ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ: ಕನ್ನಡವನ್ನು ಪ್ರೀತಿಸಿ, ಹಿಂದಿ ದ್ವೇಷ ಬೇಡ

Last Updated 21 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

ರಾಜಭಾಷಾ ಅಧಿನಿಯಮ 1963ರ ಅಡಿಯಲ್ಲಿ 1976ರಲ್ಲಿ ರಚಿಸಲಾದ ಕೇಂದ್ರ ಗೃಹ ಸಚಿವರ ನೇತೃತ್ವದ ಸಂಸದೀಯ ರಾಜಾಭಾಷಾ ಸಮಿತಿಯು ತನ್ನ 11ನೇ ವರದಿಯನ್ನು ಇತ್ತೀಚೆಗೆ ರಾಷ್ಟ್ರಪತಿಯವರಿಗೆ ಸಲ್ಲಿಸಿದ ಮೇಲೆ ಆಗಾಗ ಕೇಳಿಬರುತ್ತಲೇ ಇರುವ ಹಿಂದಿ ಹೇರಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆಡಳಿತ ಸಂವಹನ, ಉನ್ನತ ಶಿಕ್ಷಣ, ಕೋರ್ಟ್ ಕಲಾಪಗಳಲ್ಲಿ ಹಿಂದಿಗೆ ಆದ್ಯತೆ ನೀಡಬೇಕು ಎಂದು ಸಮಿತಿಯ ವರದಿ ಶಿಫಾರಸು ಮಾಡಿದೆ ಎನ್ನುವ ಸಂಗತಿ ಮೊದಲು ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿರೋಧಕ್ಕೆ ಕಾರಣವಾಯಿತು.

ಕರ್ನಾಟಕದಲ್ಲಿಯೂ ವಿರೋಧದ ಧ್ವನಿ ಕೇಳಿಬಂತು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಕುರಿತು ಪತ್ರ ಬರೆದದ್ದೇ ಅಲ್ಲದೇ ‘ಹಿಂದಿ ಹೇರಿಕೆ’ಯನ್ನು ವಿರೋಧಿಸಿ ರಾಜ್ಯ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕಾರವಾಗುವಂತೆ ನೋಡಿಕೊಂಡರು. ‘ಬಹುತೇಕ ಸಾರ್ವಜನಿಕ ಕಚೇರಿಗಳಲ್ಲಿ ಭಾರತೀಯ ಭಾಷೆಗಳ ಬಳಕೆ ಕಳವಳಕಾರಿ ಉಂಟು ಮಾಡುವಷ್ಟು ಕಡಿಮೆ ಪ್ರಮಾಣದಲ್ಲಿದೆ. ರಾಜ್ಯಗಳಲ್ಲಿ ಇಂಗ್ಲಿಷ್ ಬದಲು ಆಯಾ ರಾಜ್ಯಗಳ ಭಾಷೆಗಳನ್ನು ಆದ್ಯತೆಕೊಟ್ಟು ಬಳಸಬೇಕು’ ಎಂದೂ ಈ ಸಮಿತಿ ಶಿಫಾರಸು ಮಾಡಿದೆ ಎನ್ನುವುದು ಬಹುಶಃ ಇವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಹಾಗೆಯೇ ಸುಮಾರು ಒಂದು ನೂರು ಶಿಫಾರಸುಗಳಿವೆ ಎನ್ನಲಾಗುವ ಈ ವರದಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದ್ದು ಇನ್ನೂ ಸಂಸತ್ತಿನಲ್ಲಿ ಮಂಡನೆಯಾಗಿ ಬಹಿರಂಗವಾಗಿಲ್ಲ ಎನ್ನುವ ಸಂಗತಿಯೂ ಗಮನಕ್ಕೆ ಬಂದಿರಲಿಕ್ಕಿಲ್ಲ.

ಕೇಂದ್ರದ ಆಡಳಿತ ಭಾಷೆಗೆ ಸಂಬಂಧಿಸಿದಂತೆ ಸಂವಿಧಾನದ 343ನೇ ವಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಹಿಂದಿ ಭಾಷೆ ಕೇಂದ್ರದ ಅಧಿಕೃತ ಆಡಳಿತ ಭಾಷೆಯಾಗಬೇಕು ಮತ್ತು ಸಂವಿಧಾನ ಜಾರಿಗೆ ಬಂದು ಹದಿನೈದು ವರ್ಷಗಳವರೆಗೆ ಮಾತ್ರ ಇಂಗ್ಲಿಷ್ ಭಾಷೆಯನ್ನೂ ಬಳಸಬಹುದು ಎಂದು ಹೇಳಲಾಗಿದೆ. ದಕ್ಷಿಣದ ರಾಜ್ಯಗಳ ಅದರಲ್ಲೂ ತಮಿಳುನಾಡಿನ ದ್ರಾವಿಡ ಆಂದೋಲನದ ವಿರೋಧದ ಕಾರಣ ಇಂಗ್ಲಿಷ್ ಬಳಕೆ ಮುಂದುವರಿದಿರುವುದು ನಿಜವಾದರೂ ಹಿಂದಿ ಕೇಂದ್ರದ ಆಡಳಿತ ಭಾಷೆಯಾಗಲಿ ಎನ್ನುವುದು ಸಂವಿಧಾನ ರಚಿಸಿದವರ ಆಶಯವಾಗಿತ್ತು ಎನ್ನುವುದೂ ಸತ್ಯ. ಮಹಾತ್ಮ ಗಾಂಧಿಯವರೂ ಸೇರಿದಂತೆ ಬಹುತೇಕ ನಾಯಕರಲ್ಲಿ ಹಿಂದಿಯ ಬಗ್ಗೆ ಒಲವಿತ್ತು ಎನ್ನುವುದಕ್ಕೆ ಉಲ್ಲೇಖಗಳು ಸಿಗುತ್ತವೆ.

ಹಿಂದಿ ವಿರೋಧದ ಬೇರುಗಳನ್ನು ಹುಡುಕುತ್ತ ಹೊರಟರೆ ತಮಿಳುನಾಡಿನ ಪೆರಿಯಾರ್ ನೇತೃತ್ವದ ದ್ರಾವಿಡ ಚಳವಳಿಗೆ ಹೋಗಿ ನಿಲ್ಲುತ್ತದೆ. 1930ರ ದಶಕದಲ್ಲಿ ಸಿ. ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಾಲೆಗಳಲ್ಲಿ ಹಿಂದಿಯನ್ನು ಪರಿಚಯಿಸಲು ಹೊರಟಾಗ ದ್ರಾವಿಡ ಆಂದೋಲನವು ಪ್ರಬಲವಾಗಿ ವಿರೋಧಿಸಿತು. ಸ್ವಾತಂತ್ರ್ಯಾನಂತರವೂ ದ್ರಾವಿಡ ಆಂದೋಲನ ಮೂಲದ ರಾಜಕೀಯ ಪಕ್ಷಗಳಿಗೆ ಉತ್ತರದ ಕಾಂಗ್ರೆಸ್‍ನ ಪ್ರತಿನಿಧಿಯಾಗಿಹಿಂದಿ ಕಂಡಿತು. ಇಂದಿಗೂ ತಮಿಳುನಾಡಿನಲ್ಲಿ ಪ್ರಬಲವಾಗಿರುವ ದ್ರಾವಿಡ ಚಳವಳಿಯ ಮೂಲದ ರಾಜಕೀಯ ಪಕ್ಷಗಳೂ ಸೇರಿದಂತೆ ದೇಶದ ಉಳಿದ ಪ್ರಾದೇಶಿಕ ಪಕ್ಷಗಳ ರಾಜಕೀಯ ಲಾಭಕ್ಕೆ ಹಿಂದಿ ವಿರೋಧ ಒಂದು ಸಲಕರಣೆ ಯಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಹಾಗಾಗಿ ಸ್ಪಷ್ಟವಾಗಬೇಕಾದದ್ದು ಪ್ರತಿರೋಧ ಹಿಂದಿ ಭಾಷೆಗೋ ಅಥವಾ ಹಿಂದಿ ಭಾಷೆ ಪ್ರತಿನಿಧಿಸುವ ದೆಹಲಿ ಕೇಂದ್ರಿತ ವ್ಯವಸ್ಥೆಯ ವಿರುದ್ಧವೋ? ಎರಡರ ನಡುವೆ ವ್ಯತ್ಯಾಸ ಇದೆ ಎನ್ನುವುದನ್ನು ಗ್ರಹಿಸಬೇಕು.

ಬಹುಭಾಷಾ ಜ್ಞಾನ ಭಾರತೀಯರಲ್ಲಿ ಸಹಜವಾಗಿ ಇರುವಂತಹುದು. ತಮ್ಮ ಮಾತೃಭಾಷೆಯ ಜೊತೆಗೆ ಉಳಿದ ಒಂದೆರಡು ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯವನ್ನು ನಮ್ಮ ದೇಶದ ಬಹುತೇಕ ಜನರಲ್ಲಿ ಕಾಣಬಹುದು. ಹಾಗೆಯೇ ಹಿಂದಿ ಭಾಷಿಕ ಪ್ರದೇಶಗಳನ್ನು ಬಿಟ್ಟು ಉಳಿದ ಪ್ರದೇಶಗಳಿಗೂ ಹಿಂದಿ ಭಾಷೆಯ ಜ್ಞಾನ ಅಲ್ಪಸ್ವಲ್ಪವಾದರೂ ಮುಟ್ಟಿದೆ. ಇದಕ್ಕೆ ಕಾರಣ ಶಾಲಾ ಪಠ್ಯವಲ್ಲ. ಯಾತ್ರಿಕರು-ವಲಸಿಗರಿರಬಹುದು, ರಾಷ್ಟ್ರ ಮಟ್ಟದ ಟಿ.ವಿ. ವಾಹಿನಿಗಳು, ಸಿನಿಮಾಗಳು ಕಾರಣವಿರಬಹುದು. ಹಾಗಾಗಿ ಯಾವುದೇ ಹಿಂದಿಯೇತರ ರಾಜ್ಯಕ್ಕೆ ಕಾಲಿಟ್ಟರೂ ಇಂಗ್ಲಿಷ್‍ಗಿಂತ ಹಿಂದಿ ಸಹಜವಾಗಿ ಸಂವಹನಕ್ಕೆ ನೆರವಾಗುತ್ತದೆ.

ಇಂಗ್ಲಿಷ್ ಅನ್ನ ನೀಡುವ ಭಾಷೆ. ಹಾಗಾಗಿ ಇಂಗ್ಲಿಷ್ ಬೇಕು. ಹಿಂದಿ ಬೇಡ, ಮಾತೃಭಾಷೆಯೂ ಬೇಡ ಎಂದು ಒಂದು ವರ್ಗ ಆಗ್ರಹಿಸುತ್ತದೆ. ಇದು ನಗರಕೇಂದ್ರಿತ ಉದ್ಯೋಗ ವರ್ಗದ ಗ್ರಹಿಕೆ ಎನ್ನುವುದು ಸ್ಪಷ್ಟ. ಕರ್ನಾಟಕದ ಕರಾವಳಿ, ಮಲೆನಾಡಿನ ಅಡಿಕೆ ವ್ಯಾಪಾರಿಗಳು ಕಾನ್ಪುರ ಮೊದಲಾದೆಡೆಯ ಉತ್ತರದ ವ್ಯಾಪಾರಿಗಳೊಂದಿಗೆ ವ್ಯವಹಾರ ಮಾಡುತ್ತಾರೆ. ಬಡತನಪೀಡಿತ ಪೂರ್ವೋತ್ತರ ರಾಜ್ಯಗಳ ಜನರು ದೇಶದ ವಿವಿಧೆಡೆಗಳಿಗೆ ಉದ್ಯೋಗವನ್ನರಸಿ ಹೋಗುತ್ತಾರೆ. ಬಹಳ ಹಿಂದೆಯೇ ಉಡುಪಿ ಸುತ್ತಲಿನ ಜನರು ಮುಂಬೈ, ಹೈದರಾಬಾದ್‌ ಮೊದಲಾದ ಕಡೆ ವಲಸೆ ಹೋಗಿ ಹೋಟೆಲ್ ಉದ್ಯಮವನ್ನಾರಂಭಿಸಿದರು. ಗುಜರಾತ್, ರಾಜಸ್ಥಾನಗಳ ಮಾರ್ವಾಡಿ ಸಮುದಾಯದವರು ದೇಶದ ಮೂಲೆಮೂಲೆಗಳಿಗೆ ಹೋಗಿ ಅಂಗಡಿಗಳನ್ನು ತೆರೆದರು. ಇವರೆಲ್ಲರಿಗೂ ಹಿಂದಿಯೇ ಸಂಪರ್ಕ ಭಾಷೆ.

ಭಾಷೆ ಸಂವಹನ ಮಾಧ್ಯಮ ಮಾತ್ರ ಅಲ್ಲ, ಸಂಸ್ಕೃತಿಯ ವಾಹಕವೂ ಹೌದು. ಆದರೆ, ಭಾರತೀಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು, ಜೀವನ ಮತ್ತು ಚಿಂತನೆಯನ್ನು ಭಾರತೀಯ ಭಾಷೆಯಷ್ಟು ಸಮರ್ಥವಾಗಿಇಂಗ್ಲಿಷ್‌ ಪ್ರತಿಬಿಂಬಿಸಲಾರದು. ಕಾಂತಾರದಂತಹ ಸಿನಿಮಾ ಮೂಲಕ ತುಳುನಾಡಿನ ಸಂಸ್ಕೃತಿಯ ಪರಿಚಯ ಉತ್ತರ ಭಾರತಕ್ಕೆ ಆಗುತ್ತಿದೆ ಎಂದರೆ ಹಿಂದಿ ಡಬ್ಬಿಂಗ್ ಕೂಡ ಕಾರಣ.

ಹಿಂದಿಯೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳಿಗೆ ಸಮಾನ ಪ್ರತಿರೋಧ ಒಡ್ಡುತ್ತಿರುವುದು ಇಂಗ್ಲಿಷ್ ಭಾಷೆ. ಇಂಗ್ಲಿಷ್‌ನ ಬೆನ್ನೇರಿ ಪಶ್ಚಿಮದ ಚಿಂತನಾ ಶೈಲಿ, ಆಚರಣೆಗಳು ನಮ್ಮ ಮನೆಯ ಪಡಸಾಲೆಗೆ ನಮಗರಿಯದಂತೇ ನುಗ್ಗಿವೆ ಎನ್ನುವುದನ್ನು ನಾವು ಗಮನಿಸಬೇಕು. ಆದರೆ, ಇಂಗ್ಲಿಷ್‌ ಭಾಷೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗದ ಸ್ಥಿತಿಯನ್ನು ನಾವು ತಲುಪಿದ್ದೇವೆ. ಹಾಗಾಗಿ ಪರ್ಯಾಯವಾಗಿ ಭಾರತೀಯ ಭಾಷೆಗಳನ್ನು ಪೋಷಿಸಬೇಕಾದ ತುರ್ತು ಎದುರಾಗಿದೆ. ಇಂಗ್ಲಿಷ್ ಭಾಷೆಯ ಸ್ಥಾನವನ್ನು ಹಿಂದಿಯು ಸಮರ್ಥವಾಗಿ ತುಂಬಬಹುದಾದರೆ ಅದನ್ನು ವಿರೋಧಿಸುವುದು ಸರಿಯಾದುದಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂವಹನಕ್ಕಾಗಿ ಇಂಗ್ಲಿಷ್‌, ಭಾರತದೊಳಗೆ ಸಂಪರ್ಕ ಮಾಧ್ಯಮವಾಗಿ ಹಿಂದಿ, ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ – ಈ ತ್ರಿಭಾಷಾ ಸೂತ್ರ ವ್ಯಾವಹಾರಿಕವಾಗಿ ಸೂಕ್ತವಾಗಬಲ್ಲುದು.

ವಿಶ್ವದ ಅತಿಹೆಚ್ಚು ಜನರು ಮಾತನಾಡುವ ಭಾಷೆಗಳ ಪೈಕಿ ಹಿಂದಿ 3ನೇ ಸ್ಥಾನದಲ್ಲಿದೆ. ಹಿಂದಿ ಭಾಷಿಕರ ಸಂಖ್ಯೆ 60 ಕೋಟಿಗೂ ಹೆಚ್ಚು. ಆದರೂ ಯಾವೊಂದು ಭಾರತೀಯ ಭಾಷೆಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗದಿರಲು ನಾವು ಇಂಗ್ಲಿಷ್ ಭಾಷೆಯನ್ನು ಅಪ್ಪಿಕೊಂಡಿರುವುದು ಮತ್ತು ಒಂದು ವರ್ಗದ ಹಿಂದಿ ವಿರೋಧವೇ ಕಾರಣ.

ಸತ್ಯನಾರಾಯಣ ಶಾನಭಾಗ
ಸತ್ಯನಾರಾಯಣ ಶಾನಭಾಗ

‘ಕನ್ನಡ ನುಡಿಯೂ ನಾಡೂ ನಮ್ಮ ನಡುಮನೆ ಯಾದರೂ ವಿಶ್ವವೆಂಬೀ ಪಗಡೀಪಟದಲ್ಲಿ ಭರತ ಭೂಮಿಯೇ ನಮ್ಮ ಕಟ್ಟೆಯ ಮನೆ... ಭಾರತೀಯ ಸಂಸ್ಕೃತಿಯೂ ಕರ್ನಾಟಕ ಸಂಸ್ಕೃತಿ... ಕರ್ನಾಟಕ ಸಂಸ್ಕೃತಿಯಲ್ಲಿ ಭಾರತ ಸಂಸ್ಕೃತಿ ಅಂತರ್ಯಾಮಿಯಾಗಿದೆ’ ಎಂದು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕತ್ವದ ವಿಕಾಸ’ ಎನ್ನುವ ಗ್ರಂಥದಲ್ಲಿ ಅಭಿಪ್ರಾಯಪಡುತ್ತಾರೆ. ರಾಷ್ಟ್ರವನ್ನು ಭಾಷಾತತ್ವದ ಮೇಲೆ ವಿಭಾಗ ಮಾಡುವುದು ‘ಆಯಾ ಪ್ರಾಂತದ ಜನರು ಗುಂಪಾಗಿ ಸೇರಿ ತಮ್ಮ ತಮ್ಮ ಉನ್ನತಿಯನ್ನು ಮಾಡಿಕೊಳ್ಳುವುದು ರಾಷ್ಟ್ರೀಯತ್ವಕ್ಕೆ ಪೋಷಕವಾದ ಉಪಾಯವೆಂದೂ ರಾಷ್ಟ್ರೋದ್ಧಾರಕ್ಕೆ ಅನುಕೂಲವಾದ ಸಂಗತಿ’ ಎನ್ನುವ ಸ್ಪಷ್ಟತೆ ಇತ್ತು. ಇಂತಹ ರಾಷ್ಟ್ರೀಯ ದೃಷ್ಟಿಯಿದ್ದರೆ ಮಾತೃಭಾಷೆಯಾದ ಕನ್ನಡದ ಜೊತೆಗೆ ಹಿಂದಿಯೂ ಸೇರಿದಂತೆ ಉಳಿದೆಲ್ಲ ಭಾರತೀಯ ಭಾಷೆಗಳೂ ನಮ್ಮವೇ ಎನ್ನುವ ಭಾವ ಬರುತ್ತದೆ. ಕನ್ನಡದ ಪ್ರಗತಿ ಕನ್ನಡನಾಡಿನ ಅಭಿವೃದ್ಧಿ ಆದ್ಯತೆಯಾಗಬೇಕೇ ಹೊರತು ನಮ್ಮವರೇ ಆದ ನೆರಮನೆಯವರ ವಿರೋಧವಲ್ಲ ಎನ್ನುವ ಧೋರಣೆ ಬಲಿಯುತ್ತದೆ.

ಲೇಖಕ: ಐಟಿ ಉದ್ಯೋಗಿ, ಹವ್ಯಾಸಿ ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT