ಶನಿವಾರ, ಮೇ 28, 2022
24 °C

ಸಂಪಾದಕೀಯ: ಹಿಂದಿ ಹೇರಿಕೆ ಪ್ರಯತ್ನ ನಿಲ್ಲಲಿ; ಎಲ್ಲ ಭಾಷೆಗಳು ಬಲಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಒಪ್ಪಿಕೊಳ್ಳುವಂತೆ ಹಾಗೂ ಎಲ್ಲ ರಾಜ್ಯಗಳ ಜನರು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿರುವ ಕರೆ ಅನಗತ್ಯ ಗೊಂದಲ, ವಿವಾದ ಹಾಗೂ ಆತಂಕಕ್ಕೆ ಆಸ್ಪದ ಕಲ್ಪಿಸುವಂತಹದ್ದು. ಭಾಷಾ ಸಂಸದೀಯ ಸಮಿತಿಯ 37ನೇ ಸಭೆಯಲ್ಲಿ ಮಾತನಾಡಿರುವ ಅವರು, ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಬೇಕೇ ಹೊರತು ವಿದೇಶಿ ಭಾಷೆಯಾದ ಇಂಗ್ಲಿಷ್‌ ಅನ್ನು ಅಲ್ಲ ಎಂದು ಹೇಳಿದ್ದಾರೆ. ಹಿಂದಿಯು ಇಂಗ್ಲಿಷ್‌ಗೆ ಪರ್ಯಾಯವೇ ಹೊರತು ಪ್ರಾದೇಶಿಕ ಭಾಷೆಗಳಿಗಲ್ಲ ಎನ್ನುವ ಜಾಣತನದ ಮಾತನ್ನು ಅವರು ಆಡಿದ್ದಾರಾದರೂ, ಅವರ ಒಟ್ಟಾರೆ ಹೇಳಿಕೆಯಲ್ಲಿ ದೇಶಭಾಷೆಗಳ ಹಿತಾಸಕ್ತಿಗೆ ಪೂರಕ ಆಗುವಂತಹದ್ದೇನೂ ಇಲ್ಲ. ಹಿಂದಿಯ ಸಾಧ್ಯತೆಗಳ ಕುರಿತಂತೆ ಕಳೆದ ಐದಾರು ವರ್ಷಗಳಲ್ಲಿ ಗೃಹ ಸಚಿವರು ಆಡಿರುವ ಮಾತುಗಳನ್ನು ಗಮನಿಸಿದರೆ, ಇಂಗ್ಲಿಷ್‌ ಜೊತೆಗೆ ಹಿಂದಿಯೇತರ ಭಾಷೆಗಳೆಲ್ಲವೂ ಅವರ ಕಣ್ಣಿಗೆ ಪರಕೀಯ ನುಡಿಗಳಂತೆಯೇ ಕಾಣಿಸುತ್ತಿರುವಂತಿದೆ. ಕೇಂದ್ರ ಸಚಿವ ಸಂ‍ಪುಟದ ಶೇಕಡ 70ರಷ್ಟು ಕಾರ್ಯಸೂಚಿಗಳನ್ನು ‍ಪ್ರಸ್ತುತ ಹಿಂದಿಯಲ್ಲೇ ಸಿದ್ಧಪಡಿಸಲಾಗುತ್ತಿದ್ದು, ಶಾಲಾ ಹಂತದಲ್ಲಿ ಹಿಂದಿ ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಕೈಗೊಂಡಿರುವ ಕ್ರಮಗಳನ್ನು ಅಮಿತ್‌ ಶಾ ವಿವರಿಸಿದ್ದಾರೆ. ದೇಶವನ್ನು ಒಗ್ಗೂಡಿಸುವ ಸಾಧನವನ್ನಾಗಿ ಹಿಂದಿಯನ್ನು ಮಾಡುವ ಸಮಯ ಈಗ ಬಂದಿದೆ ಎನ್ನುವ ಅವರ ಮಾತಿನಲ್ಲಿ, ಹಿಂದಿಯೇತರ ದೇಶಭಾಷೆಗಳಿಂದ ದೇಶದ ಸಮಗ್ರತೆ ಸಾಧ್ಯವಿಲ್ಲ ಎನ್ನುವ ಧ್ವನಿಯೂ ಇರುವಂತಿದೆ. ಅಧಿಕೃತ ಭಾಷೆಯೇ ಸರ್ಕಾರ ನಡೆಸುವ ಮಾಧ್ಯಮವಾಗಿರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಹಿಂದಿಯ ಪ್ರಾಮುಖ್ಯವನ್ನು ಹೆಚ್ಚಿಸುತ್ತದೆ ಎಂದೂ ಅಮಿತ್‌ ಶಾ ಹೇಳಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಅವರು ಮಾತ್ರವಲ್ಲ, ದೇಶ ಸ್ವಾತಂತ್ರ್ಯಗೊಂಡಾಗಿನಿಂದ ಈವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಬಹುಪಾಲು ನಾಯಕರು ಪಕ್ಷಭೇದವಿಲ್ಲದೆ ಹಿಂದಿಯನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಬಹುಭಾಷೆಗಳು ಭಾರತದ ಬಹುತ್ವದ ಪ್ರಮುಖ ಲಕ್ಷಣಗಳಾಗಿವೆ ಹಾಗೂ ಈ ಭಾಷೆಗಳು ರಾಷ್ಟ್ರೀಯತೆಗೆ ತಮ್ಮದೇ ಆದ ಕೊಡುಗೆ ನೀಡಿವೆ ಎನ್ನುವುದನ್ನು ಕೇಂದ್ರದ ನಾಯಕರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವಂತಿದೆ. ಒಕ್ಕೂಟ
ವ್ಯವಸ್ಥೆಯಲ್ಲಿ ಸಂವಿಧಾನವು ಮಾನ್ಯತೆ ನೀಡಿರುವ ಎಲ್ಲ ರಾಜ್ಯಭಾಷೆಗಳಿಗೂ ಸಮಾನ ಅವಕಾಶ, ಗೌರವ ದೊರೆಯಬೇಕು. ಆದರೆ, ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ದ್ರಾವಿಡ ಭಾಷೆಗಳ ಅಸ್ಮಿತೆಗೆ ಸವಾಲು ಎಸೆಯುವ ರೀತಿಯಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ಹತ್ತಾರು ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಲಾಗುತ್ತಿದೆ. 

ಹಿಂದಿಯನ್ನು ಹೇರುವ ಕೇಂದ್ರ ಸರ್ಕಾರದ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಂಡಿವೆ. ‘ಒಂದು ದೇಶ, ಒಂದು ಭಾಷೆ’ ಎನ್ನುವ ಮಾತನ್ನು ಅಮಿತ್‌ ಶಾ ಅನೇಕ ಸಂದರ್ಭಗಳಲ್ಲಿ ಆಡಿದ್ದಾರೆ. ಹಿಂದಿ ಹೇರಿಕೆಯ ಪ್ರಯತ್ನಗಳ ವಿರುದ್ಧ ದಕ್ಷಿಣ ಭಾರತ ಮೊದಲಿನಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈಗಲೂ ಗೃಹ ಸಚಿವರ ಹೇಳಿಕೆಗೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಸ ಬೇಕು ಎನ್ನುವ ವಾದ ಪ್ರಾದೇಶಿಕ ಭಾಷೆಗಳ ಹಿತಾಸಕ್ತಿಗೆ ವಿರುದ್ಧವಾದುದಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ದುರ್ಬಲವಾದುದು. ಸ್ವಾತಂತ್ರ್ಯಾನಂತರದ ಏಳೂವರೆ ದಶಕಗಳಲ್ಲಿ ಇಂಗ್ಲಿಷ್‌ ಎಷ್ಟರ ಮಟ್ಟಿಗೆ ಭಾರತೀಯರಿಗೆ ಒಗ್ಗಿಹೋಗಿದೆಯೆಂದರೆ, ಈಗದು ಭಾರತೀಯ ಸ್ವರೂಪವನ್ನೇ ಪಡೆದುಕೊಂಡಿದೆ. ದೇಶದ ಎಲ್ಲ ಭಾಷೆಗಳಲ್ಲೂ ಬೆರೆತಿರುವ ಇಂಗ್ಲಿಷ್‌, ಶಿಕ್ಷಣ ಮಾಧ್ಯಮ ಭಾಷೆಯೂ ಆಗಿದೆ. ಭಾರತದ ಯುವಕ ಯುವತಿಯರು ಜಾಗತಿಕವಾಗಿ ಹೆಚ್ಚಿನ ಅವಕಾಶಗಳನ್ನು ಪಡೆಯುವುದಕ್ಕೆ ಇಂಗ್ಲಿಷ್‌ ಕೂಡ ಕಾರಣವಾಗಿದೆ. ಈಗ ಒಮ್ಮಿಂದೊಮ್ಮೆಗೆ ಇಂಗ್ಲಿಷ್‌ನ ಜಾಗದಲ್ಲಿ ಹಿಂದಿಯನ್ನು ತರ ಬೇಕೆಂದರೆ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಬೇಕಾಗುತ್ತದೆ. ಮಕ್ಕಳು ಮತ್ತು ಪೋಷಕರ ಮನಃಸ್ಥಿತಿಯೊಂದಿಗೆ ಆಟವಾಡುವ ಈ ಕಸರತ್ತಿನಿಂದ ಉಪಯೋಗಕ್ಕಿಂತ ಅನನುಕೂಲಗಳೇ ಹೆಚ್ಚು. ಭಾವನಾತ್ಮಕವಾಗಿ ಇಂಗ್ಲಿಷಿಗಿಂತಲೂ ಹಿಂದಿ ಭಾರತೀಯರಿಗೆ ಸಮೀಪವಾದುದು ಎನ್ನುವುದು ನಿಜ. ಪ್ರಾಯೋಗಿಕವಾಗಿ ನೋಡುವುದಾದರೆ, ಹಿಂದಿಯೇತರ ಭಾಷಿಕರಿಗೆ ಇಂಗ್ಲಿಷ್‌ ಹೆಚ್ಚು ಸಮೀಪವಾದುದು ಹಾಗೂ ಸಂವಹನಕ್ಕೆ ಸುಲಭವಾದುದು. ಇಂಗ್ಲಿಷನ್ನು ದೂರವಿಡುವ ಪ್ರಯತ್ನ, ವಿಶ್ವಮಟ್ಟದಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತೀಯರು ಹಿಂದುಳಿಯುವಂತಾಗಲು ಕಾರಣವಾಗಬಹುದು. ಹಿಂದಿ ಹೇರಿಕೆಯ ಹಿಂದೆ ಭಾಷಿಕ ಸಾಧ್ಯತೆಗಿಂತಲೂ ಹೆಚ್ಚಾಗಿ ರಾಜಕೀಯ ಅಜೆಂಡಾ ಇರುವಂತಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವ ಘೋಷಣೆಯ ಜೊತೆಗೆ ಒಂದೇ ಭಾಷೆಯೂ ಸೇರಿಕೊಳ್ಳುತ್ತಿದೆ. ಇಂಥ ಧ್ರುವೀಕೃತ ಪ್ರಯತ್ನಗಳು ದೇಶದ ಸಾಂಸ್ಕೃತಿಕ ವೈವಿಧ್ಯಕ್ಕೆ ಹಾನಿಕರ. ಪ್ರಾದೇಶಿಕ ಭಾಷೆಗಳು ಬಹುತ್ವ ಭಾರತದ ಜೀವಕೋಶಗಳು. ಅವುಗಳನ್ನು ಬಲಪಡಿಸುವ ಕೆಲಸಕ್ಕೆ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಕೈಗೂಡಿಸಬೇಕು. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಿಂದಿಯನ್ನು ಹೇರುವ ಮೂಲಕ ಇತರ ದೇಶಭಾಷೆಗಳನ್ನು ಗಾಸಿಗೊಳಿಸುವ ಪ್ರಯತ್ನವನ್ನು ನಿಲ್ಲಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು