ಬುಧವಾರ, ಡಿಸೆಂಬರ್ 7, 2022
23 °C

ಚರ್ಚೆ | ಸಂಘರ್ಷವು ಅರ್ಥಹೀನ; ಸಂಘಕ್ಕೆ ಸಾಮರಸ್ಯವೇ ಮಂತ್ರ

ಡಾ. ಆರ್‌. ಬಾಲಾಶಂಕರ್‌ Updated:

ಅಕ್ಷರ ಗಾತ್ರ : | |

ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು ಈಗ ಒಂದು ಕ್ಲೀಷೆ ಆಗಿಬಿಟ್ಟಿದೆ. ಕೆಲವು ಬಾಯಿಬಡುಕ ವ್ಯಕ್ತಿಗಳು ಪ್ರಚಾರದ ಹುಚ್ಚಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿರುತ್ತಾರೆ... ಸತ್ಯ ಏನೆಂದರೆ, ಸಾಮರಸ್ಯ, ಸಂವಾದ ಮತ್ತು ಸಮಸ್ಯೆಗಳ ಶಾಂತಿಯುತ ಪರಿಹಾರದ ಪರವಾಗಿಯೇ ಸಂಘವು ಸದಾ ಇದೆ.

ಗುಂಪು ಹಲ್ಲೆ ಮಾಡುವುದು ಮತ್ತು ದೇಶಪ್ರೇಮಿಗಳಲ್ಲದ ಜನರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಅತಿರೇಕದ ಪ್ರತಿಕ್ರಿಯೆಗಳಿಗೆ ಸಂಬಂಧಿಸಿ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ ಭಾಗವತ್‌ ಅವರು ನೀಡಿರುವ ಹೇಳಿಕೆಯಲ್ಲಿ ಗೊಂದಲಕಾರಿಯಾದುದು  ಏನೂ ಇಲ್ಲ. ಇಂತಹ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮೃದು, ಒಳಗೊಳ್ಳುವಿಕೆಯ, ರಾಜಿ ಮನೋಭಾವದ ಹಾಗೂ ಸಕಾರಾತ್ಮಕವಾದ ಧೋರಣೆಯನ್ನೇ ಹೊಂದಿದ್ದಾರೆ. ಆರ್‌ಎಸ್‌ಎಸ್‌ ಅಥವಾ ಬಿಜೆಪಿ ಅಥವಾ ಇನ್ನಾವುದೇ ಅಂಗ ಸಂಸ್ಥೆಯು ಇಂತಹ ಯಾವುದಾದರೂ ವಿಚಾರಗಳ ಬಗ್ಗೆ ಪ್ರಚೋದನಕಾರಿ ನಿಲುವಿಗೆ ಉತ್ತೇಜನ ನೀಡಿದೆ ಎಂದು ಹೇಳುವುದೇ ರಾಷ್ಟ್ರೀಯವಾದಿಯಾದ ಈ ಮುಖ್ಯವಾಹಿನಿಯ ಸಂಘಟನೆಗಳಿಗೆ ಮಸಿ ಬಳಿಯುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ; ದೇಶದಲ್ಲಿ ಕೋಮು ವಿಭಜನೆ ಮೂಡಿಸುವ ಉದ್ದೇಶದ್ದಾಗಿದೆ. 

ಬಿಜೆಪಿ ಆಳ್ವಿಕೆ ಇರುವ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಯೋಜನೆಯ ಜಾರಿಯಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿರುವ ಒಂದೇ ಒಂದು ಉದಾಹರಣೆ ಇಲ್ಲ. ಹಾಗಿದ್ದರೂ, ಸಂಘ ಪರಿವಾರವು ಮುಸ್ಲಿಂ ವಿರೋಧಿ ಮತ್ತು ಕೋಮುವಾದಿ ಎಂದು ಬಿಂಬಿಸುವ ವ್ಯವಸ್ಥಿತ ಹುನ್ನಾರವೊಂದು ನಡೆಯುತ್ತಿದೆ. ಮೋಹನ ಭಾಗವತ್‌ ಅವರ ಹೇಳಿಕೆಯ ಬಗೆಗಿನ ಈ ಚರ್ಚೆಯನ್ನು ಕೂಡ ಈ ಭಿತ್ತಿಯಲ್ಲಿ ಇರಿಸಿಯೇ ನೋಡಬೇಕಾಗುತ್ತದೆ. 

ಬಿಜೆಪಿ ನೇತೃತ್ವದ ಸರ್ಕಾರವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಿಂದ ವರದಿಯಾದ ಮೊದಲ ದನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮೋಹನ ಭಾಗವತ್‌ ಖಂಡಿಸಿದ್ದರು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದಿದ್ದರು. ಬಿಜೆಪಿ ಆಳ್ವಿಕೆಯ ರಾಜ್ಯಗಳು ಮತ್ತು ಸಂಘವು ಹೊಂದಿರುವ ಸಂದೇಹಕ್ಕೆ ಆಸ್ಪದ ಇಲ್ಲದ ರೀತಿಯ ನಿಲುವು ಈ ಅಪರಾಧದ ಹಿಂದಿನ ಷಡ್ಯಂತ್ರವನ್ನು ಬಯಲಿಗೆ ಎಳೆದಿದೆ. ಅಲ್ಲೊಂದು ಇಲ್ಲೊಂದು ಪ್ರಚೋದನಕಾರಿ ಹೇಳಿಕೆಗಳನ್ನು ಕೆಲವು ವ್ಯಕ್ತಿಗಳು ನೀಡಿದ್ದಿದೆ ಮತ್ತು ಅಂಥವರಿಗೆ ಕಠಿಣ ಎಚ್ಚರಿಕೆಯನ್ನೂ ನೀಡಲಾಗಿದೆ. ಇದೊಂದು ಕಾರ್ಯತಂತ್ರ ಏನಲ್ಲ. ಮೋದಿ ನೇತೃತ್ವದ ಹೊಸ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದಲೇ ರಾಜಕೀಯ ಪ್ರತಿಸ್ಪರ್ಧಿಗಳು ನಡೆಸಿದ ಹುನ್ನಾರದ ಭಾಗವಾಗಿ ಈ ಹಿಂಸಾಚಾರ ನಡೆದಿದೆ ಎಂಬುದು ಮೊದಲ ಘಟನೆಯಲ್ಲಿಯೇ ಸ್ಪಷ್ಟವಾಗಿತ್ತು. 

ಹಾಗೆ ನೋಡಿದರೆ, ಭಾಗವತ್‌ ಅವರ ಹೇಳಿಕೆಯ ಸಮಯವೇ ಚರ್ಚೆಯ ಕಿಡಿ ಹಚ್ಚಿದೆ. ಇತ್ತೀಚೆಗಂತೂ ದೇಶದಲ್ಲಿ ಗುಂಪು ಹಲ್ಲೆಯ ಪ್ರಕರಣವೇ ನಡೆದಿಲ್ಲ. ಅದೇ ರೀತಿಯಲ್ಲಿ, ಮುಸ್ಲಿಮರ ವಿರುದ್ಧ ಪ್ರಚೋದನಕಾರಿಯಾದ ಹೇಳಿಕೆಯನ್ನು ಇತ್ತೀಚೆಗಂತೂ ಯಾರೂ ನೀಡಿಲ್ಲ. ಮುಸ್ಲಿಮರಲ್ಲಿ ಬಹುಸಂಖ್ಯಾತರು ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಖುಷಿಯಾಗಿದ್ದಾರೆ ಎಂದು ಇತ್ತೀಚಿನ ಪ್ಯೂ ಸಂಶೋಧನಾ ವರದಿಯೂ ಹೇಳಿದೆ. ಮೋದಿ ನೇತೃತ್ವದ ಸರ್ಕಾರವು 2019ರಲ್ಲಿ ಪುನರಾಯ್ಕೆ ಆಗುವುದರೊಂದಿಗೆ ಜಾನುವಾರು ಕಳ್ಳಸಾಗಾಟದ ಕಾರಣಕ್ಕೆ ಹಲ್ಲೆ, ಚರ್ಚ್‌ಗಳ ಮೇಲೆ ದಾಳಿಗಳೆಲ್ಲ ನಿಂತು ಹೋದವು. ಇದು ವಾಸ್ತವ ಅಲ್ಲ, ವಿರೋಧ ಪಕ್ಷಗಳ ಅಪಪ್ರಚಾರ ಎನ್ನುವುದು ಜನರಿಗೆ ಅರಿವಾಗಿದೆ. 

ಭಾರತದಂತಹ ದೊಡ್ಡ ದೇಶದ ಮೂರು ಅಥವಾ ನಾಲ್ಕು ರಾಜ್ಯಗಳಲ್ಲಿ ನಡೆದ ಕೆಲವೇ ಕೆಲವು ಗುಂಪು ಹಲ್ಲೆ ಘಟನೆಗಳಿಗೆ ಕೇಂದ್ರ ಸರ್ಕಾರವನ್ನು ದೂಷಿಸಲು ಆಗದು. ಆದರೆ, ಗೋ ಹತ್ಯೆಯು ಹಿಂದೂಗಳಿಗೆ ಯಾವಾಗಲೂ ಭಾವನಾತ್ಮಕವಾದ ವಿಚಾರವೇ ಆಗಿದೆ. ಗಾಂಧಿ–ಜಿನ್ನಾ ನಡುವೆ 1916ರಲ್ಲಿ ನಡೆದ ಲಖನೌ ಒಪ್ಪಂದದಲ್ಲಿ ಇದ್ದ 16 ಅಂಶಗಳಲ್ಲಿ ಮಾಂಸಕ್ಕಾಗಿ ಮುಸ್ಲಿಮರು ಗೋಹತ್ಯೆ  ಮಾಡುವುದನ್ನು ನಿಷೇಧಿಸುವುದೂ ಸೇರಿತ್ತು. 


-ಡಾ. ಆರ್‌. ಬಾಲಾಶಂಕರ್‌

ದೇಶ ವಿಭಜನೆ ನಂತರ ಮುಸ್ಲಿಮರಿಗೆ ಆಯ್ಕೆ ಇತ್ತು. ಎರಡು ದೇಶ ಸಿದ್ಧಾಂತದಲ್ಲಿ ನಂಬಿಕೆ ಇದ್ದವರೆಲ್ಲ ಪಾಕಿಸ್ತಾನಕ್ಕೆ ಹೋಗಿದ್ದಾರೆ ಎಂದು ಭಾವಿಸಲಾಗಿದೆ. ಇಲ್ಲಿ ಉಳಿದವರು ಒಂದು ಭಾರತ–ಒಂದು ಜನ ಎಂಬ ಸಮಗ್ರ ಸಂಸ್ಕೃತಿಯಲ್ಲಿ ನಂಬಿಕೆ ಇದ್ದವರು. ಇದುವೇ ಸಂಘದ ನಂಬಿಕೆಯ ತಿರುಳು. ಹಾಗಾಗಿಯೇ, ಎಂದೋ ತೀರ್ಮಾನ ಆಗಿರುವ ವಿಚಾರವನ್ನು ಮತ್ತೆ ಕೆದಕುವುದು ಬೇಡ ಎಂದು ಭಾಗವತ್‌ ಹೇಳಿದ್ದಾರೆ. ಭಾರತದ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿ ಕೂಡ, ಇಲ್ಲಿನ ಹಿಂದೂವಿನಷ್ಟೇ ಭಾರತೀಯ ಎಂದೇ ಪರಿಗಣಿಸಲಾಗುತ್ತಿದೆ. ಅದುವೇ ಭಾಗವತ್‌ ಅವರ ಕರೆಯಲ್ಲಿಯೂ ಇದ್ದ ಅಂಶ. 

ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು ಈಗ ಒಂದು ಕ್ಲೀಷೆ ಆಗಿಬಿಟ್ಟಿದೆ. ಕೆಲವು ಬಾಯಿಬಡುಕ ವ್ಯಕ್ತಿಗಳು ಪ್ರಚಾರದ ಹುಚ್ಚಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿರುತ್ತಾರೆ. ಅಂತಹ ವ್ಯಕ್ತಿಗಳು ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ಭಾರತ ರಾಷ್ಟ್ರೀಯತೆ ಮತ್ತು ಪೌರತ್ವದ ವಿಚಾರದಲ್ಲಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ, ದಾಖಲಿಸಲಾದ ನಿಲುವನ್ನು ಸಂಘವು ಹೊಂದಿದೆ.  ಭಾರತವನ್ನು ತಾಯ್ನಾಡು ಎಂದು ಪರಿಗಣಿಸುವವರು ಮತ್ತು ಇಲ್ಲಿನ ಭೂ– ಸಂಸ್ಕೃತಿಗೆ ನಿಷ್ಠರಾಗಿರುವ ಎಲ್ಲರೂ ಈ ದೇಶದ ಪೌರರೇ. ಸಂಘದ ನಿಲುವು ಭೂ–ಸಾಂಸ್ಕೃತಿಕ ಮತ್ತು ಭೂ–ರಾಜಕೀಯ ಎರಡೂ ಆಗಿದೆ. ಇದು ರಾಜಕೀಯವಾಗಿ ಅನುಕೂಲಸಿಂಧುವಾದ ಅಥವಾ ರಾಜಕೀಯವಾಗಿ ಸರಿ ಎನಿಸಬಹುದಾದ ಚಿಂತನೆಯ ಮೇಲೆ ಆಧಾರಿತವಾಗಿರುವ ನಿಲುವು ಅಲ್ಲ. ಮೋಹನ ಭಾಗವತ್‌ ಅವರು ಬಿಜೆಪಿ ಅಧಿಕಾರದಲ್ಲಿರುವ ಕಾರಣಕ್ಕೆ ಅಲ್ಪಸಂಖ್ಯಾತರತ್ತ ಸ್ನೇಹಹಸ್ತ ಚಾಚಿ ದೊಡ್ಡ ಸುದ್ದಿಯಾಗುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲು ಆಗದು. ಸತ್ಯ ಏನೆಂದರೆ, ಸಾಮರಸ್ಯ, ಸಂವಾದ ಮತ್ತು ಸಮಸ್ಯೆಗಳ ಶಾಂತಿಯುತ ಪರಿಹಾರದ ಪರವಾಗಿಯೇ ಸಂಘವು ಸದಾ ಇದೆ. 

ಭಾರತದಂತಹ ನಿಜವಾದ ಪ್ರಜಾಸತ್ತಾತ್ಮಕ ದೇಶದಲ್ಲಿ ಯಾವುದೇ ವಿಚಾರವನ್ನು ಶಾಂತಿಯುತವಾಗಿಯೇ ಪರಿಹರಿಸಿಕೊಳ್ಳಬಹುದು. ತಮಗೆ ಇರುವ ಬೆಂಬಲ ಅತ್ಯಂತ ಸೀಮಿತ ಮತ್ತು ಪ್ರಜಾಸತ್ತಾತ್ಮಕ ಸಾಂಸ್ಥಿಕ ಚೌಕಟ್ಟು ತಮ್ಮ ಉದಾರವಾದಿಯಲ್ಲದ ನಿಲುವುಗಳನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಮಾವೋವಾದಿ ಸಂಘಟನೆಗಳು (ನಕ್ಸಲರು) ಮತ್ತು ಮುಸ್ಲಿಂ ಭಯೋತ್ಪಾದಕ ಸಂಘಟನೆಗಳು ಹಿಂಸೆಗೆ ಇಳಿಯುತ್ತವೆ. ಆದರೆ, ಸಂಘವು ಹಾಗೆ ಅಲ್ಲ. ಸಂಘದ್ದು ಮುಖ್ಯವಾಹಿನಿಯ ರಾಷ್ಟ್ರೀಯತಾ ಅಭಿಪ್ರಾಯವಾಗಿದೆ. ಹಾಗಾಗಿಯೇ ಭಾಗವತ್‌ ಅವರು ತಮ್ಮ ನಿಲುವನ್ನು ಆತ್ಮವಿಶ್ವಾಸದಿಂದಲೇ ವ್ಯಕ್ತಪಡಿಸಿದ್ದಾರೆ. ಸಂಘದ ಮೂಲ ನಿಲುವನ್ನು ಈ ಹೇಳಿಕೆ ಮೂಲಕ ಸಡಿಲಗೊಳಿಸಲಾಗಿದೆ ಎಂದು ಅರ್ಥೈಸಿಕೊಳ್ಳುವುದು ತಪ್ಪು ಗ್ರಹಿಕೆಯೇ ಆಗುತ್ತದೆ.

ಲೇಖಕ; ಪತ್ರಕರ್ತ ಮತ್ತು ‘ಆರ್ಗನೈಸರ್‌’ ಪತ್ರಿಕೆಯ ಮಾಜಿ ಸಂಪಾದಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು