ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಅಪರಾಧಿಕ ಕಾನೂನುಗಳ ಹೆಸರು ಬದಲಾವಣೆ- ಅರ್ಥಹೀನ, ಅರೆಬೆಂದ ಪ್ರಯತ್ನ

Published 18 ಆಗಸ್ಟ್ 2023, 23:26 IST
Last Updated 18 ಆಗಸ್ಟ್ 2023, 23:26 IST
ಅಕ್ಷರ ಗಾತ್ರ

ನಮ್ಮ ದೇಶದ ನೂರಾರು ಅಪರಾಧಿಕ ಕಾನೂನುಗಳ ಪೈಕಿ ಮೂರು ಕಾಯ್ದೆ ಅಥವಾ ಸಂಹಿತೆಗಳನ್ನು ಮಾತ್ರವೇ ಪ್ರಮುಖವಾದವುಗಳೆಂದು ಗುರುತಿಸಿ, ಪಾಲಿಸಲಾಗುತ್ತಿದೆ. ಈ ಪಾಲನೆಗೆ ನೂರಾರು ವರ್ಷಗಳ ಚರಿತ್ರೆಯಿದೆ. ಈಗಲೂ ಅವುಗಳನ್ನು, ‘ಇಂಡಿಯನ್ ಪೀನಲ್ ಕೋಡ್, ‘ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‘ ಮತ್ತು ‘ಇಂಡಿಯನ್ ಎವಿಡೆನ್ಸ್ ಆಕ್ಟ್’ ಎಂದು ಕರೆಯಲಾಗುತ್ತದೆ. ಕ್ರಮವಾಗಿ, ‘ಭಾರತೀಯ ದಂಡ ಸಂಹಿತೆ‘, ‘ದಂಡ ಪ್ರಕ್ರಿಯಾ ಸಂಹಿತೆ‘ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಎಂದು ಅರ್ಥೈಸುತ್ತೇವೆ.

ಇತ್ತೀಚೆಗೆ ಈ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಮಂಡಿಸಿರುವ ಮಸೂದೆಗಳು, ಅವುಗಳನ್ನು, ‘ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ’ ಎಂದು ಹೆಸರಿಸಬೇಕೆಂದಿವೆ. ಇದೊಂದು ಅರೆಬೆಂದ ಪ್ರಯತ್ನವೆನ್ನದೆ ಗತಿಯಿಲ್ಲ. ಕಾರಣ, ನಮ್ಮ ಸಂವಿಧಾನದ ಹೆಸರೇ ‘ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ’ (ಇಂಡಿಯಾದ ಸಂವಿಧಾನ) ಎಂದಿರುವಾಗ, ಸಂವಿಧಾನದ ಹೆಸರಿಗೆ ತಿದ್ದುಪಡಿ ತಂದು ‘ಭಾರತೀಯ ಸಂವಿಧಾನ’ (ದಿ ಕಾನ್ಸ್ಟಿಟ್ಯೂಷನ್ ಆಫ್ ಭಾರತ್) ಎಂದು ಮಾಡಿಕೊಳ್ಳದ ಹೊರತು, ಅದರ ಅಡಿಯಲ್ಲಿ ಹುಟ್ಟು ಪಡೆಯುವ ಯಾವುದೇ ಸಂಹಿತೆ ಅಥವಾ ಕಾಯ್ದೆ, ಭಾರತೀಯ ಕಾಯ್ದೆ ಅಥವಾ ಭಾರತೀಯ ಸಂಹಿತೆ ಆಗುವುದಾದರೂ ಹೇಗೆ?

ಸಿ.ಎಚ್.ಹನುಮಂತರಾಯ, ಹಿರಿಯ ವಕೀಲ
ಸಿ.ಎಚ್.ಹನುಮಂತರಾಯ, ಹಿರಿಯ ವಕೀಲ

ದೇಶದ ನ್ಯಾಯಾಲಯಗಳಲ್ಲಿ ನ್ಯಾಯಿಕ ಪ್ರಕ್ರಿಯೆಗಳು ಇಂಗ್ಲಿಷ್ ಮತ್ತು ಇತರೆ ರಾಜ್ಯ ಭಾಷೆಗಳಲ್ಲಿ ನಡೆಯಬಹುದು. ಇಲ್ಲಿಯೂ ಇಂಗ್ಲೀಷ್ ಒಂದು ಭಾಷೆಯಾಗಿ ಬಳಕೆ ಕಡ್ಡಾಯ. ಹಾಗೆಯೇ ಸುಪ್ರೀಂ ಕೋರ್ಟ್‌ ಭಾಷೆ ಇಂಗ್ಲಿಷ್ ಮಾತ್ರವೇ ಆಗಿದೆ. ಹೀಗಾಗಿರುವುದು ಸಂವಿಧಾನದ ನಿರ್ದೇಶನದಂತೆ. ಹೀಗಿದ್ದೂ ಕಾಯ್ದೆಗಳ ಅಥವಾ ಸಂಹಿತೆಗಳ ಹೆಸರುಗಳನ್ನು ಹಿಂದಿ ಭಾಷೆಯಲ್ಲಿ ಇರಿಸುವ ಪ್ರಯತ್ನ ಅರ್ಥಹೀನವಲ್ಲದೇ, ಈ ಮಸೂದೆಗಳ ಮೂಲಕ ಹಿಂದಿ ಹೇರಿಕೆಗೆ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವ ಹುನ್ನಾರ ನಡೆಸಲಾಗಿದೆ.

ನಮ್ಮ ಸಂವಿಧಾನದಲ್ಲಿ ಸಂಸತ್ತು ಮತ್ತು ವಿಧಾನಸಭೆಗಳು ಮಾಡುವ ಕಾನೂನುಗಳು, ಮಂಡಿಸುವ ಮಸೂದೆಗಳು ಹಾಗೂ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಹೊರಡಿಸುವ ಸುಗ್ರೀವಾಜ್ಞೆಗಳು ಇಂಗ್ಲಿಷ್ ಭಾಷೆಯಲ್ಲಿ ಇರತಕ್ಕದ್ದು ಎಂದು ಒತ್ತಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಎಂಬ ನಾಮಾಂಕಿತವನ್ನು ಹೊರತುಪಡಿಸಿ ಯಾವುದೇ ಕಾನೂನನ್ನು ಮಾಡುವ ಉಪಾಯವನ್ನು ಕೇಂದ್ರ ಗೃಹ ಸಚಿವರು ದೇಶದ ಮುಂದಿರಿಸಿಲ್ಲ.

ಮುಂದುವರೆದಂತೆ, ನಮ್ಮ ಸಂವಿಧಾನದ 7ನೇ ಪರಿಚ್ಛೇದದ, 3ನೇ ಪಟ್ಟಿಯಲ್ಲಿ ಕೇಂದ್ರ ಸರ್ಕಾರವು ತರಲಾಗುವ ಬದಲಾವಣೆಗಳ ಪಟ್ಟಿಯಲ್ಲಿ, ‘ಇಂಡಿಯನ್ ಪೀನಲ್ ಕೋಡ್’ ಮತ್ತು ‘ಕೋಡ್ ಆಫ್ ಕ್ರಿಮಿನಲ್ ಪ್ರೋಸಿಜರ್‘ ಕೂಡಾ ಸೇರಿದ್ದು, ಇವುಗಳಿಗೆ ಈಗ ಮಂಡಿಸಲಿರುವ ಮಸೂದೆಯಲ್ಲಿ ತರುವ ತಿದ್ದುಪಡಿಯನ್ನು ಅನ್ವಯಿಸಬೇಕಾದರೆ, ಸಂವಿಧಾನಕ್ಕೆ ಮತ್ತೊಂದು ತಿದ್ದುಪಡಿಯನ್ನು ದೇಶದ ಶೇ 50ರಷ್ಟು ರಾಜ್ಯಗಳ ಸಮ್ಮತಿಯೊಂದಿಗೆ ತರಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಕುರಿತಂತೆಯೂ ಕೇಂದ್ರ ಗೃಹ ಸಚಿವರಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಈಗಾಗಲೇ ಚಾಲ್ತಿಯಲ್ಲಿರುವ ಮೂರು ಕಾಯ್ದೆಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಗಳೂ ತಮಗೆ ಅನುಕೂಲವಾಗುವಂತೆ ತಂದಿರುವ ತಿದ್ದುಪಡಿಗಳು ಇದ್ದು, ಮಂಡನೆಗೊಳ್ಳುತ್ತಿರುವ ಮಸೂದೆಗಳು ಆ ತಿದ್ದುಪಡಿಗಳನ್ನು ಒಳಗೊಂಡಿರದೆ, ಮತ್ತೊಮ್ಮೆ ರಾಜ್ಯ ಸರ್ಕಾರಗಳು ಹೊಸದಾಗಿ ತಿದ್ದುಪಡಿಗಳನ್ನು ತಂದುಕೊಳ್ಳಬೇಕಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರಗಳ ಮೇಲಿದೆ. ಅವುಗಳೊಂದಿಗೆ ಸಮಾಲೋಚನೆ ನಡೆಸದೆ ಮಸೂದೆಗಳು ರೂಪಿತವಾಗಿದ್ದರೆ, ಅವುಗಳ ಸ್ವೀಕಾರಾರ್ಹತೆ ಕ್ಷೀಣಿಸುತ್ತದೆ.

ಈ ಮಸೂದೆಗಳನ್ನು ಸಿದ್ಧಪಡಿಸುವ ಸಮಿತಿಯ ಪ್ರಯತ್ನಗಳಲ್ಲಿ ಪಾರದರ್ಶಕತೆ ಮತ್ತು ಪ್ರಾತಿನಿಧ್ಯಗಳ ಕೊರತೆಯಿದ್ದು ಈಗ ಸಂಸತ್ತಿನ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಒಪ್ಪಿಸಿರುವುದು ದೌರ್ಬಲ್ಯಪೂರಿತವಾಗಿದೆ. ಮೂರು ಮಸೂದೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಬದಲಾವಣೆ ತರಲು ಮಾಡುತ್ತಿರುವ ಪ್ರಯತ್ನ ಅಪೂರ್ಣವಾಗಿಯೇ ಉಳಿಯುವ ಎಲ್ಲ ಲಕ್ಷಣಗಳನ್ನು ತನ್ನೊಳಗೇ ಉಳಿಸಿಕೊಂಡಿದೆ.

ಮಸೂದೆಯಲ್ಲಿನ ಉದ್ದೇಶಿತ ಬದಲಾವಣೆಗಳು, ರಾಜ್ಯಗಳ ವಕೀಲರ ಪರಿಷತ್ತು, ನ್ಯಾಯಶಾಸ್ತ್ರ ಪರಿಣತರ, ನಿವೃತ್ತ ಪೊಲೀಸ್ ಅಧಿಕಾರಿಗಳ, ನಿವೃತ್ತ ಆಡಳಿತಾಧಿಕಾರಿಗಳೊಂದಿಗೆ ಸಮಾಲೋಚಿಸಿ ರೂಪುಗೊಳ್ಳದಿರುವ ಕೊರತೆಯೂ ಎದ್ದು ಕಾಣುತ್ತಿದೆ. 

ಹಳೆಯ ಕಾಯ್ದೆಗಳನ್ನು ರದ್ದುಗೊಳಿಸಿ, ಇಲ್ಲವೇ ಹಿಂಪಡೆದು, ಕೆಲವು ಬದಲಾವಣೆಗಳೊಂದಿಗೆ, ಅದರದೇ ಆದ ಆತ್ಮವನ್ನೊಳಗೊಂಡ, ಹೊಸ ನಾಮಾಂಕಿತವನ್ನು ಪ್ರಮುಖವಾಗಿ ಹೊಂದಿರುವ ಮಸೂದೆ ಅಪ್ರಸ್ತುತ. ಕಾರಣ, ಕೇಂದ್ರ ಸರ್ಕಾರ ತರಲಿಚ್ಛಿಸಿರುವ ಬದಲಾವಣೆಗಳನ್ನು, ಈಗಿರುವ ಕಾಯ್ದೆ ಅಥವಾ ಸಂಹಿತೆಗಳಲ್ಲಿ ತಿದ್ದುಪಡಿ ತರುವ ಮೂಲಕವೇ ಸರ್ಕಾರದ ನ್ಯಾಯದಾನದ ಉದ್ದೇಶ ಪರಿಪೂರ್ಣಗೊಳ್ಳುವ ಅವಕಾಶವಿದೆ.

ಒಂದು ಅಪರಾಧಕ್ಕೆ ಶಿಕ್ಷೆಯನ್ನು ಹೆಚ್ಚಿಸುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯ ವಿಡಿಯೊ ದಾಖಲೀಕರಣ ಕಡ್ಡಾಯ ಮಾಡುವ; ಗುರುತು ಮರೆಮಾಚಿ ಮಹಿಳೆಯನ್ನು ಮದುವೆಯಾಗುವ; ಆರೋಪ ಪಟ್ಟಿಯನ್ನು 90 ದಿನಗಳ ಒಳಗೆ ಸಲ್ಲಿಸಬೇಕೆಂದಿರುವ ಕಾಲಾವಧಿಯನ್ನು 180 ದಿನಗಳಿಗೆ ವಿಸ್ತರಿಸುವ; ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲು ಮಾಡಲು ಸಂಬಂಧಿಸಿದ ಇಲಾಖೆಯಿಂದ 120 ದಿನಗಳ ಒಳಗೆ ಅನುಮತಿ ಬಾರದೇ ಹೋದರೆ, ಅದನ್ನು ನೀಡಿದೆ ಎಂದು ಅರ್ಥೈಸುವ; ಅಪರಾಧಿಯ ಆಸ್ತಿಯಿಂದಲೇ ಪರಿಹಾರ ನೀಡುವ ಅವಕಾಶ; ಆರೋಪಿ ತಲೆ ಮರೆಸಿಕೊಂಡಿದ್ದರೂ ಆತನ ವಿರುದ್ಧ ವಿಚಾರಣೆ ನಡೆಸುವ ಅವಕಾಶ; ವೀಡಿಯೊ ದಾಖಲೀಕರಣ ಮಾಡಿಕೊಂಡ ಮೇಲೆ ವಾಹನಗಳನ್ನು ಬಿಡುಗಡೆ ಮಾಡುವ ಮತ್ತು ಮೂರು ವರ್ಷಗಳ ಒಳಗೆ ಪ್ರಕರಣಗಳು ಇತ್ಯರ್ಥವಾಗಬೇಕು; ಸಮುದಾಯ ಶಿಕ್ಷೆ (ಪ್ರೊಬೆಷನ್ ಆಫ್ ಅಫೆಂಡರ್ಸ್ ಆ್ಯಕ್ಟ್) ಮುಂತಾದವುಗಳನ್ನು ಕುರಿತು ಪ್ರಸ್ತುತ ಕಾಯ್ದೆಗಳಲ್ಲಿ ಸಾಕಷ್ಟು ಒತ್ತು ಕೊಟ್ಟಿರುವುದು ಕಂಡು ಬಂದರೂ, ಮಸೂದೆಯಲ್ಲಿ ಅವುಗಳಿಗೆ ಅಂಗರಾಗ ಲೇಪಿಸಿ, ಸೌಂದರ್ಯ ಹೆಚ್ಚಿಸುವ, ಅರ್ಥಾತ್, ಅವುಗಳ ರೂಪವನ್ನು ಸುಧಾರಿಸುವ ಪ್ರಯತ್ನ ಮಾತ್ರವೇ ನಡೆಯುತ್ತಿರುವುದು ಕಂಡುಬರುತ್ತಿದೆ. ಅವುಗಳ ಮೂಲ ತತ್ವ, ಸಿದ್ಧಾಂತ ಮತ್ತು ಧೋರಣೆಗಳು ಅಲುಗಾಡದೆ ಉಳಿದುಕೊಂಡಿವೆ.

ಈ ನಿಟ್ಟಿನಲ್ಲಿ ಉದ್ದೇಶಿತ ಬದಲಾವಣೆಗಳಲ್ಲಿ ಈಗಿನ ಅಗತ್ಯಗಳಿಗೆ ಅನುಗುಣವಾಗಿ ಕಾನೂನುಗಳಿಗೆ ಬದಲಾವಣೆ ತರಲಾಗುತ್ತಿದೆ ಅನ್ನಿಸಿದರೂ, ಅವುಗಳೆಲ್ಲವನ್ನೂ, ಈಗಿರುವ ಕಾಯ್ದೆಗೆ ಅಥವಾ ಸಂಹಿತೆಗೆ ಸರಳ ತಿದ್ದುಪಡಿ ತರುವುದರ ಮೂಲಕವೇ ಈಡೇರಿಸಿಕೊಂಡರೆ, ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಅಸಮರ್ಥನೀಯ ಚರ್ಚೆ ಮತ್ತು ಅನೂಹ್ಯ ಖರ್ಚುಗಳನ್ನು ತಪ್ಪಿಸಬಹುದು. ಅಲ್ಲದೇ, ಸಂವಿಧಾನಕ್ಕೆ ಮಾಡಬೇಕಾಗಿ ಬರುವ ತಿದ್ದುಪಡಿ ಹಾಗೂ ರಾಜ್ಯ ಸರ್ಕಾರಗಳು ಹೊಸ ಕಾಯ್ದೆಗಳಿಗೆ ಅನುಗುಣವಾಗಿಯೇ ಮಾಡಿಕೊಳ್ಳಬೇಕಾದ ತಿದ್ದುಪಡಿಗಳನ್ನೂ ತಪ್ಪಿಸಬಹುದು.

ಲೇಖಕ: ಹಿರಿಯ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT