ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಜನಸಂಖ್ಯೆಯೇ ಆಯುಧವಾಗುವ ಆತಂಕ

ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಎರಡು ಮಕ್ಕಳ ನೀತಿ ಜಾರಿಯ ಅಗತ್ಯ ಇದೆಯೇ?
Last Updated 2 ಜುಲೈ 2021, 19:30 IST
ಅಕ್ಷರ ಗಾತ್ರ

ಮುಸ್ಲಿಂ ಜನಸಂಖ್ಯೆಯ ಏರುಗತಿಯ ಹಿಂದೆ ರಾಜ್ಯ ವಿಸ್ತರಣೆಯ ಹುನ್ನಾರವೂ ಇದೆ. ಪಕ್ಕದಲ್ಲೇ ಬಾಂಗ್ಲಾ ಎಂಬ ಮುಸ್ಲಿಂ ದೇಶ ಹೇಗೆ ಮತೀಯ ಆಧಾರದಲ್ಲಿ ರೂ‍ಪುಗೊಂಡಿತೆಂಬುದನ್ನು ಆಸ್ಸಾಮಿಗರು ನೋಡಿದ್ದಾರೆ. ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು ಎಂಬ ಜನರ ಕೂಗಿಗೆಮುಖ್ಯಮಂತ್ರಿ ದನಿಯಾಗಿದ್ದಾರೆ.

***

ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತಮ್ಮ ರಾಜ್ಯದ ಮುಸ್ಲಿಂ ಜನತೆ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸ್ಥಿತಿಗತಿಯನ್ನು ಅವರು ಪ್ರಸ್ತಾಪಿಸಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹೆಚ್ಚು ಮಹಿಳಾ ಕಾಲೇಜುಗಳನ್ನು ತೆರೆಯುವ, ಉನ್ನತ ವ್ಯಾಸಂಗದಲ್ಲಿ ಉಚಿತ ಶಿಕ್ಷಣ ಕೊಡುವ ಬಗ್ಗೆಯೂ ಹೇಳಿದ್ದಾರೆ. ‘ಇಂದಿರಾಗಾಂಧಿಗೆ ಇಬ್ಬರು ಮಕ್ಕಳಿದ್ದರು, ಅವರ ಮಗ ರಾಜೀವ ಗಾಂಧಿಗೂ ಇಬ್ಬರು ಮಕ್ಕಳು, ಅವರ ಮಗಳು ಪ್ರಿಯಾಂಕಾ ವಾದ್ರಾಗೆ ಈಗಿರುವುದು ಎರಡು ಮಕ್ಕಳೇ’ ಎಂದು ಕೆಲದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಕಳೆದ ಚುನಾವಣೆಯಲ್ಲಿ, ಅಸ್ಸಾಂನ ಮುಸ್ಲಿಂ ಸಮುದಾಯ ದೊಡ್ಡ ಪ್ರಮಾಣದಲ್ಲೇ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿತ್ತು. ಬೆಂಬಲಿಸಿದರಷ್ಟೆ ಸಾಲದು ಕಾಂಗ್ರೆಸ್ ಕುಟುಂಬದ ಅತ್ಯುಚ್ಚ ನಾಯಕರ ಮನೆತನವನ್ನು ಅನುಸರಿಸಬೇಕು ಎಂಬುದನ್ನು ಮುಖ್ಯಮಂತ್ರಿ ಸೂಚ್ಯವಾಗಿ ಹೇಳಿದ್ದರು.

ಅಸ್ಸಾಂನ ವಿಷಯದಲ್ಲಿ ಜನಸಂಖ್ಯೆ ನಿಯಂತ್ರಣದ ಈ ಚರ್ಚೆಗೆ ಬಹು ಆಯಾಮಗಳಿವೆ. ಅಸ್ಸಾಂನ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ‘ಮುಸ್ಲಿಂ ಸಮುದಾಯದ ಜನಸಂಖ್ಯೆ ನಿಯಂತ್ರಣ’ದ ವಿಷಯವನ್ನು ಚರ್ಚಿಸಲಾಗದು.

ಅಸ್ಸಾಂನ ಜನಸಂಖ್ಯೆಯಲ್ಲಿ ಹಿಂದೂಗಳು ಶೇ 61.47ರಷ್ಟು ಇದ್ದರೆ ಮುಸ್ಲಿಮರ ಪ್ರಮಾಣ ಶೇ 34.22ರಷ್ಟು. ಅದೇ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಶೇ70.54ರಷ್ಟು, ಮುಸ್ಲಿಮರು ಶೇ 27.1ರಷ್ಟು. ಹಿಂದೂಗಳ ಮತವನ್ನಷ್ಟೆ ಕೇಂದ್ರೀಕರಿಸುತ್ತದೆ ಎನ್ನಲಾಗುವ ಬಿಜೆಪಿಗೆ ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಚುನಾವಣೆ ಕಷ್ಟವಾಗಬೇಕಿತ್ತು. ಆದರೆ ಹಾಗೆ ಆಗಲಿಲ್ಲ.

2016ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಾಗ ಜಾತ್ಯತೀತ ಮತಗಳು ಹಂಚಿಹೋ‍ಗಿದ್ದವು. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜೊತೆಗೆ, ಸುಗಂಧ ದ್ರವ್ಯಗಳ ಅಂತರರಾಷ್ಟ್ರೀಯ ವಹಿವಾಟು ನೆಡೆಸುವ ಬದ್ರುದ್ದೀನ್ ಅಜ್ಮಲ್‌ ಅವರ ಎಐಯುಡಿಎಫ್ ಪ್ರತ್ಯೇಕವಾಗಿ ಸ್ಪರ್ಧಿಸಿ ಮುಸ್ಲಿಂ ಮತಗಳನ್ನು ಕ್ರೋಡೀಕರಿಸಿತ್ತು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಮತ್ತು ಬದ್ರುದ್ದೀನ್ ಒಟ್ಟಾಗಿ ಚುನಾವಣೆಗೆ ಇಳಿದರು. ಬಿಜೆಪಿಯ ಜೊತೆಗಿದ್ದ ಸ್ಥಳೀಯ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಕೂಡ ಜಾತ್ಯತೀತ ಬಣ ಸೇರಿಕೊಂಡಿತು. ಹೀಗಾಗಿ ಮೇಲ್ನೋಟದ ಮತ ಗಣಿತ ಬಿಜೆಪಿಯ ಪರವಾಗಿರಲಿಲ್ಲ. ಆದರೂ ಬಿಜೆಪಿಗೆ ಗೆಲ್ಲುವುದು ಸಾಧ್ಯವಾಯಿತು. ಶೇ 61ರಷ್ಟಿರುವ ಹಿಂದೂಗಳು ಜಾತ್ಯತೀತ ಬಣವನ್ನು ತಿರಸ್ಕರಿಸಿ ಬಿಜೆಪಿಯ ಜೊತೆಗೆದೊಡ್ಡ ಪ್ರಮಾಣದಲ್ಲಿ ನಿಂತಿದ್ದು ಗೆಲುವಿಗೆ ಕಾರಣವಾಯ್ತು. 2016ರಲ್ಲಿ ಹಿಂದೂಗಳಲ್ಲಿ ಶೇ 32ರಷ್ಟು ಜನ ಕಾಂಗ್ರೆಸ್‌ ಬೆಂಬಲಿಸಿದ್ದರು. ಈ ಸಲ ಮುಸ್ಲಿಮರು ಸಗಟಾಗಿ ಬೆಂಬಲಿಸಿದರು. ಆದರೆ ಹಿಂದೂಗಳು ಕಾಂಗ್ರೆಸ್ ಮೈತ್ರಿಕೂಟವನ್ನು ಕೈಬಿಟ್ಟಿದ್ದರು.

ಮುಸ್ಲಿಮರ ಸಗಟು ಮತದ ಆಸೆಗೆ ಬಿದ್ದ ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷಗಳು, ಮತೀಯವಾದಿ ಬದ್ರುದ್ದೀನ್ ಅಜ್ಮಲ್ಲರ ತೆಕ್ಕೆಗೆ ಸೇರಿದ್ದು ಸಣ್ಣ ವಿಷಯವಾಗಿರಲಿಲ್ಲ. ಬದ್ರುದ್ದೀನ್ ಪಕ್ಕದ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿಬರುವ ಮುಸ್ಲಿಮರಿಗೆ ಆಶ್ರಯದಾತ. 2005ರಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ಬಂದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಬಂಡೆದ್ದು ಬದ್ರುದ್ದೀನ್ ತನ್ನದೇ ರಾಜಕೀಯ ಪಕ್ಷ ಕಟ್ಟಿದ್ದ. ಅಂತಹ ಬದ್ರುದ್ದೀನ್ ಜೊತೆಗೆ ಗುರುತಿಸಿಕೊಳ್ಳುವ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಪ್ರಯತ್ನವನ್ನು ಅಸ್ಸಾಂನ ಮೂಲನಿವಾಸಿಗಳು ತಿರಸ್ಕರಿಸಿದ್ದರು.

ಸಾಮಾಜಿಕವಾಗಿಯೂ ಅಸ್ಸಾಂ ತುಂಬಾ ಸಂಕೀರ್ಣ ರಾಜ್ಯ. ಶೇ 61ರಷ್ಟು ಜನಸಂಖ್ಯೆ ಇರುವ ಹಿಂದೂಗಳಲ್ಲಿ ಅಗಾಧವಾದ ವೈವಿಧ್ಯ. ಒಂದೇ ರಾಜ್ಯದಲ್ಲಿ ನೂರಾರು ಬುಡಕಟ್ಟು ಜನಜಾತಿಗಳು. 45ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು. ಹಾಗೆ ನೋಡಿದರೆ ಅಸ್ಸಾಂ ಅಪ್ಪಟ ಬಹುತ್ವದ ರಾಜ್ಯ. ದಲಿತರು, ಆದಿವಾಸಿಗಳ ಮೇಲೆ ಬಿಜೆಪಿಯ ಹಿಡಿತವು ಬಲವಾಗಿಯೇ ಇದೆ. ಎಸ್‌ಸಿಗೆ ಮೀಸಲಾಗಿರುವ 8 ಕ್ಷೇತ್ರಗಳಲ್ಲಿ ನಾಲ್ಕು, ಎಸ್‌ಟಿಗೆ ಮೀಸಲಾಗಿರುವ16 ಕ್ಷೇತ್ರಗಳಲ್ಲಿ ಹದಿನಾಲ್ಕು ಬಿಜೆಪಿಯ ಪಾಲಾಗಿವೆ ಬೋಡೊ ಪೀಪಲ್ಸ್ ಫ್ರಂಟ್ ಮೈತ್ರಿ ಕಡಿದುಕೊಂಡು ಹೋದರೂ ಬುಡಕಟ್ಟು ಜನಜಾತಿಗಳ ನಡುವೆ ಬಿಜೆಪಿಯ ಹಿಡಿತ ಅಬಾಧಿತವಾಗಿದೆ.

ಅಸ್ಸಾಂ ರಾಜ್ಯ ಪಕ್ಕದ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಸುಳಿ ಬರುವವರ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಅಸ್ಸಾಂನಲ್ಲಿರುವ 130 ಲಕ್ಷ ಮುಸ್ಲಿಮರಲ್ಲಿ 90 ಲಕ್ಷ ಮಂದಿ ಅಕ್ರಮ ನುಸುಳುಕೋರರೆಂದು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಾಖಲೆ ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಳ್ಳುವ ಒಂಬತ್ತು ಜಿಲ್ಲೆಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಈ 9 ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ 24ರಿಂದ ಶೇ 29 ರಷ್ಟು. ಅದೇ ಹಿಂದೂ ಬಾಹುಳ್ಯದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ9ರಷ್ಟು ಮಾತ್ರ. ಈ ವೈರುಧ್ಯವನ್ನೂ ಹಿಮಂತ್ ಶರ್ಮ ಪ್ರಸ್ತಾಪಿಸಿದ್ದಾರೆ.

ಮುಸ್ಲಿಂ ಜನಸಂಖ್ಯೆಯ ಏರುಗತಿಯ ಹಿಂದೆ ರಾಜ್ಯ ವಿಸ್ತರಣೆಯ ಹುನ್ನಾರವೂ ಇದೆ. ಪಕ್ಕದಲ್ಲೇ ಬಾಂಗ್ಲಾ ಎಂಬ ಮುಸ್ಲಿಂ ದೇಶ ಹೇಗೆ ಮತೀಯ ಆಧಾರದಲ್ಲಿ ರೂ‍ಪುಗೊಂಡಿತೆಂಬುದನ್ನು ಆಸ್ಸಾಮಿಗರು ಹತ್ತಿರದಿಂದಲೇ ನೋಡಿದ್ದಾರೆ. ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು ಎಂಬ ಜನರ ಕೂಗಿಗೆ ಮುಖ್ಯಮಂತ್ರಿ ದನಿಯಾಗಿದ್ದಾರೆ. 2 ವರ್ಷದ ಹಿಂದೆಯೇ ಅಸ್ಸಾಂ ಸರ್ಕಾರ ಎರಡು ಮಕ್ಕಳ ನೀತಿಯನ್ನು ಪಾಲಿಸದವರು ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಿತ್ತು. ಹಿಂದೂಗಳೂ ಸೇರಿದಂತೆ ಜೈನ, ಸಿಖ್,ಕ್ರೈಸ್ತ, ಬೌದ್ಧ ಯಾರದ್ದೂ ಇದಕ್ಕೆ ತಕರಾರಿಲ್ಲ, ಮುಸ್ಲಿಂ ಧಾರ್ಮಿಕ ಪ್ರಭುತ್ವ ಮಾತ್ರ ಇದನ್ನು ಒಪ್ಪುವುದಿಲ್ಲ. ಜಾತ್ಯತೀತ ರಾಜಕಾರಣ ಮತ್ತು ಜಾತ್ಯತೀತ ವೈಚಾರಿಕತೆ ಎರಡೂ ಮುಸ್ಲಿಂ ಧಾರ್ಮಿಕ ಪ್ರಭುತ್ವದ ವಿರುದ್ಧ ಗಟ್ಟಿ ನಿಲುವು ತಾಳಲು ಹಿಂಜರಿಯುವುದು ಗುಟ್ಟಿನ ವಿಷಯವೇನಲ್ಲ.

ಮುಸ್ಲಿಂ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಬಹುದಾದ ‘ಮಧ್ಯಮ ವರ್ಗ’ವೇ ರೂಪುಗೊಂಡಿಲ್ಲ. ಅಲ್ಲಿರುವುದು ಬಡವರು - ಬಲ್ಲಿದರು ಇಬ್ಬರೆ. ಸಾಕುವ ಶಕ್ತಿಯಿಲ್ಲದ ಬಡವರಲ್ಲೇ ಮಕ್ಕಳು ಹೆಚ್ಚು. ಅವರೆಲ್ಲ ಕಾಲಾಂತರದಲ್ಲಿ ಅಗ್ಗದ ಸಂಬಳಕ್ಕೆ ದಕ್ಕುವ ಕಾರ್ಮಿಕರಾಗಿ ಬಿಡುತ್ತಾರೆ. ಇದರಿಂದಾಗಿ ಅಸ್ಸಾಂನ ಚಹಾ ತೋಟಗಳಲ್ಲಿ ದುಡಿಯುತ್ತಿದ್ದ ಬುಡುಕಟ್ಟು ಜನರ ಉದ್ಯೋಗಗಳು ಕರಗುತ್ತಿವೆ. ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಂ ಸಮಾಜ ಹೆಚ್ಚು ಆಕ್ರಮಣಶೀಲ, ಅವರದೇ ಪ್ರತ್ಯೇಕ ಜನವಸತಿ ಪ್ರದೇಶಗಳು. ಹೀಗಾಗಿ ಜನಸಂಖ್ಯೆ ಆಯುಧವೇ ಆಗಿಬಿಡುತ್ತದೆ. ಇಡೀ ವಿದ್ಯಮಾನದಲ್ಲಿ ಧ್ವನಿ ಇಲ್ಲದೆ ನರಳುತ್ತಿರುವವರು ಮುಸ್ಲಿಂ ಹೆಣ್ಣುಮಕ್ಕಳು. ಭಾರತದಲ್ಲಿ ಈಗಲೂ ಶೇ 55ರಷ್ಟು ಮುಸ್ಲಿಂ ದಂಪತಿಗಳು ಕುಟುಂಬ ಯೋಜನೆಯ ನಿಯಮಗಳನ್ನು ಪಾಲಿಸುತ್ತಿಲ್ಲ. ಜೊತೆಗೆ ಬಹುಪತ್ನಿತ್ವದ ಹೊಡೆತ ಬೇರೆ. ಹಾಗಾಗಿಯೇ ಅಸ್ಸಾಂನ ಮುಖ್ಯಮಂತ್ರಿಯು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಹೆಚ್ಚಿಸುವ ಕ್ರಮವನ್ನು ಪ್ರಕಟಿಸಿದ್ದಾರೆ.

1951ರ ಭಾರತದ ಜನಗಣತಿಯಲ್ಲಿ ಹಿಂದೂಗಳು ಶೇ 84.1ರಷ್ಟು, ಮುಸ್ಲಿಮರು ಶೇ 9.4ರಷ್ಟು ಇದ್ದರು. 2011ರ ಜನಗಣತಿಯ ವೇಳೆಗೆ ಹಿಂದೂಗಳು ಶೇ 79.8ರಷ್ಟಕ್ಕೆ ಇಳಿದರೆ ಮುಸ್ಲಿಮರ ಜನಸಂಖ್ಯೆ ಶೇ 14.2ರಷ್ಟಕ್ಕೆ ಏರಿದೆ. ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಹೆಚ್ಚಿನಮಟ್ಟಿಗೆ ಯಥಾಸ್ಥಿತಿಯಲ್ಲಿದ್ದಾರೆ. ಸತತವಾಗಿ ಏರಿಕೆ ಕಾಣುತ್ತಿರುವ ಏಕೈಕ ಸಮುದಾಯವೆಂದರೆ ಮುಸ್ಲಿಮರು ಮಾತ್ರ. ಓಲೈಕೆ ರಾಜಕಾರಣದಿಂದ ಹೊರಬರದೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು.

ವಾದಿರಾಜ್‌
ವಾದಿರಾಜ್‌

ಲೇಖಕ: ಆರ್‌ಎಸ್‌ಎಸ್ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT