಮಗನಿಗೆ ಟಿಕೆಟ್ ಕೊಡೋಕೆ ಹೇಳಿ’.
‘ಆಗ ಅವನು ಬಾಂಡ್, ಜೇಮ್ಸ್ ಬಾಂಡ್ ಅಂತ ಹೇಳ್ಕೊಂಡು ಓಡಾಡ್ತಾನಾ?’ ನಾನೂ ನಕ್ಕೆ.
‘ಹಾಗೆಲ್ಲ ಏನಿಲ್ಲ. ನನ್ನ ಮಗ ಸ್ವಾಭಿಮಾನಿ. ಟಿಕೆಟ್ ಕೊಡದಿದ್ರೆ ಸ್ವಾಭಿಮಾನಕ್ಕಾಗಿ ಬಂಡಾಯವಾಗಿ ಎಲೆಕ್ಷನ್‌ಗೆ ನಿಲ್ತಾನೆ.
ಒನ್ ನೇಷನ್, ಮೋರ್ ಡೊನೇಷನ್ ಅಂತ ಓಡಾಡ್ತಾನೆ’ ನಗತೊಡಗಿದಳು.