ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸಾಂಸ್ಕೃತಿಕ ರಾಜಿ, ಚೌಕಾಸಿ ಕನ್ನಡ ಹಿತಾಸಕ್ತಿಗೆ ಅಪಾಯಕಾರಿ

Last Updated 13 ಮೇ 2020, 21:37 IST
ಅಕ್ಷರ ಗಾತ್ರ

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿಗಳನ್ನು ಅನುದಾನದ ಕೊರತೆಯ ಕಾರಣಕ್ಕೆ ನಿಲ್ಲಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರವು ನಾಡು-ನುಡಿಯ ಹಿತಾಸಕ್ತಿ ದೃಷ್ಟಿಯಿಂದ ಆತ್ಮಘಾತುಕ ನಡೆ. ಸಾಂಸ್ಕೃತಿಕ ಮಹತ್ವದ ಬಗ್ಗೆ ಸ್ಪಷ್ಟವಾದ ಅರಿವು ಹಾಗೂ ಚಿಂತನೆ ಇಲ್ಲದೇ ಹೋದಾಗ ಆ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ನೀಡುವ ಹಣದ ಬಗ್ಗೆ ಚೌಕಾಸಿ ನಡೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಬಗೆಯ ಸಾಂಸ್ಕೃತಿಕ ಚೌಕಾಸಿಯ ರೂಪದಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಪ್ರತಿವರ್ಷ ನೀಡುತ್ತಿದ್ದ ₹8 ಕೋಟಿ ಅನುದಾನದ ಬದಲಿಗೆ, 2020-21ನೇ ಸಾಲಿನಲ್ಲಿ ₹2 ಕೋಟಿ ನೀಡಿದೆ. ತನಗೆ ದೊರೆಯಬೇಕಾಗಿದ್ದ ಹಣಕ್ಕಾಗಿ ಹಕ್ಕು ಮಂಡಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದ್ದ ಪ್ರಾಧಿಕಾರವು ತನ್ನ ಚಟುವಟಿಕೆಗಳ ವ್ಯಾಪ್ತಿಯನ್ನೇ ಸಂಕುಚಿತಗೊಳಿಸಲು ಮುಂದಾಗಿದೆ.

ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನಿಲ್ಲಿಸುವ ಹಾಗೂ ತಾನು ನೀಡುತ್ತಿದ್ದ ವಿವಿಧ ಪ್ರಶಸ್ತಿಗಳನ್ನು ನೀಡದಿರುವ ನಿರ್ಧಾರ ಕೈಗೊಂಡಿದೆ. ಅನುದಾನದ ಕೊರತೆಯ ಕಾರಣ ನೀಡಿ ಕನ್ನಡದ ಕೆಲಸಗಳನ್ನು ನಿಲ್ಲಿಸಲು ಮುಂದಾಗುವ ಮೂಲಕ ಪ್ರಾಧಿಕಾರ ತಾನು ಮಾಡಬೇಕಾದ ಕೆಲಸದೊಂದಿಗೆ ರಾಜಿಯಾಗಲು ಸಿದ್ಧವಿರುವಂತಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿ, ನಿಗದಿತ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಕಾರಿ ಮಂಡಳಿಯು ಅನುದಾನಕ್ಕಾಗಿ ಸರ್ಕಾರದ ಮನವೊಲಿಸುವ ಕೆಲಸ ಮಾಡಬೇಕು. ಅನುನಯದ ಮಾತುಗಳಿಗೆ ಸರ್ಕಾರ ಒಪ್ಪದೇ ಹೋದರೆ, ವಸ್ತುಸ್ಥಿತಿಯನ್ನು ಜನರ ಮುಂದಿಟ್ಟು ಅಧಿಕಾರದಿಂದ ನಿರ್ಗಮಿಸಬೇಕು. ಇದ್ಯಾವುದನ್ನೂ ಮಾಡದೆ, ಅನುದಾನಕ್ಕೆ ತಕ್ಕಂತೆ ತನ್ನ ಕಾರ್ಯಕ್ರಮಗಳನ್ನು ಉಳಿಸಿ ಕೊಳ್ಳುವುದು ಅಥವಾ ಕೈ ಬಿಡುವ ಹೊಂದಾಣಿಕೆಯ ಮನೋಭಾವವು ಕನ್ನಡದ ಹಿತಾಸಕ್ತಿಗೆ ಮಾರಕವಾದುದು.

ಪ್ರಾಧಿಕಾರದ ಹಿಂದಿನ ಅಧ್ಯಕ್ಷರು, ನಿಗದಿತ ಅನುದಾನದಾಚೆಗೂ ಹೊಸ ಹೊಸ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ, ಅವುಗಳಿಗೆ ಸರ್ಕಾರದಿಂದ ಹೆಚ್ಚುವರಿ ಹಣವನ್ನು ತಂದಿರುವ ಉದಾಹರಣೆಗಳಿವೆ. ಪ್ರಾಧಿಕಾರದ ಅಧ್ಯಕ್ಷರ ಹುದ್ದೆ ನಾಮಮಾತ್ರವಾದುದಲ್ಲ. ಅದು ಕನ್ನಡ-ಕನ್ನಡಿಗರ ಹಿತಾಸಕ್ತಿಯ ಉತ್ತರದಾಯಿತ್ವವನ್ನು ಹೊಂದಿದೆ ಹಾಗೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನೈತಿಕಶಕ್ತಿಯನ್ನು ಹೊಂದಿದೆ. ಅಂಥ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದರ ಬದಲು, ಇರುವ ಕಾರ್ಯಕ್ರಮಗಳನ್ನೇ ಕೈಬಿಡಲು ಹೊರಡುವ ಮೂಲಕ ಪ್ರಸಕ್ತ ಕಾರ್ಯಕಾರಿ ಮಂಡಳಿಯು ಪ್ರಾಧಿಕಾರದ ಅಸ್ತಿತ್ವವೇ ದುರ್ಬಲಗೊಳ್ಳಲು ಅವಕಾಶ ಕಲ್ಪಿಸಿದೆ. ಹೊರ ರಾಜ್ಯಗಳಲ್ಲಿ ಕನ್ನಡದ ರಾಯಭಾರಿಗಳ ರೂಪದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಹೊರೆಯೆನ್ನಿಸಿದರೆ ಅಂಥ ಪ್ರಾಧಿಕಾರ ಅಸ್ತಿತ್ವದಲ್ಲಿರುವುದರಲ್ಲಿ ಅರ್ಥವೇನಿದೆ?

ಅಕಾಡೆಮಿ- ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡ ತನ್ನ ದ್ವಂದ್ವ ನಿಲುವಿನಿಂದ ಹೊರಬರಬೇಕು. ಒಂದುವೇಳೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲದೇಹೋದರೆ, ತನ್ನ ಅಸಹಾಯಕತೆಯನ್ನು ಸ್ಪಷ್ಟವಾಗಿ ಹೇಳಿ, ಅಕಾಡೆಮಿ-ಪ್ರಾಧಿಕಾರಗಳನ್ನು ಮುಚ್ಚುವುದೇ ಒಳ್ಳೆಯದು. ಅವು ಅಸ್ತಿತ್ವದಲ್ಲೂ ಇರಬೇಕು, ಆದರೆ ನಿಷ್ಕ್ರಿಯವಾಗಿರಬೇಕು ಎನ್ನುವ ಮನೋಭಾವ ಜವಾಬ್ದಾರಿಯುತ ಸರ್ಕಾರಕ್ಕೆ ತಕ್ಕುದಲ್ಲ. ಸರ್ಕಾರದ ನೆರವಿನ ಮರ್ಜಿ ಯಲ್ಲಿರುವ ಅಕಾಡೆಮಿ- ಪ್ರಾಧಿಕಾರಗಳು ಕನ್ನಡದ ಕೆಲಸಕ್ಕೆ ಪರ್ಯಾಯ ಮೂಲಗಳನ್ನು ಹುಡುಕುವ ಕುರಿತು ಚಿಂತನೆ ನಡೆಸುವುದಕ್ಕೆ ಇದು ಸಕಾಲ.

ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸುವ ಕಾರ್ಪೊರೇಟ್ ಸಂಸ್ಥೆಗಳು ಕರ್ನಾಟಕದಲ್ಲಿವೆ ಹಾಗೂ ಅವುಗಳಲ್ಲಿ ಕೆಲವು ಕಂಪನಿಗಳು ನಾಡು-ನುಡಿಗೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮದೇ ಆದ ಕ್ರಿಯಾಯೋಜನೆಗಳನ್ನು ಹೊಂದಿವೆ. ಅಂಥ ಸಂಸ್ಥೆಗಳ ನೆರವನ್ನು ಕನ್ನಡ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲಿಕ್ಕೆ ಅಕಾಡೆಮಿ- ಪ್ರಾಧಿಕಾರಗಳು ಪಡೆಯಬಹುದು. ಸಾರ್ವಜನಿಕರಿಂದಲೂ ಸಂಪನ್ಮೂಲ ಸಂಗ್ರಹಿಸುವ ಪ್ರಯತ್ನಗಳನ್ನು ಮಾಡಬಹುದು. ಜನರ ಬಳಿಗೆ ಹೋಗುವುದು ಹಾಗೂ ಕಾರ್ಪೊರೇಟ್ ಸಂಸ್ಥೆಗಳನ್ನು ಒಳಮಾಡಿಕೊಳ್ಳುವುದರಿಂದಾಗಿ ಕನ್ನಡದ ಕೆಲಸ ಮಾಡುವ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ, ಹೊಸ ಚಿಂತನೆಗಳಿಗೂ ತಮ್ಮನ್ನು ತೆರೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT