‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ದ (ಕೆ–ರೇರಾ) ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವ ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ದ (ಬಿಡಿಎ) ಬೇಡಿಕೆ ನ್ಯಾಯಸಮ್ಮತವಾದುದಲ್ಲ. ಬಿಡಿಎ ಸಲ್ಲಿಸಿರುವ ಬೇಡಿಕೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಪಾಯಕರ ಕೂಡ. ಶಾಸನಬದ್ಧ ಸಂಸ್ಥೆಯಾಗಿರುವ ಹಾಗೂ ರಿಯಲ್ ಎಸ್ಟೇಟ್ ಪ್ರವರ್ತಕ ಸಂಸ್ಥೆ ಆಗದಿರುವ ಕಾರಣದಿಂದಾಗಿ ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವುದು ಬಿಡಿಎ ವಾದ. ಖಾಸಗಿ ಸಂಸ್ಥೆಗಳಂತೆ ಲಾಭಕ್ಕಾಗಿ ಕಾರ್ಯನಿರ್ವಹಿಸದೆ, ಬಡ ಹಾಗೂ ಮಧ್ಯಮವರ್ಗಕ್ಕೆ ತಾನು ಸೇವೆ
ಸಲ್ಲಿಸುತ್ತಿರುವುದಾಗಿಯೂ ಬಿಡಿಎ ಹೇಳಿಕೊಂಡಿದೆ. ವಿರೋಧಾಭಾಸದ ಸಂಗತಿಯೆಂದರೆ, ಬಿಡಿಎ ಯಾವೆಲ್ಲ ಕಾರಣಗಳಿಂದಾಗಿ ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎಂದು ವಾದಿಸುತ್ತಿದೆಯೋ, ಅದೇ ಕಾರಣಗಳಿಗಾಗಿ ಅದನ್ನು ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ನಂಬಿಕೆಯಿಟ್ಟು ತಮ್ಮ ಜೀವಮಾನದ ಉಳಿತಾಯವನ್ನು ತೊಡಗಿಸುವವರಿಗೆ ದುರ್ಬಲ ರಕ್ಷಣೆಯ ಬದಲಾಗಿ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದಕ್ಕಾಗಿ ಈ ನಿಯಂತ್ರಣ ಅಗತ್ಯವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿಯಂತ್ರಣ ಯಾಕಾಗಿ ಬೇಕು ಎನ್ನುವುದಕ್ಕೆ ನಿದರ್ಶನವಾಗಿ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರ ಸ್ಥಿತಿಗತಿ ಗಮನಿಸಬಹುದು. 2010ರಲ್ಲಿ ಘೋಷಣೆಗೊಂಡ ಈ ಬಡಾವಣೆಯಲ್ಲಿ, ಆರು ವರ್ಷಗಳ ನಂತರ ನಿವೇಶನಗಳ ಹಂಚಿಕೆ ಆರಂಭಗೊಂಡಿತು. 2018ರ ವೇಳೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಭರವಸೆ ನೀಡಲಾಗಿತ್ತು. ಆದರೆ, ರಸ್ತೆ, ಒಳಚರಂಡಿ, ನೀರು ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ ಸಾವಿರಾರು ನಿವೇಶನದಾರರು ಪರಿತಪಿಸುತ್ತಿದ್ದಾರೆ. ಸಾಲ ಮಾಡಿ ನಿವೇಶನ ಕೊಂಡವರು, ಮೂಲ ಸೌಕರ್ಯಗಳಿಲ್ಲದ ಕಾರಣದಿಂದಾಗಿ ಮನೆಯನ್ನು ಕಟ್ಟಲಾರದ ಸ್ಥಿತಿಯಲ್ಲಿದ್ದಾರೆ. ಸಾಲದ ಕಂತಿನ ಜೊತೆಗೆ ಮನೆ ಬಾಡಿಗೆಯನ್ನೂ ಭರಿಸಬೇಕಾದ ಅನಿವಾರ್ಯ ಅವರದಾಗಿದೆ. ಅವರ ಕನಸಿನ ನಿವೇಶನಗಳು ಕಸವನ್ನು ಭರ್ತಿ ಮಾಡುವ ಸ್ಥಳಗಳಾಗಿ ಬದಲಾಗಿವೆ. ಬಿಡಿಎ ಪದೇಪದೇ ನೀಡುತ್ತಿರುವ ಭರವಸೆ ಹಾಗೂ ಗಡುವುಗಳಿಂದಾಗಿ ನಿವೇಶನದಾರರ ಸಂಕಟ ಉಲ್ಬಣಗೊಳ್ಳುತ್ತಿದೆಯೇ ಹೊರತು, ಯಾವುದೇ ಉಪಯೋಗವಾಗಿಲ್ಲ. ಇಂಥ ಸಂದಿಗ್ಧದ ಸಮಯದಲ್ಲಿ ‘ಕೆ–ರೇರಾ’ ಇಲ್ಲದೇ ಹೋದರೆ, ಸಂತ್ರಸ್ತರು ತ್ವರಿತ ನ್ಯಾಯಕ್ಕಾಗಿ ಬೇರೇನು ಮಾಡಲು ಸಾಧ್ಯವಿದೆ? ನಾಡಪ್ರಭು ಕೆಂಪೇಗೌಡ ಬಡಾವಣೆಯದು ಒಂದು ಉದಾಹರಣೆಯಷ್ಟೇ; ಇಂಥ ಅನೇಕ ಹಗರಣಗಳಲ್ಲಿ ಬಿಡಿಎ ಸಿಲುಕಿಕೊಂಡಿದೆ. ಇಬ್ಬರಿಗೆ ಒಂದೇ ನಿವೇಶನದ ಹಂಚಿಕೆ, ಉದ್ಯಾನ ಹಾಗೂ ಆಟದ ಮೈದಾನಕ್ಕಾಗಿ ಮೀಸಲಿರಿಸಿದ ಜಾಗವನ್ನು ವಾಣಿಜ್ಯ ಸ್ಥಳವಾಗಿ ಪರಿವರ್ತಿಸಿರುವುದು ಸೇರಿದಂತೆ ಬಿಡಿಎ ಮೇಲೆ ಹಲವು ದೂರುಗಳಿವೆ. ಸರ್ಕಾರಿ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿ, ನಗರದ ಅಮೂಲ್ಯವಾದ ಹಸಿರು ಪ್ರದೇಶಗಳನ್ನು ಕಬಳಿಸುವುದರ ಮೂಲಕ, ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಸಾಂದರ್ಭಿಕ ತನಿಖೆಗಳಿಂದ ಅವ್ಯವಹಾರಗಳು ಬಯಲಿಗೆ ಬಂದಿದ್ದರೂ, ವ್ಯವಸ್ಥಿತ ಭ್ರಷ್ಟಾಚಾರ ಪಿಡುಗಿನ ರೂಪದಲ್ಲಿ ಮುಂದುವರಿದೇ ಇದೆ. ಖಾಸಗಿ ನಿರ್ಮಾಣ ಸಂಸ್ಥೆಗಳಿಗಿಂತಲೂ ತನ್ನನ್ನು ಭಿನ್ನ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ಬಿಡಿಎ, ವಾಸ್ತವದಲ್ಲಿ ಕೆಲವು ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚು ಕುಖ್ಯಾತವಾಗಿದೆ.

‘ಕೆ–ರೇರಾ’ ವ್ಯಾಪ್ತಿಯಿಂದ ಬಿಡಿಎಯನ್ನು ಹೊರಗಿಡುವುದೆಂದರೆ, ಅವ್ಯವಸ್ಥೆ ಮತ್ತು ಅವ್ಯವಹಾರಗಳನ್ನು ಮುಂದುವರಿಸುವುದಕ್ಕೆ ಪರವಾನಗಿ ನೀಡುವುದೇ ಆಗಿದೆ. ಉತ್ತರದಾಯಿತ್ವ ಎನ್ನುವುದು ಆಯ್ಕೆಗೆ ಸಂಬಂಧಿಸಿದ್ದಾಗಿರಬಾರದು. ವಿಳಂಬವನ್ನು ತಪ್ಪಿಸುವುದು ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ, ನಿವೇಶನ ಅಥವಾ ಮನೆಯನ್ನು ಕೊಳ್ಳುವವರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ‘ಕೆ–ರೇರಾ’ ಸ್ಥಾಪಿಸಲಾಗಿದೆ. ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದಂತೆ ಖಾಸಗಿ ಅಥವಾ ಶಾಸನಬದ್ಧ ಸಂಸ್ಥೆ ಎನ್ನುವ ವ್ಯತ್ಯಾಸವೇನೂ ಇರುವುದಿಲ್ಲ. ಅಭಿವೃದ್ಧಿಪಡಿಸಿದ ನಿವೇಶನಗಳನ್ನು
ಸಾರ್ವಜನಿಕರಿಗೆ ಒದಗಿಸುವ ಭರವಸೆಯನ್ನು ಈಡೇರಿಸಲು ವಿಫಲವಾದಲ್ಲಿ, ಖಾಸಗಿ ಸಂಸ್ಥೆಗಳಿಗೆ ಅನ್ವಯಿಸುವ ನಿಯಮ ನಿಬಂಧನೆಗಳು ಸರ್ಕಾರಿ ಸಂಸ್ಥೆಗೂ ಅನ್ವಯಿಸಬೇಕು. ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವ ಬಿಡಿಎ ತರ್ಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಆಗಿರುವಂತೆಯೇ, ಸಿನಿಕತನದಿಂದಲೂ ಕೂಡಿದೆ. ನಾಗರಿಕ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಳ್ಳುತ್ತಲೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ‘ಕೆ–ರೇರಾ’ ವ್ಯಾಪ್ತಿಗೆ ತರುವುದು ಮಾತ್ರವಲ್ಲ, ಇನ್ನೂ ಹೆಚ್ಚಿನ ಉತ್ತರದಾಯಿತ್ವಕ್ಕೆ ಒಳಪಡಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.