ಭಾನುವಾರ, ಜೂನ್ 26, 2022
25 °C
ಮಸೀದಿಯು ಹಿಂದೆ ದೇವಸ್ಥಾನವಾಗಿತ್ತೇ ಎಂಬುದರ ಪರಿಶೀಲನೆಗೆ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆ 1991ರ ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯೇ?

ಚರ್ಚೆ | ದೇಗುಲ ಮೂಲ ಸ್ವರೂಪ ಕಳೆದುಕೊಳ್ಳುವುದು ಸಾಧ್ಯವೇ?

ಶ್ರೀಧರ ಪ್ರಭು Updated:

ಅಕ್ಷರ ಗಾತ್ರ : | |

ಹಿಂದೂ ದೇವಾಲಯಗಳು ಕೇವಲ ಪೂಜಾಸ್ಥಳಗಳಲ್ಲ. ದೇವಸ್ಥಾನಗಳಲ್ಲಿ ದೇವರು ವಾಸಿಸುತ್ತಾನೆ/ಳೆ ಎಂಬುದು ಹಿಂದೂಗಳ ಶ್ರದ್ಧೆ. ದಾಳಿ ಮಾಡಿ ದೇವಾಲಯಗಳನ್ನು ನಾಶಗೊಳಿಸಿದ ಮಾತ್ರಕ್ಕೆ ಅವು ತಮ್ಮ ಪೂಜಾರ್ಹತೆಯನ್ನು ಕಳೆದುಕೊಂಡು ತಂತಾನೇ ಬೇರೊಂದು ಧರ್ಮದ ಪೂಜಾ ಕೇಂದ್ರಗಳಾಗಿ ಪರಿವರ್ತಿತಗೊಳ್ಳುತ್ತವೆಯೇ? ಭಗ್ನ ವಿಗ್ರಹಗಳಿಗೆ ಪೂಜೆ ಸಲ್ಲದಿರಬಹುದು, ಹಾಗೆಂದು, ಹಿಂದೂ ದೇವಾಲಯಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳಲು ಸಾಧ್ಯವೇ?

***


ಶ್ರೀಧರ ಪ್ರಭು

ಸುಪ್ರೀಂ ಕೋರ್ಟ್‌ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ನಲ್ಲಿ ನೀಡಿದ ತೀರ್ಪು, ಜಾತ್ಯತೀತತೆ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಗೆ ವಿನೂತನ ವ್ಯಾಖ್ಯಾನವನ್ನಿತ್ತಿದೆ. ಜಾತ್ಯತೀತತೆಯು ನಮ್ಮ ಸಂವಿಧಾನದ ಮೂಲಭೂತ ಮೌಲ್ಯ ಮತ್ತು ಆಶಯವಾದರೆ, ಪೂಜಾ ಸ್ಥಳಗಳ ಕಾಯ್ದೆಯು ಜಾತ್ಯತೀತತೆಯನ್ನು ಆಚರಣೆಗಿಳಿಸುವ ಮಾಧ್ಯಮವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಮಾನದಲ್ಲಿ ಹೇಳಿರುವಂತೆ ದೇಶದ ಸಮಸ್ತ ಸಾರ್ವಜನಿಕ ಪೂಜಾ ಸ್ಥಳಗಳಲ್ಲಿ (ಅಯೋಧ್ಯೆಯನ್ನು ಹೊರತುಪಡಿಸಿ) 1947ರ ಆಗಸ್ಟ್ 15ರಲ್ಲಿದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಅದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯೂ ಹೌದು.

ಪೂಜಾ ಸ್ಥಳಗಳ ಕಾಯ್ದೆ–1991ರ ಪ್ರಮುಖ ಅಂಶಗಳೆಂದರೆ: ಯಾವುದೇ ಧರ್ಮ, ಪಂಗಡ ಅಥವಾ ಒಳಪಂಗಡಕ್ಕೆ ಸೇರಿದ ಯಾವುದೇ ಪೂಜಾ ಸ್ಥಳವನ್ನು, 1947ರ ಆಗಸ್ಟ್ 15ರ ವೇಳೆ ಇದ್ದ ಸ್ಥಿತಿಯಲ್ಲಿಯೇ ಕಾಯ್ದುಕೊಳ್ಳಬೇಕು ಮತ್ತು ಇನ್ನೊಂದು ಧರ್ಮ, ಪಂಗಡ ಅಥವಾ ಒಳಪಂಗಡದ ಪೂಜಾಸ್ಥಳವಾಗಿ ಪರಿವರ್ತಿಸುವಂತಿಲ್ಲ.

ಇದನ್ನೂ ಓದಿ: ಚರ್ಚೆ | ಸಾಮರಸ್ಯಕ್ಕಾಗಿ ಕಾಯ್ದೆಯ ಸಂರಕ್ಷಣೆ ಅಗತ್ಯ

ಈ ಕಾಯ್ದೆಯಡಿ, ‘ಪೂಜಾ ಸ್ಥಳ’ವೆಂದರೆ ದೇವಸ್ಥಾನ, ಮಸೀದಿ, ಗುರುದ್ವಾರ, ಇಗರ್ಜಿ, ವಿಹಾರ ಅಥವಾ ಇನ್ಯಾವುದೇ ಸಾರ್ವಜನಿಕ ಪೂಜಾ ಸ್ಥಳವೆಂಬ ವಿಸ್ತೃತ ವ್ಯಾಖ್ಯಾನ ನೀಡಲಾಗಿದೆ.

ಈ ಕಾಯ್ದೆಯು 1991ರ ಜುಲೈ 11ರಂದು ಜಾರಿಗೆ ಬಂದಿದೆ. ತದನಂತರ, ದೇಶದ ಯಾವುದೇ ನ್ಯಾಯಾಲಯದಲ್ಲಿ ಎಲ್ಲ ಹಂತಗಳಲ್ಲಿ ವಿಚಾರಣೆಗೆ ಬಾಕಿಯಿದ್ದ ಎಲ್ಲ ಪ್ರಕರಣಗಳು ಅನೂರ್ಜಿತಗೊಂಡಿವೆ. ಅಲ್ಲದೇ, ಈ ದಿನಾಂಕದ ನಂತರ ಪೂಜಾ ಸ್ಥಳಗಳ ಪೂಜಾ ಸ್ಥಿತಿ ಪರಿವರ್ತನೆಗೆ ಯಾವುದೇ ದಾವೆ ಅಥವಾ ಅಪೀಲನ್ನು ದಾಖಲಿಸುವಂತಿಲ್ಲ.

ಕಾಶಿ, ಮಥುರಾಗಳಿಂದ ಮೊದಲ್ಗೊಂಡು ದೇಶದ ವಿವಿಧ ಪೂಜಾ ಸ್ಥಳಗಳ ಸಮೀಕ್ಷೆ ಮತ್ತು ಉತ್ಖನನವನ್ನು ಕೋರಿ ಸಲ್ಲಿಸಿದ ದಾವೆಗಳು ಮತ್ತು ಕೋರ್ಟ್ ಆದೇಶಗಳು, ಸುಪ್ರೀಂ ಕೋರ್ಟಿನ ಅಯೋಧ್ಯಾ ತೀರ್ಮಾನಕ್ಕೆ, ಮತ್ತದರಲ್ಲಿ ಉಲ್ಲೇಖಿಸಿದ ಸಾಂವಿಧಾನಿಕ ಕರ್ತವ್ಯ ಮತ್ತು ಮೌಲ್ಯಗಳಿಗೆ ಪೂರಕವಾಗಿವೆಯೇ? 1991ರ ಪೂಜಾ ಸ್ಥಳಗಳ ಕಾಯ್ದೆಯಲ್ಲಿಯೇ ಇದಕ್ಕೆ ಸ್ಪಷ್ಟವಾದ ಉತ್ತರವಿದೆ.

ಮೊದಲನೆಯದಾಗಿ, ಅಯೋಧ್ಯೆ ರಾಮಮಂದಿರಕ್ಕೆ ಮಾತ್ರವಲ್ಲದೇ ಬೇರೊಂದಿಷ್ಟು ಪೂಜಾಸ್ಥಳ ಮತ್ತು ಪ್ರಕರಣಗಳಿಗೆ 1991ರ ಪೂಜಾ ಸ್ಥಳಗಳ ಕಾಯ್ದೆ ಅನ್ವಯಿಸುವುದಿಲ್ಲ.

‘ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳ ಮತ್ತು ಅವಶೇಷಗಳ ಕಾಯ್ದೆ–1958’ರಲ್ಲಿ ಉಲ್ಲೇಖಿಸಿದ ಪೂಜಾ ಸ್ಥಳಗಳಿಗೆ, 1991ರ ಕಾಯ್ದೆ ಜಾರಿಯಾಗುವ ಮುನ್ನವೇ ತೀರ್ಮಾನವಾದ ಅಥವಾ ಕಕ್ಷಿದಾರರೇ ರಾಜಿ ಮಾಡಿಕೊಂಡ ಪ್ರಕರಣಗಳಿಗೆ, ಕಾಲಮಿತಿ ಕಾಯ್ದೆಯಿಂದಾಗಿ ಯಾವ ಪ್ರಕರಣಗಳಲ್ಲಿ ದಾವೆ ಹೂಡಲು ಸಾಧ್ಯವಿಲ್ಲವೋ, ಅಂತಹ ಪ್ರಕರಣಗಳಿಗೆ 1991ರ ಕಾಯ್ದೆ ಅನ್ವಯಿಸುವುದಿಲ್ಲ.

1991ರ ಕಾಯ್ದೆಯ ಈ ಮಿತಿಗಳನ್ನಾಧರಿಸಿಯೇ ಕುತುಬ್ ಮಿನಾರ್, ಮಥುರಾ ಮತ್ತು ಕಾಶಿ ಪ್ರಕರಣಗಳಲ್ಲೂ ಸಮೀಕ್ಷೆಗೆ ಅವಕಾಶವನ್ನು ಕೋರಲಾಗಿದೆ. 1991ರ ಕಾಯ್ದೆಯಡಿ, ಒಂದು ಪೂಜಾಸ್ಥಳದ ಸ್ವರೂಪ ಪರಿವರ್ತನೆಯಾಗಿದೆಯೇ ಇಲ್ಲವೇ ಎಂಬುದನ್ನು ತೀರ್ಮಾನಿಸಲು ನ್ಯಾಯಾಲಯಗಳು ಪೂಜಾಸ್ಥಳಗಳ ಸಂರಚನೆ ಮತ್ತು ಪೂಜಾ ಸ್ವರೂಪದ ಸಮೀಕ್ಷೆಗಳನ್ನು ನಡೆಸಲೇಬೇಕು. ಹಾಗಾಗಿ ನ್ಯಾಯಾಲಯಗಳು ಆದೇಶಿಸಿರುವ ಸಮೀಕ್ಷೆಗಳು 1991ರ ಕಾಯ್ದೆಯನ್ನು ಯಾವುದೇ ರೀತಿಯಲ್ಲೂ ಉಲ್ಲಂಘಿಸಿಲ್ಲ.

ಪುರಾತತ್ವ ಸ್ಮಾರಕವಾದ್ದರಿಂದ, ಕುತುಬ್‌ ಮಿನಾರಿಗೆ 1991ರ ಕಾಯ್ದೆಯು ಅನ್ವಯಿಸುವುದಿಲ್ಲ ಎಂಬುದು ಸ್ಪಷ್ಟ. ರಾಷ್ಟೀಯ ಸ್ಮಾರಕಗಳ ಪ್ರಾಧಿಕಾರ, ವಿಸ್ತೃತ ಸಮೀಕ್ಷೆಯೊಂದನ್ನು ಕೈಗೊಂಡು ಕುವತುಲ್ ಇಸ್ಲಾಂ ಮಸೀದಿ ಮತ್ತದರ ಆವರಣದಲ್ಲಿರುವ ಭಗ್ನ ಹಿಂದೂ ಮಂದಿರಗಳ ಅವಶೇಷಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದೆಯೆನ್ನಲಾಗಿದೆ. ಹೀಗೆ ಸಮೀಕ್ಷೆ ಕೈಗೊಳ್ಳಲು 1991ರ ಕಾಯ್ದೆಯಲ್ಲಿ ಯಾವ ನಿರ್ಬಂಧವೂ ಇಲ್ಲ.

1958ರ ಪ್ರಾಚೀನ ಸ್ಮಾರಕಗಳ ಕಾಯ್ದೆಯ ಕಲಂ 16ರಡಿ ಪ್ರಾಚೀನ ಸ್ಮಾರಕವೊಂದು ಪೂಜಾ ಸ್ಥಳವೂ ಆಗಿದ್ದರೆ, ಇದರ ಸಂರಕ್ಷಣೆಯ ಜವಾಬ್ದಾರಿ ಪುರಾತತ್ವ ಇಲಾಖೆಯದ್ದು. ಪೂಜಾ ಸ್ಥಳದ ಪಾವಿತ್ರ್ಯಕ್ಕೆ ಚ್ಯುತಿ ಬಾರದಂತೆ ಕಾಪಾಡುವುದಲ್ಲದೇ, ಈ ಸ್ಮಾರಕವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದೆಂಬ ಕಟ್ಟಳೆ 1958ರ ಕಾಯ್ದೆಯಲ್ಲಿದೆ. ಆದರೆ, ಈ ಸ್ಮಾರಕಗಳನ್ನು ಕಾಲಾಂತರದಲ್ಲಿ ಬೇರೊಂದು ಧರ್ಮದ ಪೂಜಾ ಸ್ಥಳವನ್ನಾಗಿ ಪರಿವರ್ತಿಸಿದ್ದರೆ, ಈಗ ಮರು ಪರಿವರ್ತನೆ ಸಾಧ್ಯವಿಲ್ಲವೇ? ಮೂಲ ಸ್ಮಾರಕಗಳ ಆರಾಧಕರಿಗೆ ಪೂಜೆಗೆ ಅವಕಾಶವಿಲ್ಲವೇ? 1958ರ ಕಾಯ್ದೆಯಲ್ಲಿ ಇದಕ್ಕೆಲ್ಲ ನಿರ್ಬಂಧವಿಲ್ಲ.

ತನ್ನ ಒಡೆತನದ ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆ ತರದೇ, ಪುರಾತತ್ವ ಇಲಾಖೆ, ಯಾರಿಗಾದರೂ ಪೂಜೆ ಸಲ್ಲಿಸುವ ಅಧಿಕಾರವನ್ನು ನೀಡಿದರೆ 1958ರ ಕಾನೂನು ನಿರ್ಬಂಧಿಸುವುದಿಲ್ಲ. ಹೀಗಾಗಿ, ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿರುವ ಕುತುಬ್ ಮಿನಾರ್ ಪ್ರಕರಣವೂ ಸೇರಿದಂತೆ, 1991ರ ಕಾಯ್ದೆ ಅನ್ವಯವಾಗದಿರುವ ಎಲ್ಲ ಪ್ರಾಚೀನ ಸ್ಮಾರಕಗಳ ವಿಚಾರದಲ್ಲಿ, ಪುರಾತತ್ವ ಇಲಾಖೆಯ ತೀರ್ಮಾನವೇ ಅಂತಿಮ.

ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ಜಿಲ್ಲಾ ನ್ಯಾಯಾಲಯವು ಮೇ 19ರಂದು ನೀಡಿದ ತೀರ್ಪಿನಲ್ಲಿ, ಕೃಷ್ಣ ಜನ್ಮಭೂಮಿಗೆ 1991ರ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೇಳಿದೆ. ಈ ತೀರ್ಪಿನ ಸಮರ್ಥನೆಗಾಗಿ, 1968ರಲ್ಲಿ ಮಥುರಾ ಮಸೀದಿಯ ಈದ್ಗಾ ಸಮಿತಿ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘಗಳು ಸೇರಿ ಮಾಡಿಕೊಂಡ ಕರಾರು ಒಪ್ಪಂದವನ್ನು ಉಲ್ಲೇಖಿಸಿದೆ. ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘಕ್ಕೆ ಶ್ರೀಕೃಷ್ಣನನ್ನು ಪ್ರತಿನಿಧಿಸುವ ಮತ್ತು ಕೃಷ್ಣ ಜನ್ಮಸ್ಥಾನವನ್ನು ಈದ್ಗಾ ಸಮಿತಿಗೆ ಹಸ್ತಾಂತರಿಸುವ ಅಧಿಕಾರ ಇರಲಿಲ್ಲವೆಂದು ಮೇಲ್ನೋಟಕ್ಕೇ ಸಾಬೀತಾಗಿರುವುದರಿಂದ ಮತ್ತು ಈ ಹಸ್ತಾಂತರ ಪರಸ್ಪರ ಒಪ್ಪಂದದಿಂದ ಮಾಡಿಕೊಂಡ ಕಾರಣ 1991ರ ಕಾಯ್ದೆಯ ಪರಿಧಿಯಿಂದ ಹೊರಗಿದೆ. ಹೀಗಾಗಿ, ಕೃಷ್ಣ ಜನ್ಮ ಸ್ಥಾನದ ವಿಚಾರದಲ್ಲಿನ ಮಥುರಾ ಜಿಲ್ಲಾ ನ್ಯಾಯಾಲಯದ ತೀರ್ಮಾನ ನ್ಯಾಯಬದ್ಧವಾಗಿದೆ.

ನಮ್ಮ ಕಾನೂನು, ದೇವರ ವಿಗ್ರಹವನ್ನು ಶಾಶ್ವತ ಅಪ್ರಾಪ್ತ ವಯಸ್ಕನೆಂದು ಪರಿಗಣಿಸುತ್ತದೆ. ಹೀಗಾಗಿ, ವಿಗ್ರಹಗಳ ಹೆಸರಿನಲ್ಲಿ ಹೂಡುವ ದಾವೆಗಳಿಗೆ ಕಾಲಮಿತಿ ಕಾಯ್ದೆ ಅನ್ವಯವಾಗುವುದಿಲ್ಲ. ಭಕ್ತನೊಬ್ಬನಿಗೆ ಪೂಜೆ ಸಲ್ಲಿಸುವ ಹಕ್ಕಿರುವಂತೆ, ವಿಗ್ರಹ ಅಥವಾ ದೇವರಿಗೆ ಪೂಜಿಸಲ್ಪಡುವ ಹಕ್ಕೂ ಇದೆ. ಹಾಗೆಯೇ, ವಿಗ್ರಹದ ಪರವಾಗಿ ಭಕ್ತ ಅಥವಾ ಪರಿಜನರು ದಾವೆ ಹೂಡಬಹುದೆಂದು ನೂರಾರು ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ. ಅಯೋಧ್ಯೆ ಮತ್ತು ಮಥುರಾ ಪ್ರಕರಣಗಳಲ್ಲಿ ಆಯಾ ದೇವರುಗಳ ಹೆಸರಿನಲ್ಲೇ ದಾವೆ ಹೂಡಲಾಗಿದೆ. ಕಾಶಿಯ ವಿಚಾರದಲ್ಲಿ ಭಕ್ತರು ದಾವೆ ಹೂಡಿದ್ದಾರೆ.

‘ಧಾರ್ಮಿಕ ಹಕ್ಕು’ ಮೂಲಭೂತ ಹಕ್ಕೆಂದು ಸಾಬೀತಾಗಿದೆ. ಸಂವಿಧಾನಬದ್ಧ ಧಾರ್ಮಿಕ ಹಕ್ಕನ್ನು, 1991ರ ಕಾಯ್ದೆಯು ಚ್ಯುತಿಗೊಳಿಸುತ್ತದೆ ಎಂಬ ಪ್ರತಿಪಾದನೆಯಿದೆ. ಇದೇ ಪ್ರತಿಪಾದನೆ ಯಂತೆ, ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ದಾವೆಗಳನ್ನು ಹೂಡಲಾಗಿದೆ.

1995ರ ವಕ್ಫ್ ಕಾಯ್ದೆಯಡಿ, ಒಂದು ಸ್ಥಿರಾಸ್ತಿ ಒಮ್ಮೆ ವಕ್ಫ್ ಎಂದು ಘೋಷಿತವಾದರೆ ಅದು ಸರ್ವಕಾಲಕ್ಕೂ ವಕ್ಫ್ ಜಮೀನಾಗಿಯೇ ಇರುತ್ತದೆಯೆಂದು ಸುಪ್ರೀಂ ಕೋರ್ಟ್ ತೀರ್ಪನ್ನಿತ್ತಿದೆ. ಇದೇ ನಿಯಮ ಹಿಂದೂಗಳಿಗೂ ಅನ್ವಯವಾಗದೇ?

ಹಿಂದೂ ದೇವಾಲಯಗಳು ಕೇವಲ ಪೂಜಾಸ್ಥಳಗಳಲ್ಲ. ದೇವಸ್ಥಾನಗಳಲ್ಲಿ ದೇವರು ವಾಸಿಸುತ್ತಾನೆ/ಳೆ ಎಂಬುದು ಹಿಂದೂಗಳ ಶ್ರದ್ಧೆ. ದಾಳಿ ಮಾಡಿ ದೇವಾಲಯಗಳನ್ನು ನಾಶಗೊಳಿಸಿದ ಮಾತ್ರಕ್ಕೆ ಅವು ತಮ್ಮ ಪೂಜಾರ್ಹತೆಯನ್ನು ಕಳೆದುಕೊಂಡು ತಂತಾನೇ ಬೇರೊಂದು ಧರ್ಮದ ಪೂಜಾ ಕೇಂದ್ರಗಳಾಗಿ ಪರಿವರ್ತಿತಗೊಳ್ಳುತ್ತವೆಯೇ? ಭಗ್ನ ವಿಗ್ರಹಗಳಿಗೆ ಪೂಜೆ ಸಲ್ಲದಿರಬಹುದು, ಹಾಗೆಂದು, ಹಿಂದೂ ದೇವಾಲಯಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳಲು ಸಾಧ್ಯವೇ?

ಕೋಮುಭಾವನೆಗಳು ಉತ್ತುಂಗಕ್ಕೆ ತಲುಪಿದ್ದ 1940ರ ದಶಕದಲ್ಲಿ ಕಲ್ಕತ್ತೆಯ ಮಹಾಬೋಧಿ ಸಂಘದ ಅಧ್ಯಕ್ಷರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿಯವರ ಅವಿರತ ಪ್ರಯತ್ನದಿಂದ, ಅನೇಕ ಶತಮಾನಗಳಿಂದ ಹಿಂದೂಗಳೇ ಪೂಜಿಸುತ್ತಿದ್ದ ಬುದ್ಧಗಯೆಯ ದೇವಸ್ಥಾನವನ್ನು ಬೌದ್ಧರಿಗೆ ಬಿಟ್ಟುಕೊಡಲಾಯಿತು.

ಈ ಉದಾತ್ತ ಪರಂಪರೆಯ ವಾರಸುದಾರರಾದ ನಾವು, ವರ್ತಮಾನದಲ್ಲಿ ರಾಜಕೀಯ ಅಭೀಪ್ಸೆ, ಕಾನೂನು ಕಟ್ಟಳೆಗಳನ್ನೆಲ್ಲ ಒಂದು ಕ್ಷಣ ಬದಿಗಿಡಬೇಕಿದೆ. ಬಂಧುತ್ವ ಭಾವದಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವೆಡೆ ಸಮಾಜದ ಸಮಸ್ತರೂ ತತ್ಪರರಾಗಬೇಕಿದೆ.

ಲೇಖಕ: ಹೈಕೋರ್ಟ್‌ ವಕೀಲರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು