ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಂಶ ಮರೆಮಾಚಿದ ‘ಪ್ರಕರಣ’ ಅಭ್ಯರ್ಥಿಗಳು ‘ನ್ಯಾಯ’ಕ್ಕೆ ಅರ್ಹರು

Last Updated 11 ಜೂನ್ 2021, 19:31 IST
ಅಕ್ಷರ ಗಾತ್ರ

ರಾಜ್ಯಪಾಲರ ಅಭಿಪ್ರಾಯಗಳನ್ನು ಮತ್ತು ಸತ್ಯಾಂಶಗಳನ್ನು ಮರೆಮಾಚಿ ಈ ನೇಮಕಾತಿ ಅಧಿಸೂಚನೆ ರದ್ದುಪಡಿಸುವ ಆದೇಶವನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡಿದೆ. ಹೀಗಾಗಿ, ಅರ್ಹ ಅಭ್ಯರ್ಥಿಗಳು ‘ನ್ಯಾಯ’ ವಂಚಿತರಾಗಿದ್ದಾರೆ

2011ರ 362 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನೇಮಕಾತಿ ವೇಳೆ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾದ ಆರೋಪದಲ್ಲಿ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ಅಪರಾಧ ಕಾಯ್ದೆಗಳಡಿ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ನೀಡುವ ಮತ್ತು ಆಯ್ಕೆಯಾಗಿಯೂ ಹುದ್ದೆ ವಂಚಿತರಾದ ಅಭ್ಯರ್ಥಿಗಳ ಭವಿಷ್ಯದ ವಿಚಾರವಿದು. ಸಂವಿಧಾನ ಮತ್ತು ಕಾನೂನಾತ್ಮಕ ಒಳ ಸುಳಿಯಲ್ಲಿ ಸಿಕ್ಕಿರುವ ಈ ಪ್ರಕರಣವನ್ನು ಈ ಎರಡೂ ಅಂಶಗಳ ಜೊತೆಗೇ, ಹುದ್ದೆ ನಿರೀಕ್ಷೆಯಲ್ಲಿ ಏಳು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳು ಅನುಭವಿಸುತ್ತಿರುವ ಸಂಕಟ– ನೋವಿನ ಹಿನ್ನೆಲೆಯಲ್ಲೂ ನೋಡಬೇಕು.

ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪದ ದೂರಿನ ಹಿನ್ನೆಲೆಯಲ್ಲಿ ಸಿಐಡಿ ಪ್ರಕರಣದ ತನಿಖೆ ನಡೆಸಿತ್ತು. ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆಸಿಐಡಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನೇ ಆಧಾರವಾಗಿಟ್ಟು ನೇಮಕಾತಿ ಅಧಿಸೂಚನೆಯನ್ನೇ ರದ್ದುಪಡಿಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ತೀರ್ಪು ಆಧರಿಸಿ ಮತ್ತೆ ನೇಮಕಾತಿ ನಡೆಸಿತ್ತು. ಆದರೆ, ಅದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲೆ ಹೈಕೋರ್ಟ್‌ ನೀಡಿದ್ದ ತೀರ್ಪಿನ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಇಡೀ ಪ್ರಕರಣದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಹಂತಗಳಲ್ಲಿ ಸತ್ಯಾಂಶಗಳನ್ನು ಮರೆ ಮಾಚಲಾಗಿದೆ. ನ್ಯಾಯಪೀಠವನ್ನೂ ಹಾದಿ ತಪ್ಪಿಸಲಾಗಿದೆ ಎಂಬುದು ತಿಳಿಯುತ್ತದೆ.

ಸಿಐಡಿ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ2013ರ ಸೆ. 10ರಂದು ಸಲ್ಲಿಸಿತ್ತು. ಅದನ್ನು ಆಧರಿಸಿ, 362 ಗೆಜೆಟೆಡ್ ಪ್ರೊಬೆಷನರಿಗಳ ನೇಮಕಾತಿಗೆ ಕೆಪಿಎಸ್‌ಸಿಗೆ ನೀಡಿದ್ದ ಅಧಿಸೂಚನೆಯನ್ನು ಸರ್ಕಾರ 2014ರ ಆ. 14ರಂದು ವಾಪಸು ಪಡೆದಿತ್ತು. ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲುಸರ್ಕಾರವು ಸಿಐಡಿಯ ಮಧ್ಯಂತರ ವರದಿಯನ್ನೇ ಆಧರಿಸಿ 2014ರ ಜುಲೈ 18ರಂದು ನಿರ್ಣಯ ತೆಗೆದುಕೊಂಡಿತು. ಸಂವಿಧಾನದ 167ನೇ ವಿಧಿ ಅಡಿಯಲ್ಲಿ ರಾಜ್ಯಪಾಲರಿಗೆ ಸಲ್ಲಿಸಿತು. ಈ ಕಡತದಲ್ಲಿ ಪ್ರಸ್ತಾಪಿಸಿದ್ದ ಅಂಶಗಳನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ವಾಪಸು ಕಳುಹಿಸಿದ್ದರು. ಇದು ಸಂವಿಧಾನದ 163ನೇ ವಿಧಿ ಪ್ರಕಾರ ರಾಜ್ಯಪಾಲರು ತೆಗೆದುಕೊಂಡ ತೀರ್ಮಾನ ಅಂತಿಮ. ಅದನ್ನು ಯಾರೂ ಪ್ರಶ್ನಿಸಲು ಅವಕಾಶ ಇಲ್ಲ. ಆದರೆ, ಈ ಪ್ರಕರಣದಲ್ಲಿ ಸಂವಿಧಾನದ ಈ ಅಂಶ ಉಲ್ಲಂಘನೆಯಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ (2017ರ ಮಾರ್ಚ್‌ 1) ಈ ನೇಮಕಾತಿ ವಿಚಾರ ಚರ್ಚೆಗೆ ಬಂದಿತ್ತು. ಇಲ್ಲಿ ಸಂವಿಧಾನದ ವಿಧಿ 323(2) ಉಲ್ಲಂಘನೆಯಾಗಿದೆ ಮತ್ತು ಸಿಐಡಿ ವರದಿ ಊಹೆಯಿಂದ ಕೂಡಿದೆ ಎಂಬ ಕೆಎಟಿ ತೀರ್ಪು ಅನ್ನು ಒಪ್ಪಿ, ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿಯೂ, ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಮೇಲಿನ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದಂತೆ ರಾಜ್ಯಪಾಲರು ವ್ಯಕ್ತಪಡಿಸಿದ್ದ ಅಭಿಪ್ರಾಯ ಮತ್ತು ಸಂವಿಧಾನದ ವಿಧಿ 317ರ ಬಗ್ಗೆ ಗಮನಕ್ಕೆ ತರದೆ ಸತ್ಯಾಂಶಗಳನ್ನು ಮರೆಮಾಚಲಾಗಿದೆ.

ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್‌ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಕೂಡಾ ಕೆಪಿಎಸ್‌ಸಿ ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವ ಬಗ್ಗೆ ರಾಜ್ಯಪಾಲರ ಅಭಿಪ್ರಾಯಗಳನ್ನು ಗಮನಕ್ಕೆ ತರದೆ ಸತ್ಯಾಂಶಗಳನ್ನು ಮುಚ್ಚಿಡಲಾಯಿತು. ಈ ಅಂಶಗಳನ್ನು ಗಮನಿಸಿದಾಗ, ಕೆಪಿಎಸ್‌ಸಿ ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವ ಬಗ್ಗೆ ರಾಜ್ಯಪಾಲರ ಅಭಿಪ್ರಾಯಗಳನ್ನು ಎಲ್ಲ ಸಂದರ್ಭಗಳಲ್ಲಿಯೂ ಉದ್ದೇಶಪೂರ್ವಕವಾಗಿ ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಈ ಪ್ರಕರಣದಲ್ಲಿ ರಾಜ್ಯಪಾಲರ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಅಭಿಪ್ರಾಯಗಳನ್ನು ಸರ್ಕಾರ ಪರಾಮರ್ಶೆ ನಡೆಸುತ್ತಿದ್ದರೆ, ನೇಮಕಾತಿ ಅಧಿಸೂಚನೆಯನ್ನೇ ಹಿಂಪಡೆದಿದ್ದ ತನ್ನ ಆದೇಶವನ್ನು ರದ್ದುಪಡಿಸಬೇಕಾಗಿತ್ತು. ರಾಜ್ಯಪಾಲರ ಅಭಿಪ್ರಾಯಗಳನ್ನು ಮತ್ತು ಸತ್ಯಾಂಶಗಳನ್ನು ಮರೆಮಾಚಿ ಈ ನೇಮಕಾತಿ ಅಧಿಸೂಚನೆ ರದ್ದುಪಡಿಸುವ ಆದೇಶವನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡಿದೆ. ಹೀಗಾಗಿ, ಅರ್ಹ ಅಭ್ಯರ್ಥಿಗಳು ‘ನ್ಯಾಯ’ ವಂಚಿತರಾಗಿದ್ದಾರೆ.

ಇಲ್ಲಿ ಆಗಿರುವ ಇನ್ನೊಂದು ಸಂವಿಧಾನ ಉಲ್ಲಂಘನೆ ಎಂದರೆ, ಪಿಐಎಲ್‌ ವಿಚಾರಣೆ ವೇಳೆ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ ಸಂವಿಧಾನದ ವಿಧಿ 323(2)ರ ಪಾಲನೆಯಾಗಿದೆ ಎಂದು ಮಾಹಿತಿ ನೀಡಿರುವುದು. ಈ ವಿಧಿಯು, ‘ಕೆಪಿಎಸ್‌ಸಿಯ ಆಯ್ಕೆ ಪಟ್ಟಿಯನ್ನು ಸರ್ಕಾರ ರದ್ದುಪಡಿಸಬೇಕಾದರೆ, ಹಾಗೆ ರದ್ದುಪಡಿಸುವ ಮುನ್ನ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಚರ್ಚಿಸಬೇಕು’ ಎಂದು ಹೇಳುತ್ತದೆ. ಸಂವಿಧಾನದ ಈ ವಿಧಿಯನ್ನು ಸರ್ಕಾರ ಪಾಲಿಸಿರುವ ಬಗ್ಗೆ ತನ್ನ ತೀರ್ಪಿನಲ್ಲಿ ಹೈಕೋರ್ಟ್‌ ಉಲ್ಲೇಖಿಸಿದೆ. ಅಂದರೆ, ಈ ವಿಧಿ ಪಾಲಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗಿತ್ತು.

ಕೆಎಟಿ ಆದೇಶದಂತೆ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲುಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನಿರ್ಧರಿಸಿತ್ತು. ಆಯ್ಕೆ ಪಟ್ಟಿಯನ್ನು ಅಂದಿನ ಸರ್ಕಾರ ಒಪ್ಪಿಕೊಂಡಿದ್ದರಿಂದ ಸಂವಿಧಾನದ ವಿಧಿಯ ಪ್ರಕಾರ ವಿಧಾನಮಂಡಲದಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆದರೆ, ಚರ್ಚೆ ಆಗದ ವಿಚಾರವನ್ನು ಚರ್ಚೆ ಆಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿ ಶಾಸಕಾಂಗದ ಹಕ್ಕು ಚ್ಯುತಿ ಮಾಡಲಾಗಿದೆ. ಕೆಎಟಿ ತೀರ್ಪನ್ನು ಒಪ್ಪಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಿದ್ದರಿಂದ ಸಂವಿಧಾನದ ವಿಧಿ 323(2)ರ ಪ್ರಕಾರ ನೇಮಕಾತಿ ಪಟ್ಟಿಯನ್ನು ಹಿಂಪಡೆಯುವ ಬಗ್ಗೆ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. 2014ರ ಆಗಸ್ಟ್‌ 14ರ ಸರ್ಕಾರಿ ಆದೇಶವು ಕಾನೂನಾತ್ಮಕವಾಗಿ ಸಿಂಧು ಆಗಿರಲಿಲ್ಲ ಎಂದು ತನ್ನ ಲಿಖಿತ ಉತ್ತರದಲ್ಲಿ ಸರ್ಕಾರವೇ ಒಪ್ಪಿಕೊಂಡಿದೆ.

ವಿಪರ್ಯಾಸವೆಂದರೆ, ರಾಜ್ಯಪಾಲರು ವ್ಯಕ್ತಪಡಿಸಿದ್ದ ಅಭಿಪ್ರಾಯ ಸರ್ಕಾರದ ಕೈಸೇರಿ ಆರು ವರ್ಷಗಳಾದರೂ ಈವರೆಗೂ ಈ ಬಗ್ಗೆ ಯಾವುದೇ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ.ತನಿಖೆಯ ಅಂತಿಮ ವರದಿ ಸಿದ್ಧವಾಗಿಲ್ಲ ಎಂದು ಸಿಐಡಿ ನನಗೆ 2020 ಫೆ. 27ರಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದೆ. ಆದರೆ, ಮಧ್ಯಂತರ ವರದಿಯನ್ನೇ ಅಂತಿಮ ವರದಿ ಎಂದು ಪರಿಗಣಿಸಿ ಎಲ್ಲ ಹಂತಗಳಲ್ಲಿಯೂ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆಯ್ಕೆಯಾಗಿದ್ದ ಎಲ್ಲ ಅಭ್ಯರ್ಥಿಗಳಿಗೆಕೆಎಟಿ ತೀರ್ಪು ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇಮಕಾತಿ ಆದೇಶ ನೀಡಿದ್ದರೂ, ಸತ್ಯಾಂಶಗಳನ್ನು ಮುಚ್ಚಿಟ್ಟು, ತಪ್ಪು ಮಾಹಿತಿ ನೀಡಿ ವಂಚನೆ ಮೂಲಕ ಹೈಕೋರ್ಟ್‌ನಿಂದ ತೀರ್ಪು ಪಡೆಯಲಾಗಿದೆ. ಗೊತ್ತಿದ್ದೇ ನಡೆದ ಕೆಲವು ‘ಅಚಾತುರ್ಯ’ಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಇದ್ದಾಗಲೂ ಆಡಳಿತ ನಡೆಸಿದ ಸರ್ಕಾರಗಳು ತಿದ್ದಿಕೊಳ್ಳಲಿಲ್ಲ. ಪರಿಣಾಮ, ಮಾಡದ ತಪ್ಪಿಗೆ ಅಮಾಯಕ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ.

ಲೇಖಕ: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT