ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಪತ್ರ ತಪಾಸಣೆಯಲ್ಲಿ ಲೋಪ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಲೆಕ್ಕಪತ್ರ ತಪಾಸಣೆಯ ವರದಿಗಳು ವಿಶ್ವಾಸಾರ್ಹವಾಗಿರದಿದ್ದರೆ ಹೂಡಿಕೆದಾರರು ಮತ್ತು ಸಾಲಗಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ಹಣಕಾಸು ಸಂಸ್ಥೆಗಳ ವಂಚನೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಪ್ರತಿಷ್ಠಿತ ಲೆಕ್ಕ ತಪಾಸಣಾ ಸಂಸ್ಥೆಗಳ ವಿರುದ್ಧ ಕಂಪನಿ ವ್ಯವಹಾರ ಸಚಿವಾಲಯವು ತನಿಖೆ ನಡೆಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಅಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿನ (ಐಎಲ್‌ಅಂಡ್‌ಎಫ್‌ಎಸ್‌) ₹ 90 ಸಾವಿರ ಕೋಟಿ ಮೊತ್ತದ ವಂಚನೆ ಪ್ರಕರಣದಲ್ಲಿ ಶಾಸನಬದ್ಧ ಲೆಕ್ಕಪತ್ರ ತಪಾಸಣಾ ಸಂಸ್ಥೆಗಳೂ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ. ವೃತ್ತಿಸಹಜ ಸಂದೇಹವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರೆ, ಆಡಳಿತ ಮಂಡಳಿ ಜತೆ ದುರುದ್ದೇಶದ ಕಾರಣಗಳಿಗಾಗಿ ಕೈಜೋಡಿಸಿದ್ದರೆ ಅಕ್ಷಮ್ಯ. ಹಣಕಾಸು ಮಾರುಕಟ್ಟೆ ಸ್ಥಿರತೆಯ ಪಾಲಿಗೆ ಇದೊಂದು ಅಪಾಯಕಾರಿ ಬೆಳವಣಿಗೆ. ಇದರಿಂದಾಗಿ, ಲೆಕ್ಕಪತ್ರ ತಪಾಸಣಾ ಸಂಸ್ಥೆಗಳ ವಿಶ್ವಾಸಾರ್ಹತೆಗೂ ಧಕ್ಕೆ ಉಂಟಾಗಲಿದೆ. ವೃತ್ತಿಪರತೆ ಕಾಯ್ದುಕೊಳ್ಳುವ ಬದಲಿಗೆ ಅಂಕಿ ಅಂಶ ತಿರುಚಿ, ಸುಳ್ಳಿನ ಗೋಪುರ ಕಟ್ಟಲಾಗಿದೆ, ವಂಚನೆ ಮರೆಮಾಚಲುಖೊಟ್ಟಿ ಲೆಕ್ಕಪತ್ರದ ಮುಖವಾಡ ತೊಡಿಸಲಾಗಿದೆ ಎಂದು ವರದಿಯಾಗಿದೆ. ವೃತ್ತಿದ್ರೋಹ ಬಗೆದ ಯಾವುದೇ ಸಂಸ್ಥೆ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕಿರುವುದು ಹೂಡಿಕೆದಾರರ ಹಿತರಕ್ಷಣೆ ದೃಷ್ಟಿಯಿಂದ ಅನಿವಾರ್ಯ. ಡೆಲಾಯ್ಟ್‌ ಹಸ್ಕಿನ್ಸ್‌ ಅಂಡ್‌ ಸೆಲ್ಸ್‌ ಮತ್ತು ಬಿಎಸ್‌ಆರ್‌ ಅಸೋಸಿಯೇಟ್ಸ್‌2014ರಿಂದ 2018ರ ನಡುವಿನ ಅವಧಿಯಲ್ಲಿ ನಡೆಸಿದ ಲೆಕ್ಕಪತ್ರ ತಪಾಸಣೆ ಸಂದರ್ಭದಲ್ಲಿ ಅವು ಐಎಲ್‌ಅಂಡ್‌ಎಫ್‌ಎಸ್‌ ಅಂಗಸಂಸ್ಥೆಗಳ ಆಡಳಿತ ಮಂಡಳಿಗಳ ಜತೆ ಸೇರಿ, ಆ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಬಗ್ಗೆ ಉತ್ಪ್ರೇಕ್ಷಿತ ಚಿತ್ರಣ ನೀಡಿವೆ ಎಂಬ ಗಂಭೀರ ಆರೋಪ ಇದೆ.ಇಂತಹ ವಂಚನೆ, ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಇದೊಂದು ಜಾಗತಿಕ ಜಾಡ್ಯವೂ ಹೌದು. ಷೇರುದಾರರಿಗೆ ಉತ್ತರದಾಯಿ ಆಗಿರಬೇಕಾದ ಕೆಲವು ಲೆಕ್ಕ ತಪಾಸಣಾ ಸಂಸ್ಥೆಗಳು ಆಮಿಷಕ್ಕೆ ಒಳಗಾಗಿ, ಆಡಳಿತ ಮಂಡಳಿಯ ಪರವಾಗಿಯೇ ವರದಿ ನೀಡುವ ಚಾಳಿ ತೀರಾ ಅಪಾಯಕಾರಿ. ಇದೊಂದು ನಿರ್ಲಜ್ಜ ನಡೆ. ಸ್ವತಂತ್ರ ನಿರ್ದೇಶಕರು ಮತ್ತು ಶಾಸನಬದ್ಧ ಲೆಕ್ಕತಪಾಸಣಾ ಸಂಸ್ಥೆಗಳು ಕೂಟ ರಚಿಸಿಕೊಂಡು ಸಂಸ್ಥೆಗಳನ್ನು ಸ್ವಂತದ ಜಹಗೀರು ಆಗಿಸಿಕೊಳ್ಳುವ ಪರಿಪಾಟಕ್ಕೆ ಕಾರ್ಪೊರೇಟ್‌ ವಲಯದ ಆರೋಗ್ಯವನ್ನು ಹಾಳುಗೆಡಹುವ ಶಕ್ತಿ ಇದೆ. ಕೆಪಿಎಂಜಿ, ಡೆಲಾಯ್ಟ್‌, ಅರ್ನೆಸ್ಟ್‌ ಅಂಡ್‌ ಯಂಗ್‌, ಪ್ರೈಸ್‌ ವಾಟರ್‌ಹೌಸ್‌ ಕೂಪರ್ಸ್‌ನಂತಹ ಹಣಕಾಸು ಸಲಹೆ ಮತ್ತು ಆಡಿಟ್‌ ಸಂಸ್ಥೆಗಳು ಹಣಕಾಸು ವಂಚನೆ ಪ್ರಕರಣಗಳಲ್ಲಿ ಕೈಜೋಡಿಸಿರುವುದು ತನಿಖೆಯಲ್ಲಿ ಸಾಬೀತಾದರೆ, ಅವುಗಳ ಮೇಲೆ ನಿಷೇಧ ಹೇರಬೇಕು. ವಿದೇಶಿ ಲೆಕ್ಕ ತಪಾಸಣಾ ಸಂಸ್ಥೆಗಳನ್ನು ನಿಷೇಧಿಸಿದರೆ ದೇಶಿ ಕಾರ್ಪೊರೇಟ್‌ ಮತ್ತು ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು ಎಂದು ಡೆಲಾಯ್ಟ್‌ ಸಿಇಒ ಒಡ್ಡಿರುವ ಬೆದರಿಕೆಗೆ ಬಗ್ಗದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲೆಕ್ಕಪತ್ರ ತಪಾಸಣೆಯ ಪ್ರಮಾಣೀಕೃತ ವರದಿಗಳು ವಿಶ್ವಾಸಾರ್ಹವಾಗಿರದಿದ್ದರೆ ಕಂಪನಿಯ ಹೂಡಿಕೆದಾರರು ಮತ್ತು ಸಾಲಗಾರರ ಹಿತಾಸಕ್ತಿಗೂ ಧಕ್ಕೆ ಒದಗಲಿರುವುದನ್ನು ನಿರ್ಲಕ್ಷಿಸಲಾಗದು.

ಸತ್ಯಂ ಕಂಪ್ಯೂಟರ್ಸ್‌ ಹಗರಣದಲ್ಲಿ ಕೆಲವು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದ ಲೆಕ್ಕ ತಪಾಸಿಗರ ನಿಲುವಿನಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ರಿಲಯನ್ಸ್‌ ಕ್ಯಾಪಿಟಲ್‌ ಮತ್ತು ರಿಲಯನ್ಸ್‌ ಹೋಂ ಫೈನಾನ್ಸ್‌ ಕಂಪನಿಯ ಶಾಸನಬದ್ಧ ಲೆಕ್ಕತಪಾಸಣೆ ಹೊಣೆಗಾರಿಕೆಯಿಂದ ಪ್ರೈಸ್‌ ವಾಟರ್‌ಹೌಸ್‌ ಕೂಪರ್ಸ್‌ ಹೊರಬಂದಿದೆ. ಐಎಲ್‌ಅಂಡ್‌ಎಫ್‌ಎಸ್‌ ಪ್ರಕರಣದಲ್ಲಿ ತಪ್ಪಿತಸ್ಥ ಲೆಕ್ಕ ಪರಿಶೋಧನಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಇತರರಿಗೆ ಪಾಠವಾದೀತು. ದೋಷಪೂರಿತ ಮತ್ತು ವಂಚನೆ ಉದ್ದೇಶದ ಲೆಕ್ಕಪತ್ರ ತಪಾಸಣಾ ಕೃತ್ಯಗಳಿಗೆ ತಡೆಯೂ ಬಿದ್ದೀತು. ಲೆಕ್ಕಪತ್ರ ತಪಾಸಣಾ ಸಂಸ್ಥೆಗಳೂ ಸ್ವಯಂ ನಿಯಂತ್ರಣ ಹೊಂದಬೇಕು. ನ್ಯಾಷನಲ್‌ ಫೈನಾನ್ಶಿಯಲ್‌ ರಿಪೋರ್ಟಿಂಗ್‌ ಅಥಾರಿಟಿ ಮತ್ತು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ಸರ್ಕಾರದ ಕ್ರಮಕ್ಕೆ ಪೂರಕವಾಗಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದರೆ ಮಾತ್ರ ಆಡಿಟ್ ಸಂಸ್ಥೆಗಳ ವಿಶ್ವಾಸಾರ್ಹತೆ ಉಳಿದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT