ಗುರುವಾರ , ಏಪ್ರಿಲ್ 9, 2020
19 °C

ಚುರುಮುರಿ | ಕೋವಿಡ್‌ ಕಥೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಹರಟೆಕಟ್ಟೆಯಲ್ಲಿ ದುಬ್ಬೀರ ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಕೂತಿದ್ದ. ಗುಡ್ಡೆ ಅವನನ್ನು ನೋಡಿ ‘ಏನಲೆ, ಕೋವಿಡ್‌ ಸೋಂಕಾ? ದೂರ ಸರ‍್ಕಾ, ಹೋಗು ಅತ್ಲಾಗೆ... ’ ಎಂದು ಆಕ್ಷೇಪಿಸಿದ.

‘ಲೇ ಗುಡ್ಡೆ, ಕೋವಿಡ್‌ ನಿಮ್ಮಿಂದ ಬರಬಾರ್ದು ಅಂತ ಮಾಸ್ಕ್ ಹಾಕ್ಕಂಡಿದೀನಿ, ನೀನೇ ದೂರ ಹೋಗಿ ಕೂತ್ಕಾ...’ ದುಬ್ಬೀರನಿಗೆ ಸಿಟ್ಟು ಬಂತು.

‘ಆತು ಬಿಡಪ್ಪ, ಇಬ್ರೂ ದೂರ ದೂರಾನೇ ಇರಾಣ. ಮಾಸ್ಕ್ ಹಾಕೋದ್ರಿಂದ ಕೋವಿಡ್‌ ಅಷ್ಟೇ ಅಲ್ಲ, ಸಾಲಗಾರರೂ ಹತ್ರ ಬರಲ್ಲ. ಗುರುತು ಸಿಕ್ರೆ ತಾನೆ? ಒಳ್ಳೆ ಐಡಿಯಾ ಬಿಡು’ ಗುಡ್ಡೆ ಮತ್ತೆ ಕೆಣಕಿದ.

ಪರ್ಮೇಶಿಗೆ ನಗು ಬಂತು. ‘ಲೇ ಗುಡ್ಡೆ ಸುಮ್ಕಿರಲೆ, ಇವತ್ತಿಂದ ಎಲ್ರೂ ಅರ್ಧಗಂಟೆಗೊಂದ್ಸಲ ಕೈ ತೊಳ್ಕಳ್ರಪ್ಪ, ಆಯ್ತಾ? ಎಲ್ರೂ ಕೈ ತೊಳ್ಕಳಿ ತೊಳ್ಕಳಿ... ಲೇ ಗುಡ್ಡೆ ನಿನ್ ಸೋಪು ಸ್ಲೋನಾ?’ ಎಂದ.

‘ಸೋಪಾ? ಅವನು ಸ್ನಾನ ಮಾಡೋದೇ ಅಪರೂಪ. ಇನ್ನು ಸೋಪೆಲ್ಲಿ? ಕೈ ತೊಳ್ಕೊಳೋದೆಲ್ಲಿ?’ ದುಬ್ಬೀರ ಕಿಸಕ್ಕೆಂದ.

‘ಲೇ ದುಬ್ಬೀರ, ಬ್ಯಾಡ ನೋಡು...’ ಗುಡ್ಡೆ ರೇಗೋ ಅಷ್ಟರಲ್ಲಿ ಫುಲ್ ಟೈಟಾಗಿ ವಾಲಾಡುತ್ತಾ ಹರಟೆಕಟ್ಟೆಗೆ ಬಂದ ತೆಪರೇಸಿ ‘ಏ..., ಏನ್ರಲೆ ಏನೋ ತೊಳ್ಕೊಳ್ರಿ ಅಂತಿದ್ರಿ? ಟಿ.ವಿ ನೋಡ್ಲಿಲ್ವ? ಡಾಕ್ಟ್ರು ಹೇಳಿದಾರೆ ಆಲ್ಕೋಹಾಲ್ ಇರೋ ಹ್ಯಾಂಡ್‍ವಾಶ್‌ನಿಂದ
ಕೈ ತೊಳ್ಕಾಬೇಕು. ಕೋವಿಡ್‌ ಬರಲ್ಲ’ ಎಂದ.

‘ಅಲ್ಲಲೆ, ಡಾಕ್ಟ್ರು ಆಲ್ಕೋಹಾಲ್ ಇರೋ ಹ್ಯಾಂಡ್‍ವಾಶ್‍ನಿಂದ ಕೈ ತೊಳೀರಿ ಅಂತ ಹೇಳಿದಾರೆ ಸರಿ, ಆದ್ರೆ ನೀನು ಫುಲ್ ಆಲ್ಕೋಹಾಲ್‍ನೇ ಏರಿಸ್ಕಂಡ್ ಬಂದಿದೀಯಲ್ಲ, ಏನ್ ಕತೆ?’ ಪರ್ಮೇಶಿಗೆ ನಗು.

‘ಹಾ... ಅಲ್ಲೇ ಇರೋದು ಮಜ. ಆಲ್ಕೋಹಾಲ್‍ನ ಕೈಗೆ ಹಚ್ಕಂಡ್ರೆ ಕೈಗೆ ಕೋವಿಡ್‌ ಅಂಟಲ್ಲ. ಅದೇ ಆಲ್ಕೋಹಾಲ್‍ನ ಹೊಟ್ಟೆಗೆ ಹಾಕ್ಕಂಡ್ರೆ? ನಮ್ ಮೈಗೂಕೋವಿಡ್‌ ಅಂಟಲ್ಲ, ಹೆಂಗೆ?’ ತೆಪರೇಸಿ ತರ್ಕಕ್ಕೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು