ಬುಧವಾರ, ಸೆಪ್ಟೆಂಬರ್ 22, 2021
25 °C

ಸಂಪಾದಕೀಯ | ಬಿಬಿಎಂಪಿ ಆಯುಕ್ತರ ಬದಲಾವಣೆ: ಸರ್ಕಾರ ನೀಡಿದ ಸಂದೇಶ ಏನು?

ಸಂಪಾದಕೀಯ Updated:

ಅಕ್ಷರ ಗಾತ್ರ : | |

BBMP

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋವಿಡ್‌–19 ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವ ಸಂದರ್ಭದಲ್ಲೇ ಅದರ ಆಯುಕ್ತರನ್ನು ದಿಢೀರನೆ ಬದಲಾವಣೆ ಮಾಡಲಾಗಿದೆ. ನಗರದ ಸಮುದಾಯ ಆರೋಗ್ಯವು ಹದಗೆಟ್ಟು, ವಿಕೋಪಕ್ಕೆ ತಿರುಗುತ್ತಿರುವ ಸನ್ನಿವೇಶ ಇದಾಗಿದೆ. ಹೀಗಾಗಿ, ಸೋಂಕು ನಿಯಂತ್ರಣ ಚಟುವಟಿಕೆಗಳಿಗೆ ಪೂರ್ಣ ಸಮಯ ಮೀಸಲಿಡುವಂತಹ ಮುಖ್ಯಸ್ಥರು ಬಿಬಿಎಂಪಿಗೆ ಈಗ ಅನಿವಾರ್ಯವಾಗಿ ಬೇಕಾಗಿದೆ.

ಆದರೆ, ನೂತನ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರಿಗೆ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಕಾರ್ಯಭಾರವನ್ನು ಹಾಗೇ ಉಳಿಸಲಾಗಿದೆ. ರಾಜ್ಯದಾದ್ಯಂತ ಮುಂಗಾರಿನ ಆರ್ಭಟ ಜೋರಾಗಿದ್ದು, ಮಹಾಪೂರದಂತಹ ಸನ್ನಿವೇಶಗಳನ್ನೂ ನಿಭಾಯಿಸುವ ಹೊಣೆ ಈಗ ಅವರ ಮೇಲಿದೆ. ಪ್ರಾಣ, ಆಸ್ತಿ ಹಾಗೂ ಬೆಳೆಹಾನಿ ಪ್ರಕರಣಗಳು ವರದಿಯಾಗುತ್ತಿದ್ದು, ವಿಪತ್ತಿನ ಪರಿಸ್ಥಿತಿಯನ್ನೂ ಅವರು ನಿಭಾಯಿಸಬೇಕಿದೆ. ಸೋಂಕಿನ ಕ್ಷಿಪ್ರಗತಿ ಹರಡುವಿಕೆಯಾಗಲೀ ಮಳೆಯ ಆರ್ಭಟ ಸೃಷ್ಟಿಸುವ ಅನಾಹುತವಾಗಲೀ ಎರಡೂ ತುರ್ತು ಸಂದರ್ಭಗಳೇ. ಯಾವುದನ್ನೂ ಅಲಕ್ಷ್ಯ ಮಾಡುವಂತಿಲ್ಲ. ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಯವನ್ನೂ ವ್ಯರ್ಥ ಮಾಡುವಂತಿಲ್ಲ.

ಆದರೆ, ಒಬ್ಬ ಅಧಿಕಾರಿ ಏಕಕಾಲಕ್ಕೆ ಎರಡು ಗುರುತರ ಹೊಣೆಗಳನ್ನು ಹೇಗೆ ನಿಭಾಯಿಸಲು ಸಾಧ್ಯ? ಸರ್ಕಾರ, ಒಂದೋ ಕೆಲಸದ ಪೂರ್ಣ ಅವಧಿಯನ್ನು ಬಿಬಿಎಂಪಿಗೆ ಮೀಸಲಿಡುವಂತಹ ಆಯುಕ್ತರನ್ನು ನೇಮಿಸಬೇಕು; ಇಲ್ಲದಿದ್ದರೆ ಮಂಜುನಾಥ ಪ್ರಸಾದ್‌ ಅವರನ್ನು ಕಂದಾಯ ಇಲಾಖೆಯ ಹೆಚ್ಚುವರಿ ಹೊಣೆಯಿಂದ ತಕ್ಷಣ ಮುಕ್ತಗೊಳಿಸಬೇಕು.

ಬಿಬಿಎಂಪಿ ಆಡಳಿತ ಯಂತ್ರದ ಚುಕ್ಕಾಣಿಯನ್ನು ಇದುವರೆಗೆ ಹಿಡಿದಿದ್ದ ಬಿ.ಎಚ್‌. ಅನಿಲ್‌ ಕುಮಾರ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ. ಕಾರ್ಯದರ್ಶಿ ಮಟ್ಟದ ಅಧಿಕಾರಿ ನಿಭಾಯಿಸುತ್ತಿದ್ದ ಹುದ್ದೆಗೆ ಅವರನ್ನು ವರ್ಗ ಮಾಡಲಾಗಿದೆ. ಆ ಹುದ್ದೆಯ ಶ್ರೇಣಿಯನ್ನು ಉನ್ನತೀಕರಿಸಲಾಗಿದೆ ಎನ್ನುವುದು ಬೇರೆ ಮಾತು. ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮಂಜುನಾಥ ಪ್ರಸಾದ್‌ ಈ ಹಿಂದೆ ಮೂರೂವರೆ ವರ್ಷ ನಿಭಾಯಿಸಿದ್ದರು. ಈಗ ಅದೇ ಹುದ್ದೆಗೆ ಮರಳಿದ್ದಾರೆ.

ದೈನಂದಿನ ಆಡಳಿತದ ದೃಷ್ಟಿಯಿಂದ ಹೀಗೆ ಅಧಿಕಾರಿಗಳನ್ನು ವರ್ಗ ಮಾಡುವ ಅವಕಾಶ ಸರ್ಕಾರಕ್ಕೆ ಇದ್ದೇ ಇದೆ. ಆದರೆ, ವರ್ಗ ಮಾಡಿದ ಸಂದರ್ಭ ಗೊಂದಲವನ್ನು ಮೂಡಿಸಿದೆ. ಅನಿಲ್‌ ಕುಮಾರ್‌ ಅವರು ಆಯುಕ್ತರಾಗಿ ಬಂದು ಒಂದು ವರ್ಷವೂ ಆಗಿರಲಿಲ್ಲ. ಅಷ್ಟರಲ್ಲಿ ಅವರನ್ನು ವರ್ಗ ಮಾಡುವಂತಹ ಯಾವ ಅನಿವಾರ್ಯ ಎದುರಾಯಿತು ಎನ್ನುವುದು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೆರೆಯಲಾದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಹಾಸಿಗೆಗಳನ್ನು ಬಾಡಿಗೆಗೆ ಪಡೆಯಲು ಕೈಗೊಂಡ ನಿರ್ಧಾರವು ವಿವಾದದ ಸ್ವರೂಪ ಪಡೆದಿದ್ದು, ಕೋವಿಡ್‌ ನಿರ್ವಹಣೆ ವಿಷಯದಲ್ಲಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಪ್ರಮೇಯ ಒದಗಿಬಂದಿದ್ದು ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದ್ದವು ಎಂಬ ಮಾತೂ ಕೇಳಿಬಂದಿದೆ. ಆದರೆ, ರಾಜಕೀಯ ವಲಯದ ತರ್ಕಗಳೇ ಬೇರೆ.

ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್‌. ಅಶೋಕ ಅವರ ಮುಸುಕಿನ ಗುದ್ದಾಟದ ಫಲವೇ ಈ ಬದಲಾವಣೆ ಎಂದು ಹೇಳಲಾಗುತ್ತಿದೆ. ಅದೊಂದು ವೇಳೆ ನಿಜವಾಗಿದ್ದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೇ ಈಗ ಬಿಬಿಎಂಪಿ ಆಯುಕ್ತರಾಗಿದ್ದರಿಂದ ಯಾರ ಕೈ ಮೇಲಾಗಿದೆ ಎನ್ನುವುದನ್ನು ಊಹಿಸುವುದು ಕಷ್ಟವಲ್ಲ. ಬಿಬಿಎಂಪಿಯ ಪ್ರಸಕ್ತ ಕೌನ್ಸಿಲ್‌ ಅವಧಿ ಇನ್ನೇನು ಮುಗಿಯಲಿದ್ದು, ಸೆಪ್ಟೆಂಬರ್‌ 11ರೊಳಗೆ ಹೊಸ ಕೌನ್ಸಿಲ್‌ ಅಸ್ತಿತ್ವಕ್ಕೆ ಬರಬೇಕಿದೆ. ಸದ್ಯದ ಸ್ಥಿತಿಯಲ್ಲಿ ಚುನಾವಣೆ ನಡೆಸುವ ಸಾಧ್ಯತೆ ತೀರಾ ಕಡಿಮೆ.

ಬಿಬಿಎಂಪಿ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಂತಹ ಸಚಿವರೊಬ್ಬರ ಮಹತ್ವಾಕಾಂಕ್ಷೆಯು ಈ ಬದಲಾವಣೆಗೆ ಕಾರಣ ಎಂದೂ ಹೇಳಲಾಗುತ್ತಿದೆ. ರಾಜಕೀಯ ನಿರ್ಧಾರಗಳು, ಆಡಳಿತಾತ್ಮಕ ಬದಲಾವಣೆಗಳು ಏನೇ ಆಗಿರಲಿ, ಅವು ಜನರ ಸಂಕಷ್ಟಗಳನ್ನು ಪರಿಹರಿಸಲು ನೆರವಾಗಬೇಕೇ ವಿನಾ ವೈಯಕ್ತಿಕ ಹಿತಾಸಕ್ತಿಗಳನ್ನು ಪೋಷಣೆ ಮಾಡುವ ಉದ್ದೇಶಕ್ಕೆ ಬಳಕೆ ಆಗಬಾರದು. ಕೋವಿಡ್‌ ನಿರ್ವಹಣೆಯಲ್ಲಿ ಮೊದಲು ಪ್ರಶಂಸೆಗೆ ಪಾತ್ರವಾಗಿದ್ದ ಬೆಂಗಳೂರು, ಈಗ ಸೋಂಕನ್ನು ನಿಯಂತ್ರಿಸಲಾಗದೆ ಏದುಸಿರು ಬಿಡುತ್ತಿದೆ. ಈ ವೈಫಲ್ಯದ ಸುಳಿಯಿಂದ ಹೊರಬರುವಂತೆ ಬಿಬಿಎಂಪಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಹೊಣೆ ಮುಖ್ಯಮಂತ್ರಿಯವರ ಮೇಲಿದೆ. ಸೋಂಕು ನಿಯಂತ್ರಣವೇ ಸದ್ಯದ ಮುಖ್ಯ ಗುರಿಯಾಗಬೇಕು. ದಾರಿ ತಪ್ಪಿಸಲು ಹವಣಿಸುವವರಿಗೆ ನಿರ್ದಾಕ್ಷಿಣ್ಯವಾಗಿ ಬುದ್ಧಿ ಹೇಳಬೇಕು. ಕೆಲಸ ಮಾಡುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯವನ್ನೂ ತುಂಬಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು