ಶನಿವಾರ, ಏಪ್ರಿಲ್ 1, 2023
29 °C

ಸಂಪಾದಕೀಯ: ಜೋಶಿಮಠದಲ್ಲಿ ಬಿರುಕು ಎಚ್ಚರಿಕೆ ನಿರ್ಲಕ್ಷಿಸಿದ್ದರ ಪರಿಣಾಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಉತ್ತರಾಖಂಡದ ಪ್ರಸಿದ್ಧ ಜೋಶಿಮಠ ಪಟ್ಟಣವು ಭೂಕುಸಿತದ ಭೀತಿ ಎದುರಿಸುತ್ತಿರುವುದು, ಅಲ್ಲಿನ ಮನೆಗಳು, ರಸ್ತೆಗಳು ಹಾಗೂ ಇತರೆಡೆಗಳಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಆ ಪಟ್ಟಣವನ್ನು ವಾಸಕ್ಕೆ ಅಸುರಕ್ಷಿತವಾಗಿಸಿದೆ. ಅಲ್ಲಿನ ನಿವಾಸಿಗಳಲ್ಲಿ ಭಯ ಮನೆ ಮಾಡಿದೆ. ಅಲ್ಲಿನ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ, ಇನ್ನೂ ಹಲವರನ್ನು ಸ್ಥಳಾಂತರ ಮಾಡಬೇಕಿದೆ.
ಜೋಶಿಮಠವು ಹಲವು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶದ್ವಾರ ಇದ್ದಂತೆ. ಇಲ್ಲಿಂದ ಚಾರಣ  ಹೊರಡುವುದೂ ಇದೆ. ಚೀನಾ ಗಡಿಗೆ ಹತ್ತಿರದಲ್ಲಿರುವ ಈ ಪಟ್ಟಣವು ಆಯಕಟ್ಟಿನ ಸ್ಥಳವೂ ಹೌದು. ಪಟ್ಟಣದಲ್ಲಿ ಈಗ ಮೂಡಿರುವ ಭೀತಿಯು ಇದ್ದಕ್ಕಿದ್ದಂತೆ ಬಂದೆರಗಿಲ್ಲ. ಪರಿಸ್ಥಿತಿ ಹೀಗಾಗಬಹುದು ಎಂಬುದನ್ನು ದಶಕಗಳ ಹಿಂದೆಯೇ ಹೇಳಲಾಗಿತ್ತು. ಈ ಪ್ರದೇಶದಲ್ಲಿ ಭಾರಿ ನಿರ್ಮಾಣ ಚಟುವಟಿಕೆ
ಗಳನ್ನು ಕೈಗೊಳ್ಳುವುದರಿಂದ ಅಪಾಯ ಎದುರಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಮತ್ತು ಭೂಗರ್ಭ ಶಾಸ್ತ್ರಜ್ಞರು ಹಿಂದಿನಿಂದಲೂ ಹೇಳುತ್ತ ಬಂದಿದ್ದಾರೆ. 1976ರಲ್ಲಿ ರಚನೆಯಾಗಿದ್ದ ಮಿಶ್ರಾ ಆಯೋಗವು ಇಂತಹ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಶಿಫಾರಸು ಮಾಡಿತ್ತು. ಆದರೆ ಎಚ್ಚರಿಕೆಗಳು ಮತ್ತು ಶಿಫಾರಸುಗಳನ್ನು ಆಳುವವರು ಕಿವಿಗೆ ಹಾಕಿಕೊಳ್ಳಲಿಲ್ಲ. ನಿರ್ಮಾಣ ಚಟುವಟಿಕೆಗಳು ಎಗ್ಗಿಲ್ಲದೆ ಮುಂದುವರಿದವು. ಅವು ವೇಗ ಪಡೆದುಕೊಂಡವು ಸಹ. ರಾಷ್ಟ್ರೀಯ ಹೆದ್ದಾರಿಯ ಅಗಲವನ್ನು ಹೆಚ್ಚಿಸಲಾಯಿತು. ವಿದ್ಯುತ್ ಉತ್ಪಾದನಾ ಯೋಜನೆಗಳು ಅನುಷ್ಠಾನಕ್ಕೆ ಬಂದವು. 520 ಮೆಗಾವಾಟ್ ಸಾಮರ್ಥ್ಯದ ತಪೋವನ ವಿದ್ಯುತ್ ಉತ್ಪಾದನಾ ಯೋಜನೆಗಾಗಿ ಎರಡೂವರೆ ಕಿಲೊಮೀಟರ್ ಉದ್ದದ ಸುರಂಗವನ್ನು ಕೊರೆಯಲಾಯಿತು.

ಜೋಶಿಮಠ ಹಾಗೂ ಅದರ ಸುತ್ತಲಿನ ಪ್ರದೇಶವು ಹಿಮಾಲಯ ಪರ್ವತ ಶ್ರೇಣಿಯ ಪದತಲದಲ್ಲಿ ಇದೆ. ಹಿಮಾಲಯ ಪರ್ವತ ಶ್ರೇಣಿಯು ಕಾಲಾನುಕ್ರಮಣಿಕೆ ಯಲ್ಲಿ ವಿಶ್ವದ ಇತರ ಪರ್ವತಶ್ರೇಣಿಗಳಿಗಿಂತ ತೀರಾ ಈಚಿನದು. ಅಲ್ಲದೆ, ಅತ್ಯಂತ ಸೂಕ್ಷ್ಮವಾಗಿರುವುದೂ ಹೌದು. ‍ಪಟ್ಟಣ ಹಾಗೂ ಅದರ ಸುತ್ತಲಿನ ಪ್ರದೇಶವು ಅಪಾಯಕಾರಿ ಮೇಲ್ಮೈ ಮೇಲೆ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಿಲ್ಲ. ಈಗ ಜೋಶಿಮಠವು ಕುಸಿತದ ಭೀತಿ ಎದುರಿಸುತ್ತಿರುವುದಕ್ಕೆ ಸಂಪೂರ್ಣ ಕಾರಣ ಸಣ್ಣ–ಪುಟ್ಟ ನಿರ್ಮಾಣ ಕಾಮಗಾರಿಗಳಲ್ಲ. ಬದಲಿಗೆ, ಸೂಕ್ಷ್ಮ ಪರ್ವತ ಪ್ರದೇಶದಲ್ಲಿ, ಇಳಿಜಾರುಗಳಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗುವ ರೀತಿಯಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಯಿತು. ಬೃಹತ್ ಪ್ರಮಾಣದ ಜಲವಿದ್ಯುತ್ ಉತ್ಪಾದನಾ ಯೋಜನೆಗಳು ಹಾಗೂ ಚಾರ್‌ ಧಾಮ್ ಹೆದ್ದಾರಿ ಯೋಜನೆಯು ಅಲ್ಲಿನ ಪ್ರದೇಶದ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿರಬಹುದು. ನಿಸರ್ಗದ ಮೇಲಿನ ಇಂತಹ ಆಕ್ರಮಣಗಳ ಬಗ್ಗೆ ಪರಿಸರವಾದಿಗಳು ವ್ಯಕ್ತಪಡಿಸಿದ ಕಳವಳವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪಟ್ಟಣವು ಭೂಕುಸಿತ ಆಗಬಹುದಾದ ಮೇಲ್ಮೈನಲ್ಲಿ ಇದೆ ಎಂದು ರಾಜ್ಯ ಸರ್ಕಾರ ನಡೆಸಿದ ಭೂತಾಂತ್ರಿಕ ಸಮೀಕ್ಷೆಯೊಂದು ಹೇಳಿತ್ತು. ಈ ಪ್ರದೇಶದಲ್ಲಿ ಪ್ರವಾಹ ಆಗಿದೆ, ಭಾರಿ ಮಳೆ ಸುರಿದಿದೆ, ಈಚಿನ ವರ್ಷಗಳಲ್ಲಿ ಹಲವು ಬಾರಿ ಅಲ್ಲಲ್ಲಿ ಭೂಕುಸಿತ ನಡೆದಿದೆ. ಚಮೋಲಿಯಿಂದ ಜೋಶಿಮಠದವರೆಗಿನ ಪ್ರದೇಶವು ದುರಂತಗಳಿಗೆ ಸಾಕ್ಷಿಯಾಗಿದೆ.

ಈಗ ಪಟ್ಟಣವನ್ನು ಹಾಗೂ ಅಲ್ಲಿನ ಜನರ ಜೀವವನ್ನು ಉಳಿಸಲು ಪ್ರಯತ್ನಗಳು ನಡೆದಿವೆ. ಪ್ರಧಾನಿ ಕಚೇರಿಯು ಈ ವಿಚಾರವಾಗಿ ಮುಂದಡಿ ಇರಿಸಿದೆ. ಅಪಾಯ ಸಂಭವಿಸಬಹುದಾದ ಪ್ರದೇಶಗಳಲ್ಲಿ ಇರುವ ಜನರನ್ನು ತಕ್ಷಣ ಬೇರೆಡೆ ಸ್ಥಳಾಂತರಿಸಬೇಕಿದೆ. ಈ ಪಟ್ಟಣವನ್ನು ಉಳಿಸುವುದು ಬಹಳ ದೊಡ್ಡ ಸವಾಲಾಗಬಹುದು. ಜೋಶಿಮಠವು ಮುಂದೆ ಮನುಷ್ಯವಾಸಕ್ಕೆ ಯೋಗ್ಯವಾಗಲಿದೆಯೇ ಎಂಬುದು ಸ್ಪಷ್ಟವಿಲ್ಲ. ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಪುನರ್ ರೂಪಿಸಬೇಕು, ಮಳೆ ನೀರು ಹರಿದುಹೋಗುವ ಜಾಗಗಳನ್ನು ಮತ್ತೆ ಗುರುತಿಸುವ ಕೆಲಸ ಆಗಬೇಕು, ವಿದ್ಯುತ್ ಉತ್ಪಾದನಾ ಯೋಜನೆಯನ್ನು ಕೈಬಿಡಬೇಕು ಎಂಬ ಬೇಡಿಕೆಗಳು ಇವೆ.

ಜೋಶಿಮಠದಲ್ಲಿ ಆಗುತ್ತಿರುವುದು ಒಂದು ಎಚ್ಚರಿಕೆಯ ಕರೆಗಂಟೆ. ಇಲ್ಲಿ ನಡೆಯುತ್ತಿರುವುದನ್ನು ಕಂಡು ದೇಶದ ಇತರ ಪ್ರದೇಶಗಳ ಜನರೂ ಪಾಠ ಕಲಿಯಬೇಕಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಚಾರ್ ಧಾಮ್ ಹೆದ್ದಾರಿ ಯೋಜನೆಯ ಅನುಷ್ಠಾನವನ್ನು ಮುಂದುವರಿಸಿದ್ದು ನಿಸರ್ಗದ ಮೇಲೆ ಭಾರಿ ಹೊರೆಯಾಗಿ ಪರಿಣಮಿಸಿರುವ ಸಾಧ್ಯತೆಯೂ ಇದೆ. ಈ ಯೋಜನೆಯನ್ನು ವಿರೋಧಿಸಿದ್ದವರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯಲಾಗಿತ್ತು. ಸರ್ಕಾರಗಳು ತುಸು ಸಾವಧಾನವಾಗಿ ಆಲೋಚಿಸಬೇಕು, ಅಭಿವೃದ್ಧಿಯ ಪರಿಕಲ್ಪನೆಗಳ ಬಗ್ಗೆ ಮರು ಚಿಂತನೆ ನಡೆಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು