ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಪ್ರತಾಪ್‌ ಸಿಂಹ ಬರಹ | ದೇವಾಲಯಗಳ ತೆರವು: ಅಧಿಕಾರಿಗಳ ವಿವೇಚನಾರಹಿತ ಕ್ರಮ

Last Updated 25 ಸೆಪ್ಟೆಂಬರ್ 2021, 1:52 IST
ಅಕ್ಷರ ಗಾತ್ರ

ಇವತ್ತು ದೇಶದಾದ್ಯಂತ ಜನಸಂಖ್ಯೆ ಜಾಸ್ತಿಯಾಗುತ್ತಿದ್ದು, ನಗರಗಳೂ ಬೆಳೆಯುತ್ತಿವೆ. ಹಾಗಾಗಿ, ಬಹಳಷ್ಟು ಕಡೆ ರಸ್ತೆಗಳನ್ನೂ ವಿಸ್ತರಣೆ ಮಾಡಬೇಕಾದ ಅಗತ್ಯ ಕಾಣುತ್ತಿದೆ. ಯಾವುದೋ ಕಾಲದ ದೇವಸ್ಥಾನಗಳು, ಈಗ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಬರುತ್ತವೆ. ಅವು ದೇವಸ್ಥಾನಗಳಿರಬಹುದು, ಮಸೀದಿ, ಗುರುದ್ವಾರಗಳಿರಬಹುದು. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಿರುವಂಥ ಕಟ್ಟಡಗಳೂ ಇರಬಹುದು.

ಅಭಿವೃದ್ಧಿ ಕಾರ್ಯಕ್ಕಾಗಿ ಇವುಗಳನ್ನು ತೆರವುಗೊಳಿಸುವುದು ಅನಿವಾರ್ಯ ಆಗಬಹುದು. ಆದರೆ, ದೇವಾಲಯಗಳನ್ನು ತೆರವು ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪರಿಗಣಿಸದೇ ಕ್ರಮಕ್ಕೆ ಮುಂದಾಗಿದ್ದು ಮಾತ್ರ ಸರಿಯಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಇರುವ ಗುರುದ್ವಾರ, ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡುವಂತೆ ಕೋರಿ, 2006ರಲ್ಲಿ ಸುಪ್ರೀಂ ಕೋರ್ಟ್‌ ಮುಂದೆ ವಿಶೇಷ ಅರ್ಜಿಯೊಂದು ಬರುತ್ತದೆ. ಆಗ, ಸುಪ್ರೀಂ ಕೋರ್ಟ್‌ ಎಲ್ಲಾ ಮಗ್ಗುಲಲ್ಲಿಯೂ ವಿಚಾರಣೆ ನಡೆಸಿ 2009ರಲ್ಲಿ ಮಧ್ಯಂತರ ಆದೇಶ ನೀಡುತ್ತದೆ.

ಅದೇನೆಂದರೆ, ಇನ್ನು ಮುಂದೆ ಯಾವುದೇ ಸರ್ಕಾರಿ/ ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನ–ರಸ್ತೆಯಲ್ಲಿ ಎಲ್ಲೂ ಮಸೀದಿ, ಚರ್ಚು, ಗುರುದ್ವಾರ, ದೇವಸ್ಥಾನ ಯಾವುದೂ ಬರಕೂಡದು. ಆದರೆ, ಇಂಥ ಕಟ್ಟಡಗಳು 2009ಕ್ಕಿಂತ ಮೊದಲೇ ನಿರ್ಮಾಣವಾಗಿದ್ದರೆ, ಅವುಗಳಿಂದ ಸಾರ್ವಜನಿಕರಿಗೆ ಅಡಚಣೆ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತದೆ.

ಆನಂತರ, 2010ರಲ್ಲಿ ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ತೀರ್ಪು ನೀಡುವ ಸುಪ್ರೀಂ ಕೋರ್ಟ್‌, ಸರಿಯಾದ ಪ್ರಮಾಣಪತ್ರ ಸಲ್ಲಿಸದೇ ಇರುವುದರಿಂದ (‘ಅಬ್ಸೆನ್ಸ್‌ ಆಫ್‌ ಪ್ರಾಪರ್‌ ಅಫಿಡವಿಟ್‌’) ತನಗೆ ಬೇರೆ ದಾರಿ ಇಲ್ಲ ಎಂದು 2009ರ ಆದೇಶವನ್ನೇ ಮುಂದುವರಿಸಿ ಆದೇಶಿಸುತ್ತದೆ. ಆದರೆ, ಎಂಟು ವಾರಗಳೊಳಗೆ ಹೊಸ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಗಡುವು ನೀಡುತ್ತದೆ. ಕೆಡವಿ ಹಾಕುವ, ಸ್ಥಳಾಂತರ ಮಾಡುವ ಇಲ್ಲವೇ ಕ್ರಮಬದ್ಧಗೊಳಿಸಲು ಅವಕಾಶ ಇರುವ ಕಟ್ಟಡಗಳ ಪಟ್ಟಿ ಸಿದ್ಧಪಡಿಸುವಂತೆ ಹೇಳುತ್ತದೆ. ಆದರೆ, ಸೋಮಾರಿ ಅಧಿಕಾರಿಗಳು ಇದಾವುದನ್ನೂ ಮಾಡುವುದಿಲ್ಲ.

ಇದಾದ ಮೇಲೆ, ಅಧಿಕಾರಿಗಳು ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಕೆಡವಿ ಹಾಕುವ ಬಗ್ಗೆ ಸರ್ಕಾರದ ನಡಾವಳಿಯೊಂದನ್ನು ಹೊರಡಿಸುತ್ತಾರೆ. ಕೆಲವು ದೇವಸ್ಥಾನ–ಮಸೀದಿಗಳ ತೆರವಿಗೆ ಹೋದಾಗ, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ಇನ್ನು, ಸುಪ್ರೀಂ ಕೋರ್ಟ್‌ ಆದೇಶವನ್ನು ಮುಂದಿಟ್ಟುಕೊಂಡು ಬಾಕಿ ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾದರು.

ಆದರೆ, 2010ರಲ್ಲಿ ಅಧಿಕಾರಿಗಳು ಸರ್ಕಾರದ ನಡಾವಳಿ ಹೆಸರಿನಲ್ಲಿ ಏನು ದಾರಿತಪ್ಪಿಸುವ ಕೆಲಸ ಮಾಡಿದರೋ, ಅದೇ ರೀತಿ 2020ರಲ್ಲಿಯೂ ಆಯಿತು. ಸುಪ್ರೀಂ ಕೋರ್ಟ್‌ ತೀರ್ಪಿನ ವಿಶ್ಲೇಷಣೆ ನಡೆಯಲಿಲ್ಲ.

ಬಂದವರೆಲ್ಲ, ಸುಪ್ರೀಂ ಕೋರ್ಟ್‌ ಆದೇಶವಿದೆ ಎನ್ನುತ್ತಲೇ ಒಡೆಯಲು ಬಂದರು. ಅಧಿಕಾರಿಗಳ ಉದಾಸೀನತೆ ಹಾಗೂ ತಿಳಿಗೇಡಿತನದಿಂದಾಗಿ ನಮ್ಮ ಮೈಸೂರಿನ ಮಹದೇವಮ್ಮ ಹಾಗೂ ಭೈರವೇಶ್ವರ ದೇವಾಲಯಗಳು ಆಹುತಿಯಾದವು. ಸಹಜವಾಗಿ ನಮಗೆ ಗಾಸಿಯಾಯಿತು. ಹೀಗಾಗಿ, ನಾನು ಅದನ್ನು ವಿರೋಧಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಎಲ್ಲ ದಾಖಲೆಗಳನ್ನು ತೆಗೆದು ಮುಂದಿಟ್ಟೆ. ಮಾತೆತ್ತಿದರೆ, ಕೋರ್ಟ್ ಹೆಸರು ಹೇಳುತ್ತಿದ್ದವರ ಮುಂದೆ, ‘ಕೋರ್ಟ್‌ ಹಾಗೆಲ್ಲಿ ಹೇಳಿದೆ’ ಎಂದು ಕೇಳಿದೆ.

ಕ್ರಮಬದ್ಧಗೊಳಿಸುವುದಕ್ಕೆ, ಸ್ಥಳಾಂತರಕ್ಕೆ ಅವಕಾಶ ಕೊಟ್ಟಿರುವುದನ್ನು ‍ಪ್ರಸ್ತಾಪಿಸಿದೆ. ಈ ರೀತಿ ನಾನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ, ನನ್ನೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಬಂಧಪಟ್ಟ ದಾಖಲೆಗಳನ್ನು ತರಿಸಿಕೊಂಡರು.

ಅವರೇ ಒಂದು ನಿರ್ಧಾರವನ್ನು ಕೈಗೊಂಡು, ಈ ಎಲ್ಲ ದೇವಸ್ಥಾನಗಳನ್ನು, ಪೂಜಾ ಸ್ಥಳಗಳನ್ನು 2009ಕ್ಕಿಂತ ಮೊದಲು ಬಂದಿರುವುದನ್ನು ಸಂರಕ್ಷಣೆ ಮಾಡುವುದಕ್ಕೆ ಮಸೂದೆ ತಂದಿದ್ದಾರೆ.

ಆದರೆ, ಈ ದೇವಸ್ಥಾನಗಳು ಅಧಿಕೃತ ಹಾಗೂ ಅನಧಿಕೃತ ಎಂದು ಅಧಿಕಾರಿಗಳು ಯಾವ ಆಧಾರದ ಮೇಲೆ ಘೋಷಣೆ ಮಾಡುತ್ತಾರೆ?

ಪ್ರತಾಪ್‌ ಸಿಂಹ
ಪ್ರತಾಪ್‌ ಸಿಂಹ

ಯಾವುದೇ ಜಮೀನು ಸರ್ಕಾರಿ ಸೊತ್ತಾಗಿದ್ದು 1950 ಜ. 26ರ ನಂತರ. ಅದಕ್ಕಿಂತಲೂ ಮೊದಲು ದೇಶದಾದ್ಯಂತ 645ಕ್ಕಿಂತಲೂ ಹೆಚ್ಚು ಪ್ರಾಂತ್ಯ–ಸಂಸ್ಥಾನಗಳು ಇದ್ದವು. ಹೈದರಾಬಾದ್‌ನಂಥ ಕೆಲವು ಪ್ರಾಂತ್ಯಗಳನ್ನು ಬಿಟ್ಟರೆ, ಉಳಿದೆಲ್ಲ ಪ್ರಾಂತ್ಯಗಳಲ್ಲಿ ಕೂಡ ಇದ್ದ ಮಹಾರಾಜರು ಹಿಂದೂ ಮಹಾರಾಜರೇ ಇದ್ದರು. ನಮ್ಮೆಲ್ಲ ಪೂಜಾಸ್ಥಳಗಳಿಗೆ, ದೇವಸ್ಥಾನಗಳಿಗೆ ಪೋಷಕರಾಗಿದ್ದವರು ಕೂಡ ಅವರೇ. ಭೂಮಿಯ ಒಡೆತನವೂ ಮಹಾರಾಜರದೇ ಆಗಿತ್ತು. ದೇವಸ್ಥಾನ ಕಟ್ಟಲುಅನುಮತಿ, ಹಣಕಾಸು ಸಹಾಯ ಎಲ್ಲವನ್ನೂ ಮಹಾರಾಜರೇ ಕೊಡುತ್ತಿದ್ದರು. ಮಹದೇವಮ್ಮ ದೇವಸ್ಥಾನದಂಥ ದೇವಸ್ಥಾನಗಳು ಆಗ ಕಟ್ಟಿದಂಥ ದೇವಸ್ಥಾನಗಳು. ಅದು 200 ವರ್ಷಗಳಿಗೂ ಹಿಂದಿನದು.

1964ರಲ್ಲಿ ಕರ್ನಾಟಕ ಪುರಸಭಾ ಕಾಯ್ದೆ ಬರುವ ಮೊದಲು ಲೈಸೆನ್ಸ್‌ ಪದ್ಧತಿಯೇ ಇರಲಿಲ್ಲ. 1993ರಲ್ಲಿ ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ ಬಂದಿತು. ಅದಕ್ಕಿಂತ ಮೊದಲು ಹಳ್ಳಿಗಳಲ್ಲಿ ದೇವಸ್ಥಾನ ಕಟ್ಟಬೇಕೆಂದರೆ ಯಾವ ಅಪ್ಪಣೆಯನ್ನೂ ಕೇಳುತ್ತಿರಲಿಲ್ಲ. 1950ಕ್ಕಿಂತ ಮೊದಲು ಸರ್ಕಾರದ ಸೊತ್ತೇ ಆಗಿರದ ಜಾಗವನ್ನು ಸರ್ಕಾರಿ ಸೊತ್ತು ಎಂದು ಹೇಗೆ ಹೇಳುತ್ತಾರೆ? ಕರ್ನಾಟಕ ಪುರಸಭಾ ಕಾಯ್ದೆ ಬರುವುದಕ್ಕಿಂತ ಮುಂಚಿನ,1993 ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆಗೆ ಮುನ್ನ ಕಟ್ಟಿದ ಕಟ್ಟಡಗಳನ್ನು ಅನಧಿಕೃತ ಎಂದು ಹೇಗೆ ಹೇಳುವಿರಿ? ಮನೆ ಕಟ್ಟಲು, ವಿದ್ಯುತ್‌ ಸಂಪರ್ಕ ಪಡೆಯಲು ಈಗ ಎಲ್ಲದಕ್ಕೂ ಲೈಸೆನ್ಸ್‌ ಅಗತ್ಯ. ಆವಾಗ ಅದು ಇರಲೇ ಇಲ್ಲವಲ್ಲ? ಯಾವ ಆಧಾರದ ಮೇಲೆ ಅನಧಿಕೃತ ಎಂದು ಹೇಳುತ್ತೀರಿ? ಇವತ್ತು ಊರು ಬೆಳೆದು, ರಸ್ತೆಗಳು ಅಗಲವಾದನಂತರ ದೇವಸ್ಥಾನಗಳು ನಿಮಗೆ ರಸ್ತೆಯ ಮಧ್ಯದಲ್ಲಿ ಕಾಣಿಸಬಹುದು. ಆದರೆ, ದೇವಸ್ಥಾನ ಕಟ್ಟಿದಾಗ ರಸ್ತೆಯೇ ಇರಲಿಲ್ಲವಲ್ಲ? ಅದಕ್ಕಾಗಿ, ಈ ಬಗ್ಗೆ ವಿವೇಚನೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು.

ಹಿಂದುತ್ವ ಎಂಬುದು ನನ್ನ ಬದ್ಧತೆ. ಇದರಲ್ಲಿ ರಾಜಕೀಯವಿಲ್ಲ. ಆದರೆ, ಇನ್ನು ಮುಂದೆ ದೇವಸ್ಥಾನಗಳನ್ನು ಅನಧಿಕೃತವಾಗಿ ಕಟ್ಟಲು ಅವಕಾಶ ಕೊಡಬಾರದು. ನಿರ್ದಾಕ್ಷಿಣ್ಯವಾಗಿ ನಿಲ್ಲಿಸಬೇಕು.
ಲೇಖಕ: ಮೈಸೂರು–ಕೊಡಗು ಸಂಸದ

(ನಿರೂಪಿತ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT