ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಆಸ್ತಿ ನಗದೀಕರಣ: ಕೇಂದ್ರದ ಮೇಲೆ ರಾಜ್ಯಗಳ ಅವಲಂಬನೆ ತಗ್ಗಿಸುವ ಯೋಜನೆ

Last Updated 8 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಕೋವಿಡ್‌ ನಂತರದ ಕಾಲದಲ್ಲಿ ಸರ್ಕಾರಗಳು ಹಣಕಾಸಿನ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಆಸ್ತಿ ನಗದೀಕರಣ ಯೋಜನೆಯು ನಿಜಕ್ಕೂ ಮಹತ್ವದ್ದಾಗಿದೆ. ಪರಿಹಾರ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಆದರೆ, ಆರ್ಥಿಕ ಪ್ರಗತಿಯ ನಿಧಾನಗತಿಯಿಂದಾಗಿ ವರಮಾನ ಕಡಿಮೆಯೇ ಇದೆ. ಹಾಗಾಗಿಯೇ ಆಸ್ತಿ ನಗದೀಕರಣವು ಹೆಚ್ಚು ಮುಖ್ಯವಾಗಿದೆ

***

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚದರ ಅಡಿ ಅಂಗಡಿ ಸ್ಥಳದ ಬಾಡಿಗೆ ₹75ಕ್ಕಿಂತ ಎಷ್ಟೋ ಹೆಚ್ಚು. ಹಾಗಿದ್ದರೂ, ಕಳೆದ ವರ್ಷದ ವರೆಗೆ ಪಾದಚಾರಿ ಮಾರ್ಗದ ಬಾಡಿಗೆ ದರ ಸೊನ್ನೆಯೇ ಆಗಿತ್ತು. ಯಾವುದೇ ವ್ಯಕ್ತಿ 100 ಚದರ ಅಡಿ ಸ್ಥಳವನ್ನು ಸುಲಭವಾಗಿ ಬಳಸಿಕೊಳ್ಳಬಹುದಿತ್ತು ಮತ್ತು ಅದಕ್ಕಾಗಿ ಸರ್ಕಾರಕ್ಕೆ ಒಂದು ರೂಪಾಯಿಯನ್ನೂ ನೀಡಬೇಕಿರಲಿಲ್ಲ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸಾರ್ವಜನಿಕ ಸ್ಥಳ ಬಳಸಿಕೊಳ್ಳಬಹುದಿತ್ತು. ನೀವು ದೊಡ್ಡ ಕಾರು ನಿಲ್ಲಿಸಿದ್ದರೆ, ಹೆಚ್ಚು ಕಾರುಗಳನ್ನು ನಿಲ್ಲಿಸಿದ್ದರೆ ಇನ್ನೂ ಹೆಚ್ಚಿನ ಸ್ಥಳವನ್ನು ಉಚಿತವಾಗಿ ಬಳಸಿಕೊಳ್ಳಬಹುದಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ಒಂದು ಕಾರು ನಿಲುಗಡೆ ಸ್ಥಳಕ್ಕೆ ಪಾಲಿಕೆಗೆ ಗಂಟೆಗೆ ₹30 ದೊರೆಯುತ್ತಿದೆ. ಇದನ್ನು ತಿಂಗಳಿಗೆ ಲೆಕ್ಕ ಹಾಕಿದರೆ ಅದು ₹22 ಸಾವಿರ ಆಗುತ್ತದೆ. ಬೆಂಗಳೂರಿನ ಕೇಂದ್ರ ಭಾಗದ ಏಳು ರಸ್ತೆಗಳಲ್ಲಿ ‍ಪಾವತಿ ವಾಹನ ನಿಲುಗಡೆ ವ್ಯವಸ್ಥೆಯಿಂದಾಗಿ ಪಾಲಿಕೆಗೆ ₹30 ಕೋಟಿ ಸಿಗುತ್ತದೆ. ಅದಲ್ಲದೆ, ಸಂಚಾರ ದಟ್ಟಣೆ ಕಡಿಮೆಯಾಗಿದೆ ಮತ್ತು ನಿಲುಗಡೆ ಸ್ಥಳ ದೊರೆಯುವುದು ಸುಲಭವಾಗಿದೆ.

ಕಾರು ಹೊಂದಿರುವವರು ಬಡವರಲ್ಲ. ಸರ್ಕಾರದ ಸಹಾಯಧನಕ್ಕೆ ಅರ್ಹತೆ ಇಲ್ಲದ ವ್ಯಕ್ತಿಗೆ ಕಾರು ನಿಲುಗಡೆಗೆ ಸ್ಥಳ ಕೊಟ್ಟರೆ ಅದು ಸಾರ್ವಜನಿಕ ಸಂಪತ್ತಿನ ವಿವೇಚನೆ ಇಲ್ಲದ ವರ್ಗಾವಣೆ. ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ಬಿಬಿಎಂಪಿ, ಸ್ಮಾರ್ಟ್ ಪಾರ್ಕಿಂಗ್‌ ನಿಂದ ಬಂದ ವರಮಾನದಿಂದ ಸಾರ್ವಜನಿಕ ಸೇವೆಗಳ ಮೇಲೆ ಹೆಚ್ಚಿನ ವೆಚ್ಚ ಮಾಡಲು ಅವಕಾಶ ಇದೆ.

ದೇಶದಾದ್ಯಂತ, ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳ, ನಗರ ಸ್ಥಳೀಯ ಸಂಸ್ಥೆಗಳ ಮೈದಾನಗಳು, ಜಾಹೀರಾತು ಪ್ರದರ್ಶಿಸುವ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಉಚಿತ; ಶ್ರೀಮಂತ, ಪ್ರಭಾವಿ ಮತ್ತು ನಿರ್ಲಜ್ಜ ಜನರೇ ಇವುಗಳನ್ನು ಆಕ್ರಮಿಸಿಕೊಂಡಿರುತ್ತಾರೆ. ವಾಹನ ನಿಲುಗಡೆ ಸ್ಥಳ, ರೈಲ್ವೆಯ ಸೊತ್ತು, ಹೆದ್ದಾರಿ, ಕಾರ್ಖಾನೆ ಇತ್ಯಾದಿಗಳೇ ಆಗಿರಲಿ, ಇಂತಹ ಬಹಳ ಬೆಲೆ ಬಾಳುವ ಸೊತ್ತುಗಳನ್ನು ವರಮಾನವಾಗಿ ಪರಿವರ್ತಿಸಲು ಭಾರತದ ಸರ್ಕಾರಗಳಿಗೆ ಆಗಿಲ್ಲ. ನೀತಿ ಆಯೋಗದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯ ಸಾರ ಏನೆಂದರೆ, ಅದು ಸರ್ಕಾರಗಳಿಗೆ ಹೆಚ್ಚು ನಿಧಿ ಸಂಗ್ರಹಿಸುವ ಸೂತ್ರ.

ಕೋವಿಡ್‌ ನಂತರದ ಕಾಲದಲ್ಲಿ ಸರ್ಕಾರಗಳು ಹಣಕಾಸಿನ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇದು ನಿಜಕ್ಕೂ ಮಹತ್ವದ್ದಾಗಿದೆ. ಪರಿಹಾರ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಆದರೆ, ಆರ್ಥಿಕ ಪ್ರಗತಿಯ ನಿಧಾನಗತಿಯಿಂದಾಗಿ ವರಮಾನ ಕಡಿಮೆಯೇ ಇದೆ. ಹಾಗಾಗಿಯೇ ಆಸ್ತಿ ನಗದೀಕರಣವು ಹೆಚ್ಚು ಮುಖ್ಯ ವಾಗಿದೆ. ಕೆಲವು ವರ್ಷಗಳ ಹಿಂದೆಯೇ ಬಿಎಂಟಿಸಿ ತನ್ನ ಬಸ್‌ ನಿಲ್ದಾಣಗಳ ಮೇಲೆ ಬಹುಮಹಡಿ ಕಚೇರಿ ಕಟ್ಟಡಗಳನ್ನು ನಿರ್ಮಿಸಿ ಆಸ್ತಿ ನಗದೀಕರಣ ಮಾಡಿಕೊಂಡಿತು.

ಶಾಂತಿ–ಸುವ್ಯವಸ್ಥೆ, ಆರೋಗ್ಯ, ಶಿಕ್ಷಣ, ಸಾರಿಗೆ ಇತ್ಯಾದಿ ಸಾರ್ವಜನಿಕ ಸೇವೆಗಳು ಕಳಪೆ ಆಗಿರಲು ಭ್ರಷ್ಟಾಚಾರ ಮತ್ತು ಅದಕ್ಷತೆ ಕಾರಣ ಎಂದು ದೂರುವುದು ಸುಲಭ. ಆದರೆ, ಹಣದ ಮುಗ್ಗಟ್ಟು ಇರುವಾಗ ಮಾಡಬಹುದಾದುದಕ್ಕೆ ಮಿತಿ ಇದೆ ಎಂಬುದನ್ನು ಹೆಚ್ಚಿನ ಜನರು ಮರೆಯುತ್ತಾರೆ. ಸಾರ್ವಜನಿಕ ಹಣಕಾಸನ್ನು ಸುಸ್ಥಿರವಾಗಿ ಬೆಳೆಸದಿದ್ದರೆ ಆಡಳಿತ ಮತ್ತು ಸಾರ್ವಜನಿಕ ಸೇವೆಗಳು ಸುಧಾರಣೆಯಾಗಲು ಸಾಧ್ಯವಿಲ್ಲ ಎಂಬುದು ಸರಳ ಸತ್ಯ.

ಆಸ್ತಿ ನಗದೀಕರಣದಿಂದಾಗಿ, ಸರ್ಕಾರವು ತನ್ನ ಸೊತ್ತುಗಳ ಮೌಲ್ಯವನ್ನು ಪಡೆದುಕೊಳ್ಳಬೇಕು ಎಂಬ ಗ್ರಹಿಕೆ ಜನರಲ್ಲಿ ಮೂಡುವುದೇ ಯೋಚನಾ ಕ್ರಮದ ಪಲ್ಲಟಕ್ಕೆ ಕಾರಣವಾಗುತ್ತದೆ. ಈ ಯೋಜನೆಯು ಯಶಸ್ವಿಯಾದರೆ, ಸಾಂಕ್ರಾಮಿಕೋತ್ತರದಲ್ಲಿ ವರಮಾನ ಕೊರತೆ ಎದುರಿಸುತ್ತಿರುವ ಸರ್ಕಾರಗಳಿಗೆ ಹಣಕಾಸಿನ ಹೊಸ ಸಂಪನ್ಮೂಲವೊಂದು ದೊರೆಯುತ್ತದೆ.

ಈಗ ನಿಮ್ಮ ಯೋಚನೆ ಏನು ಎಂಬುದು ನನಗೆ ಗೊತ್ತಿದೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಬಗ್ಗೆ ಏನಂತೀರಿ ಎಂಬುದಲ್ಲವೇ? ಎಷ್ಟೇ ಸದುದ್ದೇಶ ಹೊಂದಿರಲಿ, ಗುತ್ತಿಗೆ ಕರಾರು ಎಷ್ಟೇ ಉತ್ತಮವಾಗಿ ವಿನ್ಯಾಸಗೊಂಡಿರಲಿ, ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಆಕ್ಷೇಪಕ್ಕೆ ಮನ್ನಣೆ ಕೊಟ್ಟರೆ, ನಮ್ಮಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕಾಪಟ್ಯವಷ್ಟೇ ಉಳಿಯುತ್ತವೆ, ಯಾವ ರೀತಿಯ ಸಾರ್ವಜನಿಕ ನೀತಿಯೂ ಇರುವುದಿಲ್ಲ. ಕಾರ್ಯಸಾಧ್ಯ ಪರಿಹಾರವೆಂದರೆ, ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗಿನ ಭ್ರಷ್ಟಾಚಾರನಿರೋಧಕ ನೀತಿಯನ್ನು ರೂಪಿಸುವುದು. ಪಾರದರ್ಶಕವಾಗಿರುವಂತೆ ಒತ್ತಡ ಹಾಕುವುದು, ಮಾರುಕಟ್ಟೆ ಸ್ಪರ್ಧಾತ್ಮಕತೆಗೆ ಉತ್ತೇಜನ ಕೊಡುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು.

ಸೊತ್ತುಗಳ ಖಾಸಗೀಕರಣದ ಬದಲಿಗೆ ಅವುಗಳನ್ನು ನಗದೀಕರಿಸುವುದು ರಾಜಕೀಯವಾಗಿ ಮಧ್ಯಮಮಾರ್ಗ. ಈ ರಾಜಿಯೇ ನೀತಿಯಲ್ಲಿನ ಮೂಲಭೂತ ಮಿತಿಯೂ ಹೌದು. ಬಾಡಿಗೆದಾರ ಮನೆಯನ್ನು ಮಾಲೀಕನಷ್ಟು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂಬುದು ಮನೆಯನ್ನು ಬಾಡಿಗೆ ಕೊಟ್ಟವರಿಗೆ ಚೆನ್ನಾಗಿ ಗೊತ್ತಿರುತ್ತದೆ; ಮಾಲೀಕರು ಮತ್ತು ಬಾಡಿಗೆದಾರರಿಗೆ ಆದ್ಯತೆ ಭಿನ್ನವಾಗಿರುತ್ತದೆ.

ಆಸ್ತಿಯನ್ನು ಪಡೆದುಕೊಳ್ಳುವ ಖಾಸಗಿ ಕ್ಷೇತ್ರವು ಅದನ್ನು ಸರ್ಕಾರಕ್ಕಿಂತ ಚೆನ್ನಾಗಿ ನಿರ್ವಹಿಸಲಿದೆ ಎಂಬುದನ್ನು ಸರ್ಕಾರವು ಖಾತರಿಪಡಿಸಿಕೊಳ್ಳಬೇಕಾಗಿದೆ. ಸ್ಪರ್ಧೆ ಮತ್ತು ಮಾರುಕಟ್ಟೆ ವಿಷಯಗಳು ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಗುತ್ತಿಗೆದಾರ ಸಂಸ್ಥೆಯು ಆಸ್ತಿ ನಿರ್ವಹಣೆ ವೆಚ್ಚ ಕಡಿತ ಮಾಡಬಹುದು. ಹಾಗಾಗಿಯೇ, ಸೊತ್ತಿನ ಉತ್ತಮ ನಿರ್ವಹಣೆಗೆ ಸಂಸ್ಥೆಗೆ ಉತ್ತೇಜನ ಇರುವ ರೀತಿಯಲ್ಲಿ ನಗದೀಕರಣ ಪ್ರಕ್ರಿಯೆಯ ವಿನ್ಯಾಸ ಇರುವಂತೆ ನೋಡಿಕೊಳ್ಳಬೇಕು.

ದೀರ್ಘಾವಧಿಯ ನಂಟಿನಲ್ಲಿ ಹೆಚ್ಚಿನ ದರ ಪಡೆಯುವುದಕ್ಕಿಂತ ಉತ್ತಮ ಹೂಡಿಕೆದಾರರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಗರಿಷ್ಠ ಹಣ ಪಡೆಯಲು ಭಾರಿ ಉತ್ಸಾಹ ತೋರುವ ವ್ಯವಸ್ಥೆಯು ಸರಿಯಾದ ನಿರ್ಧಾರವನ್ನು ಖಾತರಿಪಡಿಸಿಕೊಳ್ಳಲು ಹೊಂದಿರುವ ಮಾನದಂಡಗಳು ಸೀಮಿತ.

ಆಸ್ತಿ ನಗದೀಕರಣವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕೇಂದ್ರದಿಂದ ಬರುವ ಹಣದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅವಕಾಶ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯವು ಕೇಂದ್ರದ ಮೇಲೆ ಅವಲಂಬಿತವಾಗದೇ ಇರುವುದು ಸಾರ್ವಜನಿಕ ಹಿತಾಸಕ್ತಿಯಿಂದ ಮುಖ್ಯ.

ಲೇಖಕ: ತಕ್ಷಶಿಲಾ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ

ಲೇಖನದ ಇಂಗ್ಲಿಷ್‌ ಅವತರಣಿಕೆಯು ‘ಮಿಂಟ್‌’ನಲ್ಲಿ ಪ್ರಕಟವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT