ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಂದು ಯಾತ್ರೆಗೆ ಸಜ್ಜಾಗಿದ್ದಾರೆ. ಈ ಬಾರಿಯ ಯಾತ್ರೆಯ ಹೆಸರು ಮತ್ತು ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಇದೆ. ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಎಂದು ಹೆಸರು ಇರಿಸಲಾಗಿದ್ದು, ಯಾತ್ರೆಯು ದೇಶದ ಪೂರ್ವ ಭಾಗದಿಂದ ಪಶ್ಚಿಮದತ್ತ ಸಾಗಲಿದೆ. ಯಾತ್ರೆಯು ಮಣಿಪುರದಿಂದ ಇದೇ 14ರಂದು ಆರಂಭ ಆಗಿ ಮಾರ್ಚ್ 21ರಂದು ಮುಂಬೈನಲ್ಲಿ ಸಮಾರೋಪಗೊಳ್ಳಲಿದೆ. ಕಳೆದ ಜನವರಿಯಲ್ಲಿ ಪೂರ್ಣಗೊಂಡ ‘ಭಾರತ್ ಜೋಡೊ ಯಾತ್ರೆ’ಯು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಯಾತ್ರೆಯಿಂದಾಗಿ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಬಹುದು ಎಂದು ಭಾವಿಸಲಾಗಿತ್ತು. ಕರ್ನಾಟಕದಲ್ಲಿ 2023ರ ಮೇ ತಿಂಗಳಲ್ಲಿ ಮತ್ತು ತೆಲಂಗಾಣದಲ್ಲಿ ಅದೇ ವರ್ಷ ನವೆಂಬರ್–ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿದೆ. ಯಾತ್ರೆಯು ಹಾದು ಹೋದ ಪ್ರದೇಶಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾದರು ಎಂದು ವಿಶ್ಲೇಷಿಸಲಾಗಿದೆ. ಆದರೆ, ಯಾತ್ರೆ ಸಾಗಿದ ಬೇರೆ ಕೆಲವು ರಾಜ್ಯಗಳಲ್ಲಿ ಪಕ್ಷಕ್ಕೆ ಯಾವುದೇ ಅನುಕೂಲ ಆಗಿಲ್ಲ. ಛತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಉಂಟಾಗಿದೆ. ಈಗಿನ ಯಾತ್ರೆಯು ರಾಜಕೀಯವಾಗಿ ಭಿನ್ನ ವಾತಾವರಣ ಇರುವ ಪ್ರದೇಶಗಳಲ್ಲಿ ಸಾಗಲಿದೆ. ಲೋಕಸಭೆಯ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳಷ್ಟೇ ಇವೆ. ಆದರೆ, ಪಕ್ಷದ ಶಕ್ತಿ ಮತ್ತು ಪುನಶ್ಚೇತನಗೊಳ್ಳುವ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳು ಇವೆ.
ಬಿಜೆಪಿಯು ಧ್ರುವೀಕರಣ ರಾಜಕಾರಣ ಮಾಡುತ್ತಿರುವ ಸಂದರ್ಭದಲ್ಲಿ ಒಗ್ಗಟ್ಟಿಗಾಗಿ ಯಾತ್ರೆ ಬೇಕಾಗಿದೆ ಎಂದು ಮೊದಲಿನ ಯಾತ್ರೆಯ ಸಂದರ್ಭದಲ್ಲಿ ಪ್ರತಿಪಾದಿಸಲಾಗಿತ್ತು. ‘ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯ’ ದೊರಕಿಸಿಕೊಡುವುದಕ್ಕಾಗಿ ಈಗಿನ ಯಾತ್ರೆ ಎಂದು ಕಾಂಗ್ರೆಸ್ ಹೇಳಿದೆ. ಚುನಾವಣಾ ರಾಜಕಾರಣಕ್ಕೂ ಯಾತ್ರೆಗೂ ಯಾವುದೇ ಸಂಬಂಧ ಇಲ್ಲ ಎಂದು ರಾಹುಲ್ ಗಾಂಧಿ ಮೊದಲ ಯಾತ್ರೆ ಸಂದರ್ಭದಲ್ಲಿ ಹೇಳಿದ್ದರು. ಪಕ್ಷವೂ ಅದನ್ನೇ ಪ್ರತಿಪಾದಿಸಿತ್ತು. ಈ ಪ್ರತಿಪಾದನೆಯನ್ನು ಹಲವು ಜನರು ನಂಬಿದ್ದರು. ಈ ಯಾತ್ರೆಯಿಂದಾಗಿ ರಾಹುಲ್ ಅವರ ವರ್ಚಸ್ಸು ಬದಲಾಯಿತು. ನೈತಿಕ ಪ್ರಭಾ ವಲಯವನ್ನು ಹೊಂದಿರುವ ಆಧ್ಯಾತ್ಮಿಕ ಕಳಕಳಿಯೂ ಇರುವ ಶ್ರದ್ಧೆಯ ರಾಜಕಾರಣ ಎಂಬ ಹೆಸರು ಅವರಿಗೆ ಬಂತು. ಯಾತ್ರೆಯು ಜನರಿಗೆ ಇಂತಹುದನ್ನು ಮಾಡುವುದು ನಿಜ. ‘ಭಾರತ ಜೋಡೊ ಯಾತ್ರೆ’ಯಲ್ಲಿ ಗಳಿಸಿದ ಎಲ್ಲವನ್ನೂ ಅವರು ಉಳಿಸಿಕೊಂಡಿದ್ದಾರೆಯೇ ಎಂಬುದು ಚರ್ಚಾರ್ಹ. ಆದರೆ, ಯಾತ್ರೆಗೆ ಮೊದಲಿನ ರಾಹುಲ್‌ಗಿಂತ ಯಾತ್ರೆಯ ನಂತರದ ರಾಹುಲ್ ಬೇರೆ ಎಂಬುದು ವಾಸ್ತವ.
ಮುಂಬರುವ ಯಾತ್ರೆಯು ಈಗಿನ ರಾಜಕೀಯ ಸಂದರ್ಭದಲ್ಲಿ ವೈಯಕ್ತಿಕ ಅಥವಾ ಆಧ್ಯಾತ್ಮಿಕ ಆಗಿರಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಬಹುದಾದ ವಿಚಾರಗಳನ್ನೇ ಯಾತ್ರೆ ಕೂಡ ಮುಖ್ಯವಾಗಿ ಇರಿಸಿಕೊಂಡಿದೆ. ಆರು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಹಿಂಸೆಯಲ್ಲಿ ಕುದಿಯುತ್ತಿರುವ ಮಣಿಪುರದಿಂದ ಯಾತ್ರೆಯು ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಗಂಭೀರ ಸವಾಲುಗಳು ಇರುವ ರಾಜ್ಯಗಳನ್ನು ಇದು ಹಾದುಹೋಗಲಿದೆ. ಹಾಗಿದ್ದರೂ ಇದೊಂದು ರಾಜಕೀಯೇತರ ಚಟುವಟಿಕೆ ಎಂದು ರಾಹುಲ್ ಆಪ್ತರು ಹೇಳಿದ್ದಾರೆ. ಇಂತಹ ಅಪ್ರಾಮಾಣಿಕ ಮತ್ತು ಆಷಾಢಭೂತಿಯಾದ ಹೇಳಿಕೆಯು ಪಕ್ಷಕ್ಕೆ ಅನುಕೂಲವನ್ನೇನೂ ಮಾಡಿಕೊಡುವುದಿಲ್ಲ. ಇದು ಸಾಮಾಜಿಕ ನ್ಯಾಯ ಅಥವಾ ಪ್ರಗತಿಗಾಗಿ ಇರುವ ಯಾತ್ರೆ ಅಲ್ಲ; ಬಿಜೆಪಿಯ ಅಪಾರ ಶಕ್ತಿಯುತವಾದ, ಚುನಾವಣೆ ಗೆಲ್ಲುವ ವ್ಯವಸ್ಥೆಯನ್ನು ಎದುರಿಸುವುದಕ್ಕಾಗಿ ಜನಬೆಂಬಲ ಒಟ್ಟುಗೂಡಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಇದು. ಕಾಂಗ್ರೆಸ್ ನಾಯಕರ ನಡವಳಿಕೆ ಮತ್ತು ನೀಡುವ ಸಂದೇಶಗಳು ಈ ದಿಸೆಯಲ್ಲಿ ರೂಪುಗೊಂಡಿರಬೇಕು. ಹೇಳುವುದನ್ನು ಸತ್ಯವಂತಿಕೆಯಿಂದ ಮತ್ತು ತಪ್ಪಿತಸ್ಥಭಾವವಿಲ್ಲದೆಯೇ ಮನದಟ್ಟು ಮಾಡಬೇಕು. ಕಾರ್ಯತಂತ್ರ ಮತ್ತು ನೀಡುವ ಸಂದೇಶದಲ್ಲಿ ಅತ್ಯಂತ ಸ್ಪಷ್ಟತೆ ಇರುವ ರಾಜಕೀಯ ಪಕ್ಷವೊಂದನ್ನು ಸಂದಿಗ್ಧದ ಮತ್ತು ಹುಸಿಯಾದ ಸಂದೇಶ ನೀಡುವಿಕೆ ಮೂಲಕ ಎದುರಿಸುವುದು ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.