ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ

Published 8 ಸೆಪ್ಟೆಂಬರ್ 2023, 19:17 IST
Last Updated 8 ಸೆಪ್ಟೆಂಬರ್ 2023, 19:17 IST
ಅಕ್ಷರ ಗಾತ್ರ

ನರೇಂದ್ರ ಮೋದಿ ಅವರಿಗೆ ಒಂದು ಗೀಳು ಇದೆ. ಈ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಿ ತಾವು ಎಂದೂ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರೆಲ್ಲರಿಗಿಂತ ಶ್ರೇಷ್ಠ ಎಂದೂ ಇತಿಹಾಸವು ತಮ್ಮನ್ನು ಗುರುತಿಸಬೇಕು ಎಂದು ಅವರು ಬಯಸಿದ್ದಾರೆ. ‘ಒಂದು ದೇಶ, ಒಂದು ಚುನಾವಣೆ’ಯಂತಹ ದಿಟ್ಟ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳಲು ತಮಗೆ ಮಾತ್ರ ಸಾಧ್ಯ ಎಂದು ತೋರಿಸಿಕೊಳ್ಳಲು ಅವರು ಬಯಸಿದ್ದಾರೆ. 

ಭಾರತಕ್ಕೆ ‘ಒಂದು ದೇಶ, ಒಂದು ಚುನಾವಣೆ’ಯ ಅಗತ್ಯ ಇದೆಯೇ? ಉತ್ತರ ಹೌದು ಎಂಬುದೇ ಆಗಿದೆ. ಪ್ರತಿ ವರ್ಷವೂ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಈ ಚುನಾವಣಾ ಸರ‍ಪಣಿಯಿಂದಾಗಿ ಉತ್ತಮ ಆಳ್ವಿಕೆ ಮತ್ತು ದೀರ್ಘಾವಧಿಯ ನೀತಿ ರೂಪಿಸುವಿಕೆ ಬಹಳ ಕಷ್ಟ ಎನಿಸುತ್ತದೆ. ಪ್ರಧಾನಿ, ಸಚಿವರು ಮತ್ತು ರಾಜಕೀಯ ನಾಯಕರು ತಮ್ಮ ಬಹುಪಾಲು ಸಮಯ ಮತ್ತು ಚೈತನ್ಯವನ್ನು ಚುನಾವಣಾ ಪ್ರಚಾರಕ್ಕೇ ವ್ಯಯ ಮಾಡಬೇಕಾಗುತ್ತದೆ. ಚುನಾವಣೆಯ ವೆಚ್ಚವು ಏರಿಕೆಯಾಗುತ್ತಿರುವುದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ರಾಜಕಾರಣಿಗಳು ಹಣವಂತರ ಮೇಲೆ ಸದಾ ಅವಲಂಬಿತ ಆಗಿರಬೇಕಾಗುತ್ತದೆ. ಈಗ ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನೆ ಈ ಪ್ರಸ್ತಾವ ಅ‍ಪೇಕ್ಷಣೀಯವೇ ಎಂಬುದಲ್ಲ. ಬದಲಿಗೆ ಇದರ ಅನುಷ್ಠಾನ ಹೇಗೆ ಎಂಬುದಾಗಿದೆ. ಇಲ್ಲಿ ಮೂರು ಸಮಸ್ಯೆಗಳು ಇವೆ. 

ಮೊದಲನೆಯದಾಗಿ, ಭಾರತದ ಪ್ರಜಾಪ್ರಭುತ್ವದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಯಾವುದೇ ಬದಲಾವಣೆಯನ್ನು ರಾಷ್ಟ್ರ ಮಟ್ಟದಲ್ಲಿ ಅತ್ಯಂತ ವ್ಯಾಪಕವಾದ ಸಹಮತದ ಮೂಲಕವೇ ಜಾರಿಗೆ ತರಬೇಕು. ಸಾಂವಿಧಾನಿಕ ತಿದ್ದುಪಡಿಗಳನ್ನು ಯಾವುದೇ ಚರ್ಚೆ ಇಲ್ಲದೆ ನಡೆಸಬಾರದು. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಾತ್ರವಲ್ಲ, ಜನರ ನಡುವಲ್ಲಿಯೂ ವ್ಯಾಪಕವಾದ, ಸಮಂಜಸವಾದ ಚರ್ಚೆ ನಡೆಯಬೇಕು. ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಯನ್ನು ಕೇಳಿಸಿಕೊಳ್ಳಲೇಬೇಕು. ಒಂದು ದೇಶ, ಒಂದು ಚುನಾವಣೆ ಜಾರಿಯಾಗಲೇಬೇಕು ಎಂಬ ಹಟ ಮೋದಿಯವರಿಗೆ ಇದ್ದರೆ, 2024ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಸೇರಿಸಿಕೊಳ್ಳಲಿ. ಇದರ ಪರವಾಗಿ ಜನಾದೇಶ ಬಂದರೆ, ಆಗ ಅನುಷ್ಠಾನ ಮಾಡಲಿ.

ಈಗ ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನೆ ಈ ಪ್ರಸ್ತಾವ ಅ‍ಪೇಕ್ಷಣೀಯವೇ ಎಂಬುದಲ್ಲ. ಬದಲಿಗೆ ಇದರ ಅನುಷ್ಠಾನ ಹೇಗೆ ಎಂಬುದಾಗಿದೆ. ಇಲ್ಲಿ ಮೂರು ಸಮಸ್ಯೆಗಳು ಇವೆ

ಮೋದಿ ಅವರ ಈವರೆಗಿನ ನಡವಳಿಕೆಯನ್ನು ನೋಡಿದರೆ, ಸಂಸತ್ತಿನಲ್ಲಾಗಲಿ ರಾಜಕೀಯವಾಗಿ ಆಗಲಿ, ಜನರೊಂದಿಗೆ ಆಗಲಿ ಅರ್ಥಪೂರ್ಣ ಸಮಾಲೋಚನೆ ನಡೆಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ಉದಾಹರಣೆಗೆ, ಇದೇ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ, ವಿರೋಧ ಪಕ್ಷಗಳ ಜೊತೆಗೆ ಸಮಾಲೋಚನೆಯೇ ಮಾಡದೆ, ಸಂಸದರಿಗೆ ಕಾರ್ಯಸೂಚಿಯನ್ನೂ ತಿಳಿಸದೆ ಈ ನಿರ್ಧಾರಕ್ಕೆ ಬರಲಾಗಿದೆ. ಇದು ಸರಿಯೇ?

ಎರಡನೆಯದಾಗಿ, ಲೋಕಸಭೆ ಮತ್ತು ವಿಧಾನಸಭೆಗಳಿಗೆ 2024ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸೋಣ– ಅದಕ್ಕೆ ಎಲ್ಲ ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸಬೇಕಾಗುತ್ತದೆ. ಕರ್ನಾಟಕ ವಿಧಾನಸಭೆಗೆ ಮೂರೇ ತಿಂಗಳ ಹಿಂದೆ ಚುನಾವಣೆ ನಡೆದಿದೆ. ಸಹಜವಾಗಿಯೇ ವಿಧಾನಸಭೆ ವಿಸರ್ಜನೆಗೆ ರಾಜ್ಯಗಳಿಂದ ಪ್ರತಿರೋಧ ಬಂದೇ ಬರುತ್ತದೆ. ಕೇಂದ್ರ ಸರ್ಕಾರವು ವ್ಯಾಪಕವಾದ ಸಮಾಲೋಚನೆ ಇಲ್ಲದೆ ಈ ಪ್ರಸ್ತಾವವನ್ನು ಹೇರಿದರೆ ಕನಿಷ್ಠ ಪಕ್ಷ ಅಲ್ಪಾವಧಿಯಲ್ಲಾದರೂ ಸಾಮಾಜಿಕ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆ ಉಂಟಾಗಬಹುದು.

ದುರದೃಷ್ಟಕರ ಸಂಗತಿ ಎಂದರೆ, ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂವಾದ ಹಾಗೂ ಸುಲಲಿತ ಸಂವಹನಕ್ಕಾಗಿ ಇದ್ದ ಎಲ್ಲ ಸಾಂಸ್ಥಿಕ ವೇದಿಕೆಗಳು ಮೋದಿ ಯುಗದಲ್ಲಿ ಸ್ಥಗಿತಗೊಂಡಿವೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡಿದ್ದ ನಾನು ಆಗಿನ ಪ್ರಧಾನಿಯು ರಾಷ್ಟ್ರೀಯ ಅಭಿವೃದ್ಧಿ ಪರಿಷತ್‌, ಅಂತರ್‌ ರಾಜ್ಯ ಪರಿಷತ್‌, ಮುಖ್ಯಮಂತ್ರಿಗಳ ಸಮಾವೇಶಗಳು ಮತ್ತು ಸರ್ವಪಕ್ಷ ಸಭೆಗಳನ್ನು ಬಿಜೆಪಿಯೇತರ ಪಕ್ಷಗಳ ನಾಯಕರ ವಿಶ್ವಾಸ ಮತ್ತು ಬೆಂಬಲ ಪಡೆದುಕೊಳ್ಳಲು ಹೇಗೆ ಬಳಸಿಕೊಂಡಿದ್ದರು ಎಂಬುದನ್ನು ನೋಡಿದ್ದೇನೆ. ಅವೆಲ್ಲವೂ ಈಗ ಇತಿಹಾಸವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧವು ಯಾವತ್ತೂ ಈಗಿನಷ್ಟು ವಿಷಮಕರವಾಗಿ ಇರಲಿಲ್ಲ.

‘ಟೀಮ್‌ ಇಂಡಿಯಾ = ಪ್ರಧಾನಿ + ಮುಖ್ಯಮಂತ್ರಿಗಳು’ ಎಂದು ಮೋದಿ ಅವರು 2014ರಲ್ಲಿ ಹೇಳುವ ಮೂಲಕ ಸಹಕಾರಿ ಒಕ್ಕೂಟವಾದವನ್ನು ಬಲಪಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಈಗ ಟೀಮ್‌ ಇಲ್ಲ ಕ್ಯಾಪ್ಟನ್‌ ಮಾತ್ರ ಇದ್ದಾರೆ. ಹಾಗಾಗಿಯೇ ಅವರಿಗೆ ಬೇಕಿರುವುದು ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ ಎಂಬುದು ಎಂದು ಟೀಕಾಕಾರರು ಹೇಳುತ್ತಿದ್ದಾರೆ. ಮೂರನೆಯದಾಗಿ, ಮೋದಿ ಸರ್ಕಾರವು ನೇಮಿಸಿರುವ ಸಮಿತಿಯು ವಿಶ್ವಾಸ ಮೂಡಿಸುವ ರೀತಿಯಲ್ಲಿ ಇಲ್ಲ. ಬಿಜೆಪಿಯೇತರ ಪಕ್ಷಗಳಿಗೆ ಪ್ರಾತಿನಿಧ್ಯ ಇಲ್ಲ. ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ಸಮಿತಿಯಲ್ಲಿ ಇರಲು ನಿರಾಕರಿಸಿದ್ದಾರೆ. ಅಂತಿಮ ನಿರ್ಧಾರ ಏನಾಗಿರಬೇಕು ಎಂಬುದನ್ನು ಖಾತರಿಪಡಿಸುವಂತೆ ಈ ಸಮಿತಿಗೆ ನೀಡಲಾದ ನಿಯಮ ನಿಬಂಧನೆಗಳು ಇವೆ, ಹಾಗಾಗಿ ಈ ಇಡೀ ಪ್ರಕ್ರಿಯೆಯೇ ಕಣ್ಣೊರೆಸುವ ತಂತ್ರ ಎಂದು ಅವರು ಆರೋಪಿಸಿದ್ದಾರೆ.

ಪ್ರಖ್ಯಾತ ಸಂವಿಧಾನ ತಜ್ಞ ಸುಭಾಷ್‌ ಕಶ್ಯಪ್‌ ಅವರನ್ನು ಬಿಟ್ಟರೆ (ಅವರಿಗೆ 94 ವರ್ಷ ವಯಸ್ಸು), ಸಮಿತಿಯಲ್ಲಿರುವ ಸರ್ಕಾರದ ಹೊರಗಿನ ಸದಸ್ಯರಿಗೆ ರಾಜಕೀಯ ಕುಶಾಗ್ರಮತಿಯೂ ಇಲ್ಲ, ಸಾಮಾನ್ಯ ಜನರ ಜೊತೆಗೆ ಸಂಪರ್ಕವೂ ಇಲ್ಲ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದಾಗಿ ರಾಜಕೀಯ ಮತ್ತು ರಾಜಕೀಯೇತರವಾದ ಎಲ್ಲರನ್ನೂ ಸಂಪರ್ಕಿಸುವ ಕೆಲಸವು ಇನ್ನೂ ಕಠಿಣವಾಯಿತು. ವಿವಾದಾತ್ಮಕವಾಗಬಹುದಾದ ರಾಜಕೀಯ ಚಟುವಟಿಕೆಯೊಂದರಲ್ಲಿ ಕೋವಿಂದ್‌ ಅವರು ಭಾಗಿಯಾಗುವಂತೆ ಕೇಂದ್ರ ಸರ್ಕಾರ ಮಾಡಿದ್ದೇ ಸರಿಯಾದ ಕ್ರಮ ಅಲ್ಲ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ (ರಾಜಕೀಯೇತರವೂ ಹೌದು) ಕೋವಿಂದ್‌ ಅವರು ವಿವಾದಗಳಿಂದ ದೂರವೇ ಇರಬೇಕಾದ ಅಗತ್ಯ ಇದೆ.

ಒಂದು ದೇಶ, ಒಂದು ಚುನಾವಣೆ ಪ್ರಸ್ತಾವವನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿ ಸರ್ಕಾರವು ಕೆಲ ತಿಂಗಳ ಹಿಂದಿನಿಂದಲೇ ಕೆಲಸ ಆರಂಭಿಸಿದೆ ಎಂಬ ವಿಶ್ವಾಸಾರ್ಹ ವರದಿಗಳು ಇವೆ. ಹೀಗಿರುವಾಗ ಕೋವಿಂದ್ ಅವರನ್ನು ಸಮಿತಿಗೆ ಮುಖ್ಯಸ್ಥರನ್ನಾಗಿಸಿದ್ದು ಇನ್ನಷ್ಟು ಅಸಮಂಜಸ ಅನಿಸಿಕೊಳ್ಳುತ್ತದೆ. ಒಟ್ಟಿನಲ್ಲಿ, ಒಂದು ಉತ್ತಮ ಯೋಚನೆಯನ್ನು ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ಹೇರುವ ಪ್ರಯತ್ನ ನಡೆಯುತ್ತಿದೆ.

_________________________________

ಲೇಖಕ: ರಾಜಕೀಯ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT