ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಗುಡ್ಡಕ್ಕೆ ಗುಡ್ಡ ‘ಮರೆ ಮಾಡುವ’ ಆಟ

ಸರ್ಕಾರವು ತನ್ನ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ಹೊರಟಿರುವುದು ಸರಿಯಾದ ಕ್ರಮವೇ?
Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

‘ನಾವೇನೂ ಸನ್ಯಾಸಿಗಳಲ್ಲ’– ‘ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆ’ ಕೇಳಿದರೆ, ರಾಜಕಾರಣಿಗಳಿಂದ ಪಕ್ಷ ಭೇದ ಇಲ್ಲದೆ ಬರುವ ಸಿದ್ಧ ಉತ್ತರ ಇದು. ನಾಡಿನಲ್ಲೀಗ ಸನ್ಯಾಸಿಗಳದೇ ಹದ ಕೆಡುತ್ತಿರುವಾಗ, ರಾಜಕಾರಣಿಗಳು ಕೊಳೆತು ನಾರುತ್ತಿರುವುದರಲ್ಲಿ ಯಾರಿಗೂ ವಿಶೇಷ ಕಾಣಿಸುತ್ತಿಲ್ಲ. ಇದು ಕಳೆದ ನಾಲ್ಕು ದಶಕಗಳಲ್ಲಿ ಬದಲಾಗುತ್ತಾ ಬಂದಿರುವ ಸಾರ್ವಜನಿಕ ಬದುಕಿನ ಮೌಲ್ಯ.

1972-80ರ ಅವಧಿಯನ್ನು ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಸಾರ್ವಜನಿಕ ರೂಪ ಸಿಗತೊಡಗಿದ ಅವಧಿ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮೊದಲು ಭ್ರಷ್ಟಾಚಾರ ಇರಲಿಲ್ಲ ಎಂದಲ್ಲ. ಭ್ರಷ್ಟಾಚಾರಕ್ಕೊಂದು ಖಾಸಗಿ ಸ್ವರೂಪ ಇತ್ತು ಮತ್ತು ‘ಮರ್ಯಾದೆ’ಯ ಭಯ ಇತ್ತು. ಅಲ್ಲಿಂದೀಚೆಗೆ ಒಬ್ಬರ ಕಾಲದಲ್ಲಿ ದುಡ್ಡುಕೊಟ್ಟರೆ ಕೆಲಸ ಆಗುತ್ತಿತ್ತು; ಇನ್ನೊಬ್ಬರಕಾಲದಲ್ಲಿ ದುಡ್ಡು ಕೊಟ್ಟರೂ ಕೆಲಸ ಆಗುತ್ತಿಲ್ಲ; ಆ ಬಳಿಕ ಫಿಕ್ಸೆಡ್ ರೇಟು; ಮುಂದೆ ಕಮಿಷನ್ ಏಜೆಂಟರು; ಅದೂ ಡಲ್ಲಾದಾಗ ಸಾಂಸ್ಥಿಕ ಲೂಟಿ… ಹೀಗೆ ಭ್ರಷ್ಟಾಚಾರ ನಾಡಿನಲ್ಲಿ ಬೆಳೆಯುತ್ತಾ ಬಂದದ್ದೇ ಒಂದು ಕೌತುಕದ ಕಥೆ.

ಇವತ್ತು ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ, ಭ್ರಷ್ಟಾಚಾರದ ಉದ್ದೇಶ ಈಗ ಹಣ ಮಾಡುವುದಲ್ಲ. ಹಿಂದೆಲ್ಲ, ಚುನಾವಣೆಗೆ ಖರ್ಚು ಮಾಡಿದ ಹಣವನ್ನು ಭ್ರಷ್ಟಾಚಾರದ ಮೂಲಕ ದುಡಿಯುವುದು ಅಥವಾ ತಾನು ಗೆಲ್ಲುವುದಿಲ್ಲ ಎಂದು ಖಚಿತವಿದ್ದರೆ, ನಾಲ್ಕು ಕಾಸು ಮಾಡಿಕೊಂಡು ಹೊರತೆರಳುವುದು ರಾಜಕಾರಣಿಗಳ ಉದ್ದೇಶ ಆಗಿರುತ್ತಿತ್ತು. ಆದರೆ ಇಂದು ಆ ಸ್ಥಿತಿ ಬದಲಾಗಿದೆ. ರಾಜಕಾರಣಿಗಳೆಂಬ ಮಧ್ಯವರ್ತಿಗಳು ಬೇಡ ಎಂದು ತಾವೇ ಸ್ವತಃ ರಂಗಕ್ಕಿಳಿದಿರುವ ರಿಯಲ್ ಎಸ್ಟೇಟ್ ಏಜೆಂಟರು, ಅಡ್ಡಕಸುಬಿಗಳು, ಉದ್ಯಮಪತಿಗಳು ಅಥವಾ ಅವರ ಪ್ರಾಕ್ಸಿಗಳು, ಮೊದಲೇ ತಾವು ದುಡಿದಿಟ್ಟಿರುವ ಕೋಟಿಗಟ್ಟಲೆ ಹಣವನ್ನು ಚೆಲ್ಲಿ ಚುನಾವಣೆ ಗೆಲ್ಲುತ್ತಿದ್ದಾರೆ.

ಭ್ರಷ್ಟ ವ್ಯವಸ್ಥೆಗೆ ಆರ್ಥಿಕ ಉದಾರೀಕರಣದ ಕೊಡುಗೆ ಏನೆಂದರೆ, ಭ್ರಷ್ಟಾಚಾರದ ಗಾತ್ರವನ್ನು ಹಿಗ್ಗಿಸಿ, ಅದು ಜನಸಾಮಾನ್ಯರ ಕಣ್ಣಿಗೆ ಕಾಣಿಸದಂತೆ ಭೂಮಗಾತ್ರಗೊಳಿಸಿದ್ದು. ಇಂದು ರಾಜಕಾರಣಿಗಳಾಗಿ ಕುಳಿತಿರುವವರಿಗೆ ಶಾಸಕೀಯ ತೀರ್ಮಾನಗಳ ಮೂಲಕವೇ ಸಂಪತ್ತಿನ ಹರಿವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುವ ತಂತ್ರ ಕರತಲಾಮಲಕ. ತಾವಿರುವ ಸ್ಥಾನದ-ಹುದ್ದೆಯ ಲಾಭ ಪಡೆದುಕೊಳ್ಳುವ ‘ಡು-ರೀಡೂ-ಕ್ಯಾನ್ ಡೂ’ ವಿದ್ಯೆಗಳಲ್ಲೆಲ್ಲ ಅವರು ಪಾರಂಗತರು. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಕರ್ನಾಟಕದ ರಾಜಕೀಯದಲ್ಲಿ ಇವರದೇ ಭರಾಟೆ. ಜನಸಾಮಾನ್ಯರಿಗೂ ಇದೆಲ್ಲ ಅಭ್ಯಾಸ ಆಗಿಬಿಟ್ಟಿದೆ ಎನ್ನುವುದು ರಾಜಕಾರಣಿಗಳಿಗೂ ಇಂದು ಚೆನ್ನಾಗಿ ಅರಿವಿದೆ.

ಶೇಕಡ 40ರ ಆಟ

ಯಾವಾಗ ಶಾಸಕೀಯ ತೀರ್ಮಾನಗಳು ಮತ್ತು ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ನಡೆಯುವ ‘ಗುತ್ತಿಗೆದಾರ ಪ್ರಿಯ’ ಕಾಮಗಾರಿಗಳೇ ಹಣದ ಹರಿವಿನ ಮೂಲಗಳಾದವೋ, ಆವತ್ತಿನಿಂದಲೇ ನಾಡಿನಲ್ಲಿ ಗುತ್ತಿಗೆದಾರರ ಕಾರ್ಟೆಲ್ ಬಹಳ ಪ್ರಭಾವಿ ಆಯಿತು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಯಾರೇ ಮುಖ್ಯಮಂತ್ರಿ ಆದರೂ, ಯಾರೇ ಸಚಿವರಾದರೂ ಅವರ ಸಾಮೀಪ್ಯ ಪಡೆದುಕೊಳ್ಳಬಲ್ಲ ‘ಪಕ್ಷಾತೀತ’ ಕಾರ್ಟೆಲ್ ಅದು. ಇದೇನೂ ಕದ್ದುಮುಚ್ಚಿ ನಡೆಯುವ ಕಳ್ಳಾಟವಲ್ಲ. ವಿಧಾನಸೌಧದ ಕಂಬಗಳೆಲ್ಲ ಇದಕ್ಕೆ ಸಾಕ್ಷಿ.

ರಾಜ್ಯ ವಿಧಾನಸಭೆಗೆ ಚುನಾವಣೆ ಎದುರು ಬಂದು ನಿಂತಿದೆ, ಹಾಗಾಗಿ, ಶೇಕಡ 40 ಕಮಿಷನ್ ವಿಚಾರ ಸದ್ದು ಮಾಡುತ್ತಿದೆ. ಇದೇನೂ ಗಾಳಿ ಸುದ್ದಿ ಅಲ್ಲ. ಕೊಟ್ಟವರೇ ಕ್ಯಾಮೆರಾಗಳ ಎದುರು ಬಂದು ‘ಕೊಟ್ಟಿದ್ದೇವೆ’ ಎಂದು ಹೇಳುತ್ತಿದ್ದಾರೆ. ಇಂತಹದೊಂದು ಸನ್ನಿವೇಶದಲ್ಲಿ ವಾತಾವರಣ ಆರೋಗ್ಯಕರ ಇದ್ದಿದ್ದರೆ ಏನಾಗಬೇಕಿತ್ತು? ನೇರವಾಗಿ ಸರ್ಕಾರದ ಮೇಲೇ ಆಪಾದನೆ ಮಾಡಲಾಗಿದೆ. ಆದರೆ ಸರ್ಕಾರ, ಈ ಆಪಾದನೆಗಳನ್ನು ಕೇವಲ ರಾಜಕೀಯವಾಗಿಯೇ ನಿಭಾಯಿಸಲು ಪ್ರಯತ್ನಿಸುತ್ತಿದೆ. ಈ ನಾಟಕವನ್ನು ಕಂಡ ಬಳಿಕವಾದರೂ, ಭ್ರಷ್ಟಾಚಾರ ನಿರೋಧಕ್ಕೆಂದೇ ಇರುವ ಕೇಂದ್ರದ ಅಥವಾ ರಾಜ್ಯ ಸರ್ಕಾರದ ‘ಸ್ವತಂತ್ರ ಎಂದು ಘೋಷಿಸಿಕೊಂಡಿರುವ’ ಯಾವುದಾದರೂ ಏಜೆನ್ಸಿಯೋ ಅಥವಾ ಸ್ವತಃ ನ್ಯಾಯಾಂಗವೋ, ಸ್ವಪ್ರೇರಣೆಯಿಂದ ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಬೇಕಿತ್ತು. ಅದು ಆಗುತ್ತಿಲ್ಲ. ಬದಲಾಗಿ, ಸ್ವತಃ ಆಡಳಿತದಲ್ಲಿರುವ ಸರ್ಕಾರ, ತನ್ನ ಮೇಲೆ ದೂರು ಹಾಕಿದರೆ, ತಾನು ಹಿಂದಿನ ಸರ್ಕಾರಗಳ ಇಂತಹದೇ ಕೆಸರನ್ನು ಎತ್ತಿಹಾಕಿ ಇನ್ನಷ್ಟು ರಾಡಿ ಎಬ್ಬಿಸುತ್ತೇನೆ ಎಂದು ಬೆದರಿಸಿದ್ದು ವರದಿ ಆಗಿದೆ.

ಬೇವು ಬಿತ್ತಿ ಮಾವು…?

ರಾಜ್ಯದ ಹಾಲಿ ಶಾಸಕರ ಪೈಕಿ ಪ್ರತೀ ಮೂವರಲ್ಲೊಬ್ಬರು ಕ್ರಿಮಿನಲ್ ಮತ್ತು ಪ್ರತೀ ಐವರಲ್ಲೊಬ್ಬರು ಗಂಭೀರ ಸ್ವರೂಪದ ಅಪರಾಧಗಳ ಹಿನ್ನೆಲೆ ಇರುವವರು ಎಂದು ಎಡಿಆರ್‌ ಸಮೀಕ್ಷೆ ಹೇಳುತ್ತದೆ. ಇದನ್ನೆಲ್ಲ ಈ ಶಾಸಕರು 2018ರ ತಮ್ಮ ಚುನಾವಣಾ ಪ್ರಮಾಣಪತ್ರಗಳಲ್ಲಿಯೇ ಘೋಷಿಸಿಕೊಂಡಿದ್ದಾರೆ. ದುಡ್ಡು, ಜಾತಿ, ಸುಳ್ಳು ಪ್ರಚಾರ ಮತ್ತು ತೋಳ್ಬಲಗಳನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರ ಗಳಿಸಿಕೊಂಡವರು ನಮ್ಮ ಶಾಸನಸಭೆಯಲ್ಲಿ ಕುಳಿತಿರುವುದು ನಮಗೆ ಗೊತ್ತೇ ಇಲ್ಲ ಎಂದು ಇವತ್ತು ಹೇಳಿಕೊಂಡರೆ ಅದು ಜನಸಾಮಾನ್ಯರಾಗಿ ನಮ್ಮ ಮೂರ್ಖತನ ವಾಗುತ್ತದೆ.

ಇಂತಹ ಜನಗಳು ಸಹಜವಾಗಿಯೇ ‘ನೀನು ಕಳ್ಳ’ ಎಂದರೆ ಅದಕ್ಕುತ್ತರವಾಗಿ ‘ನೀನೂ ಕಳ್ಳ, ನಿನ್ನ ಕುಟುಂಬವೇ ಕಳ್ಳರದು’ ಎಂದು ಕಚ್ಚಾಟದಲ್ಲಿ ತೊಡಗಿ, ಅದನ್ನೂ ಜನರಿಗೆ ಮನರಂಜನೆ ಎಂಬಂತೆ ದಯಪಾಲಿಸುತ್ತಿದ್ದಾರೆ. ಅವರಿಗದು ನಾಚಿಕೆಗೇಡು ಅನ್ನಿಸುತ್ತಿಲ್ಲ. ಚುನಾವಣೆಯ ಸಿದ್ಧತೆ ಇದಿನ್ನೂ ಆರಂಭ ಆಗಿರುವುದರಿಂದ, ಈ ಮನರಂಜನೆ ದಿನಕಳೆದಂತೆ ಮತ್ತಷ್ಟು ರಂಗೇರುವುದೂ ಖಚಿತ. ಇದನ್ನೆಲ್ಲ ಕೇವಲ ಭಾವನಾತ್ಮಕವಾಗಿ, ಹತಾಶೆಯಿಂದ ನೋಡಿ ಮರೆತುಬಿಟ್ಟರೆ ಸಾಕೆ? ಸಂವಿಧಾನವನ್ನು ನಾಡಿನ ಬದುಕಿಗೆ ಮೂಲಾಧಾರವೆಂದು ನಂಬಿರುವ ಒಂದು ಜನತಂತ್ರದ ಭಾಗವಾಗಿ, ಈ ವಿಕೃತಿಗಳು ಎಲ್ಲಿ ನಿಲ್ಲುತ್ತವೆ?

ಯಾವುದೇ ಅಪರಾಧ ಕೃತ್ಯವನ್ನು ಮುಚ್ಚಿಡುವುದು ಭಾರತೀಯ ದಂಡಸಂಹಿತೆ ಯನ್ವಯ ಶಿಕ್ಷಾರ್ಹ ಅಪರಾಧವೆನಿಸುತ್ತದೆ. ಅದು ಗೊತ್ತಿದ್ದು ಕೂಡ ನೀವು ನಮ್ಮ ಅಪರಾಧಗಳನ್ನು ಬಿಚ್ಚಿಟ್ಟರೆ ನಾವು ನಿಮ್ಮ ಅಪರಾಧಗಳನ್ನು ಬಿಚ್ಚಿಡುತ್ತೇವೆ, ನೀವೇನೂ ಸುಭಗರಲ್ಲ ಎಂದು ಗುಡ್ಡಕ್ಕೆ ಗುಡ್ಡ ಅಡ್ಡವಿರಿಸುವುದು ಈಗ ತೀರಾ ಸಾಮಾನ್ಯ ಆಗಿಬಿಟ್ಟಿದೆ. ಈ ಗುಡ್ಡಗಳ ಮರೆಯ ಹಿಂದೆ ತಾವೆಸಗಿರುವ ಅಪರಾಧಗಳು, ಈ ಕೆಸರೆರಚಾಟಗಳಿಗೆ ಸಾಕ್ಷಿ ಆಗುತ್ತಿರುವ ಮೂರನೆಯವರಿಗೆ ಕಾಣಿಸುವುದಿಲ್ಲ ಎಂಬ ಧೈರ್ಯ ಇದನ್ನು ಮಾಡಿಸುತ್ತಿದೆ. ಅಪರಾಧಗಳನ್ನು ಸಾಮೂಹಿಕವಾಗಿ ಮಾಡಿ, ಎಲ್ಲರೂ ಅಪರಾಧಿಗಳೇ ಎಂದು ಬಿಂಬಿಸುವ ಮೂಲಕ ಅಪರಾಧವನ್ನು ಸಹಜೀಕರಿಸುವ ತಂತ್ರ ಇದು.

ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿ, ಸರ್ಕಾರದ ಸಂಪುಟ ಸೇರುವ ಸಚಿವರು ತಮ್ಮ ಪ್ರಮಾಣವಚನದ ಹಿನ್ನೆಲೆಯನ್ನಾಗಲೀ, ‘ಹಿತಾಸಕ್ತಿಗಳ ಸಂಘರ್ಷ’ ಎಂಬ ಪದಗಳ ಅರ್ಥವನ್ನಾಗಲೀ ಯಾವತ್ತಾದರೂ ತಿಳಿಯಲು ಪ್ರಯತ್ನಿಸಿದ್ದಾರೆಯೇ? ರಾಜ್ಯ ಕಳೆದ ಮೂವತ್ತು ವರ್ಷಗಳಲ್ಲಿ ಹಲವು ಬಾರಿ, ಮದ್ಯದ ಉದ್ದಿಮೆ ಇರುವ ಅಬಕಾರಿ ಮಂತ್ರಿ, ಸಕ್ಕರೆ ಕಾರ್ಖಾನೆಗಳಿರುವ ಕೈಗಾರಿಕಾ ಮಂತ್ರಿ, ಮೀನುಗಾರಿಕೆ ರಫ್ತು ಉದ್ಯಮ ಇರುವ ಮೀನುಗಾರಿಕಾ ಮಂತ್ರಿ, ರಿಯಲ್ ಎಸ್ಟೇಟ್ ವ್ಯವಹಾರ ಇರುವ ನಗರಾಭಿವೃದ್ಧಿ-ಕಂದಾಯ ಮಂತ್ರಿ, ಐಟಿ ಉದ್ಯಮ ಇರುವ ತಂತ್ರಜ್ಞಾನ ಮಂತ್ರಿ, ವೈದ್ಯಕೀಯ ಕಾಲೇಜು ನಡೆಸುವ ಆರೋಗ್ಯ ಮಂತ್ರಿ… ಹೀಗೆ ಸಾಲು ಸಾಲು ಹಿತಾಸಕ್ತ ಸಚಿವರನ್ನು ಕಂಡಿದೆ.

‘ನಾವು ಸನ್ಯಾಸಿಗಳಲ್ಲ’ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಈ ಸಚಿವ ಗಢಣ, ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಕಾರ್ಯಾಚರಿಸಿದರು ಎಂದರೆ ನಂಬುವುದು ಸಾಧ್ಯ ಇದೆಯೆ? ಆರ್ಥಿಕ ಭ್ರಷ್ಟಾಚಾರ ಮಾತ್ರ ಹಗರಣವೇ? ಹಿತಾಸಕ್ತಿ ಸಂಘರ್ಷಗಳು, ನೀತ್ಯಾತ್ಮಕ ತಿರುಚುವಿಕೆಗಳು ಅಪರಾಧಗಳಲ್ಲವೆ? ಗುಂಪಾಗಿ ಮಾಡಿ ಬೆರಳು ತೋರಿಸಿಬಿಟ್ಟರೆ ಎಲ್ಲ ಅಪರಾಧಗಳೂ ಮಾಫಿಯೆ? ಹಾಗಾದರೆ ಸಾರ್ವಜನಿಕ ಬದುಕಿನಲ್ಲಿ ಇಂದು ‘ಜನಪರ’ ಎಂಬುದಕ್ಕೆ ಮಾನದಂಡ ಯಾವುದು?

ಲೇಖಕ: ಸಾಮಾಜಿಕ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT