ಶನಿವಾರ, ಮೇ 21, 2022
28 °C

ಪ್ರಜಾವಾಣಿ ಚರ್ಚೆ: ಕ್ರೈಸ್ತರ ಹಿಂಸಿಸುವುದೇ ಮಸೂದೆಯ ಉದ್ದೇಶ

ಪೀಟರ್ ಮಚಾದೊ Updated:

ಅಕ್ಷರ ಗಾತ್ರ : | |

ಸರ್ಕಾರದ ಪಡಸಾಲೆಯಿಂದಲೇ ಆರಂಭವಾದ ರಾಜ್ಯದಲ್ಲಿನ ಮತಾಂತರದ ಚರ್ಚೆಯು ಕ್ಷಿಪ್ರ ವೇಗವನ್ನು ಪಡೆದುಕೊಂಡು ಈ ಕ್ಷಣಕ್ಕೆ ರಾಜ್ಯವನ್ನು ಮೀರಿ, ರಾಷ್ಟ್ರೀಯ ಸುದ್ದಿಯಾಗಿದೆ; ಈ ಹೊತ್ತಿನಲ್ಲಿ, ಅತ್ತ ಸರ್ಕಾರವು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲು ಸರ್ವ ಸನ್ನದ್ಧವಾಗಿದೆ. ಸಂವಿಧಾನ ವಿರೋಧಿಯಾಗಿರುವ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಈ ನೆಲದ ಕ್ರೈಸ್ತರ ಅಸ್ಮಿತೆಯನ್ನು ನಗಣ್ಯ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.

ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಮಾತನಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಕುರಿತು ಪ್ರಸ್ತಾಪಿಸಿದ್ದರು. ತಮ್ಮ ತಾಲೂಕಿನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಬಲವಂತದ ಅಥವಾ ಆಮಿಷದ ಮತಾಂತರಗಳು ನಡೆಯುತ್ತಿವೆ ಎಂದು ಹೇಳಿದ್ದರು. ಸ್ವತಃ ತಮ್ಮ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ದೂರಿದ್ದರು. ಈ ಘಟನೆಯ ನಂತರ ಕ್ರೈಸ್ತ ಧರ್ಮದ ಮೇಲೆ ಭುಗಿಲೆದ್ದ ಅಸಮಾಧಾನ ಒಂದು ತಿಂಗಳ ಅವಧಿಯಲ್ಲಿ ಅನೇಕ ಚರ್ಚುಗಳ, ಪ್ರಾರ್ಥನಾಲಯಗಳ ಮೇಲಿನ ದಾಳಿಗೆ ಕಾರಣವಾಯಿತು. ಸಾರ್ವಜನಿಕವಾಗಿ ಕ್ರೈಸ್ತರು ಪ್ರಾರ್ಥಿಸುವುದು ಸಹ ತಪ್ಪು ಎಂಬಂತೆ ಸರ್ಕಾರದ ಅನೇಕ ಪ್ರಾಧಿಕಾರಗಳು ಕ್ರೈಸ್ತ ಸಮುದಾಯದ ಜನರನ್ನು ಅಪರಾಧಿಗಳಂತೆ ಕಂಡವು. ಸ್ವಇಚ್ಛೆಯ ಮತಾಂತರ - ಬಲವಂತದ ಮತಾಂತರ ಹಾಗೂ ಆಮಿಷ ಒಡ್ಡಿ ಮಾಡುವ ಮತಾಂತರದ ಜಿಜ್ಞಾಸೆಯಲ್ಲಿ ಕ್ರೈಸ್ತ ಧರ್ಮ ಏಕೆ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸುತ್ತೇನೆ.

ಭಾರತದ ಸಂವಿಧಾನದ 25ನೇ ವಿಧಿಯು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಈ ಸಂಪೂರ್ಣ ಸ್ವಾತಂತ್ರ್ಯದ ಪರಿಧಿಯೊಳಗೆ ಧಾರ್ಮಿಕ ಸ್ವಾತಂತ್ರ್ಯವೂ ಇದೆ. ತನಗಿಷ್ಟವಾದ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಾಗೂ ಅದನ್ನು ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನವು ನೀಡಿದೆ. ಹೀಗಿರುವಾಗ, ಈ ನೆಲದ ಕ್ರೈಸ್ತರು ಎಲ್ಲಿಂದಲೋ ಬಂದ ದೇಶಾಂತರಿಗಳಲ್ಲ. ಇದೇ ಭರತ ಭೂಮಿಯ ಮಣ್ಣಿನ ಮಕ್ಕಳು. ಈ ದೇಶದ ಪ್ರಜೆಗಳಾಗಿ ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿರುವವರು.

ದೇಶದಲ್ಲಿ ಭಾರಿ ಪ್ರಮಾಣದ ಮತಾಂತರ ದಿಂದಾಗಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ; ಕ್ರೈಸ್ತರ ಸಂಖ್ಯೆ ಅಧಿಕವಾಗುತ್ತಿದೆ ಎನ್ನುವವರು ಈ ಕುರಿತು ಸತ್ಯಾಂಶಗಳನ್ನು ಪರಿಶೀಲಿಸಬೇಕು. 2001ರ ಸಾರ್ವತ್ರಿಕ ಜನಗಣತಿಯ ಪ್ರಕಾರ ದೇಶದಲ್ಲಿನ ಕ್ರೈಸ್ತ ಸಮುದಾಯದ ಜನರ ಪ್ರಮಾಣ ಶೇ 2.34ರಷ್ಟಿತ್ತು. ಹತ್ತುವರ್ಷಗಳ ನಂತರ, ಅಂದರೆ 2011ರ ಜನಗಣತಿಯ ಪ್ರಕಾರ, ಕ್ರೈಸ್ತರ ಪ್ರಮಾಣ ಶೇ 2.30ರಷ್ಟು ಇತ್ತು. ದೇಶದಲ್ಲಿ ಕ್ರೈಸ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. 2001ರಲ್ಲಿ ಕರ್ನಾಟಕದಲ್ಲಿ ಕ್ರೈಸ್ತರ ಪ್ರಮಾಣವು ಶೇ 1.91ರಷ್ಟಿತ್ತು. 2011ರ ಜನಗಣತಿಯ ಪ್ರಕಾರ, ಈ ಪ್ರಮಾಣವು ಶೇ 1.87ಕ್ಕೆ ಇಳಿದಿದೆ. ಇದು ನಾವು ನೀಡುತ್ತಿರುವ ಅಂಕಿಅಂಶಗಳಲ್ಲ; ಬದಲಿಗೆ ಸರ್ಕಾರವೇ ಅಧಿಕೃತವಾಗಿ ನೀಡಿರುವ ಅಂಕಿಅಂಶಗಳು. ಮತಾಂತರ ನಡೆಯುತ್ತಿದ್ದರೆ ಕ್ರೈಸ್ತರ ಸಂಖ್ಯೆ ಅಧಿಕವಾಗಬೇಕಿತ್ತು. ಆದರೆ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿರುವುದು ಮತಾಂತರದ ಆರೋಪಗಳು ಶುದ್ಧ ಸುಳ್ಳು ಎಂಬುದನ್ನು ಸಾಬೀತು ಮಾಡುತ್ತದೆ.

ಕ್ರೈಸ್ತ ಸಮುದಾಯವು ಮತಾಂತರ ನಿಷೇಧ ಮಸೂದೆಯನ್ನು ತೀವ್ರವಾಗಿ ವಿರೋಧಿಸುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಈ ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಗಳ ಕುರಿತು ಅವಲೋಕನ ನಡೆಸೋಣ: ಮೊದಲು ಮತಾಂತರ ನಿಷೇಧ ಕಾನೂನನ್ನು ಒರಿಸ್ಸಾ ರಾಜ್ಯವು 1967ರಲ್ಲಿ ಜಾರಿಗೆ ತಂದಿತು. ಈ ಕಾಯ್ದೆ ಜಾರಿಯಾದ ನಂತರದ ದಿನಗಳಲ್ಲಿ ಆರಂಭವಾದ ಅಲ್ಲಿನ ಆದಿವಾಸಿ ಕ್ರೈಸ್ತರ ಮೇಲಿನ ದಾಳಿ ಹಾಗೂ ಹಲ್ಲೆಗಳು ದಶಕಗಳ ಕಾಲ ಮುಂದುವರಿದು 2008ರ ಕಂದಮಾಲ್ ನರಮೇಧದೊಂದಿಗೆ ಮುಕ್ತಾಯವಾಯಿತು. ಸಾವಿರಾರು ಆದಿವಾಸಿ ಕ್ರೈಸ್ತರನ್ನು ಹರಕೆಯ ಕುರಿಗಳಂತೆ ಕೊಚ್ಚಲಾಯಿತು, ನೂರಾರು ಜನರನ್ನು ಕೊಲ್ಲಲಾಯಿತು ಹಾಗೂ ಅನೇಕ ನಿರಪರಾಧಿಗಳು ಈಗಲೂ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಮೊನ್ನೆಯಷ್ಟೇ, ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನ ವರದಿಯು ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲೇ ಕ್ರೈಸ್ತರ ಮೇಲೆ ಅತಿ ಹೆಚ್ಚು ಹಲ್ಲೆಗಳನ್ನು ಮಾಡಲಾಗಿದೆ ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದೆ. ಕ್ರೈಸ್ತರ ಮೇಲಿನ ದಾಳಿ ಹಾಗೂ ಹಲ್ಲೆ ಪ್ರಕರಣಗಳಲ್ಲಿ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ‘ಮತಾಂತರ ನಿಷೇಧ ಕಾಯ್ದೆಯನ್ನು ರೂಪಿಸುತ್ತೇವೆ’ ಎಂದು ಸರ್ಕಾರವು ಹೇಳಿದ ನಂತರ ಕ್ರೈಸ್ತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ. ಈ ಕಾಯ್ದೆಯು ಜಾರಿಯಾದರೆ ಆಗಬಹುದಾದ ಘಟನೆಗಳ ಕುರಿತು ಈಗಾಗಲೇ ನಡೆದಿರುವ ಹಲ್ಲೆ ಪ್ರಕರಣಗಳು ಸೂಕ್ಷ್ಮ ಸಂದೇಶವನ್ನು ನೀಡುತ್ತವೆ. 

ಎರಡನೆಯದಾಗಿ, ಈ ದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಗಳನ್ನು ಪರಿಶೀಲಿಸಿದಾಗ ಕಂಡು ಬಂದ ಒಂದು ಸಾಮಾನ್ಯ ಅಂಶ ಹೀಗಿದೆ: ಯಾವುದೇ ವ್ಯಕ್ತಿಯ ಮೇಲೆ ಬಲವಂತದ ಮತಾಂತರ ಅಥವಾ ಆಮಿಷದ ಮತಾಂತರದ ಆರೋಪ ಕೇಳಿಬಂದರೆ ಆ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಆತನೇ ಪುರಾವೆಗಳನ್ನು ಒದಗಿಸಬೇಕಾಗಿದೆ. ಸಾಮಾನ್ಯವಾಗಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಯಮಾವಳಿಗಳ ಪ್ರಕಾರ ಒಬ್ಬ ವ್ಯಕ್ತಿಯ ಮೇಲೆ ಆರೋಪವನ್ನು ಮಾಡಿದಾಗ ಅದನ್ನು ಸಾಬೀತುಪಡಿಸುವ ಹಾಗೂ ಆ ಕುರಿತು ನ್ಯಾಯಾಲಯಕ್ಕೆ ಪುರಾವೆಗಳನ್ನು ನೀಡುವ ಹೊಣೆಗಾರಿಕೆ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಆದರೆ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಆರೋಪಿಯೇ ತಾನು ನಿರಪರಾಧಿಯೆಂದು ಸಾಬೀತುಪಡಿಸಬೇಕಾದ ಅನಿವಾರ್ಯ ಇದೆ. ಅಂದರೆ, ಯಾರು ಬೇಕಾದರೂ ಸುಳ್ಳು ಆರೋಪಗಳನ್ನು ಮಾಡಿ, ಆ ಮೂಲಕ ನಿರಪರಾಧಿ ಕ್ರೈಸ್ತರನ್ನು ಹಿಂಸಿಸಬಹುದಾಗಿದೆ. ಕೋತಿ ತಾನು ತಿಂದು ಮೇಕೆಯ ಮುಖಕ್ಕೆ ಒರೆಸಿದ ಕಥೆಯ ತದ್ರೂಪಿನಂತಿರುವ ಈ ಕಾಯ್ದೆಯ ಮೂಲ ಉದ್ದೇಶ ಕ್ರೈಸ್ತ ಸಮುದಾಯವನ್ನು ಹಿಂಸೆಗೆ ಗುರಿಪಡಿಸುವುದೇ ಆಗಿದೆ.

ಗೂಳಿಹಟ್ಟಿ ಶೇಖರ್ ಮಾಡಿದ ಪುಂಖಾನುಪುಂಖ ಆರೋಪಗಳತ್ತ ಗಮನ ಹರಿಸೋಣ: ಶೇಖರ್‌ ಅವರು ಮಾಡಿದ ಮತಾಂತರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರವು ಹೊಸದುರ್ಗ ತಾಲ್ಲೂಕು ಆಡಳಿತಕ್ಕೆ ಆದೇಶಿಸಿತು. ತಾಲ್ಲೂಕು ಆಡಳಿತವು ತನಿಖೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ತಾಲೂಕಿನಲ್ಲಿ ಬಲವಂತದ ಮತಾಂತರದ ಯಾವುದೇ ಪ್ರಕರಣ ನಡೆದಿಲ್ಲ ಎಂದು ಹೊಸದುರ್ಗ ತಾಲ್ಲೂಕಿನ ತಹಶೀಲ್ದಾರ್‌ ಅವರು ವರದಿಯಲ್ಲಿ ಹೇಳಿದ್ದಾರೆ. ಇಲ್ಲಿನ ಮತಾಂತರ ಪ್ರಕರಣಗಳಲ್ಲಿ ಎಲ್ಲರೂ ತಮ್ಮ ಸ್ವಂತ ಇಚ್ಛೆಯಿಂದ ಮತಾಂತರವಾಗಿದ್ದಾರೆ ಎಂಬುದನ್ನೂ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಸ್ವಇಚ್ಛೆಯಿಂದ ಮತಾಂತರವಾಗುವುದು ತಪ್ಪೇ? ಮತಾಂತರ ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ, ಆತ್ಮಶಾಂತಿ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳುವ ಸ್ವಾಂತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ.  ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು ಎಂಬುದನ್ನು ನಾವು ಮನಗಾಣಬೇಕಿದೆ.

ಬಲವಂತದ ಮತಾಂತರ ಅಥವಾ ಆಮಿಷ ಒಡ್ಡಿ ಮಾಡುವ ಮತಾಂತರವನ್ನು ನಾವು ಬೆಂಬಲಿಸುತ್ತಿಲ್ಲ. ಹಾಗೇ ಮಾಡಿದವರ ವಿರುದ್ಧ ತನಿಖೆ ನಡೆಸಿ, ಕಾನೂನಿನ ಪ್ರಕಾರ ಅವರನ್ನು ಶಿಕ್ಷಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಸಂವಿಧಾನ ಹಾಗೂ ಐಪಿಸಿಯಲ್ಲಿ ಅಗತ್ಯ ನಿಯಮಗಳು ಮತ್ತು ಅವಕಾಶಗಳು ಇವೆ. ಆದರೆ ಒಂದೆರಡು ಪ್ರಕರಣಗಳನ್ನೇ ಮಾನದಂಡವಾಗಿಟ್ಟುಕೊಂಡು ಇಡೀ ಸಮುದಾಯವನ್ನೇ ಅಪರಾಧೀಕರಿಸುವಂತಹ ಕಠೋರ ಮತಾಂತರ ಕಾಯ್ದೆಯನ್ನು ತಂದು ಶತಮಾನಗಳಿಂದಲೂ ಶಾಂತಿಯಿಂದ ಜೀವಿಸುತ್ತಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸೇವೆಯನ್ನು ಸಲ್ಲಿಸುತ್ತಿರುವ ಕ್ರೈಸ್ತ ಸಮುದಾಯವನ್ನು ಈ ನೆಲದಎರಡನೇ ದರ್ಜೆಯ ನಾಗರಿಕರಂತೆ ಕಾಣುವುದು ಸಲ್ಲದು.

- ಸ್ವಇಚ್ಛೆಯಿಂದ ಮತಾಂತರವಾಗುವುದು ತಪ್ಪೇ? ಮತಾಂತರ ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ, ಆತ್ಮಶಾಂತಿ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳುವ ಸ್ವಾಂತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು ಎಂಬುದನ್ನು ನಾವು ಮನಗಾಣಬೇಕಿದೆ.

ಲೇಖಕ: ಆರ್ಚ್‍ಬಿಷಪ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು