ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಭಾರತ ಮಹಿಳಾ ಕ್ರಿಕೆಟ್‌ಗೆ ಮೆರುಗು ತಂದ ಮಿಥಾಲಿ

Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ಮಹಿಳೆಯರ ಕ್ರಿಕೆಟ್ ರಂಗದಲ್ಲಿ ಹಲವು ಪ್ರಥಮಗಳ ಒಡತಿಯಾಗಿರುವ ಮಿಥಾಲಿ ರಾಜ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರ 23 ವರ್ಷಗಳ ಪಯಣವು ಭಾರತದ ಮಹಿಳಾ ಕ್ರಿಕೆಟ್‌ ಪಾಲಿಗೆ ಒಂದು ಮಹತ್ವದ ಕಾಲಘಟ್ಟವೇ ಸರಿ. ಈ ಅವಧಿಯಲ್ಲಿ ಮಿಥಾಲಿ ಅವರ ಜೊತೆಜೊತೆಗೆ ಭಾರತದ ಮಹಿಳಾ ಕ್ರಿಕೆಟ್ ಕೂಡ ಗಣನೀಯವಾಗಿ ಬೆಳೆದುನಿಂತಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಬ್ಯಾಟರ್ ಮತ್ತು ನಾಯಕಿಯಾಗಿ ಮಾಡಿದ ಸಾಧನೆಗಳು ಹಲವು. ಅದರಲ್ಲಿ ವಿಶ್ವದಾಖಲೆಗಳೂ ಸೇರಿವೆ. ಇದೀಗ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಸದ್ಯ ಮಿಂಚುತ್ತಿರುವ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ತಾನಿಯಾ ಭಾಟಿಯಾ ಅವರಿಗೆ ಮಿಥಾಲಿ ಅವರ ಸಾಧನೆಯನ್ನು ಸರಿಗಟ್ಟುವ ಅವಕಾಶ ಖಂಡಿತವಾಗಿಯೂ ಇದೆ. ಆದರೆ ಈ ಎಲ್ಲ ಪ್ರತಿಭಾನ್ವಿತೆಯರು ಕ್ರಿಕೆಟ್ ಅಂಗಳಕ್ಕೆ ಬರಲು ಮಿಥಾಲಿ ಸಾಧನೆಯೇ ಪ್ರೇರಣೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಿನ ಮಹಿಳಾ ಕ್ರಿಕೆಟ್‌ ರಂಗಕ್ಕೂ ಎರಡು ದಶಕಗಳ ಹಿಂದಿನದಕ್ಕೂ ಅಜಗಜಾಂತರ ಇದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಹಿಳಾ ತಂಡಗಳಿಗೆ ದುಡ್ಡು ಖರ್ಚು ಮಾಡಲು ನಿರಾಸಕ್ತಿ ತೋರುತ್ತಿದ್ದ ಕಾಲದಲ್ಲಿ ಮಿಥಾಲಿ ಬ್ಯಾಟ್ ಹಿಡಿದವರು. ದೇಶದ ಮಹಿಳಾ ಟೆಸ್ಟ್ ತಂಡದ ಮಾಜಿ ನಾಯಕಿ, ಬೆಂಗಳೂರಿನ ಶಾಂತಾ ರಂಗಸ್ವಾಮಿಯವರ ನಿರಂತರ ಹೋರಾಟ ಮತ್ತು ಮಿಥಾಲಿ ಬಳಗವು ಕ್ರಿಕೆಟ್ ಅಂಗಳದಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನದಿಂದಾಗಿ ಬಿಸಿಸಿಐ ಕಡೆಗೂ ಮಣಿಯಬೇಕಾಯಿತು. ಹಣ, ವಾರ್ಷಿಕ ಗುತ್ತಿಗೆ ಮತ್ತು ಪುರುಷರ ಕ್ರಿಕೆಟ್‌ನಲ್ಲಿರುವಂತೆ ಟೂರ್ನಿಗಳನ್ನು ನಡೆಸಲು ಆರಂಭಿಸಿದೆ. ಜಾಹೀರಾತುಗಳಲ್ಲಿಯೂ ಕ್ರಿಕೆಟ್ ಆಟಗಾರ್ತಿಯರು ಕಾಣಿಸಿಕೊಳ್ಳತೊಡಗಿದ್ದಾರೆ. ಅದರಿಂದಾಗಿ ಇವತ್ತು ನಗರ, ಪಟ್ಟಣಗಳ ಕ್ರಿಕೆಟ್‌ ಅಕಾಡೆಮಿಗಳ ನೆಟ್ಸ್‌ನಲ್ಲಿ ಬಾಲಕಿಯರು ಅಭ್ಯಾಸ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಈ ಎಲ್ಲ ಕಾರಣಗಳಿಂದ ಮಹಿಳಾ ಕ್ರಿಕೆಟ್‌ನ ಮಟ್ಟಿಗೆ ಮಿಥಾಲಿ ಮಹಾನಾಯಕಿಯಾಗಿ ಗಮನ ಸೆಳೆಯುತ್ತಾರೆ. ತಮಿಳುನಾಡು ಮೂಲದ ಕುಟುಂಬದ ಮಿಥಾಲಿ ಅವರ ತಂದೆ ದೊರೈರಾಜ್ ವಾಯುಸೇನೆಯ ಅಧಿಕಾರಿಯಾಗಿದ್ದವರು. ಅವರು ರಾಜಸ್ಥಾನದ ಜೋಧಪುರದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಜನಿಸಿದ ಮಿಥಾಲಿ, ಬೆಳೆದಿದ್ದು ಹೈದರಾಬಾದಿನಲ್ಲಿ. ಅಮ್ಮ ಲೀಲಾ ರಾಜ್ ಅವರ ಪ್ರಭಾವದಿಂದ ಭರತನಾಟ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ ಸಾಹಸ ಮನೋಭಾವದ ದೊರೈರಾಜ್, ಮಗಳನ್ನು ಕ್ರಿಕೆಟ್ ಆಟಗಾರ್ತಿಯನ್ನಾಗಿ ರೂಪಿಸಲು ಪಣತೊಟ್ಟರು. ಅವರ ಅಂದಿನ ನಿರ್ಧಾರದಿಂದ ಮಿಥಾಲಿ ದೇಶದ ಸಾವಿರಾರು ಹುಡುಗಿಯರಿಗೆ ಪ್ರೇರಣೆಯಾಗಿ ಬೆಳೆದದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಹತ್ತನೇ ವಯಸ್ಸಿನಿಂದ ತರಬೇತಿ ಆರಂಭವಾದ ಮೇಲೆ ಬಹುಬೇಗ ಯಶಸ್ಸಿನ ಮೆಟ್ಟಿಲೇರಿದರು. ಜೂನಿಯರ್ ಹಂತದಲ್ಲಿಯೇ ಹುಡುಗರನ್ನೂ ಮೀರಿಸುವ ಬ್ಯಾಟಿಂಗ್ ಕೌಶಲ ಅವರದ್ದಾಗಿತ್ತು. 16ನೇ ವಯಸ್ಸಿನಲ್ಲಿಯೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು.

ಐರ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಅವರು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ್ತಿಯಾದರು. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಪಾರಮ್ಯವನ್ನು ಮೀರಿ ನಿಂತು ಭಾರತ ತಂಡವನ್ನು ಎರಡು ಸಲ ಏಕದಿನ ವಿಶ್ವಕಪ್ ಫೈನಲ್‌ವರೆಗೂ ಮುನ್ನಡೆಸಿದರು. ಟೆಸ್ಟ್, ಟಿ20 ಮತ್ತು ಏಕದಿನ ಮಾದರಿಗಳಲ್ಲಿ ದಾಖಲೆಗಳನ್ನು ಬರೆದಿಟ್ಟಿದ್ದಾರೆ.

ತಮ್ಮ ಅಭಿಮಾನಿಗಳಿಂದ ‘ಮಹಿಳಾ ತೆಂಡೂಲ್ಕರ್’ ಎಂದು ಕರೆಸಿಕೊಂಡ ಆಟಗಾರ್ತಿ ಅವರು. ಪದ್ಮಶ್ರೀ, ಅರ್ಜುನ ಮತ್ತು ಮೇಜರ್ ಧ್ಯಾನಚಂದ್ ಖೇಲ್‌ರತ್ನ ಸೇರಿದಂತೆ ಹಲವು ಪ್ರಶಸ್ತಿ, ‍ಪುರಸ್ಕಾರಗಳು ಅವರಿಗೆ ಒಲಿದಿವೆ. ಮಿಥಾಲಿ ಅವರ ದೀರ್ಘ ವೃತ್ತಿಜೀವನದಲ್ಲಿ ಕೆಲವು ವಿವಾದಗಳೂ ಸುದ್ದಿ ಮಾಡಿದವು. ಅದರಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಮೇಶ್ ಪೊವಾರ್ ವಿರುದ್ಧ ಸಿಡಿದೆದ್ದ ಪ್ರಕರಣ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಅವರು ಬರೆದ ದೂರಿನ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೋಲು, ಟೀಕೆಗಳಿಂದ ಎಂದೂ ಅವರು ವಿಚಲಿತರಾಗಲಿಲ್ಲ. ಪುಟಿದೆದ್ದು ನಿಂತು ಯಶಸ್ಸು ಗಳಿಸುವ ಮೂಲಕವೇ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ. ಇದೀಗ ಅವರ ನಿವೃತ್ತಿ ಜೀವನದ ಇನಿಂಗ್ಸ್ ಆರಂಭವಾಗಲಿದೆ. ಅವರ ಅನುಭವವು ಯುವಪ್ರತಿಭೆಗಳ ಬೆಳವಣಿಗೆಗೆ ವಿನಿಯೋಗವಾದರೆ ದೇಶದ ಮಹಿಳಾ ಕ್ರಿಕೆಟ್‌ ಬೆಳವಣಿಗೆಯ ವೇಗವು ಗಗನಮುಖಿಯಾಗುವುದರಲ್ಲಿ ಸಂಶಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT