ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಕಾಂಗ್ರೆಸ್ ಬಸವತತ್ವಕ್ಕೆ ಬದ್ಧವಾದ ಪಕ್ಷ: ಸಿದ್ದರಾಮಯ್ಯ

ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಲಾಗಿದೆಯೇ?
Published 1 ಮೇ 2023, 19:26 IST
Last Updated 1 ಮೇ 2023, 19:26 IST
ಅಕ್ಷರ ಗಾತ್ರ

ಸಿದ್ದರಾಮಯ್ಯ

ಬಸವಣ್ಣನವರ ಈ ಎಲ್ಲ ತತ್ವ-ಸಿದ್ಧಾಂತಗಳನ್ನು ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಸಿದ್ಧಾಂತದ ಜೊತೆ ಹೋಲಿಸಿ ನೋಡಿದರೆ ಯಾವ ಪಕ್ಷ ಲಿಂಗಾಯತ ಧರ್ಮವನ್ನು ಒಳಗೊಂಡಿದೆ ಎನ್ನುವುದು ಸ್ಪಷ್ಟವಾಗಬಹುದು. ಭಾರತೀಯ ಜನತಾ ಪಕ್ಷ ಬಹಿರಂಗವಾಗಿ ಆಡುವ ಮಾತುಗಳು ಏನೇ ಇದ್ದರೂ ಆ ಪಕ್ಷ ಮತ್ತು ಪರಿವಾರದ ಗುಪ್ತ ಕಾರ್ಯಸೂಚಿ ಬಸವಧರ್ಮಕ್ಕೆ ವಿರುದ್ಧವಾದುದು

ರಾಜಕೀಯ ಕೂಡಾ ಒಂದು ಸೈದ್ಧಾಂತಿಕ ಚಳವಳಿ ಎಂದು ನಂಬಿರುವ ನಾನು ಸಿದ್ದಾಂತಗಳ ಮೂಲಕವೇ ರಾಜಕೀಯ ಪಕ್ಷಗಳನ್ನು ನೋಡಬಯಸುವವನು.

ಕರ್ನಾಟಕದ ನೆಲದಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ಇಲ್ಲವೇ ಸಮುದಾಯ ಬಸವಣ್ಣನವರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಬಸವಣ್ಣನವರನ್ನು ಒಂದು ಜಾತಿ, ಧರ್ಮ ಇಲ್ಲವೇ ಪ‍ಕ್ಷಕ್ಕೆ ಕಟ್ಟಿಹಾಕುವುದು ಸರಿ ಅಲ್ಲ. ಬಸವಣ್ಣ ನನ್ನ ಪಾಲಿನ ಆಧ್ಯಾತ್ಮಿಕ ಗುರು ಮಾತ್ರವಲ್ಲ ಸೈದ್ದಾಂತಿಕ ಸಂಗಾತಿಯೂ ಹೌದು. ನಾನು ಸೈದ್ದಾಂತಿಕ ಸ್ಪಷ್ಟತೆಯನ್ನು ಬಸವತತ್ವದಿಂದಲೇ ಪಡೆದುಕೊಂಡಿರುವುದನ್ನು ವಿನಮ್ರವಾಗಿ ಹೇಳಬಯಸುತ್ತೇನೆ.

ನಾನು ಮುಖ್ಯಮಂತ್ರಿಯಾಗಿ 2013ರಲ್ಲಿ ಪ್ರಮಾಣ ಸ್ವೀಕರಿಸಿದಾಗ ಮುಹೂರ್ತ ನೋಡಿರಲಿಲ್ಲ, ಉದ್ದೇಶಪೂರ್ವಕವಾಗಿಯೇ ಬಸವಣ್ಣನವರ ಜಯಂತಿಯ ದಿನವನ್ನೇ ಆರಿಸಿಕೊಂಡಿದ್ದೆ. ನಮ್ಮ ಸರ್ಕಾರ ಘೋಷಿಸಿದ ಮೊದಲ ಕಾರ್ಯಕ್ರಮ ಅನ್ನಭಾಗ್ಯ ಯೋಜನೆ ಕೂಡಾ ಬಸವಣ್ಣನವರ ಅನ್ನದಾಸೋಹದಿಂದಲೇ ಪ್ರೇರಣೆ ಪಡೆದದ್ದಾಗಿದೆ.

ಸರ್ಕಾರಿ ನೌಕರರು ಪ್ರತಿಕ್ಷಣದಲ್ಲಿಯೂ ಬಸವ ತತ್ವದ ನೆನಪು ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಸರ್ಕಾರದ ಪ್ರತಿ ಕಚೇರಿಯಲ್ಲಿಯೂ ಬಸವಣ್ಣನವರ ಭಾವಚಿತ್ರವನ್ನು ಇಟ್ಟುಕೊಳ್ಳಬೇಕೆಂದು ನಿಯಮಮಾಡಿದ್ದು. ಇದು ನಮ್ಮ ಪಕ್ಷದ ಮತ್ತು ನನ್ನ ಬದ್ದತೆ.

ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯವನ್ನೇ ತನ್ನ ಸಿದ್ದಾಂತ ಎಂದು ನಂಬಿಕೊಂಡು ಬಂದಿರುವ ಪಕ್ಷ ಕಾಂಗ್ರೆಸ್. ಬಸವ ತತ್ವದ ಸಾರ ಕೂಡಾ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತಾತ್ವಿಕವಾಗಿ ಬಸವಧರ್ಮದ ವಾರಸುದಾರಿಕೆಯನ್ನು ಹೊಂದಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.

ಬಸವತತ್ವವನ್ನು ಸರಿಯಾಗಿ ಅರ್ಥಮಾಡಿಕೊಂಡ ಯಾವ ವ್ಯಕ್ತಿ ಕೂಡಾ ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲಾರ, ಯಾಕೆಂದರೆ ಆ ಪಕ್ಷದ ಸಿದ್ದಾಂತ ಮತ್ತು ಬಸವಣ್ಣನವರ ಸಿದ್ಧಾಂತ ಸಂಪೂರ್ಣ ಭಿನ್ನವಾದುದು.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿನಿಧಿಸುತ್ತಿರುವ ಮನುಧರ್ಮವನ್ನು ವಿರೋಧಿಸಿಯೇ ಬಸವಧರ್ಮ ಹುಟ್ಟಿಕೊಂಡಿರುವುದು. ಮನುಧರ್ಮ ಪ್ರತಿಪಾದಿಸುವ ಚಾತುರ್ವರ್ಣ ವ್ಯವಸ್ಥೆಯನ್ನು ಬಸವಣ್ಣನವರು ಧಿಕ್ಕರಿಸಿದ್ದರು.

ಸ್ವತಃ ಬ್ರಾಹ್ಮಣನಾಗಿದ್ದ ಬಸವಣ್ಣನವರು ತಮ್ಮನ್ನು ತಾವು ಅಪವರ್ಗೀಕರಣಗೊಳಿಸುತ್ತಾ ತಮ್ಮನ್ನು ಅಸ್ಪೃಶ್ಯರ ಮನೆಯ ಮಗನೆಂದು ಹೇಳುತ್ತಾ ಸರ್ವರನ್ನು ಒಳಗೊಳ್ಳುತ್ತಾ ಹೊರಟವರು. ಬಸವಣ್ಣನವರು ಈ ನೆಲದ ಮೊದಲ ಸಾಮಾಜಿಕ ನ್ಯಾಯದ ಹೋರಾಟಗಾರ. ಅಸ್ಪೃಶ್ಯ ಮೂಲದ ಲೋಹರ, ಕಕ್ಕರ, ಮಾದರ ಮೊದಲಾದ ವಂಚಿತ ಸಮುದಾಯಗಳನ್ನು ತಬ್ಬಿಕೊಂಡು ನಡೆದದ್ದು ಬಸವ ಚಳವಳಿ. ಸರ್ವಕಾಯಕಗಳಿಗೆ ವೃತ್ತಿ ಘನತೆಯನ್ನು ತಂದು ಕೊಟ್ಟು ಅವುಗಳನ್ನು ಸತ್ಯಶುದ್ಧ ಕಾಯಕವೆಂದು ಗೌರವಿಸಿದವರು ಬಸವಣ್ಣನವರು.

ಕಾಂಗ್ರೆಸ್ ಕೂಡಾ ಇದೇ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವ ಪಕ್ಷ. ಬಸವಣ್ಣನವರು ಸ್ಥಾವರ ರೂಪದ ದೇವಾಲಯದ ಸಂಸ್ಕೃತಿಯನ್ನು ನಿರಾಕರಿಸಿ ಇಷ್ಟಲಿಂಗ ಜಂಗಮ ಸಂಸ್ಕೃತಿಯನ್ನು ಜಾರಿಗೆ ತಂದವರು. ಅಂಧಶ್ರದ್ಧೆ, ಮೌಢ್ಯ, ಕಂದಾಚಾರಗಳನ್ನು ವಿರೋಧಿಸಿದವರು, ಮಡಿ-ಮೈಲಿಗೆಯನ್ನು ಕಿತ್ತು ಎಸೆದವರು ಮಹಿಳೆಯರಿಗೆ ಸಮಾನತೆಯನ್ನು ಕೊಟ್ಟವರು, ಅಂತರ್ ಜಾತಿ ವಿವಾಹವನ್ನು ಪುರಸ್ಕರಿಸಿದವರು. ಗುರುಕುಲಕ್ಕೆ ಪರ್ಯಾಯವಾದ ಸಾಲಿಮಠ, ಓದೋ ಮಠದ ಮೂಲಕ ಅಕ್ಷರ ವಂಚಿತರನ್ನು ಜ್ಞಾನದ ಬೆಳಕಿಗೆ ತೆರೆದುಕೊಳ್ಳುವಂತೆ ಮಾಡಿದವರು. ಸಂಸ್ಕೃತಕ್ಕೆ ಬದಲಾಗಿ ಕನ್ನಡವನ್ನು ಧಾರ್ಮಿಕ ಭಾಷೆಯಾಗಿ ಮಾತ್ರವಲ್ಲ ಆಡುವ ಭಾಷೆಯಾಗಿ ಬೆಳೆಸಿದವರು.

ಬಸವಣ್ಣನವರ ಈ ಎಲ್ಲ ತತ್ವ-ಸಿದ್ಧಾಂತಗಳನ್ನು ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಸಿದ್ಧಾಂತದ ಜೊತೆ ಹೋಲಿಸಿ ನೋಡಿದರೆ ಯಾವ ಪಕ್ಷ ಲಿಂಗಾಯತ ಧರ್ಮವನ್ನು ಒಳಗೊಂಡಿದೆ ಎನ್ನುವುದು ಸ್ಪಷ್ಟವಾಗಬಹುದು. ಭಾರತೀಯ ಜನತಾ ಪಕ್ಷ ಬಹಿರಂಗವಾಗಿ ಆಡುವ ಮಾತುಗಳು ಏನೇ ಇದ್ದರೂ ಆ ಪಕ್ಷ ಮತ್ತು ಪರಿವಾರದ ಗುಪ್ತ ಕಾರ್ಯಸೂಚಿ ಬಸವಧರ್ಮಕ್ಕೆ ವಿರುದ್ಧವಾದುದು ಎಂದು ಮೇಲ್ನೋಟಕ್ಕೆ ಯಾರಿಗೂ ಅನಿಸಿಬಿಡುತ್ತದೆ.

ಇನ್ನು ರಾಜಕೀಯವಾಗಿಯೇ ನೋಡುವುದಾದರೆ ಭಾರತೀಯ ಜನತಾ ಪಕ್ಷ ಲಿಂಗಾಯತ ರಾಜಕೀಯ ನಾಯಕರನ್ನು ಹೇಗೆ ನಡೆಸಿಕೊಂಡು ಬಂದಿದೆ ಎನ್ನುವುದು ಅರಿವಾಗುತ್ತದೆ. ಕಾಂಗ್ರೆಸ್ ಪಕ್ಷದಿಂದಲೇ ಎಸ್.ಆರ್. ಕಂಠಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅದರ ನಂತರ ಬಿ.ಡಿ.ಜತ್ತಿಯವರು ಮುಖ್ಯಮಂತ್ರಿ ಆಗಿದ್ದಲ್ಲದೆ ದೇಶದ ಉಪರಾಷ್ಟ್ರಪತಿ, ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರು. ಎಸ್.ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮಾತ್ರವಲ್ಲ ಅಖಿಲಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಅದರ ನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದರು. ಲಿಂಗಾಯತ ಸಮುದಾಯಕ್ಕೆ ಉನ್ನತ ರಾಜಕೀಯ ಹುದ್ದೆಗಳ ಅವಕಾಶವನ್ನು ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ವೀರೇಂದ್ರ ಪಾಟೀಲ್ ಅವರ ಪದಚ್ಯುತಿ ಒಂದು ಕಹಿ ಘಟನೆ. ಅದರ ನಂತರ ವೀರೇಂದ್ರ ಪಾಟೀಲರು ಅನಾರೋಗ್ಯದಿಂದ ಸುಧಾರಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ಮರಳಲೇ ಇಲ್ಲ ಎನ್ನುವುದನ್ನು ಕೂಡಾ ನಾವು ಗಮನಿಸಬೇಕಾಗುತ್ತದೆ. ವೀರೇಂದ್ರ ಪಾಟೀಲರ ಪದಚ್ಯುತಿ ಮತ್ತು ಬಿಜೆಪಿ ಈಗ ನಡೆಸುತ್ತಿರುವ ತಮ್ಮ ಪಕ್ಷದಲ್ಲಿರುವ ಲಿಂಗಾಯತ ನಾಯಕರ ತಲೆಸಂಹಾರಗಳ ನಡುವಣ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ನಮ್ಮ ನಡುವಣ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್.ಯಡಿಯೂರಪ್ಪನವರು ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ.

ಆದರೆ ಬಿಜೆಪಿಯ ಪ್ರಭಾವಿ ನಾಯಕರು ಅದರಲ್ಲಿಯೂ ಮುಖ್ಯವಾಗಿ ಸಂಘ ಪರಿವಾರದ ಪ್ರಮುಖರು ತಮ್ಮದೇ ಪಕ್ಷದ ಒಬ್ಬ ಪ್ರಬಲ ನಾಯಕನ ವಿರುದ್ಧ ಮಾಡಿರುವ ಪಿತೂರಿ-ಕಾರಸ್ತಾನಗಳಿಗೆ ಏನು ಕಾರಣ ಎನ್ನುವುದನ್ನು ಅವರೇ ಹೇಳಬೇಕು.

ಯಡಿಯೂರಪ್ಪನವರು ಜೈಲಿಗೆ ಹೋಗಿದ್ದಾಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಭಾರತೀಯ ಜನತಾ ಪಕ್ಷ. ತಮ್ಮ ಸಾಮರ್ಥ್ಯ ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪನವರನ್ನು ಪೂರ್ಣಾವಧಿ ಮುಖ್ಯಮಂತ್ರಿಗಳಾಗಲು ಬಿಡದೆ ಅನ್ಯಾಯ ಮಾಡಿರುವುದು ಕೂಡಾ ಅವರದ್ದೇ ಪಕ್ಷ ಮತ್ತು ಪರಿವಾರದ ನಾಯಕರು. ಇದನ್ನು ಯಡಿಯೂರಪ್ಪನವರೇ ಖುದ್ದಾಗಿ ಹೇಳಿದ್ದರು.

ತಾವೇ ಕಟ್ಟಿದ್ದ ಪಕ್ಷವನ್ನು ಬಿಟ್ಟು ಅವರು ಹೋಗಬೇಕಾಯಿತು. ಇಂದು ಅವರನ್ನು ಕೊಂಡಾಡುತ್ತಿರುವ ಬಿಜೆಪಿ ನಾಯಕರು ಆ ಸಂದರ್ಭದಲ್ಲಿ ಆಡಿದ್ದ ಚಾರಿತ್ರ್ಯಹನನದ ಕೊಂಕು ಮಾತುಗಳು ಇತಿಹಾಸದ ಪುಟದಲ್ಲಿವೆ.
ನಾಲ್ಕು ವರ್ಷಗಳ ಹಿಂದೆ ಅಪರೇಷನ್ ಕಮಲದಂತಹ ಅನೈತಿಕ ರಾಜಕಾರಣವನ್ನು ಯಡಿಯೂರಪ್ಪನವರಿಂದಲೇ ನಡೆಸಿ ಕೊನೆಗೆ ವರ್ಷ ಮುಗಿಯುವುದರೊಳಗೆ ಅವರನ್ನು ನಿರ್ದಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿರುವುದಕ್ಕೆ ಕಾರಣಗಳೇನು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಈ ವರೆಗೆ ತಿಳಿಸಿಲ್ಲ.

ಅವರ ಮಗ ವಿಧಾನಪರಿಷತ್ ಸದಸ್ಯರಾಗಲು ಬಯಸಿದರೂ ಅವಕಾಶ ನೀಡಲಿಲ್ಲ, ಅವರನ್ನು ಸಚಿವರನ್ನಾಗಿಯೂ ಮಾಡಲಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಂತಹವರು  ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ನಿರಂತರವಾಗಿ ಮುಕ್ತವಾಗಿ ಬಗೆಬಗೆಯ ಆರೋಪಗಳನ್ನು ಮಾಡಿದಾಗಲೂ ಪಕ್ಷದ ಹೈಕಮಾಂಡ್ ಮೌನವಾಗಿದ್ದು ಪರೋಕ್ಷ ಬೆಂಬಲವನ್ನು ನೀಡಿತು.

ಈಗ ಯಡಿಯೂರಪ್ಪನವರ ನಂತರದ ತಲೆಮಾರಿನ ಲಿಂಗಾಯತ ನಾಯಕರ ಮೇಲೆ ದಾಳಿ ಶುರುವಾಗಿದೆ.ಈ ಬಾರಿ ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿದ್ದ ಜಗದೀಶ ಶೆಟ್ಟರ್ ಮೇಲೆ ಕಣ್ಣುಬಿದ್ದಿದೆ. ಅವರೊಬ್ಬರೇ ಅಲ್ಲ ಲಕ್ಷ್ಮಣ ಸವದಿ, ಆಯನೂರು ಮಂಜುನಾಥ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಸೇರಿದಂತೆ ಹಲವಾರು ಲಿಂಗಾಯತ ನಾಯಕರನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.

ತಮ್ಮನ್ನು ಪಕ್ಷದಲ್ಲಿ ಬಳಸಿಕೊಂಡು ಹೇಗೆ ಬಿಸಾಡಿದ್ದಾರೆ ಎನ್ನುವುದನ್ನು ಈ ನಾಯಕರೇ ಹೇಳುತ್ತಿದ್ದಾರೆ. ಇದು ನಮ್ಮ ಕಪೋಲಕಲ್ಪಿತ ಹೇಳಿಕೆಗಳಲ್ಲ. ಈ ಬಿಡಿಬಿಡಿ ಘಟನೆಗಳನ್ನು ಒಟ್ಟಾಗಿ ಜೋಡಿಸಿ ನೋಡಿದರೆ ಭಾರತೀಯ ಜನತಾ ಪಕ್ಷ ತಮ್ಮಲ್ಲಿನ ಹಿರಿಯ ನಾಯಕರಲ್ಲಿನ ಲಿಂಗಾಯತರನ್ನು ಮಾತ್ರ ಆಯ್ದು ದಮನಿಸುವ ಸಂಚಿನಲ್ಲಿ ತೊಡಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣಗಳೇನು ಎನ್ನುವುದನ್ನು ಬಿಜೆಪಿಯೇ ತಿಳಿಸಬೇಕು.

ಲೇಖಕ: ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT