ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಆರ್‌ಎಸ್‌ಎಸ್‌ ಬಗೆಗಿನ ಟೀಕೆಗೆ ವಿಮರ್ಶೆಯ ಬಡತನ ಕಾರಣವೇ?

Last Updated 15 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಆರ್‌ಎಸ್‌ಎಸ್‌ ಎಂಬುದು ಒಂದು ಕುಟುಂಬಕ್ಕಾಗಿ, ಒಂದು ಜಾತಿಗಾಗಿ, ಕೆಲವೇ ವ್ಯಕ್ತಿಗಳಿಗಾಗಿ ಕೆಲಸ ಮಾಡುವ ಸಂಸ್ಥೆಯಲ್ಲ. 1977ರಲ್ಲಿ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಮೇಲೆದ್ದು ಬಂದ ಸುನಾಮಿ ಲಕ್ಷಾಂತರ ಜನರ ಮಾರಣಹೋಮ ಮಾಡಿದಾಗ ಸೇನೆಯಷ್ಟೆ ಸಮರ್ಪಕವಾಗಿ ಪರಿಹಾರ ಕಾರ್ಯಗಳನ್ನು ಸಂಘ ಮಾಡಿತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಸಂಘದ ಕಾರ್ಯವನ್ನು ಪ್ರಶಂಸಿಸಿದ್ದರು

ರಾಷ್ಟ್ರೀಯ ಸ್ವಯಂಸೇವಕ ಸಂಘ 1925 ಸೆಪ್ಟೆಂಬರ್ 25ರ ವಿಜಯದಶಮಿಯಂದು ನಾಗಪುರದಲ್ಲಿ ಆರಂಭವಾದಾಗಿನಿಂದ ಇಂದಿನವರೆಗೆ ತನ್ನ ವೈಚಾರಿಕ ನಿಲುವಿಗೋಸ್ಕರ ಮತ್ತು ತಾನು ನಂಬಿದ ತತ್ವಗಳಿಗೋಸ್ಕರ ಒಂದಷ್ಟು ಸಂಘರ್ಷಗಳ ಮಧ್ಯೆಯೇ ಬೆಳೆದಿದೆ ಮತ್ತು ಕುಗ್ಗಿಸುತ್ತವೆ.

ಅಂದಿನಿಂದ ಇಲ್ಲಿಯವರೆಗೂ ಸಂಘವನ್ನು ಟೀಕಿಸುವವರೂ ಸಮರ್ಥಿಸುವವರೂ ಇದ್ದಾರೆ. ‘ವಸುದೈವ ಕುಟುಂಬಕಂ’ ಅಂದರೆ ಇಡೀ ಜಗತ್ತೇ ತನ್ನ ಕುಟುಂಬ, ಕುಟುಂಬದಲ್ಲಿರುವ ಎಲ್ಲರೂ ನನ್ನ ಬಂಧುಗಳು ಎಂಬ ಸೂತ್ರದಡಿ ವಿಶಾಲ ರೆಂಬೆ ಕೊಂಬೆಗಳನ್ನು ಚಾಚಿ ದೇಶ ಮಾತ್ರವಲ್ಲ; ಜಗತ್ತಿನೆಲ್ಲೆಡೆ ಆರ್‌ಎಸ್‌ಎಸ್‌ ಪಸರಿಸುತ್ತಿದೆ. ರಾಷ್ಟ್ರ ಪ್ರೇಮದ ಬೀಜವನ್ನು ಎಳೆಯ ಮಕ್ಕಳ ಹೃದಯದಲ್ಲಿ ಬಿತ್ತಿ, ರಾಷ್ಟ್ರ ಮೊದಲು ಎಂಬ ನಿಲುವನ್ನು ವೃಕ್ಷರೂಪದಲ್ಲಿ ಬೆಳೆಸುತ್ತದೆ. ಹೀಗಾಗಿ, ಸಂಘ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ ರಾಷ್ಟ್ರ ಭಕ್ತನಾಗಿ ರೂಪುಗೊಂಡು ವ್ಯಕ್ತಿತ್ವ ನಿರ್ಮಾಣದ ಜತೆಗೆ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ತನ್ನನ್ನೇ ಸಮರ್ಪಣೆ ಮಾಡಿಕೊಳ್ಳುವುದು ಸಂಘದ ಹೆಗ್ಗಳಿಕೆ.

ಹೀಗೆ ಅವಿಚ್ಛಿನ್ನ ಕೊಡುಗೆ ನೀಡುತ್ತಿರುವ ಆರ್‌ಎಸ್‌ಎಸ್‌ ಅನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯನವರು ಅಫ್ಗಾನಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ನಾಲ್ಕು ಸಾವಿರಕ್ಕೂ ಮಿಕ್ಕಿ ಕೆಎಎಸ್, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸಂಘ ಶಿಕ್ಷಣವನ್ನು ಪಡೆದವರು. ಬಸವರಾಜ ಬೊಮ್ಮಾಯಿಯವರ ಸರ್ಕಾರ ಇಂತಹ ಅಧಿಕಾರಿಗಳ ಮೂಲಕ ಹಿಂದುತ್ವದ ನೆಲೆಗಟ್ಟನ್ನು ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದುಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಇಂತಹ ಆಧಾರ ರಹಿತ ಆರೋಪಗಳು ಟೀಕೆ ಮಾಡುವ ವ್ಯಕ್ತಿಗಳ ವ್ಯಕ್ತಿತ್ವ ಕುಗ್ಗಿಸುತ್ತದೆ.

ರಾಷ್ಟ್ರದ ಉನ್ನತಿಗಾಗಿ ಸಮರ್ಪಣಾ ಮನೋಭಾವದ ಕಾರ್ಯವನ್ನು ಸಂಘಟಿಸಿ ಭಾರತವನ್ನು ಪರಮವೈಭವದತ್ತ ಕೊಂಡೊಯ್ಯುವ ಉದ್ದೇಶದಿಂದ ಕೇಶವ ಬಲಿರಾಂ ಹೆಡಗೆವಾರ್‌ ಅವರು ಸಂಘವನ್ನು ಸ್ಥಾಪಿಸಿದರು.

ಸಂಘದ ಎರಡನೆಯ ಸರಸಂಘ ಚಾಲಕರಾದ ಗುರೂಜಿಯವರನ್ನು ಚೀನಾ ಮತ್ತು ಭಾರತದ ಯುದ್ಧ ಸಂದರ್ಭದಲ್ಲಿ ದುಂಡುಮೇಜಿನ ಚರ್ಚೆಗಾಗಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರೂರವರೇ ಆಹ್ವಾನಿಸಿದ್ದರು. ಸಭೆಯಲ್ಲಿ ಮಾತು ಆರಂಭಿಸಿದ ಗುರೂಜಿಯವರು, ‘ಚೀನಾ ಸೇನೆ ಮುಂದಕ್ಕೆ ಬರುತ್ತಿದೆ ನಿಮ್ಮ ಸೇನೆ ಏನು ಮಾಡುತ್ತಿತ್ತು ಎಂದು ಹೇಳುವ ಬದಲು ನಮ್ಮ ಸೇನೆ ಏನು ಮಾಡುತ್ತಿತ್ತು ಎಂದು ಕೇಳಬಹುದು. ನಿಮ್ಮ ಸೇನೆ ಎಂದರೆ ಈ ದೇಶದ ಸೇನೆ. ನೆಹರೂರವರ ಸೇನೆಯಲ್ಲ. ನಮ್ಮದೇ ಅಂದರೆ ನಮ್ಮ ದೇಶದ ಸೇನೆ’ ಎಂದು ಹೇಳಿದಾಗ ಅಲ್ಲಿದ್ದ ಎಲ್ಲರೂ ಕೃತಜ್ಞತೆ ಸಲ್ಲಿಸುತ್ತಾರೆ.

ಸಂಘದ ಮೂರನೆಯ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್‌ ಅವರು, ಸಮಾಜದಲ್ಲಿ ಅಸ್ಪೃಶ್ಯತೆ ಅಪರಾಧವಲ್ಲವಾದರೆ ಜಗತ್ತಿನ ಯಾವುದೇ ತಪ್ಪುಗಳು ಅಪರಾಧ ಎಂದು ಅನಿಸುವುದಿಲ್ಲ ಎಂದು ಹೇಳುತ್ತಾ ಅಸ್ಪೃಶ್ಯತೆಯ ಅಡಿಪಾಯಕ್ಕೆ ಕೊಡಲಿಯೇಟು ಹಾಕುತ್ತಾರೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕ ಸಂದರೂ ಜಾತಿಗೊಂದು ಸ್ಮಶಾನ ಮಾಡುವ ರಾಜಕಾರಣಿಗಳಿಗೆ ಸಂಘದ ಸಾಮಾಜಿಕ ನಿಲುವು ಅರ್ಥವಾಗುತ್ತಿಲ್ಲ ಅಥವಾ ಅರ್ಥವಾಗದಷ್ಟು ಸಂಘ ದ್ವೇಷ ಮನದಲ್ಲಿ ತುಂಬಿಹೋಗಿದೆ.

ಸಂಘವೆಂಬ ರಾಷ್ಟ್ರೀಯ ಸಂಘಟನೆಯ ಅನೇಕ ರೆಂಬೆಗಳಲ್ಲಿ ಭಾರತೀಯ ಜನತಾ ಪಕ್ಷವು ಒಂದು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ವಿಶ್ವ ಹಿಂದೂ ಪರಿಷತ್, ಬಿಎಂಎಸ್, ಕೃಷಿ ಸಂಘ, ವನವಾಸಿ ಕಲ್ಯಾಣ, ಸೇವಾಭಾರತಿ, ಸಂಸ್ಕೃತ ಭಾರತಿ, ಹೀಗೆ ಸಂಘದ ಒಡಲ ಒಳಗೆ ಬೆಸೆದುಕೊಂಡ ಹಲವಾರು ಸಂಘಟನೆಗಳು ದೇಶದಾದ್ಯಂತ ಕೆಲಸ ಮಾಡುತ್ತಿವೆ. ಸಂಘದ ವೈಚಾರಿಕ ನಿಲುವನ್ನು ಸಮರ್ಥಿಸುತ್ತ ಬಿಜೆಪಿ ರಾಜಕೀಯದಲ್ಲಿ ಕೆಲಸ ಮಾಡುತ್ತಿದೆ.

ಆರ್‌ಎಸ್‌ಎಸ್‌ ಎಂಬುದುಒಂದು ಕುಟುಂಬಕ್ಕಾಗಿ, ಒಂದು ಜಾತಿಗಾಗಿ, ಕೆಲವೇ ವ್ಯಕ್ತಿಗಳಿಗಾಗಿ ಕೆಲಸ ಮಾಡುವ ಸಂಸ್ಥೆಯಲ್ಲ. 1977ರಲ್ಲಿ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಮೇಲೆದ್ದು ಬಂದ ಸುನಾಮಿ ಲಕ್ಷಾಂತರ ಜನರ ಮಾರಣಹೋಮ ಮಾಡಿದಾಗ ಸೇನೆಯಷ್ಟೆ ಸಮರ್ಪಕವಾಗಿ ಪರಿಹಾರ ಕಾರ್ಯಗಳನ್ನು ಸಂಘ ಮಾಡಿತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಸಂಘದ ಕಾರ್ಯವನ್ನು ಪ್ರಶಂಸಿಸಿದ್ದರು. 1963ರ ಗಣರಾಜ್ಯೋತ್ಸವದ ಫಥಸಂಚಲನದಲ್ಲಿ ಸಮವಸ್ತ್ರದೊಂದಿಗೆ ಭಾಗವಹಿಸುವಂತೆ ಅಂದಿನ ಪ್ರಧಾನಿ ನೆಹರೂ ಅವರು ಸಂಘಕ್ಕೆ ಆಹ್ವಾನ ನೀಡಿದ್ದರು.

ಸಂಘವು ಒಂದು ಲಕ್ಷಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 15 ಕೋಟಿಗೂ ಮಿಕ್ಕಿ ಸ್ವಯಂಸೇವಕರು ಇದ್ದಾರೆ. 2 ಲಕ್ಷಕ್ಕೂ ಮೀರಿದ ವಿದ್ಯಾ ಮಂದಿರಗಳಿವೆ. ಬಿಎಂಎಸ್ ಸಂಘಟನೆ ಮೂಲಕ ಎರಡು ಕೋಟಿ ಕಾರ್ಮಿಕ ರನ್ನು ಸಂಘಟಿಸಲಾಗಿದೆ. ವಿದ್ಯಾರ್ಥಿ ಪರಿಷತ್‌ ನಲ್ಲಿಒಂದು ಕೋಟಿಗೂ ಮೀರಿದ ಕಾರ್ಯಕರ್ತರಿದ್ದಾರೆ. ಬಿಜೆಪಿ 14 ಕೋಟಿ ಸದಸ್ಯರನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಸ್ವಯಂಸೇವಕರ ಸಂಘ ಯಾವುದು ಕೇಳಿದರೆ, ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಷ್ಟೊಂದು ವಿಸ್ತಾರವಾದ ಸಂಘದ ಮಹತ್ತನ್ನು ಅಧ್ಯಯನ ಮಾಡಿ, ಅರ್ಥಮಾಡಿಕೊಳ್ಳುವುದು ಸೋನಿಯಾ ಗಾಂಧಿಯವರ ನೆರಳಿನಲ್ಲಿ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಿಗೆ ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ.

ಇಂದು ಸಂಘದ ಸ್ವಯಂಸೇವಕ ಗ್ರಾಮ ಪಂಚಾಯತ್ ನಿಂದ ಆರಂಭವಾಗಿ, ರಾಷ್ಟ್ರದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆಯ ಸ್ಪೀಕರ್, ಎಲ್ಲಾ ರಾಜ್ಯದ ರಾಜ್ಯಪಾಲರು ಮಾತ್ರವಲ್ಲದೆ ಅನೇಕ ರಾಜ್ಯದ ಮುಖ್ಯಮಂತ್ರಿಗಳ ಸ್ಥಾನಕ್ಕೆ ಏರಿ ಬಿಟ್ಟಿದ್ದಾರೆ.

ಬೆಂಗಳೂರಿನ ಚನ್ನೇನ ಹಳ್ಳಿಯಲ್ಲಿ ನಡೆದ ಶಿಕ್ಷಾ ವರ್ಗದ ಶಿಬಿರದಲ್ಲಿ ನನ್ನೊಂದಿಗೆ ರಜಾಕ್ ಎಂಬ ಯುವಕ ಹೆಸರು ನೋಂದಾಯಿಸಿ ಪಾಲ್ಗೊಂಡಿದ್ದ. ತನ್ನೊಡಲಲ್ಲಿ ಸಂಘದ ಬಗ್ಗೆ ಇರುವ ವೈಚಾರಿಕ ವಿರೋಧಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಂದಿರಬೇಕು ಎಂದೆಣಿಸಿದ್ದ ನಾನು ಕುತೂಹಲಗೊಂಡಿದ್ದೆ. ಶಿಬಿರ ಮುಕ್ತಾಯದ ದಿನ ಅನಿಸಿಕೆ ಹೇಳಿಕೊಂಡ ರಜಾಕ್‌, ‘ಸಂಘವೇನೆಂದು ತಿಳಿಯುವ ಕುತೂಹಲದಿಂದ ಬಂದೆ. ಮುಕ್ತವಾಗಿ ಪಾಲ್ಗೊಂಡ ನಂತರ ನನಗನಿಸಿದ್ದು, ಶಿಕ್ಷಾ ವರ್ಗಕ್ಕೆ ನಾನು ಬಂದಿದ್ದು ತಡವಾಯಿತು. ನನ್ನ ಇಡೀ ಬದುಕು ಸಂಘ ಸಮರ್ಪಿತ’ ಎಂದು ಹೇಳಿದ. ಸಂಘವನ್ನು ಅಫ್ಗಾನಿಸ್ತಾನದ ಭಯೋತ್ಪಾದಕರಿಗೆ ಹೋಲಿಸುವವರಿಗೆ, ರಾಷ್ಟ್ರಪ್ರೇಮಿ ರಜಾಕನ ಮಾತುಗಳು ಹೇಗೆ ಅರ್ಥವಾಗಬೇಕು.

ಟಿಬೆಟ್ ಧರ್ಮಗುರು ದಲೈಲಾಮ ಅವರು, ರಾಷ್ಟ್ರಭಕ್ತಿ ಸಂಸ್ಥೆಯಾದ ಆರ್‌ಎಸ್‌ಎಸ್‌ ಅನ್ನು ಯಾರಾದರೂ ಅಪಮಾನ ಮಾಡಿದರೆ ಹೆತ್ತಮ್ಮನನ್ನು ಅಪಮಾನ ಮಾಡಿದಂತೆ ಎಂದಿದ್ದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ, ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ನುಡಿಯೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬನ್ನಿ. ರಾಷ್ಟ್ರಭಕ್ತಿ ವಿಚಾರವನ್ನು ಅರ್ಥಮಾಡಿಕೊಳ್ಳಲಿಕ್ಕೆ ನಿಮಗೆ ಸಾಧ್ಯವಾದರೆ ಅಹುದಹುದೆನ್ನಿ.

ಲೇಖಕ: ಸಮಾಜ ಕಲ್ಯಾಣ ಸಚಿವ, ವಿಧಾನ ಪರಿಷತ್ತಿನ ಸಭಾನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT