ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ‘ಗ್ರಾಮ ಒನ್‌’ನ ಅನನ್ಯ ಮಾದರಿ- ಸಾಮಾಜಿಕ ಸೌಹಾರ್ದದ ಸವಾಲು

Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವ ದಿನದಿಂದ ಕಾರ್ಯಾರಂಭ ಮಾಡಿರುವ ಕರ್ನಾಟಕ ಸರ್ಕಾರದ ‘ಗ್ರಾಮ ಒನ್‌’ ಯೋಜನೆ, ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಈ ಯೋಜನೆಯಲ್ಲಿ ನೂರಕ್ಕೂ ಹೆಚ್ಚು ಸೇವೆಗಳು ಒಂದೇ ಸೂರಿನ ಅಡಿ ಲಭ್ಯ. ಮೊದಲ ಹಂತದಲ್ಲಿ ಹನ್ನೆರಡು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿರುವ ‘ಗ್ರಾಮ ಒನ್‌’ನಿಂದಾಗಿ ವಿವಿಧ ಉದ್ದೇಶಗಳಿಗೆ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಹಾಗೂ ಸರತಿ ಸಾಲಿನಲ್ಲಿ ನಿಲ್ಲುವ ಶ್ರಮ ತಪ್ಪಲಿದೆ. ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸುವ ಈ ಯೋಜನೆಯಿಂದ ನಾಗರಿಕರ ಹಣ ಮತ್ತು ಶ್ರಮ ಉಳಿಯುವುದರ ಜೊತೆಗೆ, ಆಡಳಿತದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ಪರಿಕಲ್ಪನೆಯನ್ನು ದೇಶಕ್ಕೆ ಪರಿಚಯಿಸಿದ ಕರ್ನಾಟಕ, ಈಗ ‘ಗ್ರಾಮ ಒನ್‌’ ಮೂಲಕ ಗ್ರಾಮೀಣ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಸ್ವಾತಂತ್ರ್ಯದ ಮತ್ತೊಂದು ಮುಖವಾದ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ‘ಗ್ರಾಮ ಒನ್‌’ನಂಥ ಯೋಜನೆಗಳು ಅಗತ್ಯ. ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಮಿಲಿಟರಿ ಶಾಲೆಯೊಂದನ್ನು ಆರಂಭಿಸುವುದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿರುವ ಮತ್ತೊಂದು ಮುಖ್ಯ ಯೋಜನೆ. ನೂರು ಎಕರೆ ಜಾಗದಲ್ಲಿ, ₹ 185 ಕೋಟಿ ವೆಚ್ಚದಲ್ಲಿ ರೂಪುಗೊಳ್ಳಲಿರುವ ಸೈನಿಕ ಶಾಲೆಯು ಭಾರತ ಒಕ್ಕೂಟಕ್ಕೆ ಕರ್ನಾಟಕದ ಮಹತ್ವದ ಕೊಡುಗೆಯಾಗಬಲ್ಲದು. ಸಂಗೊಳ್ಳಿಯಲ್ಲಿ ಹತ್ತು ಎಕರೆ ವಿಸ್ತೀರ್ಣದ ‘ರಾಕ್‌ ಗಾರ್ಡನ್‌’ ಅನ್ನು ರಾಯಣ್ಣನ ಹೆಸರಿನಲ್ಲಿ ನಿರ್ಮಿಸುವ ಉದ್ದೇಶವೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭಕ್ಕೆ ಪೂರಕವಾದ ಚಿಂತನೆಯಾಗಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆ ಗಳನ್ನು ಹಮ್ಮಿಕೊಳ್ಳುವ ಮೂಲಕ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭವನ್ನು ಸ್ಮರಣೀಯವಾಗಿಸಲುರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.

ಸಾಂವಿಧಾನಿಕ ಕರ್ತವ್ಯಗಳನ್ನು ಅರಿತುಕೊಂಡು ರಾಷ್ಟ್ರ ನಿರ್ಮಾಣದ ಬಗ್ಗೆ ರಾಜ್ಯದ ಜನತೆ ಗಮನಹರಿಸಬೇಕು ಎನ್ನುವ ಕಿವಿಮಾತನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಪ್ರಜೆಗಳ ಜೊತೆಗೆ, ಪ್ರಜಾಪ್ರತಿನಿಧಿಗಳೂ ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಬದ್ಧತೆ ಪ್ರದರ್ಶಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಬರೆದಿರುವ ಪತ್ರವನ್ನು ಮುಖ್ಯಮಂತ್ರಿ ಹಾಗೂ ಶಾಸಕರು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಪ್ರಕರಣಗಳುಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಬರೆದಿರುವ ಪತ್ರದಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಯುವಜನರ ಬರ್ಬರ ಹತ್ಯೆಗಳು ನಡೆದಿರುವುದನ್ನು ಪ್ರಸ್ತಾಪಿಸಲಾಗಿದೆ. ದ್ವೇಷಭಾಷಣಗಳ ಹೆಚ್ಚಳ, ಅಲ್ಪಸಂಖ್ಯಾತರ ಪೂಜಾಸ್ಥಳಗಳಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಗೂ ವಿವಿಧ ಧಾರ್ಮಿಕ ಗುಂಪುಗಳ ಹಿಂಸಾತ್ಮಕ ಮುಖಾಮುಖಿಯ ಘಟನೆಗಳಿಗೆ ರಾಜ್ಯ ಸಾಕ್ಷಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಕಾರಾತ್ಮಕ ಪ್ರವೃತ್ತಿಗಳನ್ನು ಪುನರ್‌ ವಿಮರ್ಶೆಗೊಡ್ಡುವಂತೆ ಶಾಸಕರನ್ನು ಒತ್ತಾಯಿಸಿರುವ ಪತ್ರ, ದೇಶದ ಸಂವಿಧಾನದ ಆಶಯಗಳನ್ನು ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಶಾಸಕರಿಗೆ ಮನವಿ ಮಾಡಿದೆ.
ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಉಂಟಾಗಿದೆ ಎಂದು ಕೆಲವು ಗಣ್ಯರು ವ್ಯಕ್ತಪಡಿಸಿ ರುವ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಅಲ್ಪಸಂಖ್ಯಾತರಲ್ಲಿ ಮೂಡಿರ ಬಹುದಾದ ಅಸುರಕ್ಷಿತ ಮನೋಭಾವವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಭಾರತ ಒಕ್ಕೂಟದಲ್ಲಿ ಪ್ರಬಲ ರಾಜ್ಯವಾದ ಕರ್ನಾಟಕದ ಸಾಧನೆಯ ಪರಂಪರೆಯನ್ನು ಮತ್ತಷ್ಟು ಸಶಕ್ತವಾಗಿ ಮುನ್ನಡೆಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಸಾಮಾಜಿಕ ಸೌಹಾರ್ದ, ಸಾಮರಸ್ಯಕ್ಕೆ ಕರ್ನಾಟಕ ಮೊದಲಿನಿಂದಲೂ ಪ್ರಸಿದ್ಧವಾದುದು. ವಚನ ಚಳವಳಿ ದೇಶಕ್ಕೆ ಹಾಕಿಕೊಟ್ಟ ಕ್ರಾಂತಿಕಾರಿ ಮಾದರಿ ಈಗಲೂ ಪ್ರಸ್ತುತ.ಇಂಥ ಹೆಮ್ಮೆಯ ಪರಂಪರೆಗೆ ಗಾಸಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ್ದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಪದೇಪದೇ ವರದಿಯಾಗುತ್ತಿರುವ ದ್ವೇಷ ಭಾಷಣಗಳು ಹಾಗೂಹಿಂಸಾಚಾರ ಪ್ರಕರಣಗಳು ನಾಡಿನ ಸೌಹಾರ್ದ ಪರಂಪರೆಗೆ ಪೂರಕವಾದವುಗಳಲ್ಲ. ರಾಜ್ಯದ ಘನತೆ ಮತ್ತು ವರ್ಚಸ್ಸನ್ನು ರಾಷ್ಟ್ರೀಯ– ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸುವ, ಸಾಮಾಜಿಕ ವಿಘಟನೆಗೆ ಪ್ರೇರಣೆ ನೀಡುವ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುವಂತಿಲ್ಲ.ಮುಖ್ಯಮಂತ್ರಿಯಾಗಿ ಆರು ತಿಂಗಳ ಅವಧಿಯನ್ನು ಪೂರೈಸಿರುವ ಬಸವರಾಜ ಬೊಮ್ಮಾಯಿ ಅವರು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸವಾಲನ್ನು ಎದುರಿಸಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT