ಶನಿವಾರ, ಸೆಪ್ಟೆಂಬರ್ 25, 2021
29 °C

ಸಿಜೆಐ ವಿರುದ್ಧದ ಪ್ರಕರಣ ಸಂಹಿತೆ ರೂಪಿಸುವುದು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಮ್ಮ ನ್ಯಾಯಪ್ರಜ್ಞೆಯ ಅತ್ಯುನ್ನತ ಪ್ರಾತಿನಿಧಿಕ ರೂಪ ಸುಪ್ರೀಂ ಕೋರ್ಟ್‌. ಅದು ನ್ಯಾಯಪ್ರಜ್ಞೆಯ ಮೂರ್ತರೂಪವೂ ಹೌದು. ಈ ಸಂಸ್ಥೆ ಅನಗತ್ಯ ವಿವಾದಗಳಿಗೆ ಸಿಲುಕುವಂತಾಗದಿರಲಿ ಎಂದು ದೇಶವಾಸಿಗಳು ಬಯಸಿದರೆ, ಅದರಲ್ಲಿ ಅಸಹಜವಾದುದೇನೂ ಇಲ್ಲ.

ಅತ್ಯಂತ ಬಲಿಷ್ಠನೊಬ್ಬ ಅತ್ಯಂತ ದುರ್ಬಲನಿಗೆ ಅನ್ಯಾಯ ಎಸಗಿದಾಗ, ದುರ್ಬಲನಿಗೆ ದೇಶದ ಕಾನೂನಿಗೆ ಅನುಗುಣವಾಗಿ ನ್ಯಾಯ ಕೊಡಿಸಿದ ಎಷ್ಟೋ ನಿದರ್ಶನಗಳು ಸುಪ್ರೀಂ ಕೋರ್ಟ್‌ ಅಂಗಳದಲ್ಲಿವೆ. ಈ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಈಚೆಗೆ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣೆಯು ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಎರಡು ವಾರಗಳಲ್ಲಿ ನಡೆದ ವಿದ್ಯಮಾನಗಳನ್ನು ಈ ಸಂಸ್ಥೆಯ ಘನತೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಗ್ರಹಿಸಬೇಕು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯಿ ವಿರುದ್ಧ, ಸುಪ್ರೀಂ ಕೋರ್ಟ್‌ನಲ್ಲಿ ಹಿಂದೆ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋ‍‍ಪ ಹೊರಿಸಿದ್ದರು. ಅದರ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿಯು ‘ಆರೋಪದಲ್ಲಿ ಹುರುಳಿಲ್ಲ’ ಎಂದು ವರದಿ ನೀಡಿದೆ. ಆರೋಪಗಳು ಸಾರ್ವಜನಿಕ ಅವಗಾಹನೆಗೆ ಲಭ್ಯವಿರುವ ಹೊತ್ತಿನಲ್ಲೂ, ವಿಚಾರಣಾ ವರದಿಯನ್ನು ಬಹಿರಂಗಪಡಿಸಲಾಗದು ಎಂದು ಸಮಿತಿ ಹೇಳಿದೆ. ಈ ವಿಚಾರವು ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯೊಂದರ ಬಗ್ಗೆ ಕಹಿ ಮಾತಿನ ಚರ್ಚೆಗಳಿಗೆ ಅನುವು ಮಾಡಿಕೊಟ್ಟಿದೆ.

ಮಹಿಳೆ ಹೊರಿಸಿದ ಆರೋಪಗಳು ಬಹಿರಂಗ ಆಗುತ್ತಿದ್ದಂತೆಯೇ, ಅದರ ಬಗ್ಗೆ ಮೂವರು ನ್ಯಾಯಮೂರ್ತಿಗಳ ಪೀಠವೊಂದು ಬಹಿರಂಗ ವಿಚಾರಣೆ ನಡೆಸಿತು. ಆ ಪೀಠದಲ್ಲಿ ಸಿಜೆಐ ಗೊಗೊಯಿ ಅವರೂ ಇದ್ದದ್ದು ಆಕ್ಷೇಪಗಳಿಗೆ ಮೂಲವಾಯಿತು. ನಂತರ, ಆರೋಪದ ಬಗ್ಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎನ್.ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಸಮಿತಿಯನ್ನು ರಚಿಸಲಾಯಿತು. ಆದರೆ, ದೂರುದಾರ ಮಹಿಳೆಯು ‘ರಮಣ ಅವರು ಸಿಜೆಐ ಗೊಗೊಯಿ ಅವರ ಸ್ನೇಹಿತ’ ಎಂದು ಅವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರದಲ್ಲಿ, ‘ಮೂವರು ನ್ಯಾಯಮೂರ್ತಿಗಳ ಸಮಿತಿಯ ಎದುರು ಭಯವಾಗುತ್ತಿತ್ತು, ನನ್ನ ಪರವಾಗಿ ವಕೀಲರನ್ನು ಇರಿಸಿಕೊಳ್ಳಲು ಅವಕಾಶ ಇರಲಿಲ್ಲ’ ಎಂದು ಹೇಳಿದ ಸಂತ್ರಸ್ತ ಮಹಿಳೆ, ವಿಚಾರಣೆಗೆ ಇನ್ನು ತಾನು ಹಾಜರಾಗುವುದಿಲ್ಲ ಎಂದರು.

ಈ ನಡುವೆ, ಸಮಿತಿಯಲ್ಲಿ ಬಾಹ್ಯ ಸದಸ್ಯರೊಬ್ಬರು ಇರಬೇಕು ಎನ್ನುವ ವಾದ ಕೇಳಿಬಂದಿತ್ತು. ಸಂತ್ರಸ್ತೆಯ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿದ ಸಮಿತಿಯು, ಸಿಜೆಐ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಮಹಿಳೆಯು ವಿಚಾರಣೆಗೆ ಹಾಜರಾಗದಿರುವ ತೀರ್ಮಾನ ಕೈಗೊಂಡಿದ್ದು ಯುಕ್ತವೇ ಎಂಬ ಪ್ರಶ್ನೆ ಇದೆ. ಹಾಗೆಯೇ, ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿಯು ವಿಶಾಖ ಪ್ರಕರಣದಲ್ಲಿ ಅದೇ ಕೋರ್ಟ್‌ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಇರಲಿಲ್ಲ ಎಂಬುದನ್ನೂ ಹೇಳಬೇಕಾಗುತ್ತದೆ. ಈ ಪ್ರಕರಣ ತೆರೆದಿಟ್ಟ ಇನ್ನೊಂದು ಅಂಶದ ಬಗ್ಗೆಯೂ ಇಲ್ಲಿ ಗಮನ ಹರಿಸಬೇಕು. ಸಿಜೆಐ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಾಗ, ಅದರ ಬಗ್ಗೆ ವಿಚಾರಣೆ ನಡೆಸಲು ಸ್ಪಷ್ಟ ಸಂಹಿತೆ ಇಲ್ಲ. ಹಾಗಾಗಿ, ಇನ್ನು ಮುಂದೆ ಇಂತಹ ಪ್ರಕರಣಗಳು ಎದುರಾದರೆ ಅನುಸರಿಸಬೇಕಾದ ಕ್ರಮಗಳು ಏನು ಎಂಬುದನ್ನು ಸಂಹಿತೆಯ ರೂಪದಲ್ಲಿ ವಿವರಿಸಬೇಕಾದ ಸಂದರ್ಭ ಬಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಆಡಿದ್ದ ಋಷಿಸದೃಶ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಯುಕ್ತವಾದೀತು.

‘ಸಿಜೆಐ ಅವರು ಸಾಮಾನ್ಯರಂತೆಯೇ ಎಲ್ಲ ದೌರ್ಬಲ್ಯಗಳು, ಭಾವನೆಗಳು, ಪೂರ್ವಗ್ರಹಗಳು ಇರುವ ವ್ಯಕ್ತಿ’ ಎಂದು ಅಂಬೇಡ್ಕರ್ ಹೇಳಿದ್ದರು. ಅವರು ಆಡಿದ್ದ ಮಾತಿನ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಹೋಲಿಕೆ ಸಾಧ್ಯವಿಲ್ಲವಾದರೂ, ಸಿಜೆಐ ವಿರುದ್ಧ ಇಂತಹ ಆರೋಪ ಕೇಳಿಬಂದಾಗ, ಅದನ್ನು ಸೂಕ್ತವಾಗಿ ನಿಭಾಯಿಸಲಿಕ್ಕೆ ಸಂಹಿತೆಯೊಂದು ಬೇಕು ಎಂಬ ನೆಲೆಯಲ್ಲಿ ಈ ಮಾತುಗಳನ್ನು ಖಂಡಿತ ಗ್ರಹಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು