ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷಕ್ಕಿಂತ ಮೋದಿಗೇ ಪ್ರಾಧಾನ್ಯ

ಸಂಪಾದಕೀಯ: ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷಕ್ಕಿಂತ ಮೋದಿಗೇ ಪ್ರಾಧಾನ್ಯ
Published 17 ಏಪ್ರಿಲ್ 2024, 20:14 IST
Last Updated 17 ಏಪ್ರಿಲ್ 2024, 20:14 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಗಾಗಿ ಬಿಜೆಪಿ ಸಿದ್ಧಪಡಿಸಿರುವ ಪ್ರಣಾಳಿಕೆಯ ತುಂಬೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರೇ ಆವರಿಸಿಕೊಂಡಿದ್ದಾರೆ; ಮೋದಿ ಅವರಷ್ಟು ‍ಪ್ರಾಧಾನ್ಯ ಪಕ್ಷಕ್ಕೆ ಸಿಕ್ಕಿಲ್ಲ. ಪ್ರಣಾಳಿಕೆಗೆ ‘ಮೋದಿಯವರ ಗ್ಯಾರಂಟಿ’ ಎಂದೇ ಹೆಸರನ್ನೂ ಇರಿಸಲಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವುದೇ ತಮ್ಮ ಧ್ಯೇಯ ಎಂದು ಮೋದಿ ಅವರು ಭರವಸೆ ಕೊಟ್ಟಿದ್ದಾರೆ. ತಮ್ಮ ಸರ್ಕಾರವು ಹತ್ತು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಹೇಳಿದ್ದಾರೆ. ಜಿಎಸ್‌ಟಿ ಜಾರಿಯಂತಹ ಸುಧಾರಣೆ ಮತ್ತು 370ನೇ ವಿಧಿ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ರದ್ದತಿಯಂತಹ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾ‍ಪಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ವಸತಿ, ಆರೋಗ್ಯ, ಉಚಿತ ಪಡಿತರ ವಿತರಣೆಯಂತಹ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಪ್ರಣಾಳಿಕೆಯು ಮಹತ್ವ ನೀಡಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಏನಾದರೂ ಒಂದು ಕೊಡುಗೆಯನ್ನು ಪ್ರಕಟಿಸಲಾಗಿದೆ. ಮರಳಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಪಕ್ಷವು ಬಲವಾಗಿ ನಂಬಿದೆ. ಹಾಗಾಗಿಯೇ ಮುಂದಿನ ಐದು ವರ್ಷಗಳ ನಂತರವೂ ಕೆಲವು ಯೋಜನೆಗಳು ಮುಂದುವರಿಯಲಿವೆ ಎಂಬಂತಹ ಭರವಸೆಗಳನ್ನು ಕೊಡಲಾಗಿದೆ. 

ಏಕರೂಪ ನಾಗರಿಕ ಸಂಹಿತೆ ಮತ್ತು ವಿವಾದಾತ್ಮಕ ವಿಚಾರವಾದ ‘ಒಂದು ದೇಶ, ಒಂದು ಚುನಾವಣೆ’ಯನ್ನು ಜಾರಿ ಮಾಡಲಾಗುವುದು ಎಂಬುದನ್ನು ಪುನರುಚ್ಚರಿಸಲಾಗಿದೆ. ಬುಲೆಟ್‌ ರೈಲು ಮತ್ತು ವಂದೇಭಾರತ್‌ ರೈಲುಗಳ ಸಂಖ್ಯೆಯನ್ನು ಹೆಚ್ಚಿಸ
ಲಾಗುವುದು ಎಂಬ ಭರವಸೆ ನೀಡಲಾಗಿದೆ. ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಯತ್ನ, ಎಲ್ಲರಿಗೂ ಪೈಪ್‌ ಮೂಲಕ ಎಲ್‌ಪಿಜಿ ಪೂರೈಕೆ, ಮೂರು ಕೋಟಿ ಬಡವರಿಗೆ ಮನೆ ನಿರ್ಮಾಣ ಮತ್ತು ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ವಾಗ್ದಾನವೂ ಇದೆ. ಜಗತ್ತಿನಲ್ಲಿ 10ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದ ಭಾರತವನ್ನು ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಪ್ರಣಾಳಿಕೆ ಮತ್ತು ಸರ್ಕಾರದ ಸಾಧನೆಯನ್ನು ಕೊಟ್ಟ ಭರವಸೆಗಳ ಮೂಲಕ ಅಳೆಯಲಾಗದು; ಬದಲಿಗೆ ಅವುಗಳ ಅನುಷ್ಠಾನದ ಮೇಲೆ ಮೌಲ್ಯಮಾಪನ ಮಾಡಬೇಕಾಗುತ್ತದೆ. ಹಾಗಾಗಿ, ಬಿಜೆಪಿ ಹೇಳಿಕೊಂಡ ಹಲವು ಅಂಶಗಳನ್ನು ನಿಕಷಕ್ಕೆ ಒಡ್ಡಬೇಕಾಗಿದೆ. 

ಬಿಜೆಪಿಯ ‍ಪ್ರಣಾಳಿಕೆಯು ಸುಳ್ಳುಗಳ ಕಂತೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ನಿರುದ್ಯೋಗ ಮತ್ತು  ಹಣದುಬ್ಬರದ ಉಲ್ಲೇಖವೇ ಇಲ್ಲ ಎಂದು ಟೀಕಿಸಿವೆ. ಮೋದಿ ಅವರ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಜಿಡಿಪಿ ಪ್ರಗತಿಯು ಮನಮೋಹನ್‌ ಸಿಂಗ್‌ ಅವರ ಹತ್ತು ವರ್ಷಗಳ ಆಳ್ವಿಕೆಗೆ ಹೋಲಿಸಿದರೆ ಕಡಿಮೆ ಎಂದು ಹೇಳಲಾಗಿದೆ. ಉದ್ಯೋಗ ಸೃಷ್ಟಿ ಮತ್ತು ರೈತರ ಆದಾಯ ದುಪ್ಪಟ್ಟುಗೊಳಿಸುವ ಭರವಸೆ
ಗಳನ್ನು ಈಡೇರಿಸಲಾಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿವೆ. ಹಾಗಿದ್ದರೂ ಈಗ ಪಕ್ಷಗಳು ಭರವಸೆಗಳನ್ನು ನೀಡುತ್ತಿಲ್ಲ, ಬದಲಿಗೆ ‘ಗ್ಯಾರಂಟಿ’ಗಳನ್ನು ನೀಡುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆಗಳನ್ನು ಹೋಲಿಸಿ ನೋಡಿದರೆ 2024ರಲ್ಲಿ ಈ ಎರಡೂ ಪಕ್ಷಗಳು 2014ಕ್ಕೆ ಮರಳಿವೆ ಎಂಬುದನ್ನು ಕಂಡುಕೊಳ್ಳಬಹುದು. ಆರ್ಥಿಕ ಪ್ರಗತಿಯನ್ನು ಖಾತರಿಪಡಿಸಲಾಗುವುದು, ಸೆಮಿಕಂಡಕ್ಟರ್‌, ಬ್ಯಾಟರಿಚಾಲಿತ ವಾಹನ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂಬ ಭರವಸೆಗಳನ್ನು ಬಿಜೆಪಿ ನೀಡಿದೆ. ನವೋದ್ಯಮಕ್ಕೆ ಹೆಚ್ಚಿನ ನಿಧಿ ಒದಗಿಸಲಾಗುವುದು ಎಂದು ಹೇಳಲಾಗಿದೆ. ಆರ್ಥಿಕ ಪ್ರಗತಿಯ ಪ್ರಯೋಜನವು ತಳಮಟ್ಟದ ಜನರಿಗೆ ದೊರೆಯುವಂತಹ ಕಾರ್ಯಸೂಚಿ ಅನುಸರಿಸಲಾಗುವುದು ಎಂದು ಬಿಜೆಪಿ ಭರವಸೆ ಕೊಟ್ಟಿದೆ. ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚಿಸುವ ಭರವಸೆಯನ್ನು ಕಾಂಗ್ರೆಸ್‌ ಕೊಟ್ಟಿದೆ. ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತೆ ಕಾಯ್ದೆಯಂತಹವು ಜಾರಿಗೆ ಬರಲು ಸಾಧ್ಯವಾದ ಯುಪಿಎ ಕಾಲದ ಹಕ್ಕು ಆಧಾರಿತ ಕಾರ್ಯಸೂಚಿ ಅನುಸರಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ಕಳೆದ 10 ವರ್ಷಗಳಲ್ಲಿ ಜಿಡಿಪಿ ಪ್ರಗತಿಯಾಗಿದೆ ಎಂಬುದು ನಿಜ. ಆದರೆ, ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ, ಉದ್ಯೋಗ ಖಾತರಿ ಯೋಜನೆ ಮತ್ತು 80 ಕೋಟಿ ಜನರಿಗೆ ಉಚಿತ ಪಡಿತರ ಪೂರೈಕೆಯನ್ನು ಮುಂದುವರಿಸಿದ್ದರಿಂದಾಗಿ ಜನರು ಬದುಕುಳಿಯುವುದು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವಾಗ ದೇಶದಲ್ಲಿ ಆಗಿರುವ ಸಾಮಾಜಿಕ ಮತ್ತು ರಾಜಕೀಯ ಧ್ರುವೀಕರಣ ಹಾಗೂ ಪ್ರಜಾಪ್ರಭುತ್ವದ ಮೇಲೆ ಹೇರಲಾಗಿರುವ ಒತ್ತಡವನ್ನೂ ಪರಿಗಣಿಸಬೇಕಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ. ಅದೇನೇ ಇದ್ದರೂ ಬಿಜೆಪಿಯನ್ನು ಎದುರಿಸುವಲ್ಲಿ ವಿರೋಧ ಪಕ್ಷಗಳಿಗೆ ದೊಡ್ಡ ಸವಾಲು ಇದೆ. ಅದು ಏನೆಂದರೆ, ಬಿಜೆಪಿಯಲ್ಲಿ ಇರುವ ಸಂವಹನ ಸಾಮರ್ಥ್ಯವು ವಿರೋಧ ಪ‍ಕ್ಷಗಳಿಗಿಂತ ಹೆಚ್ಚು ದಕ್ಷವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT