ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಕಡತ ನಾಪತ್ತೆ!

Last Updated 2 ಡಿಸೆಂಬರ್ 2022, 18:32 IST
ಅಕ್ಷರ ಗಾತ್ರ

‘ಲೇಯ್, ವಿಷಯ ಗೊತ್ತಾಯ್ತಾ? ಮುಖ್ಯಮಂತ್ರಿ ಕಚೇರೀಲೆ ಒಂದು ಕಡತ ನಾಪತ್ತೆ ಆಗಿದೆಯಂತೆ’ ಹರಟೆ ಕಟ್ಟೇಲಿ ಕಲ್ಲೇಶಿ ಮಾತು ತೆಗೆದ. ‘ಹುಟ್ಟುಗುಣ ಸುಟ್ರೂ ಹೋಗಲ್ಲ, ಫೈಲು ಅಂದ್ಮೇಲೆ ಅದಕ್ಕೆ ಆವಾಗಾವಾಗ ನಾಪತ್ತೆ ಆಗೋದೇ ಒಂದು ಚಾಳಿ, ಅದಕ್ಕೆ ಮುನಿಸಿಪಾಲಿಟಿ ಆದ್ರೇನು, ಮುಖ್ಯಮಂತ್ರಿ ಆಫೀಸ್ ಆದ್ರೇನು?’ ಎಂದ ಭದ್ರ.

‘ಫೈಲನ್ನ ಇಲಿ ತಿಂದು ಹಾಕಿರಬೇಕು...’

‘ಇಲಿಗಳು ಇವೆ ಅಂದ್ಮೇಲೆ ಬೋನು ಇಟ್ಟು ಅವನ್ನು ಹಿಡಿದು ಹಾಕಬೇಕು ತಾನೆ?’

‘ಬೋನಿಟ್ಟ ಮೇಲೆ ಅದಕ್ಕೆ ಬೋಂಡ ಕಟ್ಟದೆ ಇದ್ರೆ ಆಗತ್ತಾ? ಇದಕ್ಕೆಲ್ಲಾ ಸರ್ಕಾರ ಬೋಂಡದ ಅಲೋಯೆನ್ಸ್ ಕೊಡ್ಬೇಕಲ್ಲ’.

‘ಲೇಯ್, ಬೋನಲ್ಲಿ ಹಿಡಿಯೋಕೆ ಸರ್ಕಾರಿ ಕಚೇರಿಲಿ ಇಲಿಗಳು ಎಲ್ಲಿರುತ್ವೆ? ಏನಿದ್ರೂ ಹೆಗ್ಗಣಗಳದ್ದೇ ಕಾರುಬಾರು! ಅವೇ ತಿಂದು ಹಾಕಿರಬೇಕು’.

‘ಲೇಯ್, ಈಗಿನ ಹೆಗ್ಗಣಗಳು ಫೈಲು, ಪೇಪರ್‍ರು ತಿನ್ನಲ್ಲ, ಕರೆನ್ಸಿ ನೋಟು ತಿನ್ನುತ್ತವೆ’.

‘ಯಾರಾದರೂ ಬೋಂಡ ತಿಂದು ಕಡತದ ಹಾಳೆಗಳನ್ನ ಹರಿದು ಕೈ ಒರೆಸಿಕೊಂಡು ಎಸೆದಿರಬಹುದಾ?’

‘ಸರ್ಕಾರಿ ಕಚೇರಿಲಿ ಪುಷ್ಕಳವಾದ ‘ಲಂಚ ಬಾಕ್ಸ್’ ಇರ್ಬೇಕಾದ್ರೆ ಬೋಂಡ ಯಾರು ತಿಂತಾರೆ?’

‘ಹಾಗಿದ್ರೆ ಇದ್ದಲ್ಲೇ ಇದ್ದು ಕಡತಕ್ಕೆ ಗೆದ್ದಲು ಹತ್ತಿ ಅದು ನಾಶ ಆಗಿರಬಹುದಾ?’

‘ಇದ್ದಲ್ಲೇ ಇದ್ರೆ ಕಡತಕ್ಕೆ ಏನ್ ಬೆಲೆ? ಕೈ ಕಡಿತ ಹೋಗ್ಬೇಕು ಅಂದ್ರೆ ಅದು ಒದ್ದಾಡ್ತಾನೇ ಇರ್ಬೇಕು’.

‘ನೋಡ್ರೋ, ಇದೆಲ್ಲಾ ಸರ್ಕಾರಿ ಸೀಕ್ರೇಟು! ಸರ್ಕಾರದ ಖಜಾನೆ ಸದಾ ಖಾಲಿ. ಕಡತ ನಾಪತ್ತೆ ಅಂದ್ರೆ ಸಾಲಕ್ಕೆ ಅದನ್ನೇ ಯಾಕೆ ಇಟ್ಟಿರಬಾರದು ಒತ್ತೆ? ‘ಮಾನ ಅಡಮಾನ’ ಅನ್ನೋ ಹ್ಯಾಶ್‍ಟ್ಯಾಗ್‌ನಲ್ಲಿ ಈ ವಿಷಯ ಹರಿಯಬಿಟ್ರೆ ಹೇಗಿರುತ್ತೆ?’ ಕಣ್ ಹೊಡೆದ ಕಲ್ಲೇಶಿ.

‘ವಿರೋಧಿಗಳ ಕೈಗೆ ಸಿಕ್ರೆ ಧಗ್ ಅನ್ನುತ್ತೆ, ನೀನು ಮಾತ್ರ ಡಿಟೆಕ್ಟಿವ್‌ ಡಾಗ್!’ ಅಂತ ಕಲ್ಲೇಶಿಯ ಬೆನ್ನಿಗೊಂದು ಗುದ್ದಿ ಮೇಲೆದ್ದ ಪರ್ಮೇಶಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT