ಸೋಮವಾರ, ಸೆಪ್ಟೆಂಬರ್ 20, 2021
29 °C
‘ಆಲದಮರ’ ಕ್ಲಬ್‌ಹೌಸ್‌ ಚರ್ಚೆಯಲ್ಲಿ ಪುರುಷೋತ್ತಮ ಬಿಳಿಮಲೆ ಅಭಿಮತ

ಜಾನಪದದ ಮಹಿಳಾ ಧ್ವನಿ ಮತ್ತೆ ಮೊಳಗಲಿ: ಪುರುಷೋತ್ತಮ ಬಿಳಿಮಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಿಳೆಯನ್ನು ಮತ್ತೆ ಮನೆಯೊಳಗೆ ದೂಡುವ, ಸಾರ್ವಜನಿಕ ಜೀವನದಿಂದ ಹೊರಗೆ ತಳ್ಳುವ ಮಾತುಗಳು ಬೇರೆ ಬೇರೆ ಕಡೆಯಿಂದ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, ಜಾನಪದ ಹಾಡು, ಕಥೆಗಳಲ್ಲಿನ ಮಹಿಳೆಯ ಧ್ವನಿಯನ್ನು ಮತ್ತೆ ಹೊರತರಬೇಕಾಗಿದೆ....’

– ಇದು ‘ಜಾನಪದ ಮತ್ತು ಮಹಿಳೆ’ ಎಂಬ ವಿಷಯದ ಕುರಿತು ಪ್ರಜಾವಾಣಿ ‘ಆಲದಮರ’ದಡಿ ಭಾನುವಾರ ನಡೆದ ಮಾತುಕತೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅವರು ಕೇಳುಗರ ಮುಂದಿಟ್ಟ ಅಭಿಮತ.

ಈ ಮಾತು–ಕತೆ ಹಾಗೂ ಹಾಡಿನ ವೇದಿಕೆ ಯಲ್ಲಿ ಜಾನಪದ ವಿದ್ವಾಂಸರಾದ ಕಾಳೇಗೌಡ ನಾಗವಾರ, ಜಾನಪದ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್‌, ಸಂಶೋಧಕಿ, ಗಾಯಕಿ ಶಿಲ್ಪಾ ಮುಡಬಿ ಹಾಗೂ ಜಾನಪದ ಕಲಾವಿದೆಯಾದ ವಿಶ್ವೇಶ್ವರಿ ಬಸವ ಲಿಂಗಯ್ಯ ಹಿರೇಮಠ ಅವರು ಭಾಗವಹಿಸಿದ್ದರು. ಮಾತುಕತೆಯ ಜೊತೆಗೆ ಜಾನಪದ ಹಾಡುಗಳ ರಸದೌತಣವೂ ವೇದಿಕೆಯಲ್ಲಿತ್ತು.

‘ಜಾನಪದ ಮಹಿಳಾ ಕೇಂದ್ರಿತವಾದ ಭಾಷೆ. ಭಾಷೆ, ರೂಪಕ ಹಾಗೂ ಸಾಹಿತ್ಯದ ದೃಷ್ಟಿಯಿಂದ ನಮಗೆ ಜಾನಪದದಲ್ಲಿ ಮಹಿಳೆ ಒಂದು ದೊಡ್ಡ ಆಕರ ಸಾಮಗ್ರಿಯನ್ನು ಇಟ್ಟು ಆಕೆ ಮರೆಯಾಗಿದ್ದಾಳೆ. ಮರೆಯಾದ ಹೆಣ್ಣಿನ ಧ್ವನಿಯನ್ನು ಈಚೆ ತಂದು ನಾವು ಕರ್ನಾಟಕದ ಮಹಿಳಾ ಚರಿತ್ರೆಯನ್ನು ಕಟ್ಟಿದರೆ, ಅದರಿಂದ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯವಿದೆ’ ಎಂದರು ಬಿಳಿಮಲೆ.

‘ಮಹಿಳೆ ಇಲ್ಲದೆ ಜಾನಪದ ಇಲ್ಲ. ಜಾನಪದ ಅಕಾಡೆಮಿ ಸೃಷ್ಟಿಯಾಗಿ ಕೆಲ ದಶಕಗಳೇ ಕಳೆದಿ ದ್ದರೂ ತಾಯಂದಿರಿಗೆ ಸಿಗಬೇ
ಕಿದ್ದ ಆದ್ಯತೆ ಕಡಿಮೆ ಸಿಕ್ಕಿದೆ’ ಎನ್ನುವ ಬೇಸರ ಹೊರಹಾಕಿದ ಪಿಚ್ಚಳ್ಳಿ, ‘ನಮ್ಮ ತನ ಉಳಿ ಯಬೇಕಾದರೆ ಜಾನಪದ ಗೀತೆಗಳನ್ನು ಮೂಲಧಾಟಿಯಲ್ಲೇ ಹಾಡಬೇಕು. ಇತ್ತೀಚೆಗೆ ‘ಕೋಲುಮಂಡೆ ಜಂಗಮದೇವ’ ಹಾಡಿಗೆ ಆಧುನಿಕ ಸ್ಪರ್ಶ ನೀಡಿ, ಅರೆಬರೆಬಟ್ಟೆ ತೊಡಿಸಿ ವ್ಯಾಪಾರ ಉದ್ದೇಶದಿಂದ ಯೂಟ್ಯೂಬ್‌ನಲ್ಲಿ ಒಬ್ಬ ಹಾಕಿದ್ದ. ಮೂಲ ಉಳಿಸದೇ ಇದ್ದರೆ ಶಿವಶರಣ ಸಂಕಮ್ಮ ಹಾಡು ಹೀಗೇ ಇತ್ತೇನೋ ಎಂಬ ತಪ್ಪು ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡಿದಂತಾಗುತ್ತದೆ’ ಎಂದು ಕೇಳುಗರೊಬ್ಬರ ಪ್ರಶ್ನೆಗೆ ಉತ್ತರಿಸಿದರು. 

ಶಿಲ್ಪಾ ಮುಡಬಿ ಮಾತನಾಡಿ, ‘ಜಾನಪದ ಎನ್ನುವುದು ಸಮಕಾಲೀನ. ಬದುಕಿನೊಳಗೇ ಜಾನಪದವಿದೆ. ನಮ್ಮ ಅಜ್ಜಿಗೆ ಹೋಗಿ ನೀನು ಜಾನಪದ ಕಲಾವಿದೆ ಎಂದರೆ ನಗುತ್ತಿದ್ದರು. ಏಕೆಂದರೆ ಜಾನಪದ ಕಲಿಯಲು ಆಕೆ ಕಲಾವಿದೆಯಾಗಿರಬೇಕಾಗಿಲ್ಲ. ಆಕೆ ಅದರೊಳಗೆ ಏನು ಬೇಕಾದರೂ ಸೇರಿಸಬಹುದು, ಹೇಗಾದರೂ ಹಾಡಬಹುದು. ಇದನ್ನು ನಾವು ಯುವಜನತೆಗೆ ಕಲಿಸಲು ನಮಗೆಷ್ಟು ಮೂಲ ಗೊತ್ತಿದೆ ಎನ್ನುವುದು ಮುಖ್ಯ’ ಎಂದರು.

‘ಜಾನಪದ ಜೀವನ ಸಾಹಿತ್ಯ. ಜಾನಪದ ಎಂದರೆ ಮೊದಲು ಮನಸ್ಸಿಗೆ ಬರುವುದು ತಾಯಿ, ಮಹಿಳೆ. ಬೀಸುತ್ತಾ, ಕುಟ್ಟುತ್ತಾ, ಮಗುವನ್ನು ಮಲಗಿಸುತ್ತಾ ತನ್ನ ಜಾನಪದ ಸಂಪ್ರದಾಯ ಪದಗಳೊಳಗೆ ಅವಳ ಅದ್ಭುತವಾದ ಕಲ್ಪನಾ ಶಕ್ತಿಯನ್ನು ತೆರೆದಿಟ್ಟಳು’ ಎಂದು ವಿಶ್ವೇಶ್ವರಿಯವರು ಹೇಳಿದರು.  

‘ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇರದ ಸಂದರ್ಭದಲ್ಲಿ ಮುಕ್ತ ಚರ್ಚೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಬದುಕಿನ ಸರ್ವ ವಿವರಗಳನ್ನೂ, ಮಹಿಳೆಯರ ಅನುಭವಗಳನ್ನು ದಾಖಲಿಸಿದ್ದು ಜಾನಪದ. ಕವಿ ಬರೆಯುವುದು ವೈಯಕ್ತಿಕ, ಸಮುದಾಯ ಅನುಭವ ಜಾನಪದದಲ್ಲಿದೆ’ ಎಂದು ಕಾಳೇಗೌಡ ನಾಗವಾರ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು