ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತಾರ್ಕಿಕ ಅಂತ್ಯ

Last Updated 14 ಜುಲೈ 2021, 19:31 IST
ಅಕ್ಷರ ಗಾತ್ರ

‘ಇದೇನು ಮನೇಲಿ ಇಷ್ಟೊಂದು ಗದ್ದಲ? ಮಹಿಳಾಮಣಿಯರೆಲ್ಲ ನಮ್ಮ ಮನೇಲೆ ಸೇರಿರೋ ಹಾಗಿದೆ’ ಪುಟ್ಟಿಯನ್ನು ಕೇಳಿದೆ. ‘ಹೌದಪ್ಪಾ, ಜೂಮ್ ಮೀಟಿಂಗ್‌ನಲ್ಲಿದ್ದಾರೆ’. ‘ಜುಂ’ ಎಂದಿತು, ಹೀಗೊಂದು ಕಾಲಕ್ಷೇಪ!

‘ಹತ್ತು ನಿಮಿಷ ಬ್ರೇಕ್ ನಂತರ ಮೀಟಿಂಗ್ ಮುಂದುವರಿಯುತ್ತೆ’ ಎನ್ನುತ್ತಾ ನನ್ನವಳೇ ಹೊರಗೆ ಬಂದಳು. ‘ಏನು ದಿಢೀರ್ ಅಂತ ನೀವೆಲ್ಲಾ ಮೀಟಿದ್ದು?’ ಸುಮ್ಮನಿರಲಾಗದೆ ಕಿಚಾಯಿಸಿದೆ.

‘ಕ್ಯಾಬಿನೆಟ್ ರಿಷಫಲ್ ಆಗಿದೆ, ಅದರಲ್ಲಿ ಸಂಸದೆಯರ ಸೇರ್ಪಡೆ- ಅದರಲ್ಲೂ ಮುಖ್ಯವಾಗಿ ನಮ್ಮ ಶೋಭಕ್ಕ ಸೇರಿರೋದು ಸಂತಸದ ವಿಷಯವಲ್ಲವೇ? ಅದರ ಸಡಗರ ಹಂಚಿಕೋತ ಇದ್ವಿ’.

‘ನಿಜ, ನಮ್ಮಲ್ಲಿಂದ ಒಬ್ಬರು ಎಕ್ಸಿಟ್ ಆದರೂ ನಾಲ್ಕು ಹೊಸ ಎಂಟ್ರಿ’ ಹಲ್ಕಿರಿದೆ.

‘ಈ ಬಾರಿ ವೈದ್ಯರು, ವಕೀಲರು, ಎಂಜಿನಿಯರ್‌ಗಳು, ನಾಗರಿಕ ಸೇವಾ ಅನುಭವವಿರುವವರು, ಹೀಗೇ ಕಲಿತವರ ಪಡೆ. ಗುಣಾತ್ಮಕ ಆಡಳಿತವನ್ನು ನಿರೀಕ್ಷಿಸಬಹುದು’ ಅತ್ತೆ ಕನ್ನಡಕ ಸರಿಪಡಿಸಿಕೊಳ್ಳುತ್ತ ಹೇಳಿದರು.

‘ಅಷ್ಟೇ ಅಲ್ಲ, ಸರಾಸರಿ ವಯಸ್ಸು 58, ಅಂದರೆ ಯಂಗ್ ಅನ್ನೋ ಲೆಕ್ಕವೇ’.

‘ನೀನೂ ಸ್ಮಾರ್ಟ್ ಇದ್ದೀ, ನ್ಯೂಸ್ ಚೆನ್ನಾಗಿ ಫಾಲೊ ಮಾಡ್ತೀ’ ಅಜ್ಜಿಗೆ ಪುಟ್ಟಿ ಅಂಟಿದಳು. ಈ ಚರ್ಚೆಯಲ್ಲಿ ಕಂಠಿ ಇದ್ದರೆ ಕಳೆಗಟ್ಟುತ್ತಿತ್ತು ಅನ್ನಿಸಿ ಕರೆ ಮಾಡಿದೆ. ಅವನ ಮೊಬೈಲ್ ರಿಂಗ್‌ಟೋನ್ ಪಕ್ಕದಲ್ಲೇ ಕೇಳಿಸಿತು. ಬಾಗಿಲಲ್ಲೇ ಇದ್ದ. ಒಳಗೆ ಬಂದವನೇ, ‘ಸಿಹಿ ತಗೊಳ್ಳಿ’ ಅಂತ ಅಂಟಿನುಂಡೆ ಡಬ್ಬ ಅಂದಿಸಿದ.

‘ಏನು ವಿಶೇಷ?’ ಹುಬ್ಬೇರಿಸಿದೆ. ‘ಬಾಸ್ ಸ್ಥಿರಾಸ್ತಿ ಖರೀದಿಸಿದರು. ಮೇಡಂ ಹೆಸರಿನೊಂದಿಗೆ ಜಂಟಿಯಾಗಿ ನೋಂದಣಿ ಮಾಡಿಕೊಳ್ಳಿ ಅಂತ ಐಡಿಯಾ ಕೊಟ್ಟೆ’ ಅಂತ ಬೀಗಿದ.

‘ಎಲ್ಲರಿಗೂ ಆ ಅದೃಷ್ಟವೇ?’ ಅತ್ತೆಯ ವಕ್ರದೃಷ್ಟಿ ನನ್ನಮೇಲೆ. ‘ಚರಾಸ್ತಿನೂ ಜಂಟಿಯಾಗಿ ಇಟ್ಟರೆ ಒಳ್ಳೆಯದೇ, ಯಾರು ಬೇಡ ಅಂದರು?’ ಒಗ್ಗರಣೆ ಹಾಕಿದ.

‘ಒಳ್ಳೆಯ ಸಲಹೆ, ಮುಂದಿನ ವಾರ ಮೆಚ್ಯೂರ್ ಆಗೋ ನಿಮ್ಮ ಎಫ್.ಡಿನ ಹೊಸದಾಗಿ ಜಂಟಿ ಮಾಡಿಬಿಡಿ, ಏನಂತೀರಿ?’ ನನ್ನವಳು ಮೊನಚು ನೋಟ ಬೀರಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT