ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಗೆಲ್ಲುವ ಛಲ ರೂಢಿಸಿಕೊಳ್ಳದೆ ಕಾಂಗ್ರೆಸ್‌ ದಡ ಮುಟ್ಟಲಾಗದು

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಯಾವುದೇ ರಾಜಕೀಯ ಪಕ್ಷಕ್ಕೆ ತನ್ನ ಸಿದ್ಧಾಂತವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ತಾಕತ್ತು ಇರಬೇಕು. ಸಿದ್ಧಾಂತವನ್ನು ಜನರಿಗೆ ಮನದಟ್ಟು ಮಾಡಿಕೊಟ್ಟು, ಅವರ ಮತ ಪಡೆದು ದೇಶ ಆಳುತ್ತೇವೆ ಎಂಬ ಕೆಚ್ಚು ಮತ್ತು ಮಹತ್ವಾಕಾಂಕ್ಷೆ ಆ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಇರಬೇಕು. ಅವಿಲ್ಲದಿದ್ದರೆ ಆ ಪಕ್ಷವು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ. ಸ್ವಾತಂತ್ರ್ಯದ ಬಳಿಕ ಭಾರತವನ್ನು ಸುದೀರ್ಘ ಕಾಲ ಆಳಿದ್ದ ಕಾಂಗ್ರೆಸ್‌ ಪಕ್ಷದ ಸ್ಥಿತಿ ಬಹುತೇಕ ಹೀಗೆಯೇ ಇದೆ.

ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌, ಛತ್ತೀಸಗಡ, ಪಂಜಾಬ್‌, ಕೇರಳ, ಕರ್ನಾಟಕದಂತಹ ರಾಜ್ಯಗಳನ್ನು ಬಿಟ್ಟರೆ ಉಳಿದೆಡೆ ಕಾಂಗ್ರೆಸ್‌ನ ಸ್ಥಿತಿ ಶೋಚನೀಯ. ತನಗೆ ಗಟ್ಟಿ ನೆಲೆ ಇಲ್ಲದಿದ್ದ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು ನೆಲೆ ವಿಸ್ತರಿಸಿಕೊಳ್ಳುವ ಕಾರ್ಯತಂತ್ರವನ್ನು ಬಿಜೆಪಿ ಅನುಸರಿಸಿದೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ, ತನಗೆ ಗಟ್ಟಿ ನೆಲೆ ಇಲ್ಲದ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು, ಆ ಮೈತ್ರಿಕೂಟದ ಗೆಲುವಿನ ಅವಕಾಶವನ್ನೂ ನೊಣೆದು ಹಾಕಿದೆ ಎಂಬ ಆರೋಪವನ್ನೂ ಕಾಂಗ್ರೆಸ್‌ ಈಗ ಹೆಗಲಿಗೇರಿಸಿಕೊಂಡಿದೆ.

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ರಾಜಕೀಯ ಚಾತುರ್ಯ, ಬಿಜೆಪಿ– ಆರ್‌ಎಸ್‌ಎಸ್‌ನ ಬದ್ಧ ಕಾರ್ಯಕರ್ತ ಪಡೆಯ ಎದುರು ಈಗಿನ ಕಾಂಗ್ರೆಸ್‌ನ ಸ್ಥಿತಿ ಪೇಲವ. ಜನರು ಕೊಟ್ಟ ಆಳ್ವಿಕೆಯ ಅವಕಾಶವನ್ನು ಕೂಡ ಉಳಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ. ಮೋದಿ ಮತ್ತು ಶಾ ಅವರ ತವರು ಗುಜರಾತ್‌ನ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಕಾಂಗ್ರೆಸ್‌ ಪಕ್ಷದ ಎದುರು ನಿಚ್ಚಳವಾಗಿ ತೆರೆದುಕೊಂಡಿತ್ತು. ಆದರೆ, ಮೋದಿ–ಶಾ ಜೋಡಿಯನ್ನು ಹಿಂದಿಕ್ಕಿ ಗೆಲುವನ್ನು ಮುಡಿಗೇರಿಸಿಕೊಳ್ಳುವ ಛಲವನ್ನು ಕಾಂಗ್ರೆಸ್‌ ತೋರಲಿಲ್ಲ.

ಮಧ್ಯಪ್ರದೇಶದ ಜನರು ಕಾಂಗ್ರೆಸ್‌ ಪರವಾಗಿ ಜನಾದೇಶ ಕೊಟ್ಟಿದ್ದರು. ಒಂದೂವರೆ ವರ್ಷದಲ್ಲಿಯೇ ಅಧಿಕಾರವನ್ನು ಕೈಚೆಲ್ಲಿದ ಕಾಂಗ್ರೆಸ್‌, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಗೆಲ್ಲುವ ಛಲವಿಲ್ಲ, ಗೆದ್ದ ಕಡೆ ಅಧಿಕಾರ ಉಳಿಸಿಕೊಳ್ಳುವ ಕೆಚ್ಚೂ ಇಲ್ಲದ ಪಕ್ಷವನ್ನು ಜನರು ನಂಬಲು ಸಾಧ್ಯವೇ?

ನಾಯಕತ್ವ ಬಿಕ್ಕಟ್ಟಿನಿಂದ ಹೊರಗೆ ಬಾರದೆ, ಸೋಲಿನ ಆತ್ಮಾವಲೋಕನ ಮಾಡಿಕೊಳ್ಳದೆ ಈಗಿನ ಸ್ಥಿತಿಯಿಂದ ಕಾಂಗ್ರೆಸ್ ದಡ ಮುಟ್ಟುವುದು ಸಾಧ್ಯವಿಲ್ಲ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೇ ಇರಲಿ, ಬಿಹಾರದಲ್ಲಿನ ಹೀನಾಯ ಸೋಲೇ ಇರಲಿ, ಎಡವಿದ್ದು ಎಲ್ಲಿ ಎಂಬುದರ ಆತ್ಮಾವಲೋಕನ ಕಾಂಗ್ರೆಸ್‌ಗೆ ಅಪಥ್ಯ. ‘ಎಲ್ಲೋ ಎಡವಿದ್ದೇವೆ’ ಎಂದು ಪಕ್ಷದೊಳಗಿರುವ ಯಾರಾದರೂ ಹೇಳಿದರೆ ಅವರನ್ನು ಮೂಲೆಗುಂಪು ಮಾಡುವ ವಿಚಾರದಲ್ಲಿ ಮಾತ್ರ ಪಕ್ಷದ ಮುಖಂಡರಲ್ಲಿ ಅಪಾರ ಒಗ್ಗಟ್ಟಿದೆ.

ತಪ್ಪಿದ್ದೆಲ್ಲಿ ಎಂಬುದನ್ನು ತಿಳಿಯುವ ಯತ್ನವನ್ನೂ ಮಾಡದೆ ಸರಿ ದಾರಿ ಕಂಡುಕೊಳ್ಳುವುದು ಸಾಧ್ಯವೇ? ಕಾಂಗ್ರೆಸ್‌ಗೆ ಈಗ ಪೂರ್ಣಾವಧಿ ಅಧ್ಯಕ್ಷರಿಲ್ಲ. ಅಧ್ಯಕ್ಷರ ಆಯ್ಕೆ ಆಗುವ ತನಕ ಸೋನಿಯಾ ಗಾಂಧಿ ಅವರು ಮಧ್ಯಂತರ ಅವಧಿಗೆ ಅಧ್ಯಕ್ಷೆ. ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರು ಪಕ್ಷದ ಅಧ್ಯಕ್ಷರ ರೀತಿಯಲ್ಲಿಯೇ ಈಗಲೂ ವರ್ತಿಸುತ್ತಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನವನ್ನು ಅವರು ಒಲ್ಲೆ ಎನ್ನುತ್ತಿದ್ದಾರೆ.

ಇದು, ರಾಜಕೀಯ ಪಕ್ಷವನ್ನು ಮುನ್ನಡೆಸುವ ರೀತಿ ಅಲ್ಲ. ರಾಹುಲ್‌ ಅವರು ವಿರೋಧ ಪಕ್ಷದ ನಾಯಕನಂತೆ ಕೆಲಸ ಮಾಡುತ್ತಿದ್ದಾರೆ ಎಂಬುದು ನಿಜ. ವಿವಿಧ ವಿಚಾರಗಳಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ ಮತ್ತು ಇಕ್ಕಟ್ಟಿಗೂ ಸಿಲುಕಿಸಿದ್ದಾರೆ. ಅದಷ್ಟೇ ಸಾಲದು. ಜನರು ಆಳ್ವಿಕೆಯ ಅವಕಾಶ ಕೊಟ್ಟರೆ ಅದನ್ನು ಉಳಿಸಿಕೊಳ್ಳುವ, ಗೆಲುವು ಹತ್ತಿರದಲ್ಲಿದ್ದರೆ ಅದನ್ನು ಬಾಚಿ ಹಿಡಿಯುವ ಮಹತ್ವಾಕಾಂಕ್ಷೆ ಮತ್ತು ಕೆಚ್ಚನ್ನು ಪಕ್ಷಕ್ಕೆ ಕಲಿಸಿಕೊಡಬೇಕು. ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಇದೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಬೇಕು. ಇದು ಕಾಂಗ್ರೆಸ್‌ನ ಅನಿವಾರ್ಯವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಅಗತ್ಯ ಕೂಡ. ಈಗಿನ ಸಂದರ್ಭದಲ್ಲಿ ನಿರಂಕುಶ ಪ್ರಜಾತಂತ್ರ ನಿರ್ಮಾಣವಾಗುವುದನ್ನು ತಡೆಯುವ ಹೊಣೆ ಕಾಂಗ್ರೆಸ್ಸಿನ ಮೇಲಿದೆ ಎಂಬುದನ್ನು ಆ ಪಕ್ಷದ ನಾಯಕರು, ಕಾರ್ಯಕರ್ತರು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT