ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌: ಹೊಸ ಉಪಕ್ರಮಗಳು ತಪ್ಪಿಸಿಕೊಂಡ ಅವಕಾಶಗಳು

Last Updated 1 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಅಸಾಮಾನ್ಯ ಸಂದರ್ಭಗಳನ್ನು ನಿಭಾಯಿಸಲು ಅಸಾಮಾನ್ಯ ಕ್ರಮಗಳನ್ನೇ ಕೈಗೊಳ್ಳಬೇಕಾಗುತ್ತದೆ ಎಂಬ ಮಾತೊಂದು ಇದೆ. ಹಾಗೆಯೇ, ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೇ ವ್ಯಕ್ತಿಯ ಶಕ್ತಿ, ಸಾಮರ್ಥ್ಯ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎನ್ನುವ ಮಾತೂ ಇದೆ. ಆರೋಗ್ಯ ಬಿಕ್ಕಟ್ಟಿನ ರೂಪದಲ್ಲಿ ಆರಂಭವಾದ ಕೋವಿಡ್–19 ಸಾಂಕ್ರಾಮಿಕವು ಕೆಲವು ತಲೆಮಾರುಗಳು ಕಂಡರಿಯದ ಆರ್ಥಿಕ ಬಿಕ್ಕಟ್ಟನ್ನೂ ಸೃಷ್ಟಿಸಿತು. ಆರ್ಥಿಕ ಬಿಕ್ಕಟ್ಟುಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಮದ್ದು ಇದ್ದೇ ಇರಲಿದೆ ಎಂಬ ನಿರೀಕ್ಷೆಯನ್ನು ದೇಶದ ಬಹುತೇಕರು ಸಹಜವಾಗಿಯೇ ಹೊಂದಿದ್ದರು. ಈ ನಿರೀಕ್ಷೆಗಳ ಭಾರವನ್ನು ಹೊತ್ತಿದ್ದ 2021–22ನೇ ಸಾಲಿನ ಬಜೆಟ್ ‌ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡುವುದಾಗಿ ಹೇಳಿದ್ದಾರೆ. ಈ ಘೋಷಣೆಯ ಹಿಂದೆ ಕೋವಿಡ್–19 ಸಂದರ್ಭವು ಕಲಿಸಿದ ಪಾಠ ಕೆಲಸ ಮಾಡಿದಂತಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನಿರ್ಮಲಾ ಮೀಸಲಿಟ್ಟಿದ್ದಾರೆ. ಮೂಲಸೌಕರ್ಯ ಯೋಜನೆಗಳಿಗೆ ನೀಡಿರುವ ಅನುದಾನದಲ್ಲಿ ದೊಡ್ಡದೊಂದು ಪಾಲು, ಚುನಾವಣೆ ಎದುರಿಸಲಿರುವ ರಾಜ್ಯಗಳತ್ತ ಹರಿದಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಚುನಾವಣೆ ಲೆಕ್ಕಾಚಾರವು ಇಲ್ಲದೆ ಬಜೆಟ್‌ ಮಂಡನೆ ಆಗುತ್ತದೆ ಎನ್ನಲಾಗದು. ಹಾಗಾಗಿ, ಮೂಲಸೌಕರ್ಯ ಯೋಜನೆಗಳ ವಿಚಾರವಾಗಿಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ವಿಶೇಷ ಉಲ್ಲೇಖ ಗಿಟ್ಟಿಸಿಕೊಂಡಿದ್ದರಲ್ಲಿ ಆಶ್ಚರ್ಯವಾಗುವಂಥದ್ದು ಏನೂ ಇಲ್ಲ. ಆರೋಗ್ಯ ಕ್ಷೇತ್ರ ಹಾಗೂ ಮೂಲಸೌಕರ್ಯ ವಲಯದ ಮೇಲಿನ ಹೆಚ್ಚಿನ ವೆಚ್ಚವು ಸಮುದಾಯಕ್ಕೆ ನೇರವಾಗಿ ಪ್ರಯೋಜನ ತಂದುಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅನುತ್ಪಾದಕ ಸಾಲದ ಹೊರೆ ತಗ್ಗಿಸುವ ಉದ್ದೇಶದಿಂದ ಪ್ರತ್ಯೇಕ ‘ಬ್ಯಾಡ್‌ ಬ್ಯಾಂಕ್‌’ ಆರಂಭಿಸುವ ಪ್ರಸ್ತಾವವನ್ನು ಬಜೆಟ್ ಒಳಗೊಂಡಿದೆ. ಇದು ಕಾರ್ಯರೂಪಕ್ಕೆ ಬಂದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅನುತ್ಪಾದಕ ಸಾಲದ ಹೊರೆ ತಗ್ಗಲಿದೆ. ಅಗತ್ಯವಿರುವವರಿಗೆ ಸಾಲವು ಸುಲಭವಾಗಿ ಸಿಗುವ ನಿರೀಕ್ಷೆ ಹೊಂದಬಹುದು.

ದೇಶದ ಮಾರುಕಟ್ಟೆಯಲ್ಲಿ ಕೊಳ್ಳುವ ಕೈಗಳ ಕೊರತೆ ಇದೆ. ಉತ್ಪಾದನೆಗೆ ಸಂಬಂಧಿಸಿದಂತೆ ಇದ್ದ ಕುಂದುಕೊರತೆಗಳನ್ನು ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ ಕಾರ್ಯಕ್ರಮದ ಅಡಿಯಲ್ಲಿ ಸರಿಪಡಿಸುವ ಪ್ರಯತ್ನ ಮಾಡಿದೆ ಎಂಬುದು ನಿಜ. ಆದರೆ, ಉತ್ಪಾದನೆಯ ಹಂತ ದಾಟಿ ಮಾರುಕಟ್ಟೆ ಯನ್ನು ತಲುಪಿದ ವಸ್ತುಗಳನ್ನು ಕೊಳ್ಳಬೇಕಿರುವ ಕೈಗಳಿಗೆ ಶಕ್ತಿ ತುಂಬುವ ಕೆಲಸ ಈ ಬಜೆಟ್‌ನಿಂದ ಆಗಲಿದೆ ಎಂಬ ನಿರೀಕ್ಷೆಯು ಜನಸಾಮಾನ್ಯರಲ್ಲಿ ಇದ್ದಿದ್ದು ನಿಜ. ಜನರ ಖರೀದಿ ಸಾಮರ್ಥ್ಯವನ್ನು ತಕ್ಷಣಕ್ಕೆ ಹೆಚ್ಚಿಸುವ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಮೂಲಸೌಕರ್ಯ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಳದಿಂದ ಉದ್ಯೋಗ ಸೃಷ್ಟಿಯಾಗಿ, ಅದು ಪರೋಕ್ಷವಾಗಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಆದರೆ, ಆದಾಯದಲ್ಲಿ ಕಡಿತ ಅನುಭವಿಸಿದ, ಆದಾಯದ ಮೂಲಗಳನ್ನು ಕಳೆದುಕೊಂಡವರ ಕೈಗೆ ಹಣ ತಕ್ಷಣಕ್ಕೆ ಸಿಗುವಂತೆ ಮಾಡಿ, ಅವರು ಮಾರುಕಟ್ಟೆಯಲ್ಲಿ ಹೆಚ್ಚು ಹುರುಪಿನಿಂದ ಖರೀದಿಯಲ್ಲಿ ತೊಡಗುವಂತೆ ಮಾಡುವ ಅವಕಾಶವನ್ನು ಈ ಬಾರಿಯ ಬಜೆಟ್ ಬಳಸಿಕೊಂಡಿಲ್ಲ. ಕೃಷಿಕರ ಆದಾಯ ಹೆಚ್ಚು ಮಾಡುವ ಉದ್ದೇಶದಿಂದ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹಾಕುವ ಪ್ರಸ್ತಾವ ಬಜೆಟ್‌ನಲ್ಲಿದೆ. ಆಹಾರ ವಸ್ತುಗಳನ್ನೂ ಒಳಗೊಂಡಂತೆ ಹಲವು ವಸ್ತುಗಳ ಮೇಲೆ ಈ ಸೆಸ್ ವಿಧಿಸಲಾಗುತ್ತದೆ. ಕೋವಿಡ್‌ನಿಂದಾಗಿ ಈಗಾಗಲೇ ಹಣಕಾಸಿನ ತೊಂದರೆಗೆ ಸಿಲುಕಿದ ಜನಸಾಮಾನ್ಯರ ಮೇಲೆ ಇದರಿಂದ ಆಗುವ ಪರಿಣಾಮಗಳೇನು, ಹಣದುಬ್ಬರದ ಪ್ರಮಾಣ ಏನು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕೂಲಿ ಕಾರ್ಮಿಕರಾದಿಯಾಗಿ, ಬೇರೆ ಬೇರೆ ಉದ್ಯಮ ವಲಯಗಳಲ್ಲಿ ಕೆಲಸ ಮಾಡುವ ಹಲವರು ಕೆಲಸ ಕಳೆದು ಕೊಂಡರು. ‘ಸಾಮಾಜಿಕ ಭದ್ರತಾ ಯೋಜನೆಗಳು ಇದ್ದಿದ್ದರೆ...’ ಎಂಬ ಆಲೋಚನೆ ಅವರಲ್ಲಿ ಆಗ ಮೂಡಿತ್ತು. ಅರ್ಥಶಾಸ್ತ್ರಜ್ಞರೂ ಆ ಬಗ್ಗೆ ಮಾತನಾಡಿದ್ದರು. ಆರ್ಥಿಕ ಏಟುಗಳನ್ನು ಮತ್ತೆ ಮತ್ತೆ ತಾಳಿಕೊಳ್ಳುವ ಶಕ್ತಿ ಇಲ್ಲದ ವರ್ಗಕ್ಕೆ ಸಾಮಾಜಿಕ ಭದ್ರತೆ ಕಲ್ಪಿಸುವುದು ನಿರ್ಮಲಾ ಅವರು ಪರಿಗಣಿಸಬಹುದಾಗಿದ್ದ ಅಂಶವಾಗಿತ್ತು. ಇಂತಹ ವಿಚಾರಗಳಲ್ಲಿ ನಿರ್ಮಲಾ ಅವರು ‘ಹಿಂದೆಂದೂ ಕಾಣದಂತಹ’ ಬಜೆಟ್ ಮಂಡಿಸುವ ಅವಕಾಶ ತಪ್ಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT