ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಧರ್ಮವೇ ಸಂಕಟವೇ

ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಹಿಜಾಬ್‌, ಕೇಸರಿ ಶಾಲು ಧರಿಸುವುದು ಸರಿಯೇ?
Last Updated 4 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಹೌದು, ಅದೆಷ್ಟು ಚಂದವಿರುತ್ತಿತ್ತು. ಜಾತಿ ಧರ್ಮಗಳ ಮರೆಕತ್ತಿಯಲ್ಲಿ ಪಿತೃಸಂಹಿತೆಗಳು ಆರ್ಭಟಿಸದೆ ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಟ್ಟಿದ್ದರೆ! ಹೆಣ್ಣಿನ ದೇಹ ಮನಸ್ಸುಗಳನ್ನು ತಮ್ಮ ಹಿತಾಸಕ್ತಿಯನ್ನೇ ಕಾಪಾಡುವ ಕೈವಸ್ತ್ರ ಮಾಡಿಕೊಳ್ಳದಿದ್ದರೆ. ನಾವು ಏನು ತೊಡಬೇಕು, ಉಡಬೇಕು, ಉಣ್ಣಬೇಕು, ಯಾವಾಗ ನಗಬೇಕು, ಯಾಕೆ ಅಳಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಕಲಿಯಬೇಕು ಏನು, ಎಷ್ಟು, ಹೇಗೆ, ಏಕೆ ಓಹ್‌... ಹೆಣ್ಣನ್ನು ಸುತ್ತಿ ಸಾಯಿಸುತ್ತಿರುವ ಯಾಜಮಾನ್ಯತೆಗಳು ಇಲ್ಲದಿದ್ದರೆ... ನಾನು ಬದುಕುತ್ತಿರುವುದು ನನ್ನದೇ ಬಾಳು ಎಂಬ ಆತ್ಮವಿಶ್ವಾಸದ ನಡಿಗೆಯೊಂದು ದಕ್ಕಿದ್ದರೆ... ಇಲ್ಲ ಹಾಗಾಗಲಿಲ್ಲ. ಮಾನವ ಚರಿತ್ರೆಯಲ್ಲಿ ಸಾಮಾಜಿಕ ಪರಿವರ್ತನೆಗಳು ಅದೆಷ್ಟೆಲ್ಲ ಸಂಭವಿಸಿದ ಮೇಲೂ ಹೆಣ್ಣನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪಿತೃತ್ವದ ನಡೆ ನೀತಿಗಳು ಬದಲಾಗಲಿಲ್ಲ. ಒಳಗಿನ ಎಲ್ಲ ಪರಿವರ್ತನೆಗಳನ್ನೂ ಬಿಗಿದು ಹಿಡಿದ ಒಳನೇಯ್ಗೆಯಾಗಿ ಬಂತು. ಗಂಡಾಳಿಕೆಯ ವಿಧಾನಗಳು ರೂಪಾಂತರಗೊಂಡವೇ ವಿನಃ ನಿಯಂತ್ರಿತವಾಗಲಿಲ್ಲ. ಇದಕ್ಕೆ ಯಾವ ದೇಶ, ಕಾಲ, ಜಾತಿ, ಧರ್ಮಗಳೂ ಹೊರತಾಗಿಲ್ಲ. ಸಾಮಾಜಿಕವಾಗಿ ಅಪಾಯದಲ್ಲಿರುವ ಸಮುದಾಯಗಳಲ್ಲಿ ಇದು ಇನ್ನೂ ಕಠಿಣವಾಗಿರುತ್ತದೆ.

ಗಂಡಸಿಗೆ ಕಡ್ಡಾಯವಲ್ಲದ ಅಥವಾ ಸಾಂದರ್ಭಿಕವಾಗಿರುವ ಧಾರ್ಮಿಕ ಕುರುಹುಗಳು ಹೆಣ್ಣಿಗೆ ಮಾತ್ರ ಸಾರ್ವತ್ರಿಕವೂ ಸಾರ್ವಕಾಲಿಕವೂ ಕಡ್ಡಾಯವೂ ಆಗಿರುತ್ತದೆ. ಭಾರತದಂತಹ ಬಹುಧಾರ್ಮಿಕ ಪರಿಸರದಲ್ಲಿ ಹೆಣ್ಣನ್ನು ಹತೋಟಿಯಲ್ಲಿಡುವ ಬೇಲಿಗಳು ಇನ್ನೂ ಬಿಗಿಯಾಗಿವೆ. ಈ ಬಿಗಿತಕ್ಕಾಗಿಯೇ ಅವಳ ಉಡುಪು ತೊಡುಪುಗಳನ್ನು ಪವಿತ್ರೀಕರಣಗೊಳಿಸಲಾಗುತ್ತದೆ. ಹುಡುಗಿ ಜೀನ್ಸ್‌ ತೊಡಬಹುದು. ಆದರೆ, ಕೆಲವು ಆಚರಣೆಗಳಲ್ಲದು ನಿಷಿದ್ಧ– ತುಂಬಾ ಜಾಳು ಜಾಳಾಗಿ ಕಾಣುವ ಧಾರ್ಮಿಕ, ಸಾಂಸ್ಕೃತಿಕ ಒತ್ತಾಯಗಳಿರುತ್ತವೆ. ಹಣೆಗೆ ಬಿಂದಿ ಹಚ್ಚಬೇಕಾದವರು ಯಾರು, ಹಚ್ಚಬಾರದವರು ಯಾರು? ಹೀಗೆ ನೂರೊಂದು ಒಪ್ಪಿತಗಳಿರುತ್ತವೆ. ಯಾವುದೂ ಹೆಣ್ಣಿನ ಆಯ್ಕೆಯಲ್ಲ. ಈ ಹೇರಿಕೆಗಳ ಉಲ್ಲಂಘನೆ ತುಂಬಾ ಸಣ್ಣಮಟ್ಟದಲ್ಲಿ ಮನೆಯ ಹೊಸ್ತಿಲೊಳಗೆ ಅಥವಾ ಅತಿನಾಗರಿಕ ವಾತಾವರಣದಲ್ಲಿ ಕ್ವಚಿತ್ತಾಗಿ ಕಾಣಬಹುದು. ನನ್ನ ಬಾಲ್ಯದಲ್ಲಿ ಹಿರಿಯರೊಬ್ಬರು ‘ತಂಗೀ ಹಣೆಯೇನು ನಾಯಿ ನೆಕ್ಕಿತೇ?’ ಎಂದು ಕೇಳಿದ್ದರು. ಹಣೆಯ ಮೇಲೆ ಕುಂಕುಮ ಇಲ್ಲದ್ದಕ್ಕೆ ಅವರು ಹಾಗಂದರು ಎಂದು ನಂತರ ತಿಳಿದಿತ್ತು. ಬಯಲುಸೀಮೆಯ ನನ್ನ ಅತ್ತೆ ಯಾವತ್ತೂ ತಲೆಸೆರಗನ್ನು ಕೆಳಜಾರಿಸಿದವರಲ್ಲ. ‘ಅದೆಂಗೆ ಸಂಭಾಳಿಸ್ತೀರಿ?’ ಎಂದು ಕೇಳಿದ್ದೆ. ‘ಸಣ್ಣವರಿದ್ದಾಗಿನಿಂದ ರೂಢಿಯಾಗಿರ್ತದೆ, ಜರಾ ಸೆರಗು ಜಾರಿದ್ರೂ ನಿಮ್ಮ ಮಾವ ‘ಯಾಕ ನೆತ್ತಿ ಮ್ಯಾಕ ಗೂಟ ಬಡೀಬೇಕೇನು? ಅಂತ ಜಬರಸ್ತಿದ್ದ’ ಎಂದು ಒಂದಿಷ್ಟು ಜಂಭದಿಂದಲೇ ಹೇಳಿದ್ದರು. ಎಲ್ಲ ಜಾತಿ– ಸಂಪ್ರದಾಯಗಳೂ ಹೆಣ್ಣಿಗೆ ಇಂತಹ ಒಪ್ಪಿತವನ್ನು ಕಲಿಸಿರುತ್ತವೆ. ಹೆಣ್ಣಿನ ಚಹರೆಯನ್ನು ಹೊಲಿದು ಸಿದ್ಧಮಾಡುವ ಸೂಜಿಯ ಹಿಡಿತ ಮಾತ್ರ ಪಿತೃ ಹಿತಾಸಕ್ತವೇ ಆಗಿರುತ್ತದೆ. ಈ ಸ್ಪಷ್ಟತೆಯೊಂದಿಗೆ ಮಂಗಳೂರಿನ ಕಾಲೇಜು ಹುಡುಗಿಯರ ಹಿಜಾಬ್‌ ಘಟನೆಯನ್ನು ನೋಡಬೇಕು.

ಇಸ್ಲಾಂ ಧರ್ಮದ ಆರಂಭದ ಕಾಲದಲ್ಲಿ ಅರಬ್ಬರ ಹಲವು ಬುಡಕಟ್ಟುಗಳ ಒಕ್ಕೂಟದಲ್ಲಿ ಇಲ್ಲದಿದ್ದ ಬುರ್ಖಾ ಪದ್ಧತಿ, ಇಸ್ಲಾಮಿನ ಪುನರುತ್ಥಾನದ ಕಾಲದಲ್ಲಿ ಕಾಣಿಸಿಕೊಂಡಿತು. ಹಿಂದೂ ಪುನರುತ್ಥಾನವಾದಿ ಕಾಲದಲ್ಲಿ ಬಹುವೈವಿಧ್ಯಗಳಲ್ಲಿದ್ದ ಹೆಣ್ಣಿನ ಚಹರೆಗೆ ಅಧಿಕೃತತೆಯ ಮೊಹರು ಒತ್ತಿ ನಂತರ ಅದನ್ನು ಭಾರತೀಯತೆಯೊಂದಿಗೆ ಸಮೀಕರಿಸಿದ ರಾಜಕಾರಣವನ್ನು ಗಮನಿಸಬೇಕು. ಭಾರತದಲ್ಲಿ ಕೋಮುವಾದ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮವಾಗಿ ಮುಸ್ಲಿಂ ಧರ್ಮ ಮತ್ತಷ್ಟು ಮೂಲಭೂತವಾದದೆಡೆಗೆ ಹೊರಳಿತು. ಇದರ ಪರಿಣಾಮವಾಗಿ ಮುಸ್ಲಿಂ ಮಹಿಳೆಯರು ಹೆಚ್ಚು ನಿರ್ಬಂಧಗಳಿಗೆ ಒಳಗಾದರು. ಕಳೆದ ಕಾಲು ಶತಮಾನದಿಂದ ಬುರ್ಖಾ ಹಿಜಾಬ್‌ಗಳೆಲ್ಲ ಕಡ್ಡಾಯಗೊಂಡವು.

ಇಂದಿಗೂ ಕಾಲೇಜಿನ ಹುಡುಗಿಯರಿಗೆ ಬುರ್ಖಾ ದಾರಿನೆಂಟ. ಡೆಸ್ಕ್‌ನಲ್ಲಿ ಸುತ್ತಿಟ್ಟು ಯೂನಿಫಾರ್ಮ್‌ನಲ್ಲಿ ಆರಾಮಾಗಿರುವ, ತಲೆಗೆ ಹಿಜಾಬ್‌ ಕಟ್ಟಿಕೊಂಡಿರುವ ಸ್ಥಿತಿಯಲ್ಲಿರುತ್ತಾರೆ. ಏಕೆಂದರೆ, ಅದೊಂದು ಪಾವಿತ್ರ್ಯ, ಹೆಣ್ತನದ ರಕ್ಷಣೆ ಎಂದೆಲ್ಲ ಒಪ್ಪಿಸಲಾಗಿದೆ. ಇನ್ನೊಂದೆಡೆ ಕುಟುಂಬಗಳೆಂಬ ಧಾರ್ಮಿಕ ಮೂಲಭೂತವಾದದ ಮುಷ್ಟಿಯಿಂದ ಜಗುಳಿಕೊಂಡು ಶಿಕ್ಷಣ ವಲಯಕ್ಕೆ ಪ್ರವೇಶಿಸಿದ ಇವರು ಹಾಯಬೇಕಾದ ಬೆಂಕಿ ಕೊಂಡಗಳು ಹಲವಾರು. ಮನೆಯ ಕರ್ತವ್ಯಗಳನ್ನು ಇಡಿಯಾಗಿ ನಿಭಾಯಿಸಬೇಕಾದ ದರ್ದು, ಕಡಿಮೆ ಓದಿನಲ್ಲಿ ತಕ್ಷಣದ ಸುಲಭದ ಉದ್ಯೋಗ ಸಿಕ್ಕೀತೇ ಎಂಬ ಹಳಹಳಿ, ಅನ್ಯ ಭಾಷಾ ಪರಿಸರದಿಂದ ಶೈಕ್ಷಣಿಕ ಪರಿಸರಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ... ಈ ಸವಾಲುಗಳಲ್ಲವರಿಗೆ ಬುರ್ಖಾ, ಹಿಜಾಬ್‌ ಯಾವುದೂ ಮುಖ್ಯವಾಗುವುದಿಲ್ಲ. ಸಮಾನ ಹಿತಾಸಕ್ತಿಗಳ ಸೌಹಾರ್ದದ ಸಮಾಜದಲ್ಲಿ ಹೆಣ್ಣಿಗೆ ಆಯ್ಕೆ ಇದ್ದರೆ... ಧಾರ್ಮಿಕ ಗುರುತುಪಟ್ಟಿಯಿಂದ ಕಳಚಿಕೊಳ್ಳುವುದು ಸಾಧ್ಯವಿತ್ತು. ಆದರೆ, ದಿನದಿಂದ ದಿನಕ್ಕೆ ಮತೀಯವಾಗುತ್ತಿರುವ ಸಮಾಜದಲ್ಲಿ ಹೆಣ್ಣಿನ ಆಯ್ಕೆಯ ದಾರಿ ತುಂಬಾ ಕಡಿದಾಗುತ್ತದೆ. ಸಿಕ್ಕ ಅವಕಾಶದಲ್ಲಿ ಶಿಕ್ಷಣ ಉದ್ಯೋಗಗಳಿಗೆ ತೆರಳದೆ, ಮತೀಯತೆಯನ್ನು ವಿರೋಧಿಸುವುದೆಂದರೆ ಅದು ದೋಣಿಯ ತೂತಿನಷ್ಟು ಅಪಾಯಕಾರಿ ಎಂಬ ಭಯ ಕಾಡುತ್ತದೆ. ‘ಪಾಠ ಮಾಡುವ ಶಿಕ್ಷಕರು ಗಂಡಸರು. ಆದ್ದರಿಂದ ಸ್ವಸ್ಥವಾಗಿರಲು ಹಿಜಾಬ್‌ ಬೇಕು ಎಂಬ ಬಾಲೆಯ ಮಾತು ಗಿಳಿಪಾಠವೇ. ಗುರು–ಶಿಷ್ಯ ಸಂಬಂಧದ ಕ್ಲಾಸ್‌ರೂಂ ಕೂಡ ಗಂಡು–ಹೆಣ್ಣು, ಜಾತಿ–ಧರ್ಮಗಳ ಬಣ್ಣ ಪಡೆದರೆ ಅದು ದುರವಸ್ಥೆಯ ಸಮಾಜದ ಕುರುಹು. ಖಂಡಿತ, ಎಲ್ಲ ಧರ್ಮಗಳೂ ಹೆಣ್ಣಿನ ಮೈಮೇಲಿನ ತಮ್ಮ ದಸ್ತಾವೇಜನ್ನು ಇಳುಹಬೇಕು. ಯೋಗ್ಯ, ಸಭ್ಯ, ಇಷ್ಟಗಳ ಆಯ್ಕೆ ಅವಳದಾಗಬೇಕು. ಆದರೆ.. ಅಂತಹ ಸಾಧ್ಯತೆಯ ನಡಿಗೆಗೆ ಹಾದಿಯೇ ಸಿದ್ಧಗೊಳ್ಳುತ್ತಿಲ್ಲ.

ಹಾಗಿರುವಾಗ, ಮುಸ್ಲಿಂ ಹುಡುಗಿಯರ ತಲೆಮೇಲಿನ ತುಂಡುವಸ್ತ್ರ ಯಾರಿಗೆ ಯಾಕಾಗಿ ಮುಖ್ಯವಾಗುತ್ತಿದೆ? ಇದು ತುಳುಸೀಮೆಗೆ ಮಾತ್ರ ಸಂಬಂಧಿಸಿದ ಗದ್ದಲವಲ್ಲ. ಕೆಲವರ್ಷಗಳ ಹಿಂದೆ ನಾನಿದ್ದ ಕಾಲೇಜಿನಲ್ಲಿ (ಅದೂ ಚುನಾವಣಾ ಪೂರ್ವದ ವರ್ಷವೇ) ಕೆಲ ಹುಡುಗರ ಹೆಗಲಿಗೆ ಕೇಸರಿ ಶಾಲು ಬಂತು. ‘ಇದೆಲ್ಲಾ ಕ್ಯಾಂಪಸ್ಸಿನ ಹೊರಗಿಟ್ಟುಕೊಳ್ಳಿ’ ಎಂದರೆ, ಅವರು ಬೆರಳು ತೋರಿಸಿದ್ದು ಬುರ್ಖಾಗಳಿಗೆ. ‘ಅವರಿಗೆ ಯೂನಿಫಾರ್ಮ್‌ನಲ್ಲಿ ಬರಾಕೆ ಹೇಳ್ರಿ’ ಎಂದು ಜರ್ಬು. ಕಾರ್ಯಕ್ರಮ ನಡೆದಾಗ, ಎಲ್ಲಿಂದಲೋ ಬೈಕ್‌ಗಳಲ್ಲಿ ಚೀಲಗಟ್ಟಲೆ ಕೇಸರಿ ಶಾಲುಗಳು ಬಂದು ಮುಕ್ಕಾಲು ಮೂರುವೀಸ ವಿದ್ಯಾರ್ಥಿಗಳೂ, ವಿದ್ಯಾರ್ಥಿನಿಯರೂ ಹೊದ್ದಾಯಿತು. ನಾವೆಲ್ಲ ಆಗ, ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ನಿರ್ಲಕ್ಯ್ಷವನ್ನು ಬಲು ಕಷ್ಟದಿಂದ ನಿರ್ವಹಿಸಬೇಕಾಯಿತು. ದಿನಗಳುರುಳಿದವು. ಕ್ಲಾಸ್‌ರೂಂ ಗೋಡೆಗಳ ಮೇಲೆ, ಬಾಗಿಲ ಮೇಲೆ, ‘ದಂ ಇದ್ದರೆ ಬುರ್ಖಾ ತೆಗೆಸಿ’ ಎಂಬ ಬರಹಗಳು ಬಂದವು. 4–5 ಹುಡುಗರು ಪರೀಕ್ಷೆಯಲ್ಲೂ ಶಾಲು ಹೊದ್ದು ಕುಳಿತರು. ತುಂಬಾ ಸ್ಪಷ್ಟವಾಗಿ ಅದು ಚುನಾವಣಾ ಸಿದ್ಧತೆಯಾಗಿತ್ತು. ಯುವಮನಸ್ಸಿಗೆ ಧರ್ಮದ ಹೆಸರಿನಲ್ಲಿ ವಿಷ ಬಿತ್ತಿದರೆ, ಸರಿಯಾಗಿ ಫಲಕೊಡುತ್ತದೆ ಎಂಬ ರಾಜಕಾರಣವಾಗಿತ್ತು. ಅದರಿಂದ ತಕ್ಷಣದ ಗೆಲುವು ಸಿದ್ಧವಾಗಿರುತ್ತದೆ. ದೂರದ ಪರಿಣಾಮದಲ್ಲದು ಊರೂರುಗಳನ್ನೆಲ್ಲಾ ಸುಡುಬೂದಿಯಾಗಿಸುತ್ತದೆ ಎನ್ನುವುದು ಯಾರಿಗೆ ಬೇಕಿದೆ?

ಹಿಜಾಬ್‌ ಅನ್ನು ವಿರೋಧಿಸುವವರು, ತಂತಮ್ಮ ಕುಟುಂಬಗಳ ತಾಯಂದಿರು ಸಾಂಪ್ರದಾಯಿಕ ಕುರುಹುಗಳನ್ನು ನಿರಾಕರಿಸಿದರೆ ಒಪ್ಪುತ್ತಾರೆಯೇ? ಪ್ರತಿಧರ್ಮವೂ ಹೆಣ್ಣನ್ನು ಹೀಗೇ ಬಳಸಿಕೊಳ್ಳುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆಯೇ? ಮುಸ್ಲಿಮರನ್ನು ವಿರೋಧಿಸಲು ಹುಡುಕುವ ನೆಪಗಳಲ್ಲಿ ಹಿಜಾಬ್ ಕೂಡ ಒಂದು.ದುರಂತವೆಂದರೆ, ಇದರಿಂದ ನಲುಗುವುದು ಹೆಣ್ಣಿನ ಬದುಕೇ. ಒಂದಿಷ್ಟು ಹೊರಬದುಕಿಗೆ ತೆರೆದುಕೊಳ್ಳುತ್ತಿರುವವರನ್ನು ಮತ್ತೆ ಹೊಸ್ತಿಲೊಳಗೆ ದೂಡುತ್ತದೆ. ಮತಾಂಧತೆಯನ್ನು ಪ್ರಶ್ನಿಸುತ್ತ ತನ್ನ ದಾರಿಯನ್ನು ನಿಸೂರಗೊಳಿಸಿಕೊಳ್ಳಬೇಕಾದ ಅವಕಾಶಗಳು ಇಲ್ಲದಂತಾಗುತ್ತದೆ. ಹೆಣ್ಣು ಬಾಳಿನ ಧರ್ಮಸಂಕಟವಿದು.

ಹೆಣ್ಣಿನ ಸ್ವಾತಂತ್ರ್ಯ–ಸಮಾನತೆಯ ಆದ್ಯತೆಯನ್ನು ತನ್ನ ಮಾರುಕಟ್ಟೆ ಮಾಡಿಕೊಂಡ ಬಂಡವಾಳವಾದ ಕಣ್ಣಿಗಾದರೂ ಕಂಡೀತು. ಕೋಮುವಾದಿ ರಾಜಕೀಯದ ರಣನೀತಿ ಪಂಚೇಂದ್ರಿಯಗಳ ಅರಿವಿನ ಆಚೆಗಿನದು. ನಮ್ಮ ಕಾಲದ ಮಹಿಳಾ ಚಿಂತನೆ ಈ ರಾಜಕೀಯವನ್ನು ತುಸು ನಿರ್ಲಕ್ಷಿಸಿದರೂ ತಾತ್ವಿಕವಾಗಿಯೇ ಕುಸಿದು, ಬರಡಾಗಿಬಿಡಬಹುದು. ನಾವೀಗ ಅರ್ಥೈಸಿಕೊಳ್ಳಬೇಕಿರುವುದು ಉಸಿರು–ಉಸಿರಿಗೂ ಇರಿವ ಈ ಇಬ್ಬಾಯ ಕತ್ತಿಯನ್ನು.

ಲೇಖಕಿ: ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಂಡೇಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT