ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ ‌| ದೀಪಗಳ್ಳರು!

Published : 19 ಆಗಸ್ಟ್ 2024, 1:09 IST
Last Updated : 19 ಆಗಸ್ಟ್ 2024, 1:09 IST
ಫಾಲೋ ಮಾಡಿ
Comments

ನಾನು ಪೇಪರು ನೋಡಿದವಳೇ ಬಲು ಗಾಬರಿಯಿಂದ ‘ಅಯ್ಯೋ ರಾಮ’ ಎಂದೆ.

‘ಏನಾತು’ ಬೆಕ್ಕಣ್ಣ ಓಡೋಡಿ ಬಂದು ಕೇಳಿತು.

ನಾನು ತೋರಿಸಿದ ಸುದ್ದಿ ಓದಿದ ಬೆಕ್ಕಣ್ಣನೂ ‘ಅಯ್ಯೋ ರಾಮ… ಅಯೋಧ್ಯೆಯ ರಾಮಪಥಕ್ಕೆ ಹಾಕಿದ ಸಾವಿರಾರು ಲೈಟುಗಳನ್ನೇ ಕಳ್ಳತನ ಮಾಡ್ಯಾರೆ’ ಎಂದು ನಿಟ್ಟುಸಿರುಬಿಟ್ಟಿತು.

‘ಬರೋಬ್ಬರಿ 3,800 ಆಲಂಕಾರಿಕ ಬಂಬೂ ಲೈಟುಗಳು, 36 ಗೋಬೋ ಪ್ರೊಜೆಕ್ಟರ್‌ ಲೈಟುಗಳು ಕಳ್ಳತನ ಆಗ್ಯಾವಂತೆ… ಅಂದ್ರೆ ಹೆಚ್ಚುಕಡಿಮಿ 50 ಲಕ್ಷ ರೂಪಾಯಿ ಬೆಲೆಯ ಲೈಟುಗಳಂತೆ!’ ನನ್ನ ಉದ್ಗಾರ.

‘ಅದೂ ಅಷ್ಟೆಲ್ಲ ಭದ್ರತೆ ಇರೋ ರಾಮಪಥದಲ್ಲಿಯೇ ತುಡುಗು ಮಾಡ್ತಾರೆ ಅಂದರೆ ಅವರೆಂಥಾ ಚಾಣಾಕ್ಷ ಕಳ್ಳರು!’ ಬೆಕ್ಕಣ್ಣ ಅಚ್ಚರಿಪಟ್ಟಿತು.

‘ಅಯೋಧ್ಯೆವಳಗೆ ದಶರಥ, ಭರತ, ರಾಮ ಇವರೆಲ್ಲ ಆಳ್ವಿಕೆ ಮಾಡೂವಾಗ ಹಿಂಗ ಒಂದೂ ಕಳ್ಳತನ ಆಗಿರಲಿಕ್ಕಿಲ್ಲ. ಈಗ ಯೋಗಿರಾಜ್ಯದೊಳಗೆ ಹಿಂಗಾತು’ ಎಂದೆ.

‘ನೀ ನಮ್ಮ ಭರತ, ರಾಮ ಇವ್ರ ಬಗ್ಗೆ ಎಲ್ಲ ಚಕಾರ ಎತ್ತಬ್ಯಾಡ’ ಗುರುಗುಟ್ಟಿದ ಬೆಕ್ಕಣ್ಣ ‘ಹಿಂತಾ ಪರಿ ಚಾಣಾಕ್ಷತನದಿಂದ ಕಳ್ಳತನ ಮಾಡ್ಯಾರೆ ಅಂದ್ರೆ ಯಾರೋ ಎಡಬಿಡಂಗಿಗಳೇ ಇರಬಕು. ವಿರೋಧ ಪಕ್ಷದವರೇ ಹೇಳಿ ಮಾಡಿಸಿರತಾರೆ. ಪಾಪ… ನಮ್ಮ ಯೋಗಿಮಾಮ ಏನು ಮಾಡತಾನೆ?’ ಎಂದು ತನ್ನ ತರ್ಕವನ್ನು ಮುಂದಿಟ್ಟಿತು.

‘ರಾಮಪಥದೊಳಗೆ ಅಗದಿ ಭಯಂಕರ ಭದ್ರತೆ ಅದ ಅಂತಾರೆ… ಆ ಇಡೀ ಪಥದೊಳಗೆ ಒಂದು ಸಿ.ಸಿ. ಟೀವಿ ಕೆಮರಾ ಇರಂಗಿಲ್ಲೇನು?’ ಎಂದೆ.

‘ದೀಪ ಅಳವಡಿಸಿದ ಏಜೆನ್ಸಿಯವರೇ ಕಡಿಮೆ ದೀಪ ಹಾಕಿ, ಈಗ ಕಳ್ಳತನದ ನಾಟಕ ಮಾಡಿರಬಕು ಅಂತ ಪೊಲೀಸರಿಗೆ ಅನುಮಾನ ಬಂದೈತಂತೆ. ಯೋಗಿಮಾಮನ ರಾಜ್ಯದಾಗೆ ಪೊಲೀಸರು ಭಯಂಕರ ಹುಷಾರು! ಲಗೂನೆ ಪತ್ತೆ ಹಚ್ಚತಾರೇಳು’ ಬೆಕ್ಕಣ್ಣ ಮೀಸೆ ತಿರುವಿತು.

‘ಅಂದಂಗೆ ದೀಪಗಳ್ಳರನ್ನು ಹಿಡಿದರೆ ಅವರಿಗೆ ಏನು ಶಿಕ್ಷೆ ಕೊಡಬಕು?’

‘ಕಳ್ಳರ ಕುಲಗೋತ್ರ, ಅವರ ಕಳ್ಳತನದ ಇತಿಹಾಸ ನೋಡಿ ಶಿಕ್ಷೆ ನಿರ್ಧಾರ ಮಾಡತಾರೆ’ ಎಂದು ಬೆಕ್ಕಣ್ಣ ಹೆಹ್ಹೆಹ್ಹೆ ಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT