ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೇಜ್ರಿವಾಲ್ ಬಂಧನ; ಕೆಟ್ಟ ಬಗೆಯ ದ್ವೇಷ ರಾಜಕಾರಣ

Published 24 ಮಾರ್ಚ್ 2024, 22:26 IST
Last Updated 24 ಮಾರ್ಚ್ 2024, 22:26 IST
ಅಕ್ಷರ ಗಾತ್ರ

ಜಾರಿ ನಿರ್ದೇಶನಾಲಯವು ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಈ ಬಂಧನವು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೃಷ್ಟಿಸುತ್ತಿರುವ ಒತ್ತಡ ಹಾಗೂ ಅದು ವಿರೋಧ ಪಕ್ಷಗಳ ಮೇಲೆ ನಡೆಸುತ್ತಿರುವ ದಾಳಿಯ ಸ್ವರೂಪವನ್ನು ಇನ್ಯಾವುದೇ ನಾಯಕನ ಬಂಧನಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತೋರಿಸಿಕೊಟ್ಟಿದೆ. ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿರುವುದು ಇದೇ ಮೊದಲು. ಇ.ಡಿ. ಹಾಗೂ ಇತರ ತನಿಖಾ ಸಂಸ್ಥೆಗಳು ಕೇಜ್ರಿವಾಲ್ ಅವರನ್ನು ಕೆಲವು ತಿಂಗಳುಗಳಿಂದ ಕಾಡಲು ಆರಂಭಿಸಿದ್ದವು. ಅವರ ಬಂಧನ ಆಗುವುದು ಬಹುತೇಕ ಖಚಿತವಾಗಿತ್ತು. ಕೇಜ್ರಿವಾಲ್ ಅವರ ಕೆಲವು ಹಿರಿಯ ಸಹೋದ್ಯೋಗಿಗಳನ್ನು ಬಂಧಿಸಲಾಗಿದೆ, ಅವರು ಕೆಲವು ತಿಂಗಳುಗಳಿಂದ ಜೈಲಿನಲ್ಲಿ ಇದ್ದಾರೆ. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಇವರೆಲ್ಲ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕತ್ವ ಹಾಗೂ ಕೆಲವು ಉದ್ಯಮಿಗಳ ನಡುವೆ ಕ್ರಿಮಿನಲ್ ಸಂಬಂಧ ಇತ್ತು ಎಂಬುದು ಇ.ಡಿ. ಆರೋಪ. ಎಎಪಿ ನಾಯಕರಿಗೆ ಲಂಚ ಕೊಡಲಾಗಿದೆ ಎಂದು ಕೂಡ ಇ.ಡಿ. ಆರೋಪಿಸಿದೆ. ಇಡೀ ಹಗರಣದ ಸೂತ್ರಧಾರ ಕೇಜ್ರಿವಾಲ್ ಎಂದು ಇ.ಡಿ. ಹೇಳುತ್ತಿದೆ.

ಹಣದ ಅಕ್ರಮ ವರ್ಗಾವಣೆ ಪ್ರಕರಣಗಳ ಕುರಿತ ದೆಹಲಿ ವಿಶೇಷ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಇದೇ ತಿಂಗಳ 28ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದೆ. ಕೇಜ್ರಿವಾಲ್ ಅವರು ಜೈಲಿನಲ್ಲಿ ಬಹಳ ಕಾಲ ಇರುವುದು ಬಹುತೇಕ ಖಚಿತ. ಕೇಜ್ರಿವಾಲ್ ಅವರ ಬಂಧನ ಹಾಗೂ ಅವರನ್ನು ಜೈಲಿನಲ್ಲಿ ಇರಿಸಿರುವುದರ ರಾಜಕೀಯ ಪರಿಣಾಮಗಳು ಮತ್ತು ಆಡಳಿತಾತ್ಮಕ ‍ಪರಿಣಾಮಗಳು ಹಲವು. ಎಎಪಿಯ ಉನ್ನತ ನಾಯಕ ಈಗ ಜೈಲಿನಲ್ಲಿರುವ ಕಾರಣ ಪಕ್ಷದ ಉಳಿವಿನ ಪ್ರಶ್ನೆ ಎದುರಾಗಬಹುದು. ಪಕ್ಷವನ್ನು ಒಂದಾಗಿ ಇರಿಸಿದ್ದು ಕೇಜ್ರಿವಾಲ್. ಅವರು ಹೊರಗಡೆ ಪಕ್ಷದ ಚಟುವಟಿಕೆಗಳಿಗೆ ಲಭ್ಯವಾಗದೇ ಇರುವ ಕಾರಣ, ಪಕ್ಷದ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಬಹುದು. ದೇಶದ ಇತರ ಕಡೆಗಳಲ್ಲಿ ಬಿಜೆಪಿಯು ಇಂತಹ ಪಕ್ಷಗಳನ್ನು ಒಡೆಯುವ ಕೆಲಸ ಮಾಡಿದೆ ಅಥವಾ ನುಂಗಿಹಾಕಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಎಎಪಿಯು ಬಹಳ ಬೇಗ ಪ್ರವರ್ಧಮಾನಕ್ಕೆ ಬಂತು. ಈಗ ಅದು ರಾಷ್ಟ್ರೀಯ ಪಕ್ಷ ಕೂಡ ಹೌದು. ದೆಹಲಿ ಮತ್ತು ಪಂಜಾಬ್‌ನಲ್ಲಿ ಅದು ಸರ್ಕಾರ ರಚಿಸಿದೆ. ಕೆಲವು ರಾಜ್ಯಗಳಲ್ಲಿ ಪಕ್ಷವು ನೆಲೆ ಕಂಡುಕೊಂಡಿದೆ. ಬಿಜೆಪಿಗೆ ಕೆಲವು ಕಡೆಗಳಲ್ಲಿ ಸವಾಲು ಒಡ್ಡುತ್ತಿದೆ, ವಿರೋಧ ಪಕ್ಷಗಳ ಮೈತ್ರಿಕೂಟವಾಗಿರುವ ‘ಇಂಡಿಯಾ’ದ ಭಾಗ ಕೂಡ ಹೌದು. ಕೇಜ್ರಿವಾಲ್ ಅವರ ಬಂಧನವು ತನ್ನ ಕಾಲು ಗಳ ಮೇಲೆ ನಿಂತುಕೊಳ್ಳುವುದಕ್ಕೂ ಕಷ್ಟಪಡುತ್ತಿರುವ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಒಂದು ಏಟು. 

ಮೈತ್ರಿಕೂಟವನ್ನು ದುರ್ಬಲಗೊಳಿಸಿ, ಚುನಾವಣಾ ಪ್ರಚಾರ ಅಭಿಯಾನಕ್ಕೆ ಅಡ್ಡಿ ಉಂಟುಮಾಡುವ ಉದ್ದೇಶವು ಬಂಧನದ ಹಿಂದೆ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದನ್ನು ತಿಳಿಸಲು ‘ಇಂಡಿಯಾ’ ಮೈತ್ರಿಕೂಟದ ಪ್ರತಿನಿಧಿಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದಾರೆ. ಕೇಜ್ರಿವಾಲ್ ಅವರನ್ನು ಬಂಧಿಸಿರುವ ಸಂದರ್ಭವು ಅವರ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೆ. ಬಂಧನವು ನೀತಿ ಸಂಹಿತೆಯ ಉಲ್ಲಂಘನೆಯೂ ಹೌದು ಎಂದು ಅವರು ಆರೋಪಿಸಿದ್ದಾರೆ. ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಅಥವಾ ಅಧಿಕಾರದಲ್ಲಿ ಇಲ್ಲದೆ ಇರುವ, ತನ್ನನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮಾತು ಕೇಳುವಂತೆ ಮಾಡಲು ಅಥವಾ ಆ ಪಕ್ಷಗಳ ನಡು ಮುರಿಯಲು ಕೇಂದ್ರ ಸರ್ಕಾರವು ಹಲವು ಮಾರ್ಗಗಳನ್ನು ಅನುಸರಿಸಿದೆ. ದೇಶದ ಮೂರನೆಯ ಅತಿದೊಡ್ಡ ಪಕ್ಷದ ಎಲ್ಲ ಪ್ರಮುಖ ನಾಯಕರನ್ನು ಚುನಾವಣೆಗೂ ಮೊದಲು ಜೈಲಿಗೆ ಕಳುಹಿಸಲಾಗಿದೆ, ಅವರಿಂದ ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಇದು ಬಹಳ ವಿಚಿತ್ರವಾದ ಸಂದರ್ಭ. ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ, ಅವರು ಜೈಲಿನಿಂದಲೇ ಕರ್ತವ್ಯ ನಿರ್ವಹಿಸಲಿ
ದ್ದಾರೆ ಎಂದು ಎಎಪಿ ಹೇಳಿದೆ. ಇದು ಕೇಂದ್ರ ಸರ್ಕಾರಕ್ಕೆ, ದೆಹಲಿಯ ಸರ್ಕಾರವನ್ನು ವಜಾಗೊಳಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಒಂದು ಅವಕಾಶ ಕಲ್ಪಿಸಿಕೊಡಬಹುದು. ಇ.ಡಿ.ಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸವು ದ್ವೇಷ ರಾಜಕಾರಣ, ಇದು ವಿರೋಧಪಕ್ಷ ಮುಕ್ತ ಭಾರತ ನಿರ್ಮಿಸುವ ಯತ್ನದ ಒಂದು ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT