ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಜಾತ್ಯತೀತ, ಸಮಾಜವಾದ ಸಂವಿಧಾನಕ್ಕೆ ತುರುಕಿದ ಪದಗಳು! ಪಿ.ಪಿ ಹೆಗ್ಡೆ ಲೇಖನ

ಜಾತ್ಯತೀತ, ಸಮಾಜವಾದ, ಸಮಗ್ರತೆ– ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈಬಿಡುವುದು ಸರಿಯೇ?
Published 23 ಸೆಪ್ಟೆಂಬರ್ 2023, 0:31 IST
Last Updated 23 ಸೆಪ್ಟೆಂಬರ್ 2023, 0:31 IST
ಅಕ್ಷರ ಗಾತ್ರ

1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯಲ್ಲಿ ನೀಡಲಾದ ಸಂವಿಧಾನದ ಪ್ರತಿಗಳಲ್ಲಿ, ಸಂವಿಧಾನ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಪದಗಳೇ ಇರಲಿಲ್ಲ. ‘ದೇಶವು ಸಾರ್ವಭೌಮತ್ವವುಳ್ಳ, ಸಮಾಜವಾದಿ, ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯ’ ಎಂದು ಘೋಷಿಸಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರಲಾಯಿತು. ಈ ಮೂಲಕ, ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂದು ಎರಡು ಪದಗಳನನ್ನು ಏಕಪಕ್ಷೀಯವಾಗಿ ಸ್ಥಾಪಿಸಲಾಯಿತು. ಈ ಎರಡೂ ಪದಗಳ ಅರ್ಥ ಏನು ಎಂಬುದಕ್ಕೆ ಸಂವಿಧಾನದಲ್ಲಿ ಎಲ್ಲಿಯೂ ನಿಖರ ವ್ಯಾಖ್ಯಾನ ಇಲ್ಲ.

––––

ಸುಪ್ರೀಂಕೋರ್ಟ್‌ ಕಟ್ಟಡದ ಮೇಲೆ ಕಂಗೊಳಿಸುತ್ತಿರುವ, ‘ಯಥೋ ಧರ್ಮಸ್ತತೊ ಜಯಃ’ (ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ) ಎಂಬುದನ್ನು ಗಮನಿಸಿದಾಗ ನಮ್ಮ ಸರ್ಕಾರ ಜಾತಿಯ ಪರವಾಗಿರಬೇಕಿಲ್ಲ. ಧರ್ಮದ ಪರ ಇರಬೇಕು ಎಂಬುದು ಅರಿವಾಗುತ್ತದೆ. ಧರ್ಮವೇ ಈ ರಾಷ್ಟ್ರದ ನೆಲೆಗಟ್ಟು. ಹೀಗಿರುವಾಗ ಜಾತ್ಯತೀತ ಪದಕ್ಕೆ ನಿರ್ದಿಷ್ಟ ಅರ್ಥ ನೀಡದೆಯೇ ಆ ಪದವನ್ನು ಬಳಸಿದರೆ ಗೊಂದಲವಾಗುತ್ತದೆ.

ಪಿ.ಪಿ.ಹೆಗ್ಡೆ ಹಿರಿಯ ವಕೀಲರು, ಹೈಕೋರ್ಟ್‌

ಪಿ.ಪಿ.ಹೆಗ್ಡೆ ಹಿರಿಯ ವಕೀಲರು, ಹೈಕೋರ್ಟ್‌

‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಪ‌ದಗಳು ಮೂಲ ಸಂವಿಧಾನದ ಪ್ರಸ್ತಾವನೆಯಲ್ಲಿ ಇರಲೇ ಇಲ್ಲ. ತುರ್ತು ಪರಿಸ್ಥಿತಿ ಹೇರಿದ ನಂತರದ ನಿರಂಕುಶ ಆಡಳಿತವು ಇವುಗಳನ್ನು ಸಂವಿಧಾನದಲ್ಲಿ ತುರುಕಿತು. ಯಾಕಾಗಿ ಹೀಗೆ ಆಯಿತು ಎಂಬುದನ್ನು ಕೆದಕಿದರೆ ಕರಾಳ ರಾಜಕೀಯ ಚರಿತ್ರೆಯೇ ಕಣ್ಣ ಮುಂದೆ ಸುಳಿದು ಹೋಗುತ್ತದೆ.

1971ರಲ್ಲಿ 5ನೇ ಲೋಕಸಭಾ ಚುನಾವಣೆ ಜರುಗಿತು. ಇಂದಿರಾ ಗಾಂಧಿ ಅವರು ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಪ್ರಧಾನಿಯಾಗಿಯೂ ಆಯ್ಕೆ ಆಗಿದ್ದರು. ಅದೇ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸಂಯುಕ್ತ ಸಮಾಜವಾದಿ ಪಕ್ಷದ (ಎಸ್ಎಸ್‌ಪಿ) ಅಭ್ಯರ್ಥಿ, ವಕೀಲ ರಾಜ್‌ನಾರಾಯಣ್‌ ಅವರು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ‘ಸರ್ಕಾರಿ ಸೌಲಭ್ಯ ದುರುಪಯೋಗಪಡಿಸಿಕೊಂಡು ಚುನಾವಣಾ ಅಕ್ರಮಗಳನ್ನು ಎಸಗಿ ಇಂದಿರಾ ಗಾಂಧಿ ಅವರು ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿದ್ದರು.

ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಗಮೋಹನಲಾಲ್‌ ಸಿನ್ಹಾ ಅವರಿದ್ದ ಏಕಸದಸ್ಯ ಪೀಠವು, ‘ಇಂದಿರಾ ಗಾಂಧಿ ಅವರು ಚುನಾವಣಾ ಅಕ್ರಮಗಳನ್ನು ಎಸಗಿರುವುದು ಸಾಬೀತಾಗಿದೆ. ಆದ್ದರಿಂದ, ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ಆರು ವರ್ಷ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು’ ಎಂಬ ತೀರ್ಪು ನೀಡಿತ್ತು.

ನ್ಯಾಯಾಲಯದ ತೀರ್ಪು ಘೋಷಣೆಯಾದಾಗ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಇಂದಿರಾ ಅವರು ತಮ್ಮ ಪ್ರಧಾನಿ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡುವ ಅನಿವಾರ್ಯ ಎದುರಾಗಿತ್ತು. ಈ ಅನರ್ಹತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮತ್ತು ಅಧಿಕಾರದಲ್ಲಿ ಮುಂದುವರಿಯುವುದಕ್ಕಾಗಿ ಅವರು ಕಂಡುಕೊಂಡ ಉಪಾಯವೇ ‘ತುರ್ತು ಪರಿಸ್ಥಿತಿ’.

1975ರ ಜೂನ್ 12ರಂದು ಹೇರಲಾದ ತುರ್ತು ಪರಿಸ್ಥಿತಿ ಸ್ವಾತಂತ್ರ್ಯಾನಂತರದ ಚರಿತ್ರೆಯಲ್ಲಿ ಒಂದು ಕರಾಳ ದಿನವಾಯಿತು. ಎಲ್ಲಾ ವಿರೋಧ ಪಕ್ಷದ ನಾಯಕರನ್ನು ರಾತ್ರೋರಾತ್ರಿ ಜೈಲಿಗೆ ಅಟ್ಟಲಾಯಿತು. ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ... ಹೀಗೆ ಸಾಲು ಸಾಲು ನಾಯಕರು ಜೈಲು ಕಂಬಿಗಳ ಹಿಂದೆ ಬಂದಿಯಾಗಬೇಕಾದ ವಿಷಮ ಪರಿಸ್ಥಿತಿ ಎದುರಾಯಿತು. ನಂತರದಲ್ಲಿ ಸಂವಿಧಾನಕ್ಕೆ ಒಂದಾದ ನಂತರ ಒಂದರಂತೆ ತಿದ್ದುಪಡಿಗಳನ್ನು ತರಲಾಯಿತು.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ಸ್ಪೀಕರ್‌ ಹುದ್ದೆಗೆ ಆಗಿರುವ ಆಯ್ಕೆಯನ್ನು ಯಾವುದೇ ನ್ಯಾಯಾಲಯವು ಪ್ರಶ್ನಿಸುವಂತಿಲ್ಲ ಎಂದು ಸಂವಿಧಾನಕ್ಕೆ 39ನೇ ತಿದ್ದುಪಡಿ ತರಲಾಯಿತು. ತಿದ್ದುಪಡಿಯ ಕಾರಣದಿಂದಾಗಿ ಅಲಹಾಬಾದ್ ನ್ಯಾಯಾಲಯ ನೀಡಿದ್ದ ತೀರ್ಪು ಅಸಿಂಧುವಾಯಿತು! ತುರ್ತು ಪರಿಸ್ಥಿತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂಬ ತಿದ್ದುಪಡಿಯೂ ಇದರೊಟ್ಟಿಗೆ ಹೊರಬಿತ್ತು!!

1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯಲ್ಲಿ ನೀಡಲಾದ ಸಂವಿಧಾನದ ಪ್ರತಿಗಳಲ್ಲಿ, ಸಂವಿಧಾನ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಪದಗಳೇ ಇರಲಿಲ್ಲ. ‘ದೇಶವು ಸಾರ್ವಭೌಮತ್ವವುಳ್ಳ, ಸಮಾಜವಾದಿ, ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯ’ ಎಂದು ಘೋಷಿಸಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರಲಾಯಿತು. ಈ ಮೂಲಕ, ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂದು ಎರಡು ಪದಗಳನನ್ನು ಏಕಪಕ್ಷೀಯವಾಗಿ ಸ್ಥಾಪಿಸಲಾಯಿತು. ಈ ಎರಡೂ ಪದಗಳ ಅರ್ಥ ಏನು ಎಂಬುದಕ್ಕೆ ಸಂವಿಧಾನದಲ್ಲಿ ಎಲ್ಲಿಯೂ ನಿಖರ ವ್ಯಾಖ್ಯಾನ ಇಲ್ಲ.

42ನೇ ತಿದ್ದುಪಡಿ ಮಸೂದೆಯನ್ನು 1976ರ ಸೆಪ್ಟೆಂಬರ್ 1ರಂದು ಲೋಕಸಭೆಯಲ್ಲಿ ಮಂಡಿಸಿದಾಗ ಮೂರು ದಿನಗಳ ಸುದೀರ್ಘ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಒಟ್ಟು 94 ಸಂಸದರು ಭಾಗವಹಿಸಿದ್ದರು. ವಿಪರ್ಯಾಸವೆಂದರೆ ಚರ್ಚೆ ನಡೆಯುವ ವೇಳೆಯಲ್ಲಿ ಎಲ್ಲಾ ವಿರೋಧ ಪಕ್ಷಗಳ ನಾಯಕರು ಮತ್ತು ಸಂಸದರು ಜೈಲಿನಲ್ಲಿದ್ದರು. ಆದರೆ, ಅವರೆಲ್ಲರೂ ಜೈಲಿನಲ್ಲಿಯೇ ತಿದ್ದುಪಡಿಯನ್ನು ಒಕ್ಕೊರಲಿನಿಂದ ವಿರೋಧಿಸಿದ್ದರು. ಇದು, ‘ಇಂಡಿಯಾ ಸಂವಿಧಾನ’ವನ್ನು ‘ಇಂದಿರಾ ಸಂವಿಧಾನ’ವಾಗಿ ಮಾರ್ಪಡಿಸುವ ಪ್ರಯತ್ನ ಎಂದೂ ಅಬ್ಬರಿಸಿದ್ದರು. ಸಂವಿಧಾನ ತಜ್ಞ ಎಚ್.ಎಂ. ಸೀರ್ವಾಯಿ ಅವರಂತೂ ಈ ಎರಡೂ ಪದಗಳು ವ್ಯಾಖ್ಯಾನ ಇಲ್ಲದ ಅತ್ಯಂತ ಅಸ್ಪಷ್ಟ ಪದಗಳು ಎಂಬ ಅಸಹನೆಯನ್ನೇ ಹೊರಹಾಕಿದ್ದರು.

ಸಂವಿಧಾನ ಸಭೆಯ ವಿಸ್ತೃತ ಚರ್ಚೆಯಲ್ಲಿ ‘ಜಾತ್ಯತೀತ’ ಪದವನ್ನು ಸಂವಿಧಾನದಲ್ಲಿ ಅಳವಡಿಸಬೇಕೇ ಬೇಡವೇ ಎನ್ನುವ ಬಗ್ಗೆ ಹಲವು ಮೇಧಾವಿಗಳು ಸುದೀರ್ಘ ಚರ್ಚೆ ನಡೆಸಿದ್ದರು. ಈ ಪದಗಳನ್ನು ಸಂವಿಧಾನದಲ್ಲಿ ಪರಿಚಯಿಸಲು ಕನಿಷ್ಠ ಮೂರು ವಿಭಿನ್ನ ಸಂದರ್ಭಗಳಲ್ಲಿ ಪ್ರಯತ್ನಿಸಲಾಗಿತ್ತು. ಆದರೆ, ಆ ಎಲ್ಲ ಸಂದರ್ಭಗಳಲ್ಲೂ ಅವು ತಿರಸ್ಕೃತಗೊಂಡಿದ್ದವು. ‘ಜಾತ್ಯತೀತ’ ಎಂಬ ಪದವನ್ನು ಮೊದಲು ಸಂವಿಧಾನ ಸಭೆಯ ಮುಂದೆ ತಂದಾಗ, ಈ ಪದವು ಅಸ್ಪಷ್ಟವಾಗಿದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಪದದ ಅರ್ಥವನ್ನು ವಿವರಿಸಲು ಸಮರ್ಥನಕಾರರ ಬಳಿ ಯಾವುದೇ ವ್ಯಾಖ್ಯಾನವಿರಲಿಲ್ಲ.

1948ರ ಡಿಸೆಂಬರ್ 6ರಂದು ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಲೋಕನಾಥ್ ಮಿಶ್ರಾ ಅವರು, ‘ಈ ನೆಲದ ಪ್ರಾಚೀನ ಸಂಸ್ಕೃತಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಮ್ಮ ಜಾತ್ಯತೀತ ದೇಶವು ಜಾರಿ ಬೀಳುವ ಹಾದಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿದೆ’ ಎಂಬ ಆತಂಕ ಹೊರಹಾಕಿದ್ದರು.

‘ಭಾರತವು ಜಾತ್ಯತೀತ, ಫೆಡರಲ್‌ ರಾಜ್ಯಗಳ ಸಮಾಜವಾದಿ ಒಕ್ಕೂಟ’ ಎಂಬುದನ್ನು ಸಂವಿಧಾನದ 1ನೇ ವಿಧಿಯ 1ನೇ ಉಪವಿಧಿಯಲ್ಲಿ ಸೇರಿಸಬೇಕು ಎಂದು ಸಂವಿಧಾನ ರಚನೆಗೆ ಶ್ರಮಿಸಿದ್ದ ವಕೀಲ, ಆರ್ಥಿಕ ತಜ್ಞ, ಸಮಾಜವಾದಿ ಕೆ.ಟಿ.ಷಾ ಅವರು 1948ರ ನವೆಂಬರ್ 15ರಂದು ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಆದರೆ, ಬಿ.ಆರ್. ಅಂಬೇಡ್ಕರ್ ಈ ತಿದ್ದುಪಡಿಯನ್ನು ಖಡಾಖಂಡಿತವಾಗಿ ವಿರೋಧಿಸಿದ್ದರು. ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಜನರು ಯಾವ ರೀತಿ ವರ್ತಿಸಬೇಕು, ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಜನರೇ ನಿರ್ಧರಿಸಬೇಕೇ ಹೊರತು, ಸಂವಿಧಾನ ಇವುಗಳನ್ನು ನಿರ್ದೇಶಿಸುವಂತಿರಬಾರದು. ಹೀಗೆ ಮಾಡಿದರೆ, ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದಂತಾಗುತ್ತದೆ ಎಂದು ಅಂಬೇಡ್ಕರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂದರ್ಭಗಳಲ್ಲಿ ಅವರು ತೋರಿದ ವಿವೇಕ ಮತ್ತು ಬುದ್ಧಿವಂತಿಕೆಯನ್ನು ನಾವೆಲ್ಲಾ ಶ್ಲಾಘಿಸಲೇಬೇಕು.

ಜವಾಹರಲಾಲ್‌ ನೆಹರೂ ಅವರಂತೂ, ‘ಜಾತ್ಯತೀತ ಎಂಬುದು ರಾಜ್ಯಗಳ ಪಾಲಿನ ವ್ಯವಹಾರ. ಈ ಪದವನ್ನು ಆಗಾಗ್ಗೆ ಬಳಸುವ ಮಹನೀಯರು, ಅದನ್ನು ಬಳಸುವ ಮೊದಲು ಯಾವುದಾದರೂ ನಿಘಂಟನ್ನು ನೋಡಬೇಕೆಂದು ನಾನು ವಿನಮ್ರವಾಗಿ ಬೇಡುತ್ತೇನೆ’ ಎಂದು ನಯವಾಗಿಯೇ ತಮ್ಮ ಅಸಮ್ಮತಿ ಸೂಚಿಸಿದ್ದರು. ಇಂಹತ ಸೂಕ್ಷ್ಮಗಳನ್ನೆಲ್ಲಾ ಸಿಂಹಾವಲೋಕನ ಮಾಡಿದಾಗ ಚಲನಶೀಲ ವ್ಯವಸ್ಥೆಯ ಬಗ್ಗೆ ನಮಗೆ ನಂಬಿಕೆ ಹೆಚ್ಚಾಗಬೇಕು. ಇಲ್ಲದೇ ಹೋದರೆ ಯಾವುದೇ ತರ್ಕ ಮ‌ತ್ತು ಸಿದ್ಧಾಂತಗಳು ಬಹಳ ಕಾಲ ಬಾಳಿಕೆ ಬರುವುದಿಲ್ಲ. ಇದಕ್ಕೆ ಇಂದು ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ.

ಲೇಖಕ: ಪಿ.ಪಿ.ಹೆಗ್ಡೆ, ಹಿರಿಯ ವಕೀಲ, ಹೈಕೋರ್ಟ್‌

ನಿರೂಪಣೆ: ಬಿ.ಎಸ್‌. ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT