ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ದೇಗುಲಗಳಿಗೆ ಸರ್ಕಾರದ ನಿಯಂತ್ರಣ: ಸಂವಿಧಾನದ ಉಲ್ಲಂಘನೆ

Last Updated 7 ಜನವರಿ 2022, 19:30 IST
ಅಕ್ಷರ ಗಾತ್ರ

ದೇಶದಲ್ಲಿರುವ ಹಿಂದೂ ದೇವಾಲಯಗಳ ನಿರ್ವಹಣೆಯಲ್ಲಿ ಸರ್ಕಾರದ ಅನಿರ್ಬಂಧಿತ ಪಾಲ್ಗೊಳ್ಳುವಿಕೆಯು ಸ್ವತಂತ್ರ, ‘ಜಾತ್ಯತೀತ’ ಭಾರತದ ವಿವರಣೆಯೇ ಇಲ್ಲದ ಕಗ್ಗಂಟುಗಳಲ್ಲಿ ಒಂದು.

ಈ ವಿಚಾರವು ದಶಕಗಳಿಂದ ಒಳಗೊಳಗೇ ಕುದಿಯುತ್ತಿತ್ತು. ಆದರೆ, ನೆಹರೂವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು ಇದನ್ನು ಮೂಲೆಗೆ ಸರಿಸುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ರಾಜ್ಯದಲ್ಲಿರುವ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸುವ ವಾಸ್ತವಿಕವಾದ ಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿರುವುದರಿಂದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿದೆ.

ಜವಾಹರಲಾಲ್‌ ನೆಹರೂ ಅವರ ಕಾಲದಿಂದಲೂ ಸಂದೇಹಾಸ್ಪದವಾದ ಜಾತ್ಯತೀತತೆಯ ಬ್ರ್ಯಾಂಡ್‌ ಅನ್ನುದೇಶದ ಮೇಲೆ ಹೇರುವುದರ ಮೂಲವಾಗಿ ಕಾಂಗ್ರೆಸ್‌ ಪಕ್ಷವು ಇದೆ. ಈ ಪಕ್ಷವು ವಿವಿಧ ಕಾಯ್ದೆಗಳು ಮತ್ತು ನಿಯಮಗಳ ಮೂಲಕ ಹಿಂದೂ ದೇಗುಲಗಳ ನಿಯಂತ್ರಣವು ಸರ್ಕಾರದ ಬಳಿಯಲ್ಲಿಯೇ ಇರುವಂತೆ ನೋಡಿಕೊಂಡಿದೆ. ಆದರೆ, ಇದು ಸಂವಿಧಾನದ ಮೂಲ ಜಾತ್ಯತೀತ ತತ್ವಗಳಿಗೆ ವಿರುದ್ಧವಾದುದಾಗಿದೆ. ಅಂದರೆ, ನೆಹರೂ ಅವರ ಸರ್ಕಾರವು ದೇಗುಲಗಳ ನಿಯಂತ್ರಣದ ವಿಚಾರದಲ್ಲಿ ಬ್ರಿಟಿಷರ ನೀತಿಯನ್ನೇ ಮುಂದುವರಿಸಿತು ಮತ್ತು ದೇವಾಲಯಗಳ ನಿಧಿಗೆ ಕೈ ಹಾಕಿತು.

1950ರಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಸ್ತಾವನೆಯು ಭಾರತವನ್ನು ‘ಸಾರ್ವಭೌಮ ಪ್ರಜಾಸತ್ತಾತ್ಮಕ ಒಕ್ಕೂಟ’ ಎಂದು ವ್ಯಾಖ್ಯಾನಿಸುತ್ತದೆ. ನಂತರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಯಿತು. ಪ್ರಸ್ತಾವನೆಯಲ್ಲಿ ಮಾತ್ರವಲ್ಲದೆ, ಸಂವಿಧಾನದ ವಿವಿಧ ವಿಧಿಗಳಲ್ಲಿ ಮುಖ್ಯವಾಗಿ 25 ಮತ್ತು 26ನೇ ವಿಧಿಗಳಲ್ಲಿಯೂ ಜಾತ್ಯತೀತ ಸಿದ್ಧಾಂತದ ಪ್ರತಿಪಾದನೆ ಇದೆ. ‌

25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಯಾವುದೇ ವೃತ್ತಿ ಆಯ್ಕೆಯ ಸ್ವಾತಂತ್ರ್ಯ, ಧರ್ಮದ ಆಚರಣೆ ಮತ್ತು ಧರ್ಮ ಪ್ರಚಾರದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಧಾರ್ಮಿಕ ವ್ಯವಹಾರಗಳ ನಿರ್ವಹಣೆಯ ಸ್ವಾತಂತ್ರ್ಯವನ್ನು 26ನೇ ವಿಧಿಯು ಖಾತರಿಪಡಿಸುತ್ತದೆ. ‘ಧಾರ್ಮಿಕ ಮತ್ತು ಸಮಾಜ ಸೇವೆಯ ಉದ್ದೇಶಕ್ಕಾಗಿ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆಯ ಹಕ್ಕು ಪ್ರತೀ ಧರ್ಮ ಅಥವಾ ಯಾವುದೇ ವರ್ಗಕ್ಕೆ ಇದೆ ಎಂದು ಈ ವಿಧಿಯು ಘೋಷಿಸುತ್ತದೆ. ಧರ್ಮಕ್ಕೆ ಸಂಬಂಧಿಸಿದ ವಿಚಾರಗಳ ನಿರ್ವಹಣೆ, ಆಸ್ತಿಯ ಖರೀದಿ ಮತ್ತು ನಿರ್ವಹಣೆಯ ಹಕ್ಕು ಕೂಡ ಇದೆ ಎಂದು ಈ ವಿಧಿಯು ಹೇಳುತ್ತದೆ.

ಸಂವಿಧಾನವು ನೀಡಿದ ಈ ಖಾತರಿಯನ್ನು ಮುಸ್ಲಿಂ, ಕ್ರೈಸ್ತ, ಸಿಖ್‌ ಮತ್ತು ಇತರ ಧರ್ಮಗಳು ಪೂರ್ಣವಾಗಿ ಬಳಸಿಕೊಂಡು ತಮ್ಮ ತಮ್ಮ ಧರ್ಮಕ್ಕೆ ಸಂಬಂಧಿಸಿ ಸಂಸ್ಥೆಗಳನ್ನು ನಿರ್ವಹಿಸುತ್ತಿವೆ. ಈ ಎಲ್ಲ ಸಂಸ್ಥೆಗಳು ಸರ್ಕಾರದ ನಿಯಂತ್ರಣದಿಂದ ಹೊರಗೇ ಇವೆ. ಹಾಗಿದ್ದರೂ, ಸ್ವಾತಂತ್ರ್ಯದ ಬಳಿಕ ಸರ್ಕಾರವು ಹಿಂದೂ ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದು ಸಂವಿಧಾನದಲ್ಲಿ ಇರುವ ಅವಕಾಶಗಳ ಸ್ಪಷ್ಟ ಉಲ್ಲಂಘನೆ. ದೇಶದ ನೂರು ಕೋಟಿ ಹಿಂದೂಗಳ ಭಾವನೆಗಳಿಗೆ ಧಕ್ಕೆ.

ದೇಗುಲಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಬೊಮ್ಮಾಯಿ ಅವರ ಯೋಚನೆಯ ಬಗ್ಗೆ ಕಾಂಗ್ರೆಸ್‌ ಚಿತ್ರ ವಿಚಿತ್ರ ವಾದಗಳನ್ನು ಮುಂದಿಡುತ್ತಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಾದವೂ ವಿಚಿತ್ರವೇ ಆಗಿದೆ.ದಕ್ಷಿಣದ ರಾಜ್ಯಗಳ ಹಿಂದೂ ದೇವಾಲಯಗಳಿಂದ ಭಾರಿ ಮೊತ್ತವು ಸರ್ಕಾರದ ಬೊಕ್ಕಸಕ್ಕೆ ಬರುತ್ತದೆ. ಕೋವಿಡ್‌ನ ಪರಿಣಾಮವಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ. ಇಂತಹ ಸಂದರ್ಭದಲ್ಲಿ, ದೇಗಲುಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ ವ್ಯಕ್ತಿಗಳ ನಿಯಂತ್ರಣಕ್ಕೆ ಕೊಡುವುದು ಗಾಯಕ್ಕೆ ಉಪ್ಪು ಸವರಿದಂತೆ ಎಂದು ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕ ಸರ್ಕಾರದ ಈ ನಡೆಯು ‘ಚಾರಿತ್ರಿಕ ಪ್ರಮಾದ’. ದೇವಾಲಯಗಳು ‘ಸರ್ಕಾರದ ಸಂಪತ್ತು’. ಏಕೆಂದರೆ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವರಮಾನ ಬರುತ್ತದೆ ಎಂದು ಅವರು ಹೇಳಿದ್ದಾರೆ.ಅವರ ವಾದವು ಸಂವಿಧಾನದ ತರ್ಕವನ್ನು ನಿರ್ಲಕ್ಷಿಸುತ್ತದೆ. ಹಿಂದೂ ಭಕ್ತರು ದೇವಾಲಯಕ್ಕೆ ನೀಡುವ ದೇಣಿಗೆಯನ್ನು ಎಕ್ಸೈಸ್‌, ಮಾರಾಟ ತೆರಿಗೆಯ ರೀತಿಯಲ್ಲಿಯೇ ‘ವರಮಾನ’ ಎಂದು ಶಿವಕುಮಾರ್‌ ಬಣ್ಣಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರ ಹೇಳಿಕೆಯನ್ನು ಪ್ರಶ್ನಿಸಬೇಕಿದೆ. ಕೋವಿಡ್‌ ಈಗಲೂ ನಮ್ಮನ್ನು ಕಾಡುತ್ತಲೇ ಇದೆ. ಹಾಗಾಗಿ, ಮಸೀದಿಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳಲ್ಲಿ ಭಕ್ತರು ನೀಡುವ ದೇಣಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಹೇಳುವ ಧೈರ್ಯ ಶಿವಕುಮಾರ್‌ ಅವರಿಗೆ ಇದೆಯೇ? ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸುವುದು ಹಿಂದೂಗಳ ಹೊಣೆಗಾರಿಕೆ ಮಾತ್ರ ಆಗಿದೆಯೇ?

ಸಂವಿಧಾನದಲ್ಲಿ ‘ಜಾತ್ಯತೀತ’ ಎಂಬ ಪದವನ್ನು ಕಾಂಗ್ರೆಸ್‌ ಪಕ್ಷವೇ ಸೇರಿಸಿರುವುದರಿಂದ ಅದನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಶಿವಕುಮಾರ್‌ ವಿವರಿಸಬಹುದೇ? ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡುವುದೇ ಜಾತ್ಯತೀತ ಎಂಬುದರ ಆಧಾರ ಸ್ತಂಭ ಅಲ್ಲವೇ?

ದೇವಾಲಯಗಳ ನಿರ್ವಹಣೆಯನ್ನು ಹಿಂದೂ ವ್ಯಕ್ತಿಗಳ ಕೈಗೆ ಕೊಟ್ಟರೆ ನಿರ್ವಹಣೆ ಕಳಪೆ ಆಗಬಹುದು ಎಂಬುದು ನಕಲಿ ಜಾತ್ಯತೀತರ ವಾದವಾಗಿದೆ. ಮುಸ್ಲಿಂ, ಕ್ರೈಸ್ತ ಧಾರ್ಮಿಕ ಸ್ಥಳಗಳು ಮತ್ತು ಸಂಸ್ಥೆಗಳ ನಿರ್ವಹಣೆ ಚೆನ್ನಾಗಿದೆಯೇ? ಅದು ಚೆನ್ನಾಗಿಲ್ಲ ಎಂದಾದರೆ, ಅಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಇದೆಯೇ?

ಸದ್ಗುರು ಜಗ್ಗಿ ವಾಸುದೇವ ಅವರಂತಹ ಜನಾಭಿಪ್ರಾಯ ರೂಪಿಸುವ ವ್ಯಕ್ತಿಗಳು ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂಬ ಪ್ರತಿಪಾದನೆ ಆರಂಭಿಸಿದ್ದಾರೆ. ಇಂತಹ ಹೊತ್ತಿನಲ್ಲಿಯೇ ಬೊಮ್ಮಾಯಿ ಅವರು ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಮಾತನಾಡಿದ್ದಾರೆ.

ತಮಿಳುನಾಡು ಸರ್ಕಾರದ ನಿಯಂತ್ರಣದಲ್ಲಿ ಇರುವ 44,000 ದೇವಾಲಯಗಳಲ್ಲಿ 5 ಲಕ್ಷ ಎಕರೆಗೂ ಹೆಚ್ಚು ಜಮೀನು ಇದೆ. ಹಾಗಿದ್ದರೂ ಈ ದೇವಾಲಯಗಳಿಂದ ಬರುವ ವರಮಾನ ₹128 ಕೋಟಿ ಮಾತ್ರ. ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು ನಿರ್ವಹಿಸುತ್ತಿರುವ 85 ಗುರುದ್ವಾರಗಳ ಬಜೆಟ್‌ ₹1,000 ಕೋಟಿಗೂ ಹೆಚ್ಚು. ಈ ಅಂಕಿ ಅಂಶವೇ ನಮ್ಮ ಕಣ್ಣು ತೆರೆಸುವ ಅಂಶ ಎಂದು ಜಗ್ಗಿ ವಾಸುದೇವ ಅವರು ಹೇಳುತ್ತಾರೆ.

ದೇಗುಲ ನಿಯಂತ್ರಣದ ವಿಚಾರವನ್ನು ಮುನ್ನೆಲೆಗೆ ತಂದಿದ್ದಕ್ಕೆಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸಬೇಕು. ಈ ಭರವಸೆಯನ್ನು ಅವರು ಈಡೇರಿಸಬೇಕು. ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಬಿಡಿಸಲು ಬೇಕಿರುವ ಯೋಜನೆ ರೂಪಿಸಬೇಕು ಮತ್ತು ಇತರ ರಾಜ್ಯಗಳು ಅನುಸರಿಸುವುದಕ್ಕೆ ನಿದರ್ಶನ ರೂಪಿಸಬೇಕು.

ಎ. ಸೂರ್ಯಪ್ರಕಾಶ್‌

ಲೇಖಕ: ಪ್ರಸಾರ ಭಾರತಿಯ ಮಾಜಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT