ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರ ಹಿತವೇ ಮುಖ್ಯವಾಗಲಿ

Last Updated 16 ಮೇ 2020, 1:49 IST
ಅಕ್ಷರ ಗಾತ್ರ

ಎಷ್ಟೇ ಕಾಯ್ದೆ–ಕಟ್ಟಲೆ ತಂದರೂ ಕೃಷಿ ಉತ್ಪನ್ನಗಳ ಬೆಲೆ ನಿಗದಿ ವಿಷಯ ಬಂದಾಗ ರೈತರು ಇನ್ನೂ ಪರಾಧೀನದಲ್ಲೇ ಇದ್ದಾರೆ. ಬೆಳೆ ಕೊಯ್ಲಿಗೆ ಬಂದಾಗ ಬೆಲೆ ಬಿದ್ದುಹೋಗುವುದು, ರೈತರು ತಲೆಮೇಲೆ ಕೈಹೊತ್ತು ಕೂರುವುದು, ಇಲ್ಲವೇ ಬೆಳೆಯನ್ನು ಬೀದಿಗೆ ಚೆಲ್ಲಿ ಆಕ್ರೋಶ ಹೊರಹಾಕುವುದು ಇಂದು, ನಿನ್ನೆಯ ವಿದ್ಯಮಾನವೇನಲ್ಲ. ರೈತ ಸಮುದಾಯವನ್ನು ಇಂತಹ ಸಂಕಷ್ಟದಿಂದ ಪಾರು ಮಾಡಬೇಕೆಂಬ ಕೂಗು ಕೂಡ ಹೊಸದಲ್ಲ. ‘ನನ್ನ ಬೆಳೆ ನನ್ನ ಹಕ್ಕು; ಇದು ರೈತರ ಮಂತ್ರ’ ಆಗಬೇಕು ಎಂಬ ಘೋಷವಾಕ್ಯದಡಿ ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ’ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯವನ್ನು ಈ ತಿದ್ದುಪಡಿ ನೀಡಲಿದೆ.

ಮಧ್ಯವರ್ತಿಗಳ ಶೋಷಣೆ ತಪ್ಪಿ, ಉತ್ಪನ್ನದ ಹೆಚ್ಚಿನ ಲಾಭಾಂಶ ರೈತನಿಗೆ ಸಿಗಬೇಕೆಂಬುದು ತಿದ್ದುಪಡಿಯ ಆಶಯ ಎಂದೂ ಸರ್ಕಾರ ಪ್ರತಿಪಾದಿಸುತ್ತಿದೆ. 2017ರಲ್ಲಿ ಮಾದರಿ ಕಾಯ್ದೆಯೊಂದನ್ನು ರೂಪಿಸಿದ ಎನ್‌ಡಿಎ ಸರ್ಕಾರವು ಎಲ್ಲ ರಾಜ್ಯಗಳಲ್ಲೂ ಇದನ್ನು ಅಳವಡಿಸುವಂತೆ ಹೇಳಿತ್ತು. ಆದರೆ, ಕೆಲವು ರಾಜ್ಯಗಳು ಅದನ್ನು ಜಾರಿಗೊಳಿಸಲಿಲ್ಲ. ಇತ್ತೀಚೆಗೆ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವಾಲಯವು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಇದನ್ನು ಜಾರಿಗೆ ತಂದು, ಕೇಂದ್ರದ ಗಮನಕ್ಕೆ ತರಬೇಕು ಎಂದು ಸೂಚಿಸಿತ್ತು. ಆದರೆ, ಸುಗ್ರೀವಾಜ್ಞೆಯ ಹಿಂದಿನ ತರಾತುರಿ, ಗೋಪ್ಯ ಚಟುವಟಿಕೆಯು ವಿರೋಧ ಪಕ್ಷಗಳು ಹಾಗೂ ಹಲವು ರೈತ ಮುಖಂಡರ ಗುಮಾನಿಗೆ ಕಾರಣವಾಗಿವೆ. ಈ ನಡೆಯನ್ನು ವಿರೋಧ ಪಕ್ಷಗಳು ಸಂಶಯದಿಂದಲೇ ನೋಡತೊಡಗಿದ್ದರಿಂದ ಫಲಾನುಭವಿ ರೈತರೂ ಸೇರಿ ಎಲ್ಲರನ್ನೂ ಕಾಯ್ದೆಯ ಉದ್ದೇಶಿತ ತಿದ್ದುಪಡಿಯು ಗೊಂದಲಗಳಿಗೆ ದೂಡಿರುವಂತಿದೆ.

ಕೇಂದ್ರ ಸರ್ಕಾರವನ್ನು ಮುನ್ನಡೆಸುವವರು ಪ್ರತಿಯೊಂದೂ ಹೆಜ್ಜೆಗೂ ಮಾತಿಗೂ ಪ್ರಚಾರ ಪಡೆಯುವುದರಲ್ಲಿ ಸಿದ್ಧಹಸ್ತರು ಎಂಬ ಅಭಿಪ್ರಾಯ ಇದೆ. ಹೀಗಿರುವಾಗ, ಎಪಿಎಂಸಿ ಕಾಯ್ದೆ ತಿದ್ದುಪಡಿಯು ರೈತ ಸಮುದಾಯಕ್ಕೆ ಲಾಭವನ್ನೇ ತಂದುಕೊಡುತ್ತದೆ ಎಂದಾದಲ್ಲಿ ದೊಡ್ಡ ಮಟ್ಟದ ಪ್ರಚಾರ ಮಾಡಿಯೇ ಜಾರಿ ಮಾಡಬಹುದಿತ್ತು. ತಮ್ಮ ಹಿತರಕ್ಷಣೆಗಾಗಿಯೇ ಈ ತಿದ್ದುಪಡಿ ತರಲಾಗುತ್ತಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ತಿದ್ದುಪಡಿಯಿಂದ ಆಗುವ ಪ್ರಯೋಜನಗಳ ಬಗ್ಗೆ ರಾಜ್ಯ ಸರ್ಕಾರ ಕೂಡ ರೈತರು, ಎಪಿಎಂಸಿ ಅಧ್ಯಕ್ಷ–ಸದಸ್ಯರು ಹಾಗೂ ವಿರೋಧ ಪಕ್ಷದವರ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಿತ್ತು. ಆದರೆ, ಆ ಕೆಲಸ ಆಗಲಿಲ್ಲ. ಸಂಶಯ ಹೆಚ್ಚಲು ಇದು ಸಹ ಒಂದು ಕಾರಣ. ಈಗ ಇರುವ ಎಪಿಎಂಸಿ ವ್ಯವಸ್ಥೆ ಹಾಗೂ ಕಾಯ್ದೆ ರೈತರ ಹಿತವನ್ನೇ ಪ್ರಧಾನ ಧ್ಯೇಯವಾಗಿಟ್ಟುಕೊಂಡಿದೆ ಎಂದು ಭಾವಿಸೋಣ. ಆದರೆ, ಅದು ಈಡೇರಿದೆಯೇ ಎಂಬುದು ಪ್ರಶ್ನೆ.

ಎಪಿಎಂಸಿ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಸುಧಾರಣೆ ತಂದು, ಆನ್‌ಲೈನ್ ಮಾರುಕಟ್ಟೆ ಪದ್ಧತಿ ತಂದರೂ ಬಹುತೇಕ ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಕೊನೆಯಾಗಿಲ್ಲ. ಈಗ ತರಲಿರುವ ತಿದ್ದುಪಡಿಯಿಂದಾಗಿ ವ್ಯಕ್ತಿ ಅಥವಾ ಕಂಪನಿ ತಮ್ಮದೇ ಆದ ಮಾರುಕಟ್ಟೆ ಆರಂಭಿಸಬಹುದು.ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಅಥವಾ ಖಾಸಗಿ ಮಾರುಕಟ್ಟೆಯಲ್ಲಿ ಅಥವಾ ತಮ್ಮ ಮನೆಗೆ ಬರುವ ವ್ಯಾಪಾರಿಗೆ, ಕಂಪನಿ ಪ್ರತಿನಿಧಿಗೆ ಮಾರಬಹುದು. ರೈತರ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ನೀಡುವುದು ಮತ್ತು ದಲ್ಲಾಳಿಗಳ ಹಿಡಿತ ತಪ್ಪಿಸುವುದಕ್ಕಾಗಿಯೇ ಈ ತಿದ್ದುಪಡಿ ಎಂದು ಸರ್ಕಾರ ಹೇಳಿಕೊಂಡಿದೆ. ‌

ಹೊಸ ಪದ್ಧತಿಯಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಬೆಳೆದು, ರೈತರಿಗೆ ಲಾಭದಾಯಕ ಬೆಲೆ ಸಿಗುವುದು ಖಾತರಿ ಇದ್ದರೆ ಅಂತಹ ಅವಕಾಶಕ್ಕೆ ತೆರೆದುಕೊಳ್ಳುವುದು ಕಾಲದ ಅಗತ್ಯವೂ ಹೌದು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು; ಬೆಳೆಗೆ ಬೆಲೆ ನಿಗದಿ ಮಾಡುವ ಅಧಿಕಾರ ರೈತರಲ್ಲೇ ಇರಬೇಕು ಎಂಬುದು ಅನೇಕ ವರ್ಷಗಳ ಬೇಡಿಕೆ. ಕೃಷಿ ಬೆಲೆ ಆಯೋಗದಂತಹ ಸಾಂಸ್ಥಿಕ ವ್ಯವಸ್ಥೆಯನ್ನು ರಚಿಸಿದ ಸರ್ಕಾರ, ಅದರ ಶಿಫಾರಸುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ, ರೈತನ ಮನೆ ಬಾಗಿಲಿನಲ್ಲೇ ಕೃಷಿ ಉತ್ಪನ್ನಗಳ ಖರೀದಿ–ಮಾರಾಟಕ್ಕೆ ಮುಕ್ತ ಅವಕಾಶ ಸಿಕ್ಕರೆ, ರೈತರಿಗೆ ಒಳ್ಳೆಯ ಬೆಲೆ ದೊರಕುವ ಸಾಧ್ಯತೆ ತೆರೆದು ಕೊಳ್ಳಬಹುದು. ಆದರೆ, ಇಂತಹ ವ್ಯವಸ್ಥೆಗಳು ಖಾಸಗಿ ಬಂಡವಾಳಿಗರ ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಟ್ಟು, ಎಪಿಎಂಸಿಯಂತಹ ವ್ಯವಸ್ಥೆಯ ಅಧಃಪತನಕ್ಕೆ ದಾರಿ ಮಾಡಿಕೊಡದಿರಲಿ ಎನ್ನುವ ಆಶಯ ಕೂಡ ತಪ್ಪಲ್ಲ. ಹೀಗಾಗದಂತೆ ಎಚ್ಚರ ವಹಿಸಬೇಕಾದುದು ಸರ್ಕಾರದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT