ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಜನಸಂಖ್ಯೆ ಸ್ಫೋಟ ಭೀತಿಗೆ ಆಧಾರವಿಲ್ಲ

ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಎರಡು ಮಕ್ಕಳ ನೀತಿ ಜಾರಿಯ ಅಗತ್ಯ ಇದೆಯೇ?
Last Updated 2 ಜುಲೈ 2021, 19:30 IST
ಅಕ್ಷರ ಗಾತ್ರ

ಭಾರತದ ‘ಜನಸಂಖ್ಯಾ ಸ್ಫೋಟ’ದ ಭೀತಿಗೆ ಯಾವ ಆಧಾರವೂ ಇರಲಿಲ್ಲ ಎಂಬುದನ್ನು ಇತ್ತೀಚಿನ ದತ್ತಾಂಶಗಳು ಹೇಳುತ್ತಿವೆ. ವಿಶ್ವ ಬ್ಯಾಂಕ್‌ ಅಂದಾಜಿನ ಪ್ರಕಾರ, 2019ರಲ್ಲಿ ಭಾರತದಲ್ಲಿ ಫಲವತ್ತತೆ ದರವು 2.2ರಷ್ಟು ಇತ್ತು. ಅದು ಹೊಸ ತಲೆಮಾರು ಸೃಷ್ಟಿದರಕ್ಕೆ (2.1) ಹತ್ತಿರದಲ್ಲಿಯೇ ಇದೆ.

***

ಎರಡು ಮಕ್ಕಳ ನೀತಿಯು ಉದ್ದೇಶಿತವಲ್ಲದ ಪರಿಣಾಮಗಳಿಗೆ ಕಾರಣ ಆಗಬಹುದು ಎಂಬುದಕ್ಕೆ ಪುರಾವೆಗಳು ಇವೆ. ಮೊದಲನೆಯದಾಗಿ, ಹೆಣ್ಣು ಭ್ರೂಣ ಹತ್ಯೆಯನ್ನು ಇದು ಗಣನೀಯವಾಗಿ ಹೆಚ್ಚಿಸಬಹುದು ಮತ್ತು ಲಿಂಗಾನುಪಾತದ ಸ್ಥಿತಿ ಇನ್ನೂ ಶೋಚನೀಯವಾಗಬಹುದು. ಲಿಂಗ ಪತ್ತೆಯ ಬಳಿಕದ ಗರ್ಭಪಾತದಿಂದಾಗಿ 1990ರಿಂದ ಈವರೆಗೆ 1.58 ಕೋಟಿ ಹೆಣ್ಣು ಮಕ್ಕಳು ‘ನಾಪತ್ತೆ’ ಆಗಿದ್ದಾರೆ ಎಂದು ದಿ ಪಾಪ್ಯುಲೇಷನನ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಅಂದಾಜಿಸಿದೆ. ಎರಡು ಮಕ್ಕಳ ನೀತಿಯು ಈ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸುತ್ತದೆ.

ಎರಡನೆಯದಾಗಿ, ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಉಲ್ಲಂಘನೆಯು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಕುಟುಂಬದ ಗಾತ್ರವನ್ನು ನಿಯಂತ್ರಿಸುವ ಹೊರೆಯು ಅಸಮತೋಲಿತವಾಗಿ, ಮಹಿಳೆಯರ ಮೇಲೆಯೇ ಬೀಳುತ್ತದೆ ಎಂಬುದನ್ನು ದತ್ತಾಂಶಗಳು ತೋರಿಸುತ್ತಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4ರ (ಎನ್‌ಎಫ್‌ಎಚ್‌ಎಸ್‌) (2015–16) ದತ್ತಾಂಶ ಪ್ರಕಾರ, 15–49ರ ವಯೋಮಾನದ ಶೇ 36ರಷ್ಟು ಮಹಿಳೆಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರು ಮತ್ತು ಅನಕ್ಷರಸ್ಥರು. ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗೆ ಒಳಗಾದ ಪುರುಷರ ಪ್ರಮಾಣ ಕೇವಲ ಶೇ 0.3ರಷ್ಟು ಮತ್ತು ಶೇ 5.6ರಷ್ಟು ಪುರುಷರು ಮಾತ್ರ ಕಾಂಡೋಮ್ ಬಳಸುತ್ತಾರೆ.

ಎರಡು ಮಕ್ಕಳನ್ನಷ್ಟೇ ಹೊಂದಬೇಕು ಎಂಬ ದುಷ್ಟ ನೀತಿಯಿಂದಾಗಿ ಮಹಿಳೆಯರು ಅನಪೇಕ್ಷಿತ ಗರ್ಭಪಾತಕ್ಕೆ ಒಳಗಾಗಬೇಕಾಗುತ್ತದೆ ಎಂಬ ಪಾಠವನ್ನು ಚೀನಾವು ನಮಗೆ ಕಲಿಸಿದೆ. ಭಾರತದಲ್ಲಿ ತಾಯಂದಿರ ಮರಣದ ಮೂರನೇ ಅತ್ಯಂತ ದೊಡ್ಡ ಕಾರಣ ಅಸುರಕ್ಷಿತ ಗರ್ಭಪಾತ. ಕೆಲವು ಅಂದಾಜುಗಳ ಪ್ರಕಾರ, ಅಸುರಕ್ಷಿತ ಗರ್ಭಪಾತದಿಂದಾಗಿ ಪ್ರತಿ ದಿನ ಎಂಟು ಮಹಿಳೆಯರು ಬಲಿಯಾಗುತ್ತಿದ್ದಾರೆ.

ಮೂರನೆಯದಾಗಿ, ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ, (ವಿಶೇಷವಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ) ನಡೆಸಲಾದ ಬಲವಂತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿಯಾಗಿಯೇ ಇದೆ. ಗರ್ಭಧಾರಣೆ ತಡೆಯ ಹೆಚ್ಚು ಹೆಚ್ಚು ವಿಧಾನಗಳು ಲಭ್ಯ ಇದ್ದರೆ ಜನರು ಅವುಗಳನ್ನು ಬಳಸುವ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳು ಇವೆ. ಇಂತಹ ವಿಧಾನಗಳು ವ್ಯಾಪಕವಾಗಿ, ಸುಲಭವಾಗಿ, ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದೊಂದಿಗೆ ಲಭ್ಯವಾಗುವಂತೆ ಮಾಡುವುದೇ ನಮ್ಮ ಮುಂದಿರುವ ಸವಾಲು.

ಜನಸಂಖ್ಯಾ ನಿಯಂತ್ರಣ ನೀತಿಗೆ ಸಂಬಂಧಿಸಿ ಭಾರತಕ್ಕೆ ಸುದೀರ್ಘವಾದ ಅನುಭವ ಇದೆ. ಸ್ವತಂತ್ರ ಭಾರತದ ಮರುನಿರ್ಮಾಣದ ಮೊದಲ ಹೆಜ್ಜೆಯಾಗಿ, ರಾಷ್ಟ್ರೀಯ ಯೋಜನಾ ಸಮಿತಿಯು 1940ರ ದಶಕದಲ್ಲಿಯೇಭಾರತದ ಜನಸಂಖ್ಯೆಯ ನಿಯಂತ್ರಣದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿತ್ತು. ಜನಸಂಖ್ಯೆ ಸ್ಫೋಟದ ಭೀತಿಯೇ ಭಾರತದಲ್ಲಿ ಕುಟುಂಬ ಯೋಜನೆ ಪ್ರಯತ್ನಗಳಿಗೆ ಒತ್ತಾಸೆ ನೀಡಿತು. ದೇಶದ ಜನಸಂಖ್ಯೆಯು ತಡೆಯಿಲ್ಲದೆ ಏರಿಕೆಯಾದರೆ ಅರ್ಥಶಾಸ್ತ್ರಜ್ಞ ಮಾಲ್ತೂಸ್‌ ಹೇಳಿದ ಬೇಡಿಕೆ–ಪೂರೈಕೆ ಅಸಮತೋಲನ ಸೃಷ್ಟಿಯಾಗಬಹುದು ಎಂಬ ಎಚ್ಚರಿಕೆಯು ಎಹ್‌ರ್ಲಿಚ್‌ ಅವರ ‘ದಿ ಪಾಪ್ಯುಲೇಷನ್‌ ಬಾಂಬ್‌’ನಂತಹ (1968) ಪುಸ್ತಕಗಳಲ್ಲಿ ಅನುರಣಿಸುತ್ತಲೇ ಇದ್ದವು.

ಹಾಗಿದ್ದರೂ, ಭಾರತದ ‘ಜನಸಂಖ್ಯಾ ಸ್ಫೋಟ’ದ ಭೀತಿಗೆ ಯಾವ ಆಧಾರವೂ ಇರಲಿಲ್ಲ ಎಂಬುದನ್ನು ಇತ್ತೀಚಿನ ದತ್ತಾಂಶಗಳು ಹೇಳುತ್ತಿವೆ. ವಿಶ್ವ ಬ್ಯಾಂಕ್‌ ಅಂದಾಜಿನ ಪ್ರಕಾರ, 2019ರಲ್ಲಿ ಭಾರತದಲ್ಲಿ ಫಲವತ್ತತೆ ದರವು 2.2ರಷ್ಟು ಇತ್ತು. ಅದು ಹೊಸ ತಲೆಮಾರು ಸೃಷ್ಟಿ ದರಕ್ಕೆ (ಜನಸಂಖ್ಯೆ ಪ್ರಮಾಣ ಕಾಯ್ದುಕೊಳ್ಳುವಿಕೆ) (2.1) ಹತ್ತಿರದಲ್ಲಿಯೇ ಇದೆ. 22 ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 13ರಲ್ಲಿ ಈ ದರ ಕಡಿಮೆಯೇ ಇದೆ. 1960ರ ನಂತರದಲ್ಲಿ ವಾರ್ಷಿಕ ಜನಸಂಖ್ಯಾ ಏರಿಕೆಯು 1982ರಲ್ಲಿ ಗರಿಷ್ಠ ಮಟ್ಟದಲ್ಲಿ ಅಂದರೆ ಶೇ 2.33ರಷ್ಟಿತ್ತು. ಅದು ನಂತರ ಇಳಿಕೆಯಾಗುತ್ತಲೇ ಬಂದು 2020ರಲ್ಲಿ ಶೇ 0.99ಕ್ಕೆ ಕುಸಿದಿದೆ. ಜನಸಂಖ್ಯಾ ನಿಯಂತ್ರಣದ ಸೂಚ್ಯಂಕಗಳು ಸಕಾರಾತ್ಮಕ ಪ್ರವೃತ್ತಿಯನ್ನು ಈಗಾಗಲೇ ತೋರಿವೆ. 2015–16ರಲ್ಲಿ 20–24ರೊಳಗಿನ ಮಹಿಳೆಯರಲ್ಲಿ 18 ವರ್ಷದೊಳಗೆ ಮದುವೆಯಾದವರ ಪ್ರಮಾಣವು ಶೇ 26.8ಕ್ಕೆ ಇಳಿದಿದೆ. 2005–06ರಲ್ಲಿ ಇದು ಶೇ 47.4ರಷ್ಟಿತ್ತು. 15–49ರ ವಯಸ್ಸಿನ ಶೇ 55ರಷ್ಟು ಮಹಿಳೆಯರು ಒಂದಲ್ಲ ಒಂದು ರೀತಿಯ ಸಂತಾನವೃದ್ಧಿ ನಿಯಂತ್ರಣ ಸಾಧನಗಳನ್ನು ಬಳಸುತ್ತಿದ್ದಾರೆ(ಎನ್ಎಫ್ಎಚ್‌ಎಸ್‌–4). ಈ ಎಲ್ಲವೂ ನೀತಿಗೆ ಸಂಬಂಧಿಸಿದ ಯಾವುದೇ ಬಲವಂತ ಇಲ್ಲದೇ ಆಗಿವೆ.

ಮುಸ್ಲಿಂ ಸಮುದಾಯದ ಬಡತನ ಮತ್ತು ಅನಕ್ಷರತೆಯನ್ನು ಕಡಿಮೆ ಮಾಡುವುದಕ್ಕಾಗಿ ಎರಡು ಮಕ್ಕಳ ನೀತಿಯನ್ನು ಜಾರಿಗೆ ತರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿಯ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಮೌಲ್ಯಮಾಪನಕ್ಕೆ ಒಳಪಡಿಸಬೇಕು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019–20) ಪ್ರಕಾರ, ಅಸ್ಸಾಂನಲ್ಲಿ ಜನಸಂಖ್ಯೆ ಪ್ರಮಾಣ ಕಾಯ್ದುಕೊಳ್ಳವಿಕೆ ದರವು ಈಗಲೇ 1.9ರಷ್ಟಿದೆ. ಇಲ್ಲಿನ ಹಿಂದೂಗಳು (1.65) ಮತ್ತು ಮುಸ್ಲಿಮರ (2.4) ಫಲವತ್ತತೆ ದರದ ನಡುವಣ ಅಂತರವು ಕಳೆದ ಕೆಲವು ದಶಕಗಳಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ರಾಜ್ಯದಲ್ಲಿರುವ ಶೇ 61ರಷ್ಟು ಮಹಿಳೆಯರು ಒಂದಲ್ಲ ಒಂದು ರೀತಿಯ ಸಂತಾನೋತ್ಪತ್ತಿ ತಡೆ ವಿಧಾನಗಳನ್ನು ಅನುಸರಿಸುತ್ತಿದ್ದಾರೆ (ಎನ್‌ಎಫ್‌ಎಚ್‌ಎಸ್‌–5). 2015–16ರಿಂದ 2019–20ರ ಅವಧಿಯಲ್ಲಿ, ಐದು ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಸಂಖ್ಯೆಯು 964ಕ್ಕೆ ಏರಿದೆ. ಹಿಂದೆ ಇದು 929 ಇತ್ತು.

2015ರಲ್ಲಿ ಅಸ್ಸಾಂನಲ್ಲಿ ಶೇ 55ರಷ್ಟು ಗರ್ಭಧಾರಣೆಯು ಅನಪೇಕ್ಷಿತವಾಗಿತ್ತು; ಇವುಗಳ ಪೈಕಿ ಶೇ 74ರಷ್ಟು ಗರ್ಭಪಾತವಾಗಿದೆ. ಅದರಲ್ಲಿ ಶೇ 21ರಷ್ಟು ಗರ್ಭಪಾತ ಮಾತ್ರ ಆರೋಗ್ಯ ವ್ಯವಸ್ಥೆಯಲ್ಲಿ ಆಗಿದೆ. ಸಂತಾನೋತ್ಪತ್ತಿ ಆರೋಗ್ಯದ ಪ್ರಮುಖ ಸೂಚಕಗಳಲ್ಲಿ ರಾಜ್ಯವು ಮಾಡಿರುವ ಕೆಲವು ಸಾಧನೆಗಳಿಗೆ ಎರಡು ಮಕ್ಕಳ ನೀತಿಯಿಂದಾಗಿ ಹಿನ್ನಡೆ ಆಗಬಹುದು. ಜನಸಂಖ್ಯಾ ಸ್ಫೋಟವು ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ ಎಂಬ ವಾದಕ್ಕೆ ಯಾವುದೇ ಪುರಾವೆಯ ಬೆಂಬಲ ಇಲ್ಲ. ವಾಸ್ತವವು ಅದಕ್ಕೆ ವ್ಯತಿರಿಕ್ತವಾಗಿಯೇ ಇದೆ.

ಸಾಕ್ಷರತೆ ಹೆಚ್ಚಳ, ಆರ್ಥಿಕ ಸ್ಥಿತಿಯ ಸುಧಾರಣೆ, ಮಹಿಳೆಯರ ಸಶಕ್ತೀಕರಣ ಮತ್ತು ಜನರಿಗೆ ಇರುವ ಆಯ್ಕೆಯ ನೆಲೆಯ ವಿಸ್ತರಣೆಗಳನ್ನು ಒಳಗೊಂಡಿರುವ ಅಭಿವೃದ್ಧಿಯು ಜನನ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತದೆ. ಇದರಿಂದಾಗಿ, ಕುಟುಂಬದ ಗಾತ್ರವು ಸಹಜವಾಗಿಯೇ ಕುಗ್ಗುತ್ತದೆ. ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧಿಸಿ, ಅವರಲ್ಲಿನ ಬಡತನವನ್ನು ಕಡಿಮೆ ಮಾಡಬೇಕು ಎಂಬ ಪ್ರಾಮಾಣಿಕ ಇಚ್ಛೆಯು ಸರ್ಕಾರಕ್ಕೆ ಇದ್ದರೆ, ಹೆಣ್ಣು ಮಕ್ಕಳು ಶಾಲಾ ಕಲಿಕೆ ಮುಂದುವರಿಸಲು ಸರ್ಕಾರವು ಪ್ರೋತ್ಸಾಹ ನೀಡಬೇಕು. ಮದುವೆಯ ವಯಸ್ಸು ಹೆಚ್ಚಬೇಕು ಮತ್ತು ಕುಟುಂಬ ಯೋಜನೆ ವಿಧಾನಗಳ ಗುಣಮಟ್ಟ ಹೆಚ್ಚಳವಾಗಬೇಕು. ಜನಸಂಖ್ಯಾ ನಿಯಂತ್ರಣಕ್ಕೆ ಹಲವು ರೀತಿಯ ವಿಧಾನಗಳು ಜನರಿಗೆ ಲಭ್ಯ ಇರುವಂತೆ ನೋಡಿಕೊಳ್ಳಬೇಕು.

ಶ್ರೀಲತಾ ರಾವ್ ಶೇಷಾದ್ರಿ
ಶ್ರೀಲತಾ ರಾವ್ ಶೇಷಾದ್ರಿ

ಲೇಖಕಿ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT