ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ದೂರವಾದ ವಸಾಹತುಶಾಹಿ ದುರ್ವಾಸನೆ

Published 18 ಆಗಸ್ಟ್ 2023, 23:31 IST
Last Updated 18 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಇತಿಹಾಸ ತಜ್ಞ ಥಾಮಸ್ ಮೆಕಾಲೆ 1835ರಲ್ಲಿ ಕರಡನ್ನು ತಯಾರಿಸಿ ಈಸ್ಟ್ ಇಂಡಿಯಾ ಕಂಪನಿಗೆ ಸಲ್ಲಿಸಿದ ಎರಡು ದಶಕಗಳ ನಂತರದಲ್ಲಿ (1855) ಭಾರತೀಯ ದಂಡ ಸಂಹಿತೆಯನ್ನು (IPC) ಅಂದಿನ ವಿಧಾನ ಪರಿಷತ್ತಿನೆದುರು ಮಂಡಿಸಲಾಯಿತು. ಕಾರಣಾಂತರಗಳಿಂದ ಪರಿಷತ್ತು ಈ ದಂಡ ಸಂಹಿತೆಯನ್ನು ಅನುಮೋದಿಸಲಿಲ್ಲ. ಇದರ ಬೆನ್ನಲ್ಲೇ 1857ರಲ್ಲಿ ಪ್ರಾರಂಭವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಈಸ್ಟ್ ಇಂಡಿಯಾ ಕಂಪನಿಯ ಅಸ್ತಿತ್ವವನ್ನೇ ಕೊನೆಗಾಣಿಸಿ ಬ್ರಿಟಿಷ್ ಸರ್ಕಾರದ ನೇರ ಆಡಳಿತಕ್ಕೆ ನಾಂದಿ ಹಾಡಿತು.

ಅಂದಿನ ವಿಧಾನ ಪರಿಷತ್ತಿನ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಬ್ಯಾರಿಸ್ಟರ್‌ ಜಾರ್ಜ್‌ ಬರ್ನ್ಸ್‌ ಪಿಕಾಕ್, ದಂಡ ಸಂಹಿತೆಯನ್ನು ಬಳಸಿ ಭಾರತದಲ್ಲಿ ಹೇಗೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಸಾಧ್ಯತೆಗಳನ್ನು ಅಳಿಸಿ ಹಾಕಬಹುದೆಂದು ನಿರೂಪಿಸಿದರು. ಇದಕ್ಕೆ ಬಹುಮಾನದ ಸ್ವರೂಪದಲ್ಲಿ ಪಿಕಾಕರನ್ನು ಕೆಲ ವರ್ಷಗಳ ನಂತರ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇತರ ಅನೇಕ ಪರಿಷತ್ ಸದಸ್ಯರು ನ್ಯಾಯಮೂರ್ತಿಗಳಾದರು.

ಶ್ರೀಧರ ಪ್ರಭು
ಶ್ರೀಧರ ಪ್ರಭು

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರತ್ಯಸ್ತ್ರವಾಗಿ 1860ರಲ್ಲಿ ಭಾರತೀಯ ದಂಡ ಸಂಹಿತೆ ಜಾರಿಗೆ ಬಂದಿತು. ಹಾಗೆಯೇ 1882ರಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯನ್ನು ಜಾರಿಗೊಳಿಸಲಾಯಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳು ಮತ್ತು ಅವರಿಗೆ ಬೆಂಬಲ ನೀಡಿದ ಭಾರತದ ಪ್ರಜೆಗಳಿಗೆ ದಂಡಿಸುವ ಏಕೈಕ ಉದ್ದೇಶದಿಂದ ತಯಾರಾದ ಈ ದಂಡಸಂಹಿತೆಗಳ ಮೇಲೆಲ್ಲಾ ನಮ್ಮ ಸ್ವಾತಂತ್ರ್ಯ ಯೋಧರ ರಕ್ತದ ಕಲೆಗಳಿವೆ. ಲೋಕಮಾನ್ಯ ತಿಲಕ್ ಮತ್ತು ಮಹಾತ್ಮಾ ಗಾಂಧೀಜಿಯವರನ್ನು ದೇಶದ್ರೋಹಕ್ಕಾಗಿ ಸೆರೆಮನೆಗೆ ತಳ್ಳಿದ, ಸಾವರ್ಕರ್ ಅವರನ್ನು ಕಾಲಾಪಾನಿ ಶಿಕ್ಷೆಗೆ ದೂಡಿದ, ಭಗತ್ ಸಿಂಗ್‌ರನ್ನು ನೇಣಿಗೆ ಹಾಕಿದ, ದಂಡ ಸಂಹಿತೆಗಳ ತುಂಬೆಲ್ಲಾ ವಸಾಹತುಶಾಹಿಯ ದುರ್ವಾಸನೆಯಿದೆ.

ಜಲಿಯನ್‌ ವಾಲಾಬಾಗ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಕೊಂದ ಬ್ರಿಗೇಡಿಯರ್ ಆರ್.ಇ.ಎಚ್‌. ಡಯರ್‌ಗೆ ಯಾವ ಶಿಕ್ಷೆಯನ್ನೂ ವಿಧಿಸದ ಈ ಸಂಹಿತೆಗಳ ಉದ್ದೇಶ ನ್ಯಾಯವೋ ಅಥವಾ ಅಮಾಯಕರ ದಂಡನೆಯೋ ಎಂಬುದು ಸರ್ವವಿದಿತ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಈ ದಂಡ ಸಂಹಿತೆಗಳ ವಿರುದ್ಧದ ಸಮರದ ಇತಿಹಾಸವೂ ಹೌದು.

ಇಂದಿನ ಕಾಲದ ಕಾನೂನು ರಚನೆಗೆ ಹೋಲಿಸಿದರೆ ಬ್ರಿಟಿಷರ ಕರಡು ರಚನೆಯ ಸೌಂದರ್ಯ ಮತ್ತು ಸ್ಪಷ್ಟತೆಗಳು ಐತಿಹ್ಯಪೂರ್ಣವಾದವು ಎಂಬುದನ್ನು ಅನೇಕರು ಒಪ್ಪುತ್ತಾರೆ. ಹೀಗಿರುವಾಗ, ನೂರೈವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜಾರಿಯಲ್ಲಿರುವ ದಂಡ ಸಂಹಿತೆಗಳನ್ನು ಬ್ರಿಟಿಷರ ಕಾಲದ್ದು ಎಂಬ ಒಂದೇ ಉದ್ದೇಶದಿಂದ ಬದಲಿಸಬೇಕೇ? ಇದು ಅನೇಕರ ವಾದ.

ಭಾರತೀಯ ದಂಡ ಸಂಹಿತೆಯನ್ನು ಈವರೆಗೆ 78 ಬಾರಿ ತಿದ್ದುಪಡಿ ಮಾಡಲಾಗಿದೆ. 2003ರಲ್ಲಿ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಆಯೋಗವು ದಂಡ ಮತ್ತು ಪ್ರಕ್ರಿಯಾ ಸಂಹಿತೆಗಳಿಗೆ ಅಮೂಲಾಗ್ರ ಪರಿಷ್ಕರಣೆಯ ಶಿಫಾರಸು ಮಾಡಿತು. 2007ರಲ್ಲಿ ಎನ್.ಆರ್.ಮಾಧವ ಮೆನನ್ ಆಯೋಗವೂ ದಂಡ ಪ್ರಕ್ರಿಯಾ ಸಂಹಿತೆಗೆ ಸಾಕಷ್ಟು ಬದಲಾವಣೆಗಳನ್ನು ಸೂಚಿಸಿತು.

ಸುಪ್ರೀಂ ಕೋರ್ಟ್‌ 2017ರ ಜೋಸೆಫ್ ಶೈನ್ ಪ್ರಕರಣದಲ್ಲಿ ಕಲಂ 497 ಅನ್ನು ಮತ್ತು 2018ರ ನವತೇಜ್ ಜೋಹಾರ್ ಪ್ರಕರಣದಲ್ಲಿ 377ನೇ ಕಲಂ ಅನ್ನು ಸಂವಿಧಾನಬಾಹಿರವೆಂದು ಘೋಷಿಸಿ ದಂಡ ಸಂಹಿತೆಯಿಂದ ಹೊರಹಾಕಿತು.

ಈ ಎರಡೂ ಪ್ರಕರಣಗಳಲ್ಲಿ ದಂಡ ಸಂಹಿತೆಯ ಸಾಕಷ್ಟು ಕಲಂಗಳು ‘ವಿಕ್ಟೋರಿಯನ್ ನೈತಿಕತೆ’ಯನ್ನಾಧರಿಸಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದಂಡ ಸಂಹಿತೆಯನ್ನು ಹೊರತುಪಡಿಸಿ, ನಮ್ಮ ದೇಶದ ಸುಮಾರು 350 ಕಾನೂನುಗಳು ಒಂದಿಲ್ಲೊಂದು ಕೃತ್ಯ ಅಥವಾ ಲೋಪವನ್ನು ಅಪರಾಧವೆಂದು ಸಾರಿ ಶಿಕ್ಷೆಯನ್ನು ಘೋಷಿಸುತ್ತವೆ. ಇನ್ನು ದೇಶದ್ರೋಹಕ್ಕೆ ಶಿಕ್ಷೆವಿಧಿಸುವ ಕಲಂ ಸೇರಿದಂತೆ ದಂಡ ಪ್ರಕ್ರಿಯೆಯ ಅನೇಕ ಕಲಂಗಳ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ಘೋಷಿತವಾದ ಸಂಹಿತೆಗಳ ಬಗ್ಗೆ ಗಂಭೀರ ಭಿನ್ನಾಭಿಪ್ರಾಯಗಳಿದ್ದವರೂ ಸಹ, ಇಂದಿರುವ ಸಂಹಿತೆಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಕೇಂದ್ರ ಸರ್ಕಾರದ ಪ್ರಸ್ತಾವಿತ ಸಂಹಿತೆಗಳ ಘೋಷಿತ ಉದ್ದೇಶ ದಂಡದ ಬದಲು ನ್ಯಾಯ. ದಂಡ ಸಂಹಿತೆಗಳ ಮುಖ್ಯಾಂಶಗಳು ಇಂತಿವೆ: ಎಫ್ಐಆರ್ (ಪ್ರಥಮ ವರ್ತಮಾನ ವರದಿ) ಹಂತದಿಂದಲೇ ಸಂಪೂರ್ಣ ತನಿಖಾ ಪ್ರಕ್ರಿಯೆಯ ಡಿಜಿಟಲೀಕರಣ ಮತ್ತು ಇ-ಎಫ್ಐಆರ್ ಕಡ್ಡಾಯ. ಏಳು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಿರುವ ಪ್ರತಿಯೊಂದು ಅಪರಾಧದ ತನಿಖೆಯಲ್ಲಿ, ಅಪರಾಧ ಸ್ಥಳಕ್ಕೆ ಫೋರೆನ್ಸಿಕ್ ತನಿಖಾ ತಂಡದ ಭೇಟಿ ಕಡ್ಡಾಯ, ಪ್ರತಿ ಜಿಲ್ಲೆಯಲ್ಲೂ ಚಲಿಸುವ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ, ಜೀರೊ ಘಟನಾ ವರದಿಯನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಿದರೂ, ಹದಿನೈದು ದಿನಗಳೊಳಗೆ ಸಂಬಂಧಿತ ಠಾಣೆಗೆ ವರ್ಗಾವಣೆ... ಹೀಗೆ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಬಂಧಿತ ವ್ಯಕ್ತಿಯ ಸುರಕ್ಷತೆ ನನ್ನ ಜವಾಬ್ದಾರಿಯೆಂದು ಘೋಷಿಸಿ ಪ್ರಮಾಣಪತ್ರವನ್ನು ನೀಡಲು ಓರ್ವ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಈ ಪ್ರಮಾಣ ಪತ್ರವನ್ನು ಬಂಧಿತ ವ್ಯಕ್ತಿಯ ಕುಟುಂಬಕ್ಕೆ ಆನ್‌ಲೈನ್‌ ಮತ್ತು ಖುದ್ದಾಗಿ ನೀಡಲಾಗುತ್ತದೆ. ಲೈಂಗಿಕ ಅಪರಾಧಗಳಿಗೆ ಬಲಿಯಾದ ವ್ಯಕ್ತಿಗಳ ಹೇಳಿಕೆಯನ್ನು ಕಡ್ಡಾಯವಾಗಿ ವಿಡಿಯೊ ಚಿತ್ರೀಕರಣ ಮಾಡಬೇಕಿದೆ.

ಪೊಲೀಸರು ಪ್ರತಿಯೊಂದು ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ತೊಂಬತ್ತು ದಿನಗಳಲ್ಲಿ ನೀಡಬೇಕಿದೆ. ಏಳು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಿರುವ ಯಾವುದೇ ಅಪರಾಧಕ್ಕೆ ಬಲಿಯಾದ ವ್ಯಕ್ತಿಯನ್ನು ಕೇಳದೇ ಸರ್ಕಾರ ಪ್ರಕರಣವನ್ನು ಹಿಂಪಡೆಯುವಂತಿಲ್ಲ. ತೀರಾ ಸಣ್ಣ ಅಪರಾಧಗಳಡಿ ಶಿಕ್ಷೆಗೆ ಪರ್ಯಾಯವಾಗಿ ಸಮುದಾಯ ಸೇವೆ ನಿಜವಾಗಲೂ ವಿನೂತನವಾದದ್ದು. ಮೂರು ವರ್ಷಕ್ಕೂ ಕಡಿಮೆ ಶಿಕ್ಷೆಯಿರುವ ಅಪರಾಧಗಳನ್ನು ಸಂಕ್ಷೇಪವಾದ ವಿಚಾರಣೆಯ ಮೂಲಕ ನಡೆಸುವ ಪ್ರಸ್ತಾವನೆಯಿದೆ. ಇದರಿಂದಾಗಿ ಸೆಷನ್ಸ್ ನ್ಯಾಯಾಲಗಳ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಲಿದೆ. ತೊಂಬತ್ತು ದಿನಗಳಲ್ಲಿ ಚಾರ್ಜ್‌ ಶೀಟ್ (ಅಂತಿಮ ವರದಿ) ಸಲ್ಲಿಸಲೇಬೇಕು ಮತ್ತು 180 ದಿನಗಳಲ್ಲಿ ತನಿಖೆ ಮುಗಿಯಲೇಬೇಕೆಂಬ ಕಟ್ಟಳೆಗಳನ್ನೂ ಸೇರಿಸಲಾಗಿದೆ. ವಿಚಾರಣೆ ಮುಗಿದ 30 ದಿನಗಳಲ್ಲಿ ತೀರ್ಪನ್ನು ನೀಡಲೇಬೇಕಿದೆ ಮತ್ತು ಒಂದು ವಾರದೊಳಗೆ ಕೋರ್ಟಿನ ಜಾಲತಾಣಕ್ಕೆ ರವಾನಿಸಬೇಕಿದೆ.

ಸರ್ಕಾರಿ ನೌಕರರ ಮೇಲೆ ಪ್ರಕರಣ ದಾಖಲಿಸಲು 120 ದಿನಗಳೊಳಗೆ ಮೇಲಧಿಕಾರಿಗಳು ಪರವಾನಗಿ ನೀಡದಿದ್ದರೆ, ತಂತಾನೇ ಪರವಾನಗಿ ನೀಡಿದಂತಾಯಿತೆಂದು ಸಂಹಿತೆಯಲ್ಲಿದೆ. ಅಪರಾಧಿಯ ಆಸ್ತಿಯನ್ನು ಮಾರಿ ಪರಿಹಾರ ಕೊಡಿಸಬಹುದಾಗಿದೆ. ಮಹಿಳೆಯರಿಗೆ ಮದುವೆ ಮತ್ತು ನೌಕರಿ ಇತ್ಯಾದಿ ಆಮಿಷಗಳನ್ನು ತೋರಿಸಿ ವಂಚಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ಗ್ಯಾಂಗ್ ರೇಪ್‌ಗೆ (ಸಮೂಹ ಅತ್ಯಾಚಾರ) 20 ವರ್ಷಗಳ ಶಿಕ್ಷೆಯಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ಮತ್ತು ಗುಂಪು ಹತ್ಯೆ ಮತ್ತು ಸಂಘಟಿತ ಅಪರಾಧಗಳಿಗೆ ಹೆಚ್ಚಿನ ಶಿಕ್ಷೆಯಿದೆ.

ದೇಶದ್ರೋಹದ ಅಪರಾಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಹಾಗೆಯೇ, ಭಯೋತ್ಪಾದನೆಗೆ ವ್ಯಾಖ್ಯಾನ ನೀಡಲಾಗಿದೆ. ಪ್ರಕರಣ ಕೊನೆಗೊಳ್ಳುವವರೆಗೆ ವಾಹನಗಳನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಬೇಕಾದ ಪ್ರಮೇಯವಿಲ್ಲ. ವಿಡಿಯೊ ಚಿತ್ರೀಕರಣದ ನಂತರ ವಾಹನವನ್ನು ಕೊಂಡೊಯ್ಯಬಹುದಾಗಿದೆ. ರಾಜಕೀಯ ಕಾರಣಗಳಿಂದ ಶಿಕ್ಷೆಯ ಅವಧಿಯನ್ನು ಮನ್ನಾ ಮಾಡುವ ಅಧಿಕಾರವನ್ನು ತೆಗೆದು, ಒಂದಷ್ಟು ವರ್ಷಗಳ ಮೊಟಕುಗೊಳಿಸುವಿಕೆಯನ್ನು ಮಾತ್ರವೇ ಅನುಮತಿಸಲಾಗಿದೆ.

ವಸಾಹತುಶಾಹಿ ಛಾಪಿನ ಹಳೆಯ ದಂಡ ಸಂಹಿತೆಗಳ ಬದಲು ಹೊಸ ಸಂಹಿತೆಗಳನ್ನು ಪರಿಚಯಿಸಿದ್ದನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸದೇ ವಸ್ತುನಿಷ್ಠ ಮನಸ್ಥಿತಿಯಿಂದ ಅವಲೋಕಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT