ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೇಸಿಎಂ' ಕುರಿತು ಚರ್ಚೆ | ಮಾಡಿದ್ದುಣ್ಣೋ ಮಹರಾಯ, ಕ್ರಿಯೆಗೆ ಪ್ರತಿಕ್ರಿಯೆ

ಕಾಂಗ್ರೆಸ್‌ನ ‘ಪೇಸಿಎಂ’ ಅಭಿಯಾನ, ಅದಕ್ಕೆ ಎದುರಾಗಿ ಬಿಜೆಪಿ ನಡೆಸಿದ ಅಭಿಯಾನವು ರಾಜಕೀಯ ಸಂವಾದದ ಮಟ್ಟವು ಪಾತಾಳಕ್ಕೆ ಕುಸಿದಿರುವ ಸಂಕೇತವೇ?
Last Updated 30 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷದ ‘ಪೇಸಿಎಂ’ ಅಭಿಯಾನ ಒಂದು ಡರ್ಟಿ ಪಾಲಿಟಿಕ್ಸ್ ಹೌದೋ, ಅಲ್ವೋ ಎನ್ನುವುದನ್ನುತೀರ್ಮಾನಿಸುವ ಮೊದಲು, ಹೀಗೆಂದು ಪ್ರತಿಕ್ರಿಯಿಸುವ ನೈತಿಕತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವರೆಗೆ ತಮ್ಮ ಯಾವನಾದರೂ ನಾಯಕ ಉಳಿಸಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಗೆ ಭಾರತೀಯ ಜನತಾ ಪಕ್ಷ ಉತ್ತರಿಸಬೇಕಾಗುತ್ತದೆ.

ಈ ಚರ್ಚೆಗೆ ಕಾಂಗ್ರೆಸ್ಸಿನವರು ಸರಳವಾದ ಕನ್ನಡದ ಗಾದೆಯ ಮೂಲಕ ಪ್ರತಿಕ್ರಿಯಿಸಲು ಪ್ರಯತ್ನಿಸಿದರೆ ‘ಮಾಡಿದ್ದುಣ್ಣೋ ಮಹರಾಯ’ ಎನ್ನಬಹುದು, ಸ್ವಲ್ಪ ಫಿಲ್ಮಿ ಸಂಭಾಷಣೆಯ ಶೈಲಿಯಲ್ಲಿ ಹೇಳಿದರೆ ‘ಆಟ ನೀವು ಶುರುಮಾಡಿದ್ದೀರಿ, ಅಂತ್ಯ ನಾವು ಮಾಡುತ್ತೇವೆ’ ಎನ್ನಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಧಾಟಿಯಲ್ಲಿಯೇ ಹೇಳಲು ಹೊರಟರೆ ‘ಕ್ರಿಯೆಗೆ ಪ್ರತಿಕ್ರಿಯೆ’ ಎನ್ನಬಹುದು ಅಷ್ಟೇ.

ಕಾಲ ಬದಲಾಗಿದೆ. ಸೈದ್ಧಾಂತಿಕ ವಿರೋಧಿಯಾದ ಶ್ಯಾಮಪ್ರಸಾದ್ ಮುಖರ್ಜಿಯವರನ್ನು ಸಂಪುಟಕ್ಕೆಸೇರಿಸಿಕೊಂಡ, ಇಲ್ಲವೇ ಇನ್ನೊಬ್ಬ ರಾಜಕೀಯ ವಿರೋಧಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನುಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ, ಇಲ್ಲವೇ ನೀವು ಒಂದು ದಿನ ದೇಶದ ಪ್ರಧಾನಿಯಾಗಬಹುದು ಎಂದು ಬಹಿರಂಗವಾಗಿಯೇ ಅಟಲ್‌ ಬಿಹಾರಿ ವಾಜಪೇಯಿ ಅವರ ಬೆನ್ನುತಟ್ಟಿದ ಪಂಡಿತಜವಾಹರ ಲಾಲ್ ನೆಹರೂ ಅಂತಹವರ ಕಾಲ ಇದು ಅಲ್ಲ.

ಪಾಕಿಸ್ತಾನದ ವಿರುದ್ದದ ಯುದ್ದವನ್ನು ಗೆದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ದುರ್ಗಿ ಎಂದು ಕರೆದಮತ್ತು ಸಂಸತ್ ಭವನದಲ್ಲಿದ್ದ ನೆಹರೂ ಪೋಟೊವನ್ನು ಕಿತ್ತು ಹಾಕಿದ್ದನ್ನು ನೋಡಿ ಕೆರಳಿ ಸಿಟ್ಟಾದ ಅಟಲ್‌ ಬಿಹಾರಿ ವಾಜಪೇಯಿ, ಇಲ್ಲವೇ ಸಂಸತ್ ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ವಾಜಪೇಯಿ-ಅಡ್ವಾಣಿಯವರ ಸುರಕ್ಷತೆಯ ಬಗ್ಗೆ ಆತಂಕಗೊಂಡು ದೂರವಾಣಿ ಕರೆ ಮಾಡಿ ವಿಚಾರಿಸಿದ ಸೋನಿಯಾ ಗಾಂಧಿಯವರ ಕಾಲವೂ ಅಲ್ಲ

ಮತ್ತೆ ಇದು ಯಾವ ಕಾಲ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ಗೂಗಲ್ ಸರ್ಚ್ ಎಂಜಿನ್‌ಗೆ ಚಾಲನೆ ನೀಡಿಇತಿಹಾಸದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ. #ಬಾರ್ ಡಾನ್ಸರ್, #ಜರ್ಸಿ ದನ, #ಪಪ್ಪು, #50 ಕೋಟಿ ಪ್ರೇಮಿ, #ನಿದ್ದೆರಾಮಯ್ಯ, #ಬುರುಡೆರಾಮಯ್ಯ ಮೊದಲಾದ ಹ್ಯಾಷ್‌ ಟ್ಯಾಗ್ ಮೇಲೆ ಬೆರಳು ಒತ್ತಿಬಿಡಿ. ಕಳೆದ8-10 ವರ್ಷಗಳ ‘ಡರ್ಟಿ ಪಾಲಿಟಿಕ್ಸ್‌’ನ ರೋಚಕ ಇತಿಹಾಸ ನಿಮ್ಮ ಕಣ್ಣೆದುರು ಅನಾವರಣಗೊಳ್ಳುತ್ತದೆ. ಅಹಾ, ಏನು ಭಾಷೆ!, ಏನು ವೇಷ! ನೋಡಲು ಕಣ್ಣೆರಡು ಸಾಲದು ಈ ರೀತಿಯ ರಾಜಕೀಯ ಅಭಿಯಾನಕ್ಕೆ. ಸದ್ಯ ಭಾರತವೇವಿಶ್ವಗುರು.

ರಾಜಕೀಯ ಪಕ್ಷಗಳ ಪ್ರಚಾರ ಎಂದರೆ ಸಾರ್ವಜನಿಕ ಸಭೆ, ಸಮಾವೇಶ, ಪೋಸ್ಟರ್, ಗೋಡೆಬರಹ, ಹ್ಯಾಂಡ್ ಬಿಲ್, ಬಾವುಟಗಳಷ್ಟೇ ಎನ್ನುವ ಕಾಲ ಒಂದಿತ್ತು. ನಿಧಾನವಾಗಿ ಅದು ಬದಲಾಗುತ್ತಾ ಬಂತು.ಮೊದಲ ಬಾರಿಗೆ ಭಾರತದ ಚುನಾವಣಾ ಪ್ರಚಾರ ವಿಶಿಷ್ಟ ಪತ್ರಿಕಾ ಜಾಹೀರಾತುಗಳು ಕಾಣಿಸಿಕೊಂಡಿದ್ದು 1989ರ ಕಾಂಗ್ರೆಸ್ ಪಕ್ಷದ ಪ್ರಚಾರದ ಕಾಲದಲ್ಲಿ. ಯಾವಾಗಲೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿದ್ದ ರಾಜೀವ್ ಗಾಂಧಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ರಿಡಿಫ್ಯೂಷನ್ ಎಂಬ ಜಾಹೀರಾತು ಕಂಪೆನಿಯನ್ನು ಕರೆತಂದಿದ್ದರು. ಆಗಲೇ ‘ಇಂತಹ ಮೈತ್ರಿ ಸರ್ಕಾರ ಬೇಕಿತ್ತಾ’ ಎಂಬ ಪ್ರಶ್ನೆಯೊಂದಿಗೆ ಕಾದಾಡುವ ಕೋಳಿಗಳು, ಹೊಗೆಯಾಡುವ ಬಂದೂಕು, ಕಚ್ಚಾಡುವ ಮೊಸಳೆ, ಏಡಿಗಳ ಚಿತ್ರಗಳೊಂದಿಗೆ ಜಾಹೀರಾತುಗಳು ಪ್ರಕಟವಾಗಿದ್ದು. ಆ ಕಾಲದಲ್ಲಿ ಇದರ ವಿರುದ್ದ ಟೀಕೆಗಳು ಕೇಳಿಬಂದಿದ್ದವು.

1991ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅಂತಹ ಜಾಹೀರಾತುಗಳ ಗೋಜಿಗೆ ಹೋಗಿರಲಿಲ್ಲ.ಒಮ್ಮಿಂದೊಮ್ಮೆಲೇ ರಾಜಕೀಯ ಪ್ರಚಾರದ ರೂಪ, ಬಣ್ಣ, ವಿನ್ಯಾಸಗಳು ಆಘಾತಗೊಳ್ಳುವಷ್ಟು ಬದಲಾಗಿದ್ದು2013ರ ನಂತರದ ದಿನಗಳಲ್ಲಿ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ನರೇಂದ್ರ ಮೋದಿಯವರನ್ನು ಭಾರತೀಯ ಜನತಾ ಪಕ್ಷ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ. ಮುಖ್ಯವಾಹಿನಿ ಮಾಧ್ಯಮಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ದೆಹಲಿ ಕೇಂದ್ರಿತ ‘ಲ್ಯೂಟೆನ್’ ಮಾಧ್ಯಮಗಳು ತಮ್ಮ ವಿರುದ್ದ ಇವೆ ಎಂಬ ಸಿಟ್ಟು ನರೇಂದ್ರ ಮೋದಿಯವರಿಗೆ ಇತ್ತು, ಇದು ನಿಜ ಕೂಡಾ ಆಗಿತ್ತು. ಈ ವಿರೋಧ-ಅಸಹಕಾರವನ್ನು ಪರ್ಯಾಯ ಮಾಧ್ಯಮಗಳಮೂಲಕ ಅವರು ಎದುರಿಸಲು ಹೊರಟದ್ದು ಅಪರಾಧ ಅಲ್ಲ. ಆದರೆ, ಮೋದಿಯವರ ಕ್ಯಾಂಪೇನ್ ಮ್ಯಾನೇಜರ್‌ಗಳುಪರ್ಯಾಯ ಮಾಧ್ಯಮದ ನೆಗೆಟಿವ್ ಶಕ್ತಿಯನ್ನೇ ಬಳಸಿಕೊಳ್ಳಲು ನಿರ್ಧರಿಸಿದ್ದು ಈಗ ಪರಾಕಾಷ್ಠೆಗೆ ಮುಟ್ಟಿರುವ ಕೊಳಕು ರಾಜಕೀಯ ಪ್ರಚಾರ ಶೈಲಿಗೆ ಕಾರಣ.

ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲಿನ ನೆಗೆಟಿವ್ಅಂಶಗಳೆಂದರೆ ಮಾಧ್ಯಮಗಳಿಗೆ ಮೂಲಭೂತವಾಗಿ ಇರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿ ಇಲ್ಲದೆ ಇರುವುದು. ಇದೊಂದು ರೀತಿ ಕತ್ತಲಲ್ಲಿ ಬರೆದು ಓಡಿಹೋಗುವ ಗೋಡೆ ಬರಹಗಳು. ಇದರಭಾಗವಾಗಿಯೇ ಫೇಕ್ ನ್ಯೂಸ್, ಫೇಕ್ ಐಡಿ-ಖಾತೆಗಳು, ಟ್ರೋಲ್ ಪೇಜ್‌ಗಳು ಜೊತೆಗೆ ಪೆಯ್ಡ್‌ ನ್ಯೂಸ್ ಕೂಡಾ ಹುಟ್ಟಿಕೊಂಡದ್ದು. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಚಾರ ತಂಡ 2014ರಲ್ಲಿ ಮಾಡಿದ್ದ ತಂತ್ರಗಳೆಲ್ಲವೂ ಇಂದು ದಾಖಲಾಗಿವೆ. 2016ರಲ್ಲಿ ಪ್ರಕಟವಾದ ಪತ್ರಕರ್ತೆ ಸ್ವಾತಿ ಚತುರ್ವೇದಿಯವರ ‘ಐ ಆ್ಯಮ್ ಟ್ರೋಲ್’, ಶ್ಯಾಮ ಶಂಕರ್‌ಸಿಂಗ್ ಅವರು 2019ರಲ್ಲಿ ಬರೆದಿರುವ ‘ಹೌ ಟು ವಿನ್ ಆ್ಯನ್ ಇಂಡಿಯನ್ ಎಲೆಕ್ಷನ್’, ಪತ್ರಕರ್ತ ರಾಜ್‌ದೀಪ್ಸರ್ದೇಸಾಯಿ ಅವರ ‘2014- ಎಲೆಕ್ಷನ್ ದ್ಯಾಟ್ ಚೇಂಜ್ಡ್‌ ಇಂಡಿಯಾ’ ಎಂಬ ಪುಸ್ತಕಗಳಲ್ಲಿ ಬಿಜೆಪಿ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದವರು ತಮ್ಮ ಬಾಯಿಯಿಂದಲೇ ಒಪ್ಪಿಕೊಂಡಿರುವ ಅನೇಕ ಸತ್ಯಗಳಿವೆ.

ಕಾಲ ಉಲ್ಟಾ ಹೊಡೆದಿದೆ. ಯಾವುದೇ ಉತ್ಪನ್ನಕ್ಕೆ ಎಕ್ಸ್‌ಪೈರಿ ಡೇಟ್ ಎನ್ನುವುದು ಇದ್ದೇ ಇರುತ್ತದೆ. ಬಹುಶಃಬಿಜೆಪಿಯ ಪ್ರಚಾರದ ಮೆಷಿನ್‌ಗೂ ಆ ದಿನ ಬಂದಿರುವಂತೆ ಕಾಣುತ್ತಿದೆ. ಇವೆಲ್ಲ ಒಂದು ರೀತಿಯಲ್ಲಿ ಹುಲಿ ಸವಾರಿ, ಕೆಳಗಿಳಿದರೆ ಹುಲಿಗೆ ಆಹಾರವಾಗಬೇಕಾಗುತ್ತದೆ. ಫೇಕ್ ಖಾತೆದಾರರು, ಟ್ರೋಲರ್‌ಗಳು, ಭಕ್ತರು, ಬ್ರಿಗೇಡಿಗಳೆಲ್ಲ ಮನೆಯಲ್ಲಿ ಸಾಕಿದ ಹಸುಗಳಲ್ಲ. ಅವುಗಳು ಕಾಡು ಪ್ರಾಣಿಗಳಿದ್ದ ಹಾಗೆ, ಅವುಗಳನ್ನು ಕಟ್ಟಿಕೊಂಡವರಿಗೂ ನಿಯಂತ್ರಿಸುವುದು ಕಷ್ಟ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಫೇಸ್‌ಬುಕ್, ಟ್ವಿಟರ್‌ಗಳನ್ನು ನಿಯಂತ್ರಿಸಲು ಒದ್ದಾಡುತ್ತಿರುವುದು ಇದಕ್ಕೆ ಸಾಕ್ಷಿ.

ಯಾವುದೇ ರಾಜಕೀಯ ಪ್ರಚಾರ ಯಶಸ್ವಿಯಾಗಬೇಕಾದರೆ ಪ್ರಚಾರದ ವಸ್ತುವಿನ ಜೊತೆ ಜನ ತಮ್ಮನ್ನು ಗುರುತಿಸಿಕೊಳ್ಳ
ಬೇಕಾಗುತ್ತದೆ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದ ಕಾಲದಲ್ಲಿ ಜನ ಹೀಗೆ ಗುರುತಿಸಿಕೊಂಡಿದ್ದರು. ಕರ್ನಾಟಕದಲ್ಲಿ ಈಗ ಅಂತಹದ್ದೇ ವಾತಾವರಣ ಸೃಷ್ಟಿಯಾಗಿದೆ. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದ ಬಲಿಪಶುಗಳು ಎಂಬ ಅಭಿಪ್ರಾಯ ಜನರ ಮನಸ್ಸಲ್ಲಿದೆ. ಇದು ‘ಪೇಸಿಎಂ’ ಅಭಿಯಾನದ ಯಶಸ್ಸಿಗೆ ಒಂದು ಕಾರಣವಾದರೆ ಈ ಪ್ರಚಾರದಲ್ಲಿನ ವಿನೂತನ ಸೃಜನಶೀಲತೆ ಜನರ ಗಮನ ಸೆಳೆದಂತಿದೆ.

ದಿನೇಶ್ ಅಮಿನ್ ಮಟ್ಟು
ದಿನೇಶ್ ಅಮಿನ್ ಮಟ್ಟು

ಇಂದು ಗಾಯ ನೆಕ್ಕುತ್ತಾ ಕೂತಿರುವ ಭಾರತೀಯ ಜನತಾ ಪಕ್ಷದ ನಾಯಕರಿಗೆ ತಮ್ಮಿಂದಾಗಿ ಇತರರ ಎದೆಯ ಮೇಲೆ ಆಗಿರುವ ಹಸಿ ಗಾಯದ ಅರಿವಿಲ್ಲ. ರಾಜಕೀಯವಾದ ‘ತೂ ತೂ ಮೈ ಮೈ’ ಬಿಟ್ಟು ಬಿಡಿ. ಸೋನಿಯಾ ಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ ಎಂದುವೈಯಕ್ತಿಕಮಟ್ಟಕ್ಕೆ ಇಳಿದು ಸುಷ್ಮಾ ಸ್ವರಾಜ್ ಲೇವಡಿ ಮಾಡಿದಾಗ, ಸಿದ್ದರಾಮಯ್ಯನವರ ಮಗನ ಸಾವನ್ನೂ ಟ್ರೋಲ್ ಮಾಡಿದಾಗ ಬಿಜೆಪಿಯಲ್ಲಿರುವ ಯಾವನಾದರೂ ಸಜ್ಜನ ನಾಯಕ ಎದ್ದು ನಿಂತು ಇದು ತಪ್ಪು ಎಂದು ಹೇಳಿದ
ಒಂದೇ ಒಂದು ಉದಾಹರಣೆಯನ್ನು ಯಾರಾದರೂ ಕೊಡಲು ಸಾಧ್ಯವೇ?

ಹಾಗೆ ಮಾಡಿದ್ದರೆ ತಮ್ಮ ವಿರುದ್ದದ ‘ಪೇಸಿಎಂ’ ಅಂತಹ ಪ್ರಚಾರವನ್ನು ‘ಡರ್ಟಿ ಪಾಲಿಟಿಕ್ಸ್’ ಎಂದು ಟೀಕಿಸುವನೈತಿಕತೆ ಬಿಜೆಪಿಯವರಿಗೆ ಇರುತ್ತಿತ್ತು. ಎದುರಾಳಿಯ ಮೈ ಮೇಲೆ ಬಟ್ಟೆ ಇಲ್ಲ ಎಂದು ದೂರುವವರ ಮೈಯಲ್ಲಿ ಲಂಗೋಟಿಯೂ ಇಲ್ಲ ಎನ್ನುವಂತಾಗಿದೆ ಇಂದಿನ ಸ್ಥಿತಿ.

ಲೇಖಕ: ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT