ಭಾನುವಾರ, ಏಪ್ರಿಲ್ 2, 2023
24 °C

ಚುರುಮುರಿ | ಸೇವಾ ಸೌಭಾಗ್ಯ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಇದುವರೆಗೂ ಸಾರ್ವಜನಿಕವಾಗಿ ಚುನಾವಣಾ ಪ್ರಚಾರ, ಮನೆ ಬಾಗಿಲಿಗೆ ಬಂದು ಮತ ಯಾಚನೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಈಗ ಮನೆ ಒಳಗೆ ಬರಲು ಶುರುಮಾಡಿವೆ...’ ಎಂದಳು ಸುಮಿ.

‘ವರವೋ ನೆರವೋ ನೀಡಿ ಮತದಾರರ ಮನವೊಲಿಸಲು ಬರುತ್ತಿವೆ’ ಅಂದ ಶಂಕ್ರಿ.

‘ಕಾಂಗ್ರೆಸ್ಸಿನವರು ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಕೊಡ್ತಾರಂತೆ. ಯಜಮಾನಿ, ಯಜಮಾನ ಎಂಬ ತಾರತಮ್ಯ ಮಾಡದೆ ಬಿಜೆಪಿಯವರು ಬಿಪಿಎಲ್ ಕಾರ್ಡಿರುವ ಕುಟುಂಬಗಳಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ವಿತರಿಸುತ್ತಾರಂತೆ’.

‘ಚುನಾವಣೆ ಸಂದರ್ಭದಲ್ಲಿ ಕದ್ದುಮುಚ್ಚಿ ಸೀರೆ, ಕುಕ್ಕರ್, ಬೆಳ್ಳಿ ಬಟ್ಟಲು ಹಂಚುತ್ತಿದ್ದವರು ಈಗ ಎಲೆಕ್ಷನ್ ಬೆನಿಫಿಟ್‍ಗಳನ್ನು ಮುಕ್ತವಾಗಿ ಹಂಚಲು ಹೊರಟಿದ್ದಾರೆ’.

‘ರೇಷನ್ ಕಾರ್ಡಿನಲ್ಲಿ ಅಕ್ಕಿ ಜೊತೆಗೆ ಗ್ಯಾಸ್ ಸಿಲಿಂಡರ್, ಬೇಳೆ, ತರಕಾರಿ, ಸಾಂಬಾರ್ ಪದಾರ್ಥಗಳನ್ನೂ ಉಚಿತವಾಗಿ ಕೊಟ್ಟರೆ ಅನುಕೂಲ ಆಗುತ್ತೇರೀ...’

‘ಚುನಾವಣೆ ಹತ್ತಿರವಾದಂತೆ ಅಂಥ ಘೋಷಣೆಗಳನ್ನೂ ಪಕ್ಷಗಳು ಪ್ರಕಟಿಸಬಹುದು. ಹಬ್ಬಗಳಲ್ಲಿ ಮನೆ ಮಂದಿಗೆಲ್ಲಾ ಹೊಸ ಬಟ್ಟೆ, ಹಬ್ಬದ ಸಾಮಾನುಗಳನ್ನು ಕೊಡುವ ಯೋಜನೆಗಳೂ ಘೋಷಣೆಯಾಗಬಹುದು’.

‘ಆಗಬಹುದು, ಯುಗಾದಿಯಂದು ಮತದಾರರ ಮನೆ ಬಾಗಿಲಿಗೆ ತೋರಣ ಕಟ್ಟಿ, ಹೂರಣ ಕುಟ್ಟಿ, ಒಬ್ಬಟ್ಟು ತಟ್ಟಿ ಬಡಿಸುತ್ತೇವೆ ಅಂತ ಯಾವುದಾದರೂ ಪಕ್ಷದವರು ಹಬ್ಬದ ಆಫರ್ ಅನೌನ್ಸ್ ಮಾಡಬಹುದು’.

‘ನಾವು ಜನನಾಯಕರಲ್ಲ, ಜನಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಇನ್ನೇನೇನು ಸೇವಾ ಸೌಭಾಗ್ಯಗಳನ್ನು ಮತದಾರರಿಗೆ ಕೊಡುವರೋ ಕಾದು ನೋಡೋಣ, ಕೊಟ್ಟಿದ್ದನ್ನು ಸ್ವೀಕರಿಸೋಣ...’ ಎಂದ ಶಂಕ್ರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು