ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪನ್‌ ಬುಕ್‌ ಎಕ್ಸಾಮ್‌: ಮಕ್ಕಳ ‘ಬಿಡುಗಡೆ’ಗೆ ಹಾದಿ

Last Updated 26 ಜೂನ್ 2018, 19:59 IST
ಅಕ್ಷರ ಗಾತ್ರ

‘ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ (ಓಪನ್‌ ಬುಕ್‌ ಎಕ್ಸಾಮ್‌) ವ್ಯವಸ್ಥೆಯನ್ನು ಜಾರಿಗೆ ತರುವ ಚಿಂತನೆ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಈಚೆಗೆ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದ ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಸಂದರ್ಭದಲ್ಲಿ ಈ ಅಂಶವನ್ನು ಸಹ ಪರಿಗಣಿಸಲಾಗಿದೆ. ಸಚಿವರು ಪ್ರಸ್ತಾಪಿಸಿರುವ ಹೊಸ ವ್ಯವಸ್ಥೆಯು ಜಾರಿಯಾದರೆ ಪ್ರಾಥಮಿಕ ಶಾಲೆಯ ಮಕ್ಕಳು ಪರೀಕ್ಷೆಯ ಸಂದರ್ಭದಲ್ಲಿ ಅವಶ್ಯಕತೆ ಉಂಟಾದರೆ ತರಗತಿಯ ಟಿಪ್ಪಣಿಗಳು, ಪಠ್ಯಪುಸ್ತಕ ಅಥವಾ ಇನ್ನಿತರ ಬೋಧನ ಸಲಕರಣೆಗಳನ್ನು ಬಳಸಿಕೊಳ್ಳಬಹುದು. ಮಕ್ಕಳಲ್ಲಿ ಮೂಡುವ ಪರೀಕ್ಷಾ ಭೀತಿ, ವರ್ಷಗಟ್ಟಲೆ ಪಠ್ಯವನ್ನು ಕಂಠಪಾಠ ಮಾಡುವ ಅನಿವಾರ್ಯ ಮತ್ತು ಶಿಕ್ಷೆಯಿಂದ ಮಕ್ಕಳನ್ನು ಈ ವ್ಯವಸ್ಥೆ ಪಾರು ಮಾಡುತ್ತದೆ. ರೂಢಿಗತ ವ್ಯಾಸಂಗ ಕ್ರಮವನ್ನು ಬದಲಾಯಿಸುವಲ್ಲಿ ‘ಓಪನ್‌ ಬುಕ್‌ ಪರೀಕ್ಷಾ ಪದ್ಧತಿ’ ಸಹಕಾರಿಯಾಗುತ್ತದೆ. ಈ ಪದ್ಧತಿಯಿಂದ ಪುಟ್ಟ ಮಕ್ಕಳು ವ್ಯಾಕರಣ, ಕಾಗುಣಿತ ದೋಷಗಳ ಕುರಿತಾಗಿ ಅತಿಯಾಗಿ ತಲೆಕೆಡಿಸಿಕೊಳ್ಳದೆ, ವಿಷಯದ ಮೇಲೆ ಕಲಿಕೆಯನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಓಪನ್‌ ಬುಕ್‌ ಪರೀಕ್ಷಾ ವ್ಯವಸ್ಥೆಗೆ ಇನ್ನೊಂದು ಆಯಾಮವಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಿಕ್ಷಣವು ಈಗಿನ ‘ಶಿಕ್ಷಕ ಕೇಂದ್ರಿತ’ ವ್ಯವಸ್ಥೆಯಿಂದ ಮಕ್ಕಳ ಕೇಂದ್ರಿತ ವ್ಯವಸ್ಥೆಯೆಡೆಗೆ ಹೊರಳಲು ಇದು ಮುನ್ನುಡಿಯಾಗಲಿದೆ. ಆಗ ತರಗತಿಗಳ ಹೊರೆ ಕಡಿಮೆಯಾಗಿ, ಪರೀಕ್ಷೆಗಳೂ ಕಡಿಮೆಯಾಗುತ್ತವೆ. ಕಲಿಕೆ ಹೆಚ್ಚುತ್ತಾ ಹೋಗುತ್ತದೆ. ಇದರ ಮುಂದುವರೆದ ಭಾಗವಾಗಿ ಕಲಿಕಾ ವಿಷಯ ಕುರಿತಾದ ಒಳನೋಟ, ಗಹನತೆ ಮತ್ತು ಆಳ ಹೆಚ್ಚುತ್ತದೆ. ಮುಖ್ಯವಾಗಿ ಮಕ್ಕಳು ಮನೆಪಾಠದ ಹಿಂಸೆಯಿಂದ ಮುಕ್ತರಾಗುತ್ತಾರೆ.

‘ಓಪನ್‌ ಬುಕ್‌ ಪರೀಕ್ಷಾ ಪದ್ಧತಿ’ ಮೊದಲ ಹಂತದಲ್ಲಿ ಯಶಸ್ವಿಯಾದರೆ ಮುಂದಿನ ಹಂತಗಳಾದ ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆಗಳನ್ನು ತರಬಹುದು. ಆನಂತರದ ಹಂತವಾಗಿ ಮಕ್ಕಳನ್ನು ಇಡೀ ಪರೀಕ್ಷಾ ವ್ಯವಸ್ಥೆಯಿಂದಲೇ ಬಿಡುಗಡೆಗೊಳಿಸುವ ದಿಕ್ಕಿನಲ್ಲಿ ಶಿಕ್ಷಣ ಪದ್ಧತಿ ರೂಪಿಸಬಹುದು.

ಶಿಕ್ಷಣ ಸಚಿವರ ಈ ಪ್ರಸ್ತಾವ ಸ್ವಾಗತಾರ್ಹ ಮತ್ತು ಈ ಪದ್ಧತಿಯು ಮಕ್ಕಳನ್ನು ಪರೀಕ್ಷೆ ಎನ್ನುವ ಜೈಲಿನಿಂದ (ಸಿ.ಸಿ. ಟಿ.ವಿ. ಕ್ಯಾಮೆರಾ, ಕಣ್ಗಾವಲು, ಪಹರೆ) ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎನ್ನುವುದರಲ್ಲಿ ಅನುಮಾನವಿಲ್ಲ.

ಸಚಿವರ ಹೇಳಿಕೆಯ ಪರ– ವಿರೋಧ ಚರ್ಚೆಗಳು ನಡೆಯುತ್ತಿವೆ. ಇದನ್ನು ವಿರೋಧಿಸುವ ಭರದಲ್ಲಿ ಕೆಲವರು ಜಾತಿವಾದಿ ಮನಸ್ಥಿತಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಅಸಮಾನತೆಯನ್ನು ಕೊನೆಗಾಣಿಸುವ ಮೀಸಲಾತಿಯ ಆಶಯಗಳನ್ನು ಪ್ರಸ್ತಾಪಿಸಿ ಗೇಲಿ ಮಾಡುತ್ತಿದ್ದಾರೆ. ಇದು ಖಂಡನೀಯ.
ಬಿ. ಶ್ರೀಪಾದ ಭಟ್, ಬೆಂಗಳೂರು
*

ಗೇಲಿ ಸರಿಯಲ್ಲ
ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯಲು ಮಕ್ಕಳಿಗೆ ಅವಕಾಶ ನೀಡಬೇಕೆಂಬ ಶಿಕ್ಷಣ ಸಚಿವರ ಸಲಹೆಯನ್ನು ಅನೇಕರು ಗೇಲಿ ಮಾಡುತ್ತಿದ್ದಾರೆ. ಇದು ಪ್ರಬುದ್ಧ ಸಮಾಜದ ಲಕ್ಷಣವಲ್ಲ!

ಪರೀಕ್ಷೆಯಲ್ಲಿ ಪಠ್ಯಪುಸ್ತಕ ಅಥವಾ ಇತರ ಮಾಹಿತಿ ಆಕರಗಳನ್ನು ಬಳಸುವುದು ಹಾಸ್ಯಾಸ್ಪದವಲ್ಲ. ಹೊಸ ವ್ಯವಸ್ಥೆ ಜಾರಿಯಾದರೆ ಪ್ರತೀ ಪಾಠದ ಕೊನೆಯಲ್ಲಿ ‘ಅಭ್ಯಾಸ’ ಎಂದು ಕೊಡುವ ಪ್ರಶ್ನೆಗಳನ್ನೇ ಪರೀಕ್ಷೆಯಲ್ಲಿ ಕೇಳಲಾಗುವುದಿಲ್ಲ. ‘ಇಂಥ ಪ್ರಶ್ನೆಗೆ ಇಷ್ಟಿಷ್ಟು ಉತ್ತರ’ ಎಂದು ಪುಸ್ತಕದಲ್ಲಿ ಗುರುತು ಹಾಕಿಕೊಂಡು ಉರು ಹೊಡೆಯುವುದು ವಿದ್ಯಾಭ್ಯಾಸವಲ್ಲ. ಪಠ್ಯಪುಸ್ತಕ ಕೊಟ್ಟರೂ ಪ್ರಶ್ನೆ ಬೇರೆಯೇ ರೀತಿಯಲ್ಲಿ ಇರುವುದರಿಂದ, ಗುರುತು ಹಾಕಿಟ್ಟುಕೊಂಡ ಭಾಗವನ್ನು ‘ಕಾ’, ‘ಕೂ’ ಬಿಡದೆ ಬಟ್ಟಿಯಿಳಿಸುವುದು ಸಾಧ್ಯವಾಗುವುದಿಲ್ಲ. ಮಗ್ಗಿ ಜ್ಞಾಪಿಸಿಕೊಳ್ಳುತ್ತಾ ಕಾಲಹರಣ ಮಾಡುವ ಬದಲು ಕ್ಯಾಲ್ಕುಲೇಟರ್ ಬಳಸುವಂತೆ ಅಷ್ಟೇ. ಅದರಿಂದ ಮಾಹಿತಿ ಎತ್ತಿಕೊಂಡರೂ ಸಂದರ್ಭಕ್ಕೆ ತಕ್ಕಂತೆ ಅದರ ಬಳಕೆ ಹೇಗೆ ಎಂಬುದನ್ನು ವಿದ್ಯಾರ್ಥಿ ತಿಳಿದಿರಬೇಕು. ಕಲಿಕೆಯ ನಿಜವಾದ ಉದ್ದೇಶವೇ ವ್ಯಕ್ತಿತ್ವದಲ್ಲಿ ವಿವೇಚನೆ, ಕೌಶಲ ಮತ್ತು ಸ್ವಂತಿಕೆಯನ್ನು ಮೂಡಿಸುವುದು. ‘ಮಾಹಿತಿ ಸಂಗ್ರಹ ಮತ್ತು ಸ್ಮರಣ ಶಕ್ತಿಯೇ ಶಿಕ್ಷಣದ ಪರಮ ಗುರಿ’ ಎನ್ನುವುದು ಶಿಕ್ಷಣವನ್ನು ಕುರಿತು ಅಕ್ಷರಸ್ಥರಲ್ಲಿ ಇರುವ ಅಜ್ಞಾನ!
ಆರ್.ಕೆ. ದಿವಾಕರ, ಬೆಂಗಳೂರು
*

ಸ್ವಾಗತಾರ್ಹ ಚಿಂತನೆ

ಪುಸ್ತಕ ನೋಡಿ ಉತ್ತರ ಬರೆಯಲು ಅವಕಾಶ ಕೊಡುವ ಚಿಂತನೆ ಉತ್ತಮವಾದುದು. ಸದ್ಯದ ಶಿಕ್ಷಣ ಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾಠಬೋಧನೆ ಮೂಲಕ ತಾವು ಗ್ರಹಿಸಿದ್ದನ್ನು ಕಂಠಪಾಠ ಮಾಡಿ ಅಥವಾ ನಿರಂತರ ಅಭ್ಯಾಸದ ಮೂಲಕ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯ ಸಂದರ್ಭದಲ್ಲಿ ಬರೆಯಬೇಕು. ಇದೊಂದು ಯಾಂತ್ರಿಕ ಪದ್ಧತಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳ ಅಭ್ಯಾಸ, ನೆನಪಿನ ಶಕ್ತಿಗಳೇ ಅಂಕ ಗಳಿಕೆಗೆ ಮಾನದಂಡವಾಗಿವೆ. ಮಕ್ಕಳ ಯೋಚನಾ ಶಕ್ತಿ, ವಿಶ್ಲೇಷಣಾ ಸಾಮರ್ಥ್ಯಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಓಪನ್‌ ಬುಕ್‌ ಪರೀಕ್ಷಾ ಪದ್ಧತಿ ಜಾರಿಯಾದಲ್ಲಿ ವಿದ್ಯಾರ್ಥಿಗಳಲ್ಲಿ ಆಲೋಚಿಸುವ, ಉತ್ತರ ಹುಡುಕುವ, ಸರಿ– ತಪ್ಪುಗಳನ್ನು ವಿವೇಚಿಸುವ ಕೌಶಲ ವೃದ್ಧಿಯಾಗಿ ಪರೀಕ್ಷಾ ಭಯ ಕೂಡ ಮಾಯವಾಗುತ್ತದೆ.

ಈ ವ್ಯವಸ್ಥೆ ಮಕ್ಕಳ ಕಲಿಕಾ ಮಟ್ಟವನ್ನೂ ಹೆಚ್ಚಿಸಬಲ್ಲದು. ಹಾಗಾಗಿ ಅಂತಹ ವ್ಯವಸ್ಥೆ ಜಾರಿ ಮಾಡುವುದು ಅಗತ್ಯ. ಈ ಚಿಂತನೆ ಸ್ವಾಗತಾರ್ಹ.
ಅಪ್ಪಗೆರೆ ಡಿ.ಟಿ. ಲಂಕೇಶ್, ಚನ್ನಪಟ್ಟಣ
*

ಬಾಲಿಶ ಹೇಳಿಕೆ
ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಕೊಡುವ ವ್ಯವಸ್ಥೆ ಬಾಲಿಶವಾದುದು. ಪ್ರೌಢ ಶಿಕ್ಷಣ ಸಚಿವರು ಮಕ್ಕಳ ಶಿಕ್ಷಣವನ್ನು ಲಘುವಾಗಿ ಪರಿಗಣಿಸಿದಂತೆ ಅವರ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ಈ ರೀತಿ ಪರೀಕ್ಷೆ ನಡೆಸುವ ಬದಲು, ಪರೀಕ್ಷೆಗಳನ್ನೇ ರದ್ದು ಮಾಡುವುದು ಸೂಕ್ತವಲ್ಲವೇ? ಕಾಗದ ಹಾಗೂ ಸಮಯ ಉಳಿತಾಯವಾಗುತ್ತದೆ!

ಇದು ಸ್ಪರ್ಧಾತ್ಮಕ ಯುಗ. ಶಿಕ್ಷಣವನ್ನು ಇಷ್ಟು ಲಘುವಾಗಿ ಪರಿಗಣಿಸಿದರೆ, ಮುಂದೆ ಮಕ್ಕಳು ಸ್ಪರ್ಧೆಯನ್ನು ಎದುರಿಸಿ ಬಾಳಿ–ಬದುಕಲು ಸಾಧ್ಯವೇ? ಆಟ ಆಡಿಸದೆಯೇ ಎರಡೂ ತಂಡಗಳಿಗೆ ಪ್ರಶಸ್ತಿ ಕೊಡುವುದು ಹೇಗೆ ಬಾಲಿಶವೋ, ಈ ಚಿಂತನೆಯೂ ಅಷ್ಟೇ ಬಾಲಿಶ. ಇಂಥ ಯೋಚನೆಯನ್ನು ಬಿಟ್ಟು, ಭ್ರಷ್ಟತೆಗೆ ಕಡಿವಾಣ ಹಾಕಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಚಿವರು ಪಣ ತೊಡಲಿ.
ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT